ADVERTISEMENT

ಚುನಾವಣಾ ಸಿಬ್ಬಂದಿಗೆ ಏಕಕಾಲಕ್ಕೆ ನಗದು ರಹಿತ ಭತ್ಯೆ ಪಾವತಿ

ಹರ್ಷವರ್ಧನ ಪಿ.ಆರ್.
Published 21 ಏಪ್ರಿಲ್ 2018, 19:30 IST
Last Updated 21 ಏಪ್ರಿಲ್ 2018, 19:30 IST
ಡಾ.ವೆಂಕಟೇಶ್ ಎಂ.ವಿ.
ಡಾ.ವೆಂಕಟೇಶ್ ಎಂ.ವಿ.   

ಹಾವೇರಿ: ಮತಗಟ್ಟೆ ಮತ್ತು ಮತ ಎಣಿಕೆ ಸಿಬ್ಬಂದಿಗೆ ನಗದು ರಹಿತ ಭತ್ಯೆ ಪಾವತಿಸಲು ಜಿಲ್ಲಾಡಳಿತವು ‘ಹೆಮ್ಸ್’ (ಹಾವೇರಿ ಚುನಾವಣಾ ನಿರ್ವಹಣಾ ವ್ಯವಸ್ಥೆ) ತಂತ್ರಾಂಶವನ್ನು ಅಭಿವೃದ್ಧಿ ಪಡಿಸಿದೆ.

ಜಿಲ್ಲೆಯ ಆರು ವಿಧಾನಸಭಾ ಕ್ಷೇತ್ರಗಳ 1,463 ಮತಗಟ್ಟೆಗಳಲ್ಲಿ ಹಾಗೂ ಮತ ಎಣಿಕೆ ಕೇಂದ್ರಗಳಲ್ಲಿ 8,354 ಸಿಬ್ಬಂದಿ ನಿಯೋಜಿಸಲಾಗಿದೆ. ಈ ಸಿಬ್ಬಂದಿಗೆ ಏಕಕಾಲದಲ್ಲಿ, ನೇರವಾಗಿ ಅವರ ಖಾತೆಗೇ ಭತ್ಯೆ ಪಾವತಿ ಮಾಡಲು ರಾಷ್ಟ್ರೀಯ ಮಾಹಿತಿ ಕೇಂದ್ರದ (ಐಎನ್‌ಸಿ) ನೆರವಿನ ಮೂಲಕ ಈ ತಂತ್ರಾಂಶವನ್ನು ಅಭಿವೃದ್ಧಿ ಪಡಿಸಲಾಗಿದೆ.

‘ನಗದು ರಹಿತ ಆರ್ಥಿಕ ವ್ಯವಸ್ಥೆಗೆ ಆದ್ಯತೆ, ಸದ್ಯ ಮಾರುಕಟ್ಟೆಯಲ್ಲಿ ಕೇಳಿಬರುತ್ತಿರುವ ನಗದು ಕೊರತೆಗೆ ಪರಿಹಾರ, ತ್ವರಿತ ಪಾವತಿ ಹಾಗೂ ಅವ್ಯವಹಾರಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಇದನ್ನು ರೂಪಿಸಲಾಗಿದೆ’ ಎಂದು ಎಂದು ಜಿಲ್ಲಾಧಿಕಾರಿ ಡಾ. ವೆಂಕಟೇಶ್ ಎಂ.ವಿ. ‘ಪ್ರಜಾವಾಣಿ’ಗೆ ವಿವರಿಸಿದರು.

ADVERTISEMENT

ಈಗಾಗಲೇ ಎಟಿಎಂ ಹಾಗೂ ಬ್ಯಾಂಕುಗಳಲ್ಲಿ ನಗದಿನ ಕೊರತೆ ಕಾಡುತ್ತಿದೆ. ಅಲ್ಲದೇ, ಈ ಹಿಂದೆ ನಡೆದ ಚುನಾವಣೆಗಳಲ್ಲಿ ತಳಮಟ್ಟದ ಸಿಬ್ಬಂದಿಗೆ ಭತ್ಯೆ ಸಮರ್ಪಕವಾಗಿ ಪಾವತಿ ಆಗಿಲ್ಲ ಎಂಬ ಆರೋಪವೂ ಕೇಳಿಬಂದಿತ್ತು. ಇದನ್ನು ನಿವಾರಿಸುವ ನಿಟ್ಟಿನಲ್ಲಿ ಈ ಹೊಸ ವ್ಯವಸ್ಥೆ ನೆರವಾಗಲಿದೆ ಎಂಬುದು ಅವರ ಅಭಿಪ್ರಾಯ.

