ADVERTISEMENT

ನಿಮ್ಮ ಜೊತೆ ನಾನಿದ್ದೇನೆ, ‘ಕೈ’ ಹಿಡಿಯಿರಿ: ಡಿಕೆಶಿ

​ಪ್ರಜಾವಾಣಿ ವಾರ್ತೆ
Published 11 ಏಪ್ರಿಲ್ 2024, 16:15 IST
Last Updated 11 ಏಪ್ರಿಲ್ 2024, 16:15 IST
ಪಕ್ಷದ ಅಭ್ಯರ್ಥಿ ಡಿ.ಕೆ. ಸುರೇಶ್‌ ಪರ ರಾಜರಾಜೇಶ್ವರಿ ನಗರದಲ್ಲಿ ನಡೆದ ಚುನಾವಣಾ ಪ್ರಚಾರಸಭೆಯಲ್ಲಿ ಡಿ.ಕೆ. ಶಿವಕುಮಾರ್ ಮಾತನಾಡಿದರು
ಪಕ್ಷದ ಅಭ್ಯರ್ಥಿ ಡಿ.ಕೆ. ಸುರೇಶ್‌ ಪರ ರಾಜರಾಜೇಶ್ವರಿ ನಗರದಲ್ಲಿ ನಡೆದ ಚುನಾವಣಾ ಪ್ರಚಾರಸಭೆಯಲ್ಲಿ ಡಿ.ಕೆ. ಶಿವಕುಮಾರ್ ಮಾತನಾಡಿದರು   

ಬೆಂಗಳೂರು: ‘ನಿಮ್ಮ ಎಲ್ಲ ಸಮಸ್ಯೆಗಳ ಪರಿಹಾರಕ್ಕೆ ನಾವು ಬದ್ಧ. ನಿಮ್ಮ ಮನೆ ಬಾಗಿಲಿಗೆ ಬಂದಿರುವ, ನಿಮ್ಮ ಸಮಸ್ಯೆಗಳಿಗೆ ಸ್ಪಂದಿಸುವ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಬೇಕು’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮನವಿ ಮಾಡಿದರು. 

ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ರಾಜರಾಜೇಶ್ವರಿ ನಗರದ ವಿವಿಧ ವಸತಿ ಸಮುಚ್ಚಯಗಳಲ್ಲಿ ಪಕ್ಷದ ಅಭ್ಯರ್ಥಿ ಡಿ.ಕೆ. ಸುರೇಶ್‌ ಪರ ಚುನಾವಣಾ ಪ್ರಚಾರ ಸಭೆಗಳಲ್ಲಿ ಅವರು ಮಾತನಾಡಿದರು.

‘ನೀರು, ರಸ್ತೆಯ ಸಮಸ್ಯೆಗಳ ಬಗ್ಗೆ ಗಮನವಿದ್ದು, ಶೀಘ್ರದಲ್ಲೇ ಅಧಿಕಾರಿಗಳನ್ನು ಕಳುಹಿಸಿ ಪರಿಹಾರ ನೀಡುತ್ತೇವೆ. ಕುಡಿಯುವ ನೀರಿಗಾಗಿ ನಾವು ಮೇಕೆದಾಟು ಪಾದಯಾತ್ರೆ ಮಾಡಿದೆವು. ರಾಜರಾಜೇಶ್ವರಿ ನಗರದಲ್ಲಿ ನಾವು ಸೋತಿದ್ದೇವೆ. ಕುಸುಮಾ ಅವರು ಗೆದ್ದಿದ್ದರೆ ನಿಮ್ಮ ಅರ್ಧ ಸಮಸ್ಯೆ ಇಷ್ಟು ಹೊತ್ತಿಗೆ ಬಗೆಹರಿಯುತ್ತಿತ್ತು. ಆದರೂ ನಾವು ನಿಮ್ಮ ಸೇವೆ ಮಾಡಲು ಹಿಂದೇಟು ಹಾಕುತ್ತಿಲ್ಲ. ನಿಮ್ಮ ಸಹಕಾರ ಇದ್ದಷ್ಟು ನಾವು ಸೇವೆಗೆ ಸಿದ್ಧರಾಗಿರುತ್ತೇವೆ’ ಎಂದರು.

