ADVERTISEMENT

ಯುವಕರ ನಡುವೆ ಅರಳಿದ ಕಮಲ

​ಪ್ರಜಾವಾಣಿ ವಾರ್ತೆ
Published 12 ಮೇ 2014, 19:30 IST
Last Updated 12 ಮೇ 2014, 19:30 IST
ಯುವಕರ ನಡುವೆ ಅರಳಿದ ಕಮಲ
ಯುವಕರ ನಡುವೆ ಅರಳಿದ ಕಮಲ   

ಕರ್ನಾಟಕದ ಮಟ್ಟಿಗೆ ಅತಿ ಹೆಚ್ಚು ಪ್ರಮಾಣದಲ್ಲಿ ಯುವ ಮತದಾರರನ್ನು (18ರಿಂದ 35ರೊಳಗಿನ ವಯೋಮಾನದವರು) ಆಕರ್ಷಿಸಿದ ಖ್ಯಾತಿ ಬಿಜೆಪಿಯದ್ದು. ಶೇಕಡಾ 54.8ರಷ್ಟು ಯುವ ಮತದಾರರು ಬಿಜೆಪಿಯನ್ನು ಆರಿಸಿಕೊಂಡಿದ್ದಾರೆ. ಈ ವಯೋಮಾನದವರಿಂದ ಕಾಂಗ್ರೆಸ್‌ಗೆ ದೊರೆತಿರುವ ಮತಗಳ ಪ್ರಮಾಣ ಶೇಕಡಾ 30.6. ಉಳಿದಂತೆ ಜೆಡಿಎಸ್ ಶೇಕಡಾ 10.8 ಮತಗಳನ್ನೂ, ಎಎಪಿ ಮತ್ತು ಇತರರು ತಲಾ 1.8ರಷ್ಟು ಮತಗಳನ್ನು ಪಡೆದಿದ್ದಾರೆ. 

ವಯೋಮಾನವಾರು ಮತ ಗಳಿಕೆ ಪ್ರಮಾಣ ಸೂಚಿಸುತ್ತಿರುವ ಇನ್ನೊಂದು ಕುತೂಹಲಕಾರಿ ಅಂಶವೆಂದರೆ ವಯಸ್ಸು ಹೆಚ್ಚಾದಂತೆ ಕಾಂಗ್ರೆಸ್ ಮತ್ತು ಜೆಡಿಎಸ್‌ಗಳಿಗೆ ದೊರೆಯುವ ಮತಗಳ ಪ್ರಮಾಣ ಹೆಚ್ಚುತ್ತಾ ಹೋಗುತ್ತದೆ. ಬಿಜೆಪಿ ಮತ್ತು ಎಎಪಿಗಳಿಗೆ ದೊರೆಯುವ ಮತಗಳ ಪ್ರಮಾಣ ಕಡಿಮೆಯಾಗುತ್ತಾ ಹೋಗುತ್ತದೆ.

36ರಿಂದ 50 ವರ್ಷದೊಳಗಿನ ವಯೋಮಾನ­ದವರಲ್ಲಿ ಶೇಕಡಾ 45.9ರಷ್ಟು ಮಂದಿ ಕಾಂಗ್ರೆಸ್ ಪಕ್ಷವನ್ನು ಆರಿಸಿಕೊಂಡಿದ್ದಾರೆ. ಹಾಗೆಯೇ 51ಕ್ಕೂ ಹೆಚ್ಚು ವಯಸ್ಸಿನವರಲ್ಲಿ ಶೇಕಡಾ 58ರಷ್ಟು ಮಂದಿಯ ಆಯ್ಕೆಯೂ ಕಾಂಗ್ರೆಸ್. ಈ ವಯೋಮಾನದವರಲ್ಲಿ ಬಿಜೆಪಿಗೆ ಮತ ಚಲಾಯಿಸಿದವರ ಸಂಖ್ಯೆ ಕ್ರಮವಾಗಿ ಶೇಕಡಾ 36.5 ಮತ್ತು 27.3.