‘ಚುನಾವಣಾ ಕರ್ತವ್ಯ ನಿಯೋಜಿತ ಸಿಬ್ಬಂದಿಯ ಬ್ಯಾಂಕ್ ಖಾತೆಯಲ್ಲಿನ ಹೆಸರು, ಬ್ಯಾಂಕ್ ಹಾಗೂ ಐಎಫ್‌ಎಸ್‌ಸಿ ಕೋಡ್ ಮತ್ತು ಭತ್ಯೆಯ ಮೊತ್ತವನ್ನು ದಾಖಲಿಸಿಕೊಂಡಿದ್ದೇವೆ. ಬ್ಯಾಂಕ್ ಜೊತೆ ಲಿಂಕ್ ಮಾಡಿಕೊಂಡು ಆರ್‌ಟಿಜಿಎಸ್ ಮೂಲಕ ರವಾನಿಸುತ್ತೇವೆ. ಕೇವಲ ಭತ್ಯೆ ಪಾವತಿಗೆ ಮಾತ್ರವಲ್ಲ, ಇತರ ಕಾರ್ಯಕ್ಕೂ ಈ ಮಾಹಿತಿ ಸದುಪಯೋಗವಾಗಲಿದೆ’ ಎಂದು ಎನ್‌ಐಸಿ ಜಿಲ್ಲಾ ಮಾಹಿತಿ ಅಧಿಕಾರಿ (ಡಿಐಒ) ಭೀಮಸೇನ ಬಿ. ಹೆಗ್ಡೆ ವಿವರಿಸಿದರು.

ಕನ್ನಡದಲ್ಲೇ ಆದೇಶ: ಚುನಾವಣಾ ಆಯೋಗ ನಿರ್ದೇಶಿಸಿದ ಕೆಲವು (ಕಡ್ಡಾಯ ಇಂಗ್ಲಿಷ್) ಆದೇಶಗಳನ್ನು ಹೊರತು ಪಡಿಸಿ, ಉಳಿದೆಲ್ಲ ಆದೇಶಗಳನ್ನು ಕನ್ನಡದಲ್ಲೇ ನೀಡಲಾಗುತ್ತಿದೆ. ಅಂದಾಜು 10 ಸಾವಿರ ಸಿಬ್ಬಂದಿಗೆ ಕರ್ತವ್ಯದ ಆದೇಶವನ್ನೂ ಕನ್ನಡದಲ್ಲಿಯೇ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಬಿಸಿಲಿನ ಝಳ ಹೆಚ್ಚುತ್ತಿರುವ ಕಾರಣ ಪ್ರತಿ ಮತಗಟ್ಟೆಗೆ ಒ.ಆರ್.ಎಸ್ ಪೊಟ್ಟಣಗಳನ್ನು ಹಾಗೂ ಕೆಲವು ಗುಳಿಗೆಗಳನ್ನು ನೀಡಲು ಸಿದ್ಧತೆ ಮಾಡಲಾಗಿದೆ ಎಂದರು.

‘ಪ್ರತಿ ಸಿಬ್ಬಂದಿಗೆ ಪಾವತಿಯಾದ ಮೊತ್ತವನ್ನು ಜಿಲ್ಲಾ ಮಟ್ಟದಲ್ಲೇ ನೇರವಾಗಿ ದೃಢಪಡಿಸಿಕೊಳ್ಳಬಹುದು’
– ಡಾ.ವೆಂಕಟೇಶ್ ಎಂ.ವಿ, ಜಿಲ್ಲಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.