ADVERTISEMENT

ಸ್ಪರ್ಧೆಗೆ ಅಂಬರೀಷ್‌, ಸಚಿವ ಸೀತಾರಾಂ ನಕಾರ

​ಪ್ರಜಾವಾಣಿ ವಾರ್ತೆ
Published 21 ಏಪ್ರಿಲ್ 2018, 19:30 IST
Last Updated 21 ಏಪ್ರಿಲ್ 2018, 19:30 IST
ಅಂಬರೀಷ್‌
ಅಂಬರೀಷ್‌   

ಬೆಂಗಳೂರು: ಟಿಕೆಟ್‌ಗಾಗಿ ಬೀದಿ ಕಾಳಗ, ಪಕ್ಷಾಂತರ ನಡೆಯುತ್ತಿರುವ ಹೊತ್ತಿನಲ್ಲೇ ಕಾಂಗ್ರೆಸ್‌ ಟಿಕೆಟ್‌ ಸಿಕ್ಕಿರುವ ಸಚಿವ ಎಂ.ಆರ್‌.ಸೀತಾರಾಂ ಹಾಗೂ ಚಿತ್ರನಟ, ಶಾಸಕ ಎಂ.ಎಚ್. ಅಂಬರೀಷ್‌ ಸ್ಪರ್ಧೆಯಿಂದ ದೂರ ಉಳಿಯಲು ನಿರ್ಧರಿಸಿದ್ದಾರೆ.

ಮಲ್ಲೇಶ್ವರ ಕ್ಷೇತ್ರದಿಂದ ಸಚಿವ ಸೀತಾರಾಂ ಅವರನ್ನು ಕಣಕ್ಕಿಳಿಸಲು ಪಕ್ಷವು ಬಯಸಿತ್ತು. ಆದರೆ, ‘ಕಣಕ್ಕಿಳಿಯಲು ನನಗೆ ಆಸಕ್ತಿ ಇಲ್ಲ’ ಎಂದು ಅವರೇ ಸ್ಪಷ್ಟಪಡಿಸಿದ್ದಾರೆ.

‘10 ವರ್ಷಗಳಿಂದ ಈ ಕ್ಷೇತ್ರದ ಮತದಾರರ ಸಂಪರ್ಕ ಹೊಂದಿಲ್ಲ. ಇಲ್ಲಿ ಚುನಾವಣೆಗೆ ಸಜ್ಜಾಗುವಂತೆ ವರಿಷ್ಠರು ಕನಿಷ್ಠ ಪಕ್ಷ ಮೂರು ತಿಂಗಳು ಮೊದಲಾದರೂ ಸೂಚನೆ ನೀಡುತ್ತಿದ್ದರೆ ನನಗೂ ಕಾಲಾವಕಾಶ ಸಿಗುತ್ತಿತ್ತು. ಪಕ್ಷವು ಕೊನೆಗಳಿಗೆಯಲ್ಲಿ ಏಕಾಏಕಿ ನನ್ನ ಹೆಸರನ್ನು ಅಭ್ಯರ್ಥಿಗಳ ಪಟ್ಟಿಯಲ್ಲಿ ಪ್ರಕಟಿಸಿದೆ. ಹಾಗಾಗಿ ಈ ಬಾರಿ ಇಲ್ಲಿಂದ ಸ್ಪರ್ಧಿಸುವುದಿಲ್ಲ. ನನ್ನ ನಿಲುವನ್ನು ಪಕ್ಷದ ವರಿಷ್ಠರಿಗೂ ಹೇಳಿದ್ದೇನೆ’ ಎಂದು ಸೀತಾರಾಂ ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

