ADVERTISEMENT

ಬಾದಾಮಿಯಿಂದ ಸ್ಪರ್ಧೆ: ಸಿ.ಎಂ ಆಸೆ ಜೀವಂತ

ಹೈಕಮಾಂಡ್ ಜತೆ ಚರ್ಚಿಸಿ ನಿರ್ಧಾರ

​ಪ್ರಜಾವಾಣಿ ವಾರ್ತೆ
Published 19 ಏಪ್ರಿಲ್ 2018, 19:30 IST
Last Updated 19 ಏಪ್ರಿಲ್ 2018, 19:30 IST
ಸಿದ್ದರಾಮಯ್ಯ
ಸಿದ್ದರಾಮಯ್ಯ   

ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಾದಾಮಿ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸುವ ಸಾಧ್ಯತೆಯನ್ನು ಇನ್ನೂ ಜೀವಂತವಾಗಿ ಇಟ್ಟುಕೊಂಡಿದ್ದಾರೆ.

ಚಾಮುಂಡೇಶ್ವರಿ ಕ್ಷೇತ್ರದ ಜತೆಗೆ ಬಾದಾಮಿಯಿಂದಲೂ ಅವರು ಸ್ಪರ್ಧಿಸುವ ಸಾಧ್ಯತೆಯಿದ್ದು, ಕೊನೇ ಕ್ಷಣದಲ್ಲಿ ಇದು ನಿರ್ಧಾರವಾಗಲಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

‘ನಾನು ಎರಡು ಕಡೆ ಸ್ಪರ್ಧಿಸಬೇಕೋ, ಬೇಡವೋ ಎಂಬುದನ್ನು ಹೈಕಮಾಂಡ್‌ ನಿರ್ಧರಿಸಲಿದೆ’ ಎಂದು ಮುಖ್ಯಮಂತ್ರಿ ಗುರುವಾರ ತಿಳಿಸಿದರು.

ADVERTISEMENT

‘ನಾನು ಹೈಕಮಾಂಡ್ ಅಲ್ಲ. ಈ ರಾಜ್ಯದ ಮುಖ್ಯಮಂತ್ರಿ ಅಷ್ಟೆ. ಬಾದಾಮಿ ಕ್ಷೇತ್ರದ ಸ್ಪರ್ಧೆಯ ವಿಚಾರ ಈ ತಿಂಗಳ 23 ಅಥವಾ 24ರಂದು ಬಗೆಹರಿಯಲಿದೆ. ನನಗೆ ಮತ್ತು ಬಾದಾಮಿ ಕ್ಷೇತ್ರದ ಜನರಿಗೆ ಯಾವುದೇ ಗೊಂದಲ ಇಲ್ಲ. ಮಾಧ್ಯಮದವರು ಗೊಂದಲ ಸೃಷ್ಟಿಸುತ್ತಿದ್ದಾರೆ’ ಎಂದು ಹೇಳಿದರು.

24ರಿಂದ ರಾಜ್ಯ ಪ್ರವಾಸ: ‘ಚುನಾವಣಾ ಪ್ರಚಾರಕ್ಕೆ ಇದೇ 24ರಿಂದ ರಾಜ್ಯದಾದ್ಯಂತ ಪ್ರವಾಸ ಮಾಡುತ್ತೇನೆ. ಸಮಯದ ಅಭಾವವಿರುವ ಕಾರಣ ಎಲ್ಲ ಕ್ಷೇತ್ರಗಳಲ್ಲಿ ಪ್ರಚಾರ ಮಾಡುವುದಿಲ್ಲ. ಪಕ್ಷಕ್ಕೆ ಕಠಿಣ ಸ್ಪರ್ಧೆ ಇರುವ ಕ್ಷೇತ್ರಗಳಲ್ಲಿ ಪ್ರಚಾರ ಕೈಗೊಳ್ಳುತ್ತೇನೆ’ ಎಂದು ತಿಳಿಸಿದರು.

ಕಾರ್ಯಕರ್ತರಿಗೆ ಆಶ್ವಾಸನೆ
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವರುಣಾ ಕ್ಷೇತ್ರದಲ್ಲಿ ಗುರುವಾರ ಪ್ರಚಾರ ಕೈಗೊಂಡರು. ಈ ವೇಳೆ ಬಾದಾಮಿಯ ಕಾಂಗ್ರೆಸ್‌ ಕಾರ್ಯಕರ್ತರು ಸಿದ್ದರಾಮಯ್ಯ ಅವರನ್ನು ಹಿಂಬಾಲಿಸಿ, ತಮ್ಮ ಕ್ಷೇತ್ರದಿಂದ ಸ್ಪರ್ಧಿಸುವಂತೆ ಒತ್ತಾಯಿಸಿದರು.

