ADVERTISEMENT

ಕಾಂಗ್ರೆಸ್ ಮುಲಾಜಿನಲ್ಲಿ: ಕುಮಾರಸ್ವಾಮಿ

ಸಾಲ ಮನ್ನಾ: ವಾರದ ಕಾಲಾವಕಾಶ ಕೇಳಿದ ಮುಖ್ಯಮಂತ್ರಿ

​ಪ್ರಜಾವಾಣಿ ವಾರ್ತೆ
Published 27 ಮೇ 2018, 19:30 IST
Last Updated 27 ಮೇ 2018, 19:30 IST
ನೆಹರೂ ಪ್ರತಿಮೆಗೆ ಕುಮಾರಸ್ವಾಮಿ ಪುಷ್ಪನಮನ ಸಲ್ಲಿಸಿದರು
ನೆಹರೂ ಪ್ರತಿಮೆಗೆ ಕುಮಾರಸ್ವಾಮಿ ಪುಷ್ಪನಮನ ಸಲ್ಲಿಸಿದರು   

ಬೆಂಗಳೂರು: ‘ಜೆಡಿಎಸ್‌ಗೆ ಪೂರ್ಣ ಬಹುಮತ ನೀಡುವಂತೆ ನಾನು ಕೇಳಿಕೊಂಡಿದ್ದೆ. ಆದರೆ, ರಾಜ್ಯದ ಜನರು ಪೂರ್ಣ ಬಹುಮತ ನೀಡಿಲ್ಲ. ನಾನು ಈಗ ಆರೂವರೆ ಕೋಟಿ ಜನರ ಮುಲಾಜಿನಲ್ಲಿ ಇಲ್ಲ. ಕಾಂಗ್ರೆಸ್‌ ಮುಲಾಜಿನಲ್ಲಿದ್ದೇನೆ’ ಎಂದು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಹೇಳಿದರು.

ಮಾಜಿ ಪ್ರಧಾನಿ ಪಂಡಿತ್ ಜವಹರಲಾಲ್ ನೆಹರೂ ಅವರ 54ನೇ ಪುಣ್ಯತಿಥಿ ಅಂಗವಾಗಿ ವಿಧಾನಸೌಧ ಆವರಣದಲ್ಲಿ ನೆಹರೂ ಪ್ರತಿಮೆಗೆ ಭಾನುವಾರ ಮಾಲಾರ್ಪಣೆ ಮಾಡಿ ಸುದ್ದಿಗಾರರ ಜತೆಗೆ ಮಾತನಾಡಿದರು. ‘ರೈತರು ಯಾರೂ ಆತ್ಮಹತ್ಯೆ ಮಾಡಿಕೊಳ್ಳಬಾರದು. ಸಾಲ ಮನ್ನಾ ಮಾಡಲು ಒಂದು ವಾರ ಕಾಲಾವಕಾಶ ಕೊಡಿ’ ಎಂದು ಮನವಿ ಮಾಡಿದರು.

‘ಪೂರ್ಣಪ್ರಮಾಣದ ಸಚಿವ ಸಂಪುಟ ಅಸ್ತಿತ್ವಕ್ಕೆ ಬಂದಿಲ್ಲ. ಅಲ್ಲದೇ, ನಮ್ಮದು ಮೈತ್ರಿ ಸರ್ಕಾರ. ಸಂಪುಟದ ಸಹೋದ್ಯೋಗಿಗಳ ಚರ್ಚೆ ನಡೆಸಬೇಕಿದೆ. ಇದಕ್ಕೆ ಸ್ವಲ್ಪ ಕಾಲಾವಕಾಶ ಬೇಕು’ ಎಂದರು.

ADVERTISEMENT

‘ರೈತರ ಸಾಲ ಮನ್ನಾ ಮಾಡದಿದ್ದರೆ ರಾಜೀನಾಮೆ ಕೊಡುತ್ತೇನೆ. ರಾಜೀನಾಮೆ ಕೊಡಿ ಎಂದು ಯಾರೂ ಒತ್ತಡ ಹೇರುವ ಅಗತ್ಯವಿಲ್ಲ’ ಎಂದರು.

