ADVERTISEMENT

ಅಸ್ಸಾಂ ಶೇ.72, ತ್ರಿಪುರಾ ಶೇ.80ರಷ್ಟು ಮತದಾನ

16ನೇ ಲೋಕಸಭಾ ಚುನಾವಣೆ ಮೊದಲ ಹಂತದ ಮತದಾನ

​ಪ್ರಜಾವಾಣಿ ವಾರ್ತೆ
Published 7 ಏಪ್ರಿಲ್ 2014, 13:31 IST
Last Updated 7 ಏಪ್ರಿಲ್ 2014, 13:31 IST
ಅಸ್ಸಾಂನ ಕಾಲಿಯಾಬೊರ್ ಮತಗಟ್ಟೆಯಲ್ಲಿ ಮತ ಚಲಾಯಿಸಲು ಸರದಿ ಸಾಲಿನಲ್ಲಿ ನಿಂತ ಮಹಿಳೆಯರು. -ಪಿಟಿಐ ಚಿತ್ರ.
ಅಸ್ಸಾಂನ ಕಾಲಿಯಾಬೊರ್ ಮತಗಟ್ಟೆಯಲ್ಲಿ ಮತ ಚಲಾಯಿಸಲು ಸರದಿ ಸಾಲಿನಲ್ಲಿ ನಿಂತ ಮಹಿಳೆಯರು. -ಪಿಟಿಐ ಚಿತ್ರ.   

ಅಗರ್ತಲಾ/ಗುವಾಹಾಟಿ (ಪಿಟಿಐ): ಇಡೀ ದೇಶವೇ ಕುತೂಹಲದಿಂದ ಎದುರು ನೋಡುತ್ತಿದ್ದ 16ನೇ ಲೋಕಸಭಾ ಚುನಾವಣೆ ಮೊದಲ ಹಂತದ ಮತದಾನವು ಈಶಾನ್ಯ ರಾಜ್ಯಗಳ ಆರು ಲೋಕಸಭಾ ಕ್ಷೇತ್ರಗಳಲ್ಲಿ ಸೋಮವಾರ ನಿರ್ವಿಘ್ನವಾಗಿ ಜರುಗಿದ್ದು, ಅಸ್ಸಾಂನಲ್ಲಿ ಶೇ.72ರಷ್ಟು ಮತ್ತು ತ್ರಿಪುರಾದಲ್ಲಿ ಶೇ.80ರಷ್ಟು ದಾಖಲೆಯ ಮತದಾನವಾಗಿದೆ.

ಮತದಾನದ ಪ್ರಮಾಣವು ಅಂತಿಮ ಲೆಕ್ಕಾಚಾರ ಮುಗಿದ ನಂತರ ಇನ್ನು ಹೆಚ್ಚಾಗುವ ಸಾಧ್ಯತೆ ಇದೆ ಎಂದು ಉಭಯ ರಾಜ್ಯಗಳ ಚುನಾವಣಾಧಿಕಾರಿಗಳು ತಿಳಿಸಿದರು.

ಅಸ್ಸಾಂನಲ್ಲಿ ತೇಜ್‌ಪುರದಲ್ಲಿ ದಾಖಲೆಯ ಶೇ.73ರಷ್ಟು ಮತದಾನವಾಗಿದ್ದು, ಜೋರ್ಹಟ್‌ನಲ್ಲಿ ಶೇ.75, ಲಖಿಮ್‌ಪುರದಲ್ಲಿ ಶೇ.67, ದಿಬ್ರುಗಡದಲ್ಲಿ ಶೇ.70 ಮತ್ತು ಕಾಲಿಯಾಬೊರ್‌ನಲ್ಲಿ ಶೇ.72ರಷ್ಟು ಮತದಾರರು ಮರೆಯದೇ ತಮ್ಮ ಹಕ್ಕು ಚಲಾಯಿಸಿದ್ದಾರೆ.

 ಒಟ್ಟು 64 ಅಭ್ಯರ್ಥಿಗಳಿದ್ದ ಆರು ಕ್ಷೇತ್ರಗಳಲ್ಲಿ ಬೆಳಿಗ್ಗೆ ಏಳು ಗಂಟೆಯಿಂದ ಆರಂಭವಾದ ಮತದಾನವು ಯಾವುದೇ ಅಹಿತಕರ ಘಟನೆಗಳು ನಡೆದಂತೆ ಶಾಂತಿಯುತವಾಗಿ ಸಂಜೆ 5ಗಂಟೆಯವರೆಗೆ ನಡೆಯಿತು. ಈ ಮತದಾನದಲ್ಲಿ 77 ಲಕ್ಷ ಮತದಾರರು ತಮ್ಮ ಹಕ್ಕನ್ನು ಚಲಾಯಿ­ಸಲಿದ್ದಾರೆ.