ಅದಕ್ಕೆ ಮುಖ್ಯಮಂತ್ರಿ ‘ಆಯ್ತು ನಾನೇ ಸ್ಪರ್ಧಿಸುತ್ತೇನೆ. ನೀವು ವೋಟು ಹಾಕ್ತೀರಾ’ ಎಂದು ಅವರನ್ನು ಪ್ರಶ್ನಿಸಿದರು. ಈ ಹೇಳಿಕೆ ಬಗ್ಗೆ ಮಾದೇಗೌಡನಹುಂಡಿಯಲ್ಲಿ ಸ್ಪಷ್ಟನೆ ನೀಡಿದ ಮುಖ್ಯಮಂತ್ರಿ, ‘ಬಾದಾಮಿಯ ಕಾರ್ಯಕರ್ತರನ್ನು ಸಮಾಧಾನಪಡಿಸಲು ಹಾಗೆ ಹೇಳಿದೆ. ಹೈಕಮಾಂಡ್‌ ಜತೆ ಮಾತನಾಡಿ ಅಂತಿಮ ನಿರ್ಧಾರ ತೆಗೆದುಕೊಳ್ಳುತ್ತೇನೆ’ ಎಂದರು.

‘ಉ.ಕ.ದವರ ಭಾವನೆಗೆ ಸ್ಪಂದಿಸಿ’
ವಿಜಯಪುರ:
‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಒಂದೇ ಕ್ಷೇತ್ರದಿಂದ ಸ್ಪರ್ಧಿಸುವುದಾದರೆ ಬಾದಾಮಿ ಕ್ಷೇತ್ರದಿಂದಲೇ ಸ್ಪರ್ಧಿಸಬೇಕು’ ಎಂದು ಜಲಸಂಪನ್ಮೂಲ ಸಚಿವ ಎಂ.ಬಿ. ಪಾಟೀಲ ಗುರುವಾರ ಇಲ್ಲಿ ಒತ್ತಾಯಿಸಿದರು.

‘ಉತ್ತರ ಕರ್ನಾಟಕದ ಜನರ ಭಾವನೆಗೆ ಸ್ಪಂದಿಸಿ ಬಾದಾಮಿಯಿಂದ ಸ್ಪರ್ಧಿಸುವುದರಿಂದ ಪಕ್ಷಕ್ಕೂ ಸಾಕಷ್ಟು ಅನುಕೂಲವಾಗಲಿದೆ’ ಎಂದು ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ಈ ಭಾಗದ ಸಚಿವರು ಹಾಗೂ ಕೆಪಿಸಿಸಿ ಪದಾಧಿಕಾರಿಗಳ ತಂಡ ಈ ನಿಟ್ಟಿನಲ್ಲಿ ಮುಖ್ಯಮಂತ್ರಿ ಅವರ ಮನವೊಲಿಸಲು ಮುಂದಾಗಿದೆ. ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್‌, ಕಾರ್ಯದರ್ಶಿ ಮಾಣಿಕಂ ಠಾಕೂರ್‌ ಅವರಿಗೂ ನಮ್ಮ ಬೇಡಿಕೆ ತಿಳಿಸಿದ್ದೇವೆ. ಸಕಾರಾತ್ಮಕ ಪ್ರತಿಕ್ರಿಯೆ ದೊರೆತಿದೆ’ ಎಂದರು.