‘ಆತ್ಮಹತ್ಯೆ ಮಾಡಿಕೊಳ್ಳಲು ರೈತರಿಗೆ ಬಿಜೆಪಿ ರಾಜ್ಯ ಘಟಕ ಬಿ.ಎಸ್‌.ಯಡಿಯೂರಪ್ಪ ಪ್ರಚೋದನೆ ನೀಡುತ್ತಿದ್ದಾರೆ. ಸ್ವಲ್ಪ ಮಾನವೀಯತೆ ಇಲ್ಲದವ
ರಂತೆ ವರ್ತಿಸುವುದು ಸರಿಯಲ್ಲ. ನಮ್ಮ ಮಾತಿನಿಂದ ರೈತ ಕುಟುಂಬಗಳು ಕಂಗಾಲಾಗಿ ರೈತರ ಮಕ್ಕಳು ಅನಾಥರಾದರೆ ಯಾರು ಗತಿ’ ಎಂದು ಪ್ರಶ್ನಿಸಿದರು.

‘ರೈತ ಸಂಘಟನೆಗಳು ನನಗೆ ಒತ್ತಡ ತರುವುದು ಬೇಡ. ಚುನಾವಣೆ ಸಂದರ್ಭದಲ್ಲಿ ರೈತ ಸಂಘಟನೆಗಳ ಮುಖಂಡರು ಏನೇನು ಮಾಡಿದ್ದಾರೆ ಎಂಬುದು ಗೊತ್ತು. ನಾನು ಕುರ್ಚಿಗೆ ಅಂಟಿಕೊಂಡು ಕೂರುವವನಲ್ಲ‌’ ಎಂದರು.

ಶುಭ ಕೋರಿದ ಶಿವರಾಜ್‌: ಕುಮಾರಸ್ವಾಮಿ ನಿವಾಸಕ್ಕೆ ನಟ ಶಿವರಾಜ್ ಕುಮಾರ್ ಹಾಗೂ ಪತ್ನಿ ಗೀತಾ ಶಿವರಾಜ್‌ ಕುಮಾರ್ ಭೇಟಿ ನೀಡಿ ಶುಭಾಶಯ ಕೋರಿದರು.    

‘ನನ್ನ ಮತ್ತು ಕುಮಾರಸ್ವಾಮಿ ನಡುವಿನ ಒಡನಾಟ ಬಹಳ ಹಿಂದಿನದು. ಅವರು ಮುಖ್ಯಮಂತ್ರಿಯಾದ ನಂತರ ಭೇಟಿ ಮಾಡಿರಲಿಲ್ಲ. ಶುಭ ಕೋರಲು ಆಗಮಿಸಿದ್ದೆ. ಭೇಟಿಯಲ್ಲಿ ರಾಜಕೀಯ ಉದ್ದೇಶವಿರಲಿಲ್ಲ’ ಎಂದು ಶಿವರಾಜ್‌ಕುಮಾರ್‌ ಹೇಳಿದರು.

‘ಖಾತೆ ಹಂಚಿಕೆಯಲ್ಲಿ ಬಿಕ್ಕಟ್ಟು ಇಲ್ಲ’

‘ಕಾಂಗ್ರೆಸ್‌ನವರು ಹಣಕಾಸು ಖಾತೆ ಕೇಳುತ್ತಿದ್ದಾರೆ. ಸಂಪುಟ ರಚನೆ ಸಂದರ್ಭದಲ್ಲಿ ಪ್ರಮುಖ ಖಾತೆಗಳನ್ನು ಕೇಳುವುದು ಸಹಜ. ಖಾತೆ ಹಂಚಿಕೆ ಬಗ್ಗೆ ಇನ್ನೂ ಅಂತಿಮ ತೀರ್ಮಾನ ಆಗಿಲ್ಲ’ ಎಂದು ಕುಮಾರಸ್ವಾಮಿ ಹೇಳಿದರು.

‘ಪ್ರಮುಖ ಖಾತೆಗಳ ಹಂಚಿಕೆಯಲ್ಲಿ ಯಾವುದೇ ಬಿಕ್ಕಟ್ಟು ಇಲ್ಲ. ಕೆಲವೊಂದು ಖಾತೆಗಳನ್ನು ಕೇಳುವುದು ಸಾಮಾನ್ಯ. ಈ ವಿಷಯದಲ್ಲಿ ನಮ್ಮ ನಡುವೆ ಯಾವುದೇ ವಿವಾದ ಇಲ್ಲ’ ಎಂದು ಸ್ಪಷ್ಟಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.