‘10 ವರ್ಷಗಳಲ್ಲಿ ಅನೇಕ ಹೊಸ ಮತದಾರರು ಸೇರ್ಪಡೆಯಾಗಿದ್ದಾರೆ. ನಾನು ಇಲ್ಲಿನ ಶಾಸಕನಾಗಿದ್ದಾಗ ನಡೆದಿರುವ ಅಭಿವೃದ್ಧಿ ಕಾರ್ಯಗಳ ಬಗ್ಗೆ ಅವರಿಗೆ ಅಷ್ಟಾಗಿ ತಿಳಿದಿಲ್ಲ. ಇಲ್ಲಿ ಚುನಾವಣೆಗೆ ಸ್ಪರ್ಧಿಸಲು ಪಕ್ಷದ ಕೆಲವು ಮುಖಂಡರು ಸಿದ್ಧತೆ ಮಾಡಿಕೊಂಡಿದ್ದರು. ಇಲ್ಲಿನ ಪಾಲಿಕೆ ಸದಸ್ಯರು ಹಾಗೂ ಸ್ಥಳಿಯ ಮುಖಂಡರ ಜೊತೆ ಸಮಾಲೋಚನೆ ನಡೆಸಿದ್ದೇನೆ. ಅವರೂ ಇದೇ ಅಭಿಪ್ರಾಯ ಹೊಂದಿದ್ದಾರೆ’ ಎಂದರು.

ಮಾಜಿ ಮುಖ್ಯಮಂತ್ರಿ ಕೆಂಗಲ್‌ ಹನುಮಂತಯ್ಯ ಅವರ ಮೊಮ್ಮಗ ಶ್ರೀಪಾದ ರೇಣು, ಪಾಲಿಕೆಯ ಮಾಜಿ ಸದಸ್ಯ ಗಿರೀಶ್‌ ಲಕ್ಕಣ್ಣ, ವಕೀಲ ಕೆ.ದಿವಾಕರ್‌ ಇಲ್ಲಿನ ಟಿಕೆಟ್‌ ಆಕಾಂಕ್ಷಿಗಳು. ಕಳೆದ ಚುನಾವಣೆಯಲ್ಲಿ ಈ ಕ್ಷೇತ್ರದ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸೋತಿದ್ದ ಬಿ.ಕೆ.ಶಿವರಾಂ ಕೂಡಾ ಈ ಬಾರಿ ಮತ್ತೆ ಕಣಕ್ಕಿಳಿಯಲು ಆಸಕ್ತಿ ಹೊಂದಿಲ್ಲ.

ಬಗ್ಗದ ಅಂಬರೀಷ್‌: ಸಿದ್ದರಾಮಯ್ಯ ನೇತೃತ್ವದ ಸರ್ಕಾರದಲ್ಲಿ ವಸತಿ ಸಚಿವರಾಗಿದ್ದ ಅಂಬರೀಷ್‌ಗೆ ಮಂಡ್ಯ ಕ್ಷೇತ್ರದಲ್ಲಿ ಪಕ್ಷ ಟಿಕೆಟ್‌ ನೀಡಿದೆ. ಆದರೂ ಅವರು ಹಿಂದೇಟು ಹಾಕಿದ್ದಾರೆ.

‘ಈ ಬಾರಿ ಮತ್ತೆ ಕಣಕ್ಕಿಳಿಯುವಂತೆ ಅಂಬರೀಷ್‌ ಅವರ ಮನವೊಲಿಸಲು ಯತ್ನಿಸಿದೆವು. ಆದರೆ, ಅವರು ಸುತಾರಾಂ ಒಪ್ಪುತ್ತಿಲ್ಲ’ ಎಂದು ಅವರ ಆಪ್ತರಾಗಿರುವ ಕಾಂಗ್ರೆಸ್‌ ಮುಖಂಡ ಅಮರಾವತಿ ಚಂದ್ರಶೇಖರ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ಆಪ್ತನಿಗೆ ಟಿಕೆಟ್‌ ನೀಡುವಂತೆ ಒತ್ತಾಯ: ಮಂಡ್ಯದಲ್ಲಿ  ಅಮರಾವತಿ ಚಂದ್ರಶೇಖರ್‌ ಅವರಿಗೆ ಟಿಕೆಟ್‌ ನೀಡುವಂತೆ ಅಂಬರೀಷ್‌ ಪಟ್ಟು ಹಿಡಿದಿದ್ದಾರೆ. ಆದರೆ, ‘ಅವರಿಗೆ ಟಿಕೆಟ್ ನೀಡುವುದಿಲ್ಲ. ನೀವು ಸ್ಪರ್ಧಿಸುವುದಿಲ್ಲ ಎಂದಾದರೆ ಎಂ.ಎಸ್‌.ಆತ್ಮಾನಂದ ಹಾಗೂ ಎಚ್‌.ಬಿ.ರಾಮು ಅವರನ್ನು ಕಣಕ್ಕೆ ಇಳಿಸುವುದಾಗಿ ವರಿಷ್ಠರು ತಿಳಿಸಿದ್ದಾರೆ’ ಎಂದು ಮೂಲಗಳು ತಿಳಿಸಿವೆ. ಏತನ್ಮಧ್ಯೆ, ಅಂಬರೀಷ್ ಮನವೊಲಿಸಲು  ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಮುಂದಾಗಿದ್ದಾರೆ.