‘ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸೋಲುತ್ತಾರೆ ಎನ್ನುವ ಭಯಕ್ಕೆ ಮುಖ್ಯಮಂತ್ರಿಯನ್ನು ಆಹ್ವಾನಿಸುತ್ತಿಲ್ಲ. ಈ ಭಾಗದ ಜನರ ಭಾವನೆಗೆ ಸ್ಪಂದಿಸುತ್ತಿದ್ದೇವೆ’ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಇದು ಕೊನೆ ಚುನಾವಣೆ: ಸಿದ್ದರಾಮಯ್ಯ
ವರುಣಾ/ತಿ.ನರಸೀಪುರ:
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗುರುವಾರ ವರುಣಾ ವಿಧಾನಸಭಾ ಕ್ಷೇತ್ರದಲ್ಲಿ ಪುತ್ರ ಡಾ.ಯತೀಂದ್ರ ಪರ ಬಿರುಸಿನ ಪ್ರಚಾರ ನಡೆಸಿದರು. ಮೆಲ್ಲಹಳ್ಳಿ, ಹಳ್ಳಿಕೆರಹುಂಡಿ, ಹಾರೋಹಳ್ಳಿ, ಶಿವಪುರ, ಹುನುಗನಹಳ್ಳಿ, ಕುಪ್ಯಾ, ಚಟ್ನಳ್ಳಿಪಾಳ್ಯ, ರಂಗಸಮುದ್ರ, ಯಡದೊರೆ, ಗರ್ಗೇಶ್ವರಿ ಗ್ರಾಮಗಳಲ್ಲಿ ರೋಡ್‌ ಶೋ ನಡೆಸಿದರು.

‘ಇದು ನನ್ನ ಕೊನೆಯ ಚುನಾವಣೆ. ಮುಂದೆ ಯಾವುದೇ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ. ಆದರೆ, ರಾಜಕೀಯದಲ್ಲಿ ಇರುತ್ತೇನೆ. ಚಾಮುಂಡೇಶ್ವರಿ ಹಾಗೂ ವರುಣಾ ನನಗೆ ಎರಡು ಕಣ್ಣುಗಳಿದ್ದಂತೆ. ವರುಣಾ ಕ್ಷೇತ್ರದ ಮತದಾರರು 40 ವರ್ಷಗಳಿಂದ ಪರಿಚಿತರು. ಚಾಮುಂಡೇಶ್ವರಿಯಲ್ಲಿ ರಾಜಕೀಯ ಜೀವನ ಆರಂಭಿಸಿದ್ದೇನೆ, ಅಲ್ಲಿಯೇ ಮುಕ್ತಾಯ ಮಾಡುತ್ತೇನೆ’ ಎಂದರು.

ಕ್ಷೇತ್ರ ಪರಿಚಯ ಇಲ್ಲದ, ಸಂಬಂಧವೂ ಇರದ ಕೆಲವರು ವ್ಯಾಪಾರ ಮಾಡಿಕೊಂಡು ಹೋಗಲು ಬಂದಿದ್ದಾರೆ. ಅಪಪ್ರಚಾರದ ಮೂಲಕ ಜನರ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಈ ಬಗ್ಗೆ ಮತದಾರರು ಜಾಗೃತರಾಗಬೇಕು ಎಂದು ಕೋರಿದರು.

ಎಲ್ಲಿಂದಲೋ ಬಂದವರು ಚುನಾವಣೆ ಮುಗಿದ ನಂತರ ನಾಪತ್ತೆಯಾಗುತ್ತಾರೆ. ಸುಳ್ಳು ಹೇಳಿ, ಬುರುಡೆ ಹೊಡೆದು ಹೋಗುತ್ತಾರೆ. ಚುನಾವಣೆ ಬರುತ್ತಿದ್ದಂತೆ ಕೆಲವರು ಕೈಲಾಸ ತೋರಿಸುವುದಾಗಿ ಬರುತ್ತಿದ್ದಾರೆ. ಇಂತಹವರನ್ನು ನಂಬಬೇಡಿ. ಮತ್ತೆ ಕಾಂಗ್ರೆಸ್ ರಾಜ್ಯದಲ್ಲಿ ಅಧಿಕಾರ ಹಿಡಿಯಲಿದೆ. ನಾನೇ ಮುಖ್ಯಮಂತ್ರಿ ಆಗುವ ಅವಕಾಶವಿದೆ ಎಂದರು. ಬಾಕಿ ಉಳಿದ ಎಲ್ಲಾ ಅಭಿವೃದ್ಧಿ ಕೆಲಸಗಳನ್ನು ಮಾಡಿಸುವುದಾಗಿ ಭರವಸೆ ನೀಡಿದರು.