ADVERTISEMENT

ಅಸ್ಸಾಂನಲ್ಲಿ ಆಡಳಿತಾ­ರೂಢ ಕಾಂಗ್ರೆಸ್‌ ಸೇರಿ­ ಬಿಜೆಪಿ, ಆಮ್‌ ಆದ್ಮಿ, ತೃಣ­ಮೂಲ ಕಾಂಗ್ರೆಸ್‌, ಎಐಯು­ಡಿ­ಎಫ್‌, ಎಜಿಪಿ, ಎಎಪಿ, ಎಸ್‌ಯುಸಿಐ, ಸಿಪಿಎಂ, ಎಐಎಫ್‌ಬಿ ಮತ್ತು ಎಸ್‌ಪಿ  ಅಭ್ಯರ್ಥಿಗಳನ್ನು ಕಣಕ್ಕಿಳಿಸಿವೆ. ಕಾಂಗ್ರೆಸ್‌ನ ಕೇಂದ್ರ ಸಚಿವರಾದ ರಾಣಿ ನರಹ್‌ ಮತ್ತು ಪವನ್‌ ಸಿಂಗ್‌ ಘಟೊವಾರ್, ಹಾಲಿ ಶಾಸಕ ಹಾಗೂ ಕೇಂದ್ರ ಮಾಜಿ ಸಚಿವ ಬಿಜೊಯ್‌ ಕೃಷ್ಣ ಹಂಡಿಕ್‌, ಮುಖ್ಯಮಂತ್ರಿ ತರುಣ್‌ ಗೊಗೊಯ್‌ ಪುತ್ರ ಗೌರವ್‌ ಗೊಗೊಯ್‌ ಸೇರಿದಂತೆ  ಒಟ್ಟು 51 ಅಭ್ಯರ್ಥಿಗಳು ತಮ್ಮ ಅದೃಷ್ಟವನ್ನು ಪಣಕ್ಕೊಡ್ಡಿದ್ದಾರೆ. 

ಆಸ್ಸಾಂನ ಒಟ್ಟು 14 ಕ್ಷೇತ್ರಗಳ ಪೈಕಿ ಮೂರು ಕ್ಷೇತ್ರಗಳಿಗೆ ಏಪ್ರಿಲ್‌ 12ರಂದು ಮತ್ತು ಉಳಿದ  ಆರು ಕ್ಷೇತ್ರಗಳಿಗೆ ಏಪ್ರಿಲ್ 24ರಂದು ಮತದಾನ ನಡೆಯಲಿದೆ.

ತ್ರಿಪುರಾದಲ್ಲಿ ತೀವ್ರ ಸ್ಪರ್ಧೆ: ಎಡಪಂಥೀಯರು ಅಧಿಕಾರದ­ಲ್ಲಿ­ರುವ  ತ್ರಿಪುರಾದ ಒಂದು ಲೋಕಸಭಾ ಕ್ಷೇತ್ರಕ್ಕೆ  ಸಿಪಿಎಂ, ಕಾಂಗ್ರೆಸ್‌, ತೃಣಮೂಲ ಕಾಂಗ್ರೆಸ್‌ ಮತ್ತು ಬಿಜೆಪಿ ನಡುವೆ ತುರುಸಿನ ಸ್ಪರ್ಧೆ ಏರ್ಪಟ್ಟಿದೆ.  ಒಟ್ಟು 13 ಘಟಾನುಘಟಿ ಅಭ್ಯರ್ಥಿಗಳು ಪೈಪೋಟಿಯಲ್ಲಿದ್ದಾರೆ. ಈ ಕ್ಷೇತ್ರದ ಮೇಲೆ ಭಾರಿ ಪ್ರಾಬಲ್ಯ ಹೊಂದಿರುವ ಸಿಪಿಎಂ,  15 ಚುನಾ­ವಣೆಗಳ ಪೈಕಿ  ಹತ್ತರಲ್ಲಿ ಜಯಗಳಿಸಿದೆ. ಕಾಂಗ್ರೆಸ್ ನಾಲ್ಕು ಬಾರಿ ಹಾಗೂ ಕಾಂಗ್ರೆಸ್‌ ಬಂಡುಕೋರರು ಒಂದು ಬಾರಿ ಈ ಕ್ಷೇತ್ರದಲ್ಲಿ ಜಯಗಳಿಸಿದ್ದಾರೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.