ಅರುಣ್ ಸೋಮಣ್ಣ ಹಿಂದೇಟು: ವಿ. ಸೋಮಣ್ಣ ಪುತ್ರ ಡಾ. ಅರುಣ್‌ಗೆ ಅರಸೀಕೆರೆ ಕ್ಷೇತ್ರದಲ್ಲಿ ಬಿಜೆಪಿ ಟಿಕೆಟ್ ನೀಡಿದೆ. ಆದರೆ, ‘ಚುನಾವಣೆಗೆ ಸ್ಪರ್ಧಿಸುವುದಿಲ್ಲ’ ಎಂದು ಪಕ್ಷದ ನಾಯಕರಿಗೆ ಪತ್ರ ಬರೆದಿದ್ದಾರೆ. ಪ್ರತಿಕ್ರಿಯೆ ಪಡೆಯಲು ಅರುಣ್ ಅವರಿಗೆ ಕರೆ ಮಾಡಿದರೆ ಫೋನ್ ಸ್ವಿಚ್ ಆಫ್‌ ಆಗಿತ್ತು. ವಿ.ಸೋಮಣ್ಣ ಅವರಿಗೆ ಕರೆ ಮಾಡಿದಾಗ, ‘ರಾತ್ರಿ 10.30ರ ಬಳಿಕ ಸಾಹೇಬ್ರು ಮಾತನಾಡುತ್ತಾರೆ’ ಎಂದು ಅವರ ಆಪ್ತ ಸಹಾಯಕ ತಿಳಿಸಿದರು.

ಬಿಜೆಪಿ ತೊರೆಯಲಿರುವ ಬೆಳಮಗಿ

ಕಲಬುರ್ಗಿ ಗ್ರಾಮೀಣ ಕ್ಷೇತ್ರದ ಬಿಜೆಪಿ ಟಿಕೆಟ್ ಕೈ ತಪ್ಪಿದ ಕಾರಣಕ್ಕೆ ರೇವುನಾಯಕ ಬೆಳಮಗಿ ಪಕ್ಷ ತೊರೆಯಲು ನಿರ್ಧರಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಬೆಳಮಗಿ, ‘ಎಚ್.ಡಿ.ಕುಮಾರಸ್ವಾಮಿ ಬೆನ್ನಿಗೆ ಚೂರಿ ಇರಿದಿದ್ದಾರೆ ಎಂದು ಬಿ.ಎಸ್‌.ಯಡಿಯೂರಪ್ಪ ಈ ಹಿಂದೆ ಆರೋಪ ಮಾಡಿದ್ದರು. ಈಗ ಅವರೇ ನನಗೆ ಮೋಸ ಮಾಡಿದ್ದಾರೆ, ಕತ್ತು ಕೊಯ್ದಿದ್ದಾರೆ. ಕ್ರಿಮಿನಲ್ ಹಿನ್ನೆಲೆ, ಹಣ ಹಾಗೂ ತೋಳ್ಬಲ ಹೊಂದಿರುವ ಬಸವರಾಜ ಮತ್ತಿಮೋಡಗೆ ಟಿಕೆಟ್ ನೀಡಿದ್ದಾರೆ. ಹೀಗಾಗಿ ಪಕ್ಷ ತೊರೆಯಲು ನಿರ್ಧರಿಸಿದ್ದೇನೆ’ ಎಂದರು.