ವರುಣಾ ಹೋಬಳಿಯ ದೊಡ್ಡ ಗ್ರಾಮವಾದ ಮೆಲ್ಲಹಳ್ಳಿಯಲ್ಲಿ ಸುಮಾರು ಎರಡು ಗಂಟೆ ರೋಡ್ ಶೋ ನಡೆಸಿ, ನಾಲ್ಕು ಕಡೆ ಮಾತನಾಡಿದರು. ಈ ಸಂದರ್ಭದಲ್ಲಿ ಮಜ್ಜಿಗೆ, ಶರಬತ್, ಎಳೆನೀರು ಸೇವಿಸಿ ದಣಿವಾರಿಸಿಕೊಂಡರು. ಕೆಲವು ಕಾರ್ಯಕರ್ತರು ಬೀಸಣಿಕೆಯಿಂದ ಗಾಳಿ ಬೀಸುತ್ತಿದ್ದರು.

ಕಾರ್ಯಕರ್ತರು, ಅಭಿಮಾನಿಗಳು, ಸಂಘ- ಸಂಸ್ಥೆಗಳ ಮುಖಂಡರು ಸಿದ್ದರಾಮಯ್ಯ ಹಾಗೂ ಯತೀಂದ್ರ ಅವರಿಗೆ ಮೈಸೂರು ಪೇಟಾ ತೊಡಿಸಿ, ಹಾರ ಹಾಕಿ, ಹೂವಿನ ಮಳೆಗರೆದು ಸಂಭ್ರಮಿಸಿದರು.

ಕಾಂಗ್ರೆಸ್ ಸೇರ್ಪಡೆ: ಇತ್ತೀಚೆಗೆ ಬಿಜೆಪಿ ಸೇರಿದ್ದ ಮೆಲ್ಲಹಳ್ಳಿ ವೆಂಕಟೇಶ್ ಮತ್ತೆ ಸಿದ್ದರಾಮಯ್ಯ ಸಮ್ಮುಖದ ಕಾಂಗ್ರೆಸ್ ಸೇರಿದರು.

ಬಾದಾಮಿ ಕಾಂಗ್ರೆಸ್ ಕಾರ್ಯಕರ್ತರ ಭೇಟಿ: ಬಾದಾಮಿ ಕ್ಷೇತ್ರದ ಸುಮಾರು 500ಕ್ಕೂ ಅಧಿಕ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಡಾ.ದೇವರಾಜ ಪಾಟೀಲ ಅಭಿಮಾನಿಗಳು ವರುಣಾ ಹೋಬಳಿಯ ಹಾರೋಹಳ್ಳಿಯಲ್ಲಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದರು. ಪ್ರಚಾರದ ಮಾರ್ಗದಲ್ಲಿ ವಾಹನ ತಡೆದು ಚರ್ಚಿಸಿದರು. ದೇವರಾಜ ಪಾಟೀಲ ಅವರಿಗೆ ಬಿ ಫಾರಂ ನೀಡುವಲ್ಲಿ ವಿಳಂಬ ನೀತಿ ಅನುಸರಿಸುತ್ತಿರುವುದನ್ನು ವಿರೋಧಿಸಿದರು.

ಪಾಟೀಲ ಅವರಿಗೆ ಈ ಬಾರಿ ಟಿಕೆಟ್ ನೀಡಿವುದಾಗಿ ಸಿದ್ದರಾಮಯ್ಯ ಭರವಸೆ ನೀಡಿದ ನಂತರ ಕಾರ್ಯಕರ್ತರು ಜಯಘೋಷ ಕೂಗಿದರು.

ಬಾದಾಮಿ ಕಿಸಾನ್ ಘಟಕದ ಅಧ್ಯಕ್ಷ ಮುತ್ತಣ್ಣ ‘ಪ್ರಜಾವಾಣಿ’ ಜತೆ ಮಾತನಾಡಿ, ಬಾದಾಮಿಯಲ್ಲಿ ಸಿದ್ದರಾಮಯ್ಯ ಸ್ಪರ್ಧಿಸಿದರೆ ಸ್ವಾಗತಿಸುತ್ತೇವೆ. ಕಳೆದ ಬಾರಿ ದೇವರಾಜ ಪಾಟೀಲ ಅವರಿಗೆ ಟಿಕೆಟ್ ನೀಡುವುದಾಗಿ ಕಾಂಗ್ರೆಸ್ ಭರವಸೆ ನೀಡಿತ್ತು. ಆದರೆ, ಕೊನೆ ಗಳಿಗೆಯಲ್ಲಿ ಚಿಂಚನಸೂರಿಗೆ ನೀಡಲಾಗಿತ್ತು. ಈ ಬಾರಿ ಆ ರೀತಿಯಾಗಬಾರದೆಂದು 35 ವಾಹನಗಳಲ್ಲಿ ಬಂದು ಮುಖ್ಯಮಂತ್ರಿ ಮೇಲೆ ಒತ್ತಡ ಹಾಕಿದೆವು ಎಂದು ತಿಳಿಸಿದರು. ಬನ್ನೂರು ರಸ್ತೆಯ ಹಾರೋಹಳ್ಳಿ ಹೊರ ಭಾಗದಲ್ಲಿ ಕೆಲಕಾಲ ವಾಹನ ದಟ್ಟನೆ ಉಂಟಾಯಿತು.

