ADVERTISEMENT

ಮೋದಿ ಎಷ್ಟೇ ಬಾರಿ ಬರಲಿ, ಶಾ ಎಷ್ಟೇ ನಾಟಕ ಆಡಲಿ ಬಿಜೆಪಿಯದ್ದು ಕೇವಲ ಮಿಷನ್ 50 ಅಷ್ಟೇ: ಸಿದ್ದರಾಮಯ್ಯ

​ಪ್ರಜಾವಾಣಿ ವಾರ್ತೆ
Published 29 ಏಪ್ರಿಲ್ 2018, 8:24 IST
Last Updated 29 ಏಪ್ರಿಲ್ 2018, 8:24 IST
ಸಿದ್ದರಾಮಯ್ಯ (ಸಂಗ್ರಹ ಚಿತ್ರ)
ಸಿದ್ದರಾಮಯ್ಯ (ಸಂಗ್ರಹ ಚಿತ್ರ)   

ಬಾಗಲಕೋಟೆ: ‘ಪ್ರಧಾನಿ ನರೇಂದ್ರ ಮೋದಿ ಎಷ್ಟೇ ಬಾರಿ ರಾಜ್ಯಕ್ಕೆ ಬರಲಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಎಷ್ಟೇ ನಾಟಕ ಆಡಲಿ, ಕರ್ನಾಟಕದಲ್ಲಿ ಬಿಜೆಪಿಯದ್ದು ಕೇವಲ ಮಿಷನ್ 50 ಅಷ್ಟೇ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವ್ಯಂಗ್ಯವಾಡಿದರು.

ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ಅವರ ಮಿಷನ್ 150 ಹೇಳಿಕೆಗೆ ಮುಧೋಳದಲ್ಲಿ ಕಾಂಗ್ರೆಸ್ ಪ್ರಚಾರ ಸಭೆ ಉದ್ದೇಶಿಸಿ ಮಾತನಾಡಿದ ವೇಳೆ ಸಿದ್ದರಾಮಯ್ಯ ತಿರುಗೇಟು ನೀಡಿದರು. ಜತೆಗೆ, ದೇವರಾಜ ಅರಸು ನಂತರ 5 ವರ್ಷ ಪೂರೈಸಿದ ಮುಖ್ಯಮಂತ್ರಿ ನಾನು ಎಂದರು.

‘ಬಿ.ಎಸ್‌.ಯಡಿಯೂರಪ್ಪ ಒಬ್ಬರೇ ಜೈಲಿಗೆ ಹೋಗಿಲ್ಲ. ಜನಾರ್ದನ ರೆಡ್ಡಿ, ಹರತಾಳು ಹಾಲಪ್ಪ, ಕೃಷ್ಣಯ್ಯ ಶೆಟ್ಟಿ ಎಲ್ಲರೂ ಜೈಲುಪಾಲಾಗಿ ಜಾಮೀನು ಪಡೆದವರು. ಆದರೆ, ಈ ವಿಷಯವನ್ನು ಹೇಳಿದರೆ ಯಡಿಯೂರಪ್ಪ ಉರಿದು ಬಿಳುತ್ತಾರೆ. ರೆಡ್ಡಿ ಸಹೋದರರು ಅದಿರು ಲೂಟಿ ಮಾಡಿ ಸರ್ಕಾರದ ಬೊಕ್ಕಸಕ್ಕೆ ಸಾವಿರಾರು ಕೋಟಿ ರೂಪಾಯಿ ನಷ್ಟ ಮಾಡುತ್ತಾ ಇದ್ದರು. 320 ಕಿ.ಮೀ. ಬಳ್ಳಾರಿಗೆ ಪಾದಯಾತ್ರೆ ಮಾಡಿದೆ. ಅದರಿಂದ ರೆಡ್ಡಿ ಸೇರಿ ಹಲವರು ಜೈಲಿಗೆ ಹೋಗುವಂತಾಯಿತು. ಹೀಗಾಗಿ ಮತ್ತೆ ಕಾಂಗ್ರೆಸ್ ಹಾಗೂ ಸಿದ್ದರಾಮಯ್ಯ ಅಧಿಕಾರಕ್ಕೆ ಬರಬಾರದು, ಅಂತ ಹುನ್ನಾರ ನಡೆಸಿದ್ದಾರೆ’ ಎಂದು ಸಿದ್ದರಾಮಯ್ಯ ಹೇಳಿದರು.

ADVERTISEMENT

ಸಂಸದೆ ಶೋಭಾ ಕರಂದ್ಲಾಜೆ ಅವರನ್ನು ಕರೆದುಕೊಂಡು ಯಡಿಯೂರಪ್ಪ ದಲಿತರ ಮನೆಗಳಿಗೆ ಹೋಗುತ್ತಾರೆ. ಆದರೆ, ನಿಜವಾಗಿಯೂ ಬಿಜೆಪಿ ದಲಿತರ ವಿರೋಧಿ. ಸಾಮಾಜಿಕ ನ್ಯಾಯದ ವಿರೋಧಿ ಎಂದು ಸಿದ್ದರಾಮಯ್ಯ ಟೀಕಿಸಿದರು.

ಸಂವಿಧಾನ ಬದಲಾಯಿಸುವ ಬಗ್ಗೆ ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಅವರ ಹೇಳಿಕೆ ಉಲ್ಲೇಖಿಸಿದ ಸಿದ್ದರಾಮಯ್ಯ, ‘ಸಂವಿದಾನ ಬದಲಾದರೆ ಪ್ರಜಾಪ್ರಭುತ್ವ ಉಳಿಯದು. ಸಮಾಜದಲ್ಲಿ ಸಾಮರಸ್ಯ ಉಳಿಯದು. ಹಿಂದುಳಿದವರಿಗೆ ಕೈ ಮುಗಿದು ಕೇಳುತ್ತೇನೆ. ಯಾರೂ ಬಿಜೆಪಿಗೆ ಮತದಾನ ಮಾಡಬೇಡಿ’ ಎಂದರು. ಜತೆಗೆ, ಸಚಿವ ಹೆಗಡೆ ಗ್ರಾಮ ಪಂಚಾಯ್ತಿ ಸದಸ್ಯನಾಗಲೂ ನಾಲಾಯಕ್ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇನ್ನಷ್ಟು...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.