‘ಪಕ್ಷೇತರನಾಗಿ ಅಥವಾ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸುವಂತೆ ಬೆಂಬಲಿಗರು, ಬಂಜಾರ ಸಮಾಜದ ಮುಖಂಡರು ಒತ್ತಡ ಹೇರುತ್ತಿದ್ದಾರೆ. ಈ ಕುರಿತು ಚರ್ಚಿಸಲು ಕೋಲಿ, ವೀರಶೈವ- ಲಿಂಗಾಯತ, ಕುರುಬ ಸಮುದಾಯಗಳ ಮುಖಂಡರೂ ಸಭೆ ನಡೆಸುತ್ತಿದ್ದಾರೆ. ಅವರು ಕೈಗೊಳ್ಳುವ ನಿರ್ಧಾರ ನೋಡಿಕೊಂಡು ನನ್ನ ಮುಂದಿನ ನಿಲುವು ಪ್ರಕಟಿಸುತ್ತೇನೆ’ ಎಂದು ಹೇಳಿದರು.

ಬೆಳ್ಳುಬ್ಬಿ ಕಾದು ನೋಡುವ ತಂತ್ರ: ಬಸವನಬಾಗೇವಾಡಿಯ ಟಿಕೆಟ್‌ ವಂಚಿತ ಎಸ್.ಕೆ.ಬೆಳ್ಳುಬ್ಬಿ ಅವರೂ ಪಕ್ಷ ಬಿಡುವ ಚಿಂತನೆ ನಡೆಸಿದ್ದಾರೆ.

‘ಇದೇ 23ರವರೆಗೂ ಕಾದು ನೋಡುತ್ತೇನೆ. ಸ್ಥಳೀಯ ಪ್ರಮುಖರ ಜೊತೆ ಚರ್ಚಿಸಿ ಮುಂದಿನ ನಿರ್ಧಾರ ಕೈಗೊಳ್ಳುತ್ತೇನೆ’ ಎಂದು ಅವರು ತಿಳಿಸಿದ್ದಾರೆ.

ಬೆಳ್ಳುಬ್ಬಿ ಅವರಿಗೆ ಟಿಕೆಟ್‌ ನೀಡದ ಕಾರಣ ಬೇಸರಗೊಂಡಿರುವ ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ, ಗ್ರಾಮ ಪಂಚಾಯಿತಿ ಹಾಗೂ ನಗರ ಸ್ಥಳೀಯ ಸಂಸ್ಥೆಗಳ ಸದಸ್ಯರು ಸೇರಿ 23 ಮಂದಿ ಜನಪ್ರತಿನಿಧಿಗಳೂ ರಾಜೀನಾಮೆಗೆ ನೀಡಲು ಮುಂದಾಗಿದ್ದಾರೆ.

ಕಾಂಗ್ರೆಸ್‌ಗೆ ಬೇಳೂರು?

ಸಾಗರ ಕ್ಷೇತ್ರದಲ್ಲಿ ಬಿಜೆಪಿ ಟಿಕೆಟ್ ಕೈತಪ್ಪಿರುವ ಬೇಳೂರು ಗೋಪಾಲಕೃಷ್ಣ ಕಾಂಗ್ರೆಸ್ ಸೇರುವುದು ಬಹುತೇಕ ನಿಶ್ಚಿತ.

ಬೇಳೂರು ಅವರು ರಾಜ್ಯ ಕಾಂಗ್ರೆಸ್ ಉಸ್ತುವಾರಿ ವೇಣುಗೋಪಾಲ್ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಶನಿವಾರ ಭೇಟಿಯಾಗಿ ಈ ಬಗ್ಗೆ ಚರ್ಚಿಸಿದರು.

2004 ಹಾಗೂ 2008ರಲ್ಲಿ ಸೋದರ ಮಾವ ಕಾಗೋಡು ತಿಮ್ಮಪ್ಪ ಅವರ ವಿರುದ್ಧ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ, ಬೇಳೂರು ಗೆದ್ದಿದ್ದರು. 2013ರಲ್ಲಿ ಜೆಡಿಎಸ್‌ನಿಂದ ಸ್ಪರ್ಧಿಸಿ ಮಾವನ ವಿರುದ್ಧ ಸೋಲು ಕಂಡಿದ್ದರು. ಬಳಿಕ ಬಿಜೆಪಿಗೆ ಮರಳಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.