ಅನುಮತಿ ಇಲ್ಲದ ವಾಹನಗಳಿಗೆ ಎಚ್ಚರಿಕೆ: ಪ್ರಚಾರದಲ್ಲಿ ಅನುಮತಿಗಿಂತಲೂ ಹೆಚ್ಚಿನ ಸಂಖ್ಯೆಯ ವಾಹನಗಳು ಇದ್ದವು. ಅನುಮತಿ ಪಡೆಯದ ವಾಹನಗಳು ಮುಂದಿನ ಗ್ರಾಮಗಳಿಗೆ ಬರದಂತೆ ಪೊಲೀಸರು ತಡೆಯೊಡ್ಡಿದರು. ಕೆಪಿಸಿಸಿ ಕಾರ್ಯದರ್ಶಿ ವರುಣಾ ಮಹೇಶ್ ಕಾರು ಅನುಮತಿ ಪಡೆಯದಿರುವ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿ ಎಚ್ಚರಿಕೆ ನೀಡಿದರು.

ಸಂಸದ ಧ್ರುವನಾರಾಯಣ, ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಬಿ.ಜೆ.ವಿಜಯಕುಮಾರ್‌, ಜಿಲ್ಲಾ ಪಂಚಾಯಿತಿ ಸದಸ್ಯೆ ಭಾಗ್ಯಾ, ತಾ.ಪಂ ಸದಸ್ಯರಾದ ಮುದ್ದರಾಮೇಗೌಡ, ಅಂಜಲಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಮುದ್ದೇಗೌಡ, ಕೆಪಿಸಿಸಿ ಕಾರ್ಯದರ್ಶಿ ವರುಣಾ ಮಹೇಶ್, ತಾ.ಪಂ ಮಾಜಿ ಸದಸ್ಯರಾದ ಎಂ.ಟಿ.ರವಿಕುಮಾರ್, ಸಿದ್ದಯ್ಯ, ಪುಟ್ಟಣ್ಣ, ಮಂಜುಳಾ ಮಂಜುನಾಥ್, ಶಿವರತ್ನ ನಾಗರಾಜ್, ಮಹೇಂದ್ರ, ಗೋಪಾಲರಾಜ್, ಹಿನಕಲ್ ಉದಯ್, ಪುಷ್ಪಾ ಬೋರೇಗೌಡ ಇದ್ದರು.

800 ಕೆ.ಜಿ. ತೂಕದ ಸೇಬಿನ ಹಾರ
ಮಾದೇಗೌಡನಹುಂಡಿಯಲ್ಲಿ ಸಿದ್ದರಾಮಯ್ಯ ಅವರಿಗೆ 800 ಕೆ.ಜಿ. ಸೇಬುಗಳನ್ನು ಬಳಸಿ ತಯಾರಿಸಿದ ಹಾರ ಹಾಕಿ ಸ್ವಾಗತಿಸಲಾಯಿತು. ಅನಿಲ್‌ ಎಂಬವರು ಈ ಹಾರ ನೀಡಿದ್ದಾರೆ. ‘ಬೇರೆ ಹಳ್ಳಿಗಳಲ್ಲಿ ಇಂತಹ ಅದ್ದೂರಿ ಸ್ವಾಗತ ಸಿಕ್ಕಿರಲಿಲ್ಲ. ಹಾರ ನೀಡಿದವರಿಗೆ ವಿಶೇಷ ಅಭಿನಂದನೆ ಸಲ್ಲಿಸುತ್ತೇನೆ’ ಎಂದು ಸಿದ್ದರಾಮಯ್ಯ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.