18ರಿಂದ 35 ವರ್ಷ ವಯೋಮಾನದ ಶೇಕಡಾ 10.8ರಷ್ಟು ಮಂದಿ ಜೆಡಿಎಸ್ ಪರವಾಗಿದ್ದಾರೆ. 36ರಿಂದ 50 ಮತ್ತು 51ಕ್ಕಿಂತ ಹೆಚ್ಚು ವಯೋಮಾನದವರು ಕ್ರಮವಾಗಿ ಶೇಕಡಾ 14.1 ಮತ್ತು 11.7ರಷ್ಟು ಮಂದಿ ಜೆಡಿಎಸ್ ಆರಿಸಿಕೊಂಡಿದ್ದಾರೆ.

ಎಎಪಿಯನ್ನು ಆರಿಸಿಕೊಂಡ ಮತದಾರರ ಪ್ರಮಾಣವೂ ಬಿಜೆಪಿಯನ್ನು ಆರಿಸಿಕೊಂಡ ಮತದಾರರ ನಡವಳಿಕೆಯನ್ನೇ ಪ್ರತಿಬಿಂಬಿಸುತ್ತದೆ. 18ರಿಂದ 35ರೊಳಗಿನ ವಯೋಮಾನದವರಲ್ಲಿ ಶೇಕಡಾ 1.8ರಷ್ಟು ಮಂದಿಯ ಮತಗಳನ್ನು ಎಎಪಿ ಗಳಿಸಿದೆ. ವಯಸ್ಸು ಹೆಚ್ಚುತ್ತಾ ಹೋದಂತೆ ಈ ಮತ ಗಳಿಕೆಯ ಪ್ರಮಾಣ ಇಳಿಯುತ್ತ ಹೋಗಿದೆ. 36ರಿಂದ 50ರೊಳಗಿನ ವಯೋಮಾನದವರಲ್ಲಿ ಶೇಕಡಾ 1.1ರಷ್ಟು ಮಂದಿ ಎಎಪಿಗೆ ಮತ ಚಲಾಯಿಸಿದ್ದರೆ, 50ಕ್ಕೂ ಮೇಲ್ಪಟ್ಟ ಶೇಕಡಾ 1ರಷ್ಟು ಮಂದಿ ಎಎಪಿಯನ್ನು ಆರಿಸಿಕೊಂಡಿದ್ದಾರೆ.

2013ರಲ್ಲಿ ಇಂಟರ್‌ನೆಟ್ ಅಂಡ್ ಮೊಬೈಲ್ ಅಸೋಸಿಯೇಷನ್ ಆಫ್ ಇಂಡಿಯಾ ಮತ್ತು ಐರಿಸ್ ನಾಲೆಜ್ ಫೌಂಡೇಷನ್‌ಗಳು ನಡೆಸಿದ್ದ ಸಮೀಕ್ಷೆ ಕರ್ನಾಟಕದ 12 ಲೋಕಸಭಾ ಕ್ಷೇತ್ರಗಳಲ್ಲಿ ಸಾಮಾಜಿಕ ಜಾಲತಾಣಗಳು ಅತಿ ಹೆಚ್ಚಿನ ಪರಿಣಾಮ ಬೀರುತ್ತವೆ. ಐದು ಕ್ಷೇತ್ರಗಳಲ್ಲಿ ಮಧ್ಯಮ ಪ್ರಮಾಣದ ಪರಿಣಾಮ ಬೀರಬಹುದು ಎಂದಿತ್ತು. ಅಂದರೆ 17 ಕ್ಷೇತ್ರಗಳಲ್ಲಿ ಸಾಮಾಜಿಕ ಜಾಲ ತಾಣಗಳ ಪರಿಣಾಮವಿದೆ.  ಈ ಕ್ಷೇತ್ರಗಳಲ್ಲಿ ಹೆಚ್ಚಿನವು ಬಿಜೆಪಿ ಹೆಚ್ಚಿನ ಪ್ರಮಾಣದ ಮತಗಳನ್ನು ಗಳಿಸಿರುವ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿ, ಮುಂಬೈ ಕರ್ನಾಟಕ ಮತ್ತು ಕರಾವಳಿ ಕರ್ನಾಟಕಗಳಲ್ಲಿವೆ ಎಂಬುದನ್ನು ಗಮನದಲ್ಲಿಟ್ಟುಕೊಂಡರೆ ಯುವಕರು ಬಿಜೆಪಿ ಕಡೆ ಒಲಿಯಲು  ಸಾಧ್ಯವಾದದ್ದು ಹೇಗೆ ಎಂಬ ಪ್ರಶ್ನೆಗೆ ಒಂದು ಉತ್ತರ ದೊರೆಯುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.