ADVERTISEMENT

ಕೊನೆ ಹಂತದಲ್ಲಿ ಮನೆ ಮನೆ ಪ್ರಚಾರ

​ಪ್ರಜಾವಾಣಿ ವಾರ್ತೆ
Published 16 ಏಪ್ರಿಲ್ 2014, 19:55 IST
Last Updated 16 ಏಪ್ರಿಲ್ 2014, 19:55 IST

ಬೆಂಗಳೂರು: ಲೋಕಸಭಾ ಚುನಾವಣೆಗೆ ಕ್ಷಣಗಣನೆ ಆರಂಭವಾಗಿದ್ದು, ಬುಧವಾರ ಎಲ್ಲ ಅಭ್ಯರ್ಥಿಗಳೂ ತಮ್ಮ ಕ್ಷೇತ್ರಗಳಲ್ಲಿ ಮನೆ ಮನೆ ಪ್ರಚಾರದಲ್ಲಿ ಭಾಗವಹಿಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಅವರ ಸಂಪುಟದ ಬಹುತೇಕ ಸದಸ್ಯರು ತಮ್ಮ ಸ್ವಂತ ಮತಕ್ಷೇತ್ರಗಳಲ್ಲಿ ಕೊನೆ ಹಂತದ ಪ್ರಚಾರ ನಡೆಸಿದರು. ಇನ್ನೊಂದೆಡೆ ರಾಜ್ಯ ಕಾಂಗ್ರೆಸ್‌ನ ಪ್ರಮುಖ ಮುಖಂಡರು ಕೂಡ ಸ್ವಕ್ಷೇತ್ರಗಳಿಗೆ ತೆರಳಿ ಪಕ್ಷದ ಮತದಾರರನ್ನು ಭೇಟಿ ಮಾಡಿ ಬೆಂಬಲ ಯಾಚಿಸಿದರು.

ಸಿದ್ದರಾಮಯ್ಯ ಅವರು ಮೈಸೂರಿನ ವಿವಿಧೆಡೆ ಮನೆ ಮನೆ ಪ್ರಚಾರದಲ್ಲಿ ಪಾಲ್ಗೊಂಡರು. ಹಲವು ಸಚಿವರು ಕೂಡ ವಿವಿಧ ಕ್ಷೇತ್ರಗಳಲ್ಲಿ ಮನೆ ಮನೆ ಪ್ರಚಾರಕ್ಕೆ ಜೊತೆಯಾದರು. ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್‌ ಅವರು ತುಮಕೂರಿನಲ್ಲಿ ಮನೆ ಮನೆ ಪ್ರಚಾರ ನಡೆಸಿದರು.

ವಿಶ್ರಾಂತಿ ಪಡೆದ ದೇವೇಗೌಡ: ಜೆಡಿಎಸ್‌ ರಾಷ್ಟ್ರೀಯ ಅಧ್ಯಕ್ಷ ಎಚ್‌.ಡಿ.ದೇವೇಗೌಡ ಅವರು ಬುಧವಾರ ಮಧ್ಯಾಹ್ನದವರೆಗೂ ಮನೆಯಲ್ಲಿ ವಿಶ್ರಾಂತಿ ಪಡೆದರು.

ಬೆಂಗಳೂರು ದಕ್ಷಿಣ ಕ್ಷೇತ್ರದ ಅಭ್ಯರ್ಥಿ ರೂತ್‌ ಮನೋರಮಾ ಸೇರಿದಂತೆ ಪಕ್ಷದ ಮುಖಂಡರು ದೇವೇಗೌಡ ಅವರನ್ನು ಭೇಟಿಯಾಗಿ ಚುನಾವಣಾ ಸಿದ್ಧತೆ ಬಗ್ಗೆ ಚರ್ಚೆ ನಡೆಸಿದರು. ದೇವೇಗೌಡ ಅವರು ಸಂಜೆ ಹಾಸನಕ್ಕೆ ತೆರಳಿದ್ದು, ಗುರುವಾರ ಬೆಳಿಗ್ಗೆ ಹೊಳೇನರಸೀಪುರ ತಾಲ್ಲೂಕಿನ ಪಡುವಲಹಿಪ್ಪೆಯಲ್ಲಿ ಕುಟುಂಬದವ ರೊಂದಿಗೆ ಮತ ಚಲಾಯಿಸಲಿದ್ದಾರೆ. ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ.ಕುಮಾರಸ್ವಾಮಿ ಅವರು ಯಲಹಂಕ, ದೇವನಹಳ್ಳಿ­ಯಲ್ಲಿ ಮನೆ ಮನೆಗೆ ತೆರಳಿ ಬುಧವಾರ ಮತಯಾಚಿಸಿದರು.

ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಪ್ರಹ್ಲಾದ ಜೋಶಿ ಅವರು ಹುಬ್ಬಳ್ಳಿಯಲ್ಲಿ ಕೊನೆ ಹಂತದ ಪ್ರಚಾರ ನಡೆಸಿದರು. ಬೆಂಗಳೂರು ದಕ್ಷಿಣದ ಬಿಜೆಪಿ ಅಭ್ಯರ್ಥಿ ಅನಂತಕುಮಾರ್‌ ಅವರು ಇಡೀ ದಿನ ಚುನಾವಣೆ ಸಂಬಂಧ ಕಾರ್ಯಕರ್ತರ ಜತೆ ಮಾತುಕತೆ ನಡೆಸಿದರು. ಮತಗಟ್ಟೆಗಳಿಗೆ ನಿಯೋಜಿಸುವ ಕಾರ್ಯಕರ್ತರ ಜತೆಗೂ ಅವರು ಸಮಾಲೋಚಿಸಿದರು.

ಯಡಿಯೂರಪ್ಪ(ಶಿವಮೊಗ್ಗ), ಡಿ.ವಿ.ಸದಾನಂದಗೌಡ (ಬೆಂಗಳೂರು ಉತ್ತರ) ಸೇರಿದಂತೆ ಅನೇಕ ಪ್ರಮುಖರು  ಕೂಡ ತಮ್ಮ ಕ್ಷೇತ್ರಗಳನ್ನು ಬಿಟ್ಟು ಕದಲಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.