ADVERTISEMENT

‘ಬಿಜೆಪಿ ನಿಮ್ಮ ಯಾವುದೇ ಸಮಸ್ಯೆಗಳನ್ನು ಕಣ್ಣೆತ್ತಿಯೂ ನೋಡಿಲ್ಲ. ಸರ್ಕಾರದ ಪ್ರತಿನಿಧಿಯಾಗಿ ನಿಮ್ಮ ಬಳಿ ಬಂದು ಸಮಸ್ಯೆಗಳನ್ನು ಗಮನಿಸಿದ್ದೇನೆ. ಭವಿಷ್ಯದಲ್ಲಿ ನಿಮ್ಮ ಜೊತೆ ಇರುತ್ತೇನೆ’ ಎಂದು ಭರವಸೆ ನೀಡಿದರು.

‘ಡಿ.ಕೆ. ಸುರೇಶ್ ಅತ್ಯಂತ್ಯ ಕ್ರಿಯಾಶೀಲ ಸಂಸದ. ಕೋವಿಡ್ ಸಂದರ್ಭದಲ್ಲಿ ಜನರ ಸಂಕಷ್ಟಕ್ಕೆ ಸ್ಪಂದಿಸಿದ ಏಕೈಕ ಸಂಸದ. ‘ನಮ್ಮ ತೆರಿಗೆ ನಮ್ಮ ಹಕ್ಕು’ ಹೋರಾಟದ ಮೂಲಕ ಕನ್ನಡಿಗರ ತೆರಿಗೆ ಹಣ ನಷ್ಟವಾಗುತ್ತಿರುವ ಬಗ್ಗೆ ಮಾತನಾಡಿದ್ದಾರೆ. ನಾವು ಬೆಂಗಳೂರಿಗೆ ಹೊಸ ರೂಪ ನೀಡಬೇಕು. ನಿಮ್ಮ ಬದುಕನ್ನು ಕಟ್ಟುವ ರೀತಿಯಲ್ಲಿ ಆಡಳಿತ ನೀಡಬೇಕು. ಯಾವುದೇ ಹಿಂಜರಿಕೆ ಇಲ್ಲದೇ ನಿಮ್ಮ ಸಮಸ್ಯೆಗಳನ್ನು ಮುಕ್ತವಾಗಿ ನಮ್ಮ ಗಮನಕ್ಕೆ ತರಬಹುದು. ನಾನು, ಸುರೇಶ್ ಅದನ್ನು ಬಗೆಹರಿಸುತ್ತೇವೆ’ ಎಂದೂ ವಾಗ್ದಾನ ನೀಡಿದರು.

‘ನಮ್ಮ ಗ್ಯಾರಂಟಿ ಯೋಜನೆಗಳು ಜನಸಾಮಾನ್ಯರ ಮನಗೆದ್ದಿವೆ. ಮುಂದಿನ ಅವಧಿಗೂ ಕಾಂಗ್ರೆಸ್ ಪಕ್ಷವೇ ಅಧಿಕಾರಕ್ಕೆ ಬರಲಿದೆ. ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ ಮಹಾಲಕ್ಷ್ಮಿ ಯೋಜನೆ ಮೂಲಕ ಬಡ ಮಹಿಳೆಯರಿಗೆ ವಾರ್ಷಿಕವಾಗಿ ₹ 1 ಲಕ್ಷ, ಯುವಕರಿಗೆ ವಾರ್ಷಿಕ ₹ 1 ಲಕ್ಷ ಶಿಷ್ಯವೇತನ, ರೈತರ ಸಾಲ ಮನ್ನಾ ಮತ್ತು ಬೆಂಬಲ ಬೆಲೆ, ₹ 25 ಲಕ್ಷದವರೆಗೂ ಆರೋಗ್ಯ ವಿಮೆ ಸೇರಿದಂತೆ ಅನೇಕ ಜನಪರ ಯೋಜನೆಗಳನ್ನು ಪ್ರಣಾಳಿಕೆಯಲ್ಲಿ ತಿಳಿಸಿದ್ದೇವೆ. ರಾಜ್ಯದಲ್ಲಿ ಗ್ಯಾರಂಟಿ ಯೋಜನೆ ಜಾರಿ ಮಾಡಿದಂತೆ ರಾಷ್ಟ್ರದಲ್ಲೂ ಮಾಡುತ್ತೇವೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.