ADVERTISEMENT

ಸಿದ್ದರಾಮಯ್ಯಗೆ ತಕ್ಕ ಶಾಸ್ತಿ: ಯಡಿಯೂರಪ್ಪ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2018, 9:45 IST
Last Updated 8 ಫೆಬ್ರುವರಿ 2018, 9:45 IST
ಬಿ.ಎಸ್‌.‌ ಯಡಿಯೂರಪ್ಪ (ಸಂಗ್ರಹ ಚಿತ್ರ)
ಬಿ.ಎಸ್‌.‌ ಯಡಿಯೂರಪ್ಪ (ಸಂಗ್ರಹ ಚಿತ್ರ)   

ರಾಮನಗರ: ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ 67 ಭ್ರಷ್ಟಾಚಾರ ಪ್ರಕರಣಗಳು ದಾಖಲಾಗಿವೆ. ಬಿಜೆಪಿ ಅಧಿಕಾರಕ್ಕೆ ಬಂದ ಮರುಕ್ಷಣದಲ್ಲಿಯೇ ಎಲ್ಲವನ್ನೂ ತನಿಖೆಗೆ ಒಳಪಡಿಸಿ ತಕ್ಕ ಶಾಸ್ತಿ ಮಾಡಿಸುತ್ತೇನೆ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌.‌ ಯಡಿಯೂರಪ್ಪ ಎಚ್ಚರಿಕೆ ನೀಡಿದರು.

ಮಾಗಡಿಯ ಕೋಟೆ ಮೈದಾನದಲ್ಲಿ ಬುಧವಾರ ನಡೆದ ಬಿಜೆಪಿ ಪರಿವರ್ತನಾ ಯಾತ್ರೆಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ವಿರುದ್ಧ ಅಷ್ಟು ಪ್ರಕರಣಗಳು ದಾಖಲಾಗಿದ್ದರೂ ಯಾವುದೇ ತನಿಖೆ ನಡೆದಿಲ್ಲ. ಬದಲಾಗಿ ಎಲ್ಲವನ್ನೂ ಮುಚ್ಚಿ ಹಾಕುವ ಪ್ರಯತ್ನ ನಡೆದಿದೆ ಎಂದು ಆರೋಪಿಸಿದರು.

‘ಸಿದ್ದರಾಮಯ್ಯ ಅವರು ಪಾಂಡವ-ಕೌರವರ ಕುರಿತು ನೀಡಿರುವ ಹೇಳಿಕೆಯು ದೆವ್ವದ ಬಾಯಲ್ಲಿ ಭಗವದ್ಗೀತೆ ಕೇಳಿದಂತೆ ಆಗಿದೆ.‌ ಯಾರು ಕೌರವರು, ಪಾಂಡವರು ಎಂಬುದು ಇನ್ನು ಮೂರು ತಿಂಗಳಲ್ಲಿ ತಿಳಿಯಲಿದೆ. ಈ ಬಗ್ಗೆ ಮಾತನಾಡುವ ನೈತಿಕತೆಯೂ ಅವರಿಗೆ ಇಲ್ಲ. ಮೀನು ತಿಂದು ಧರ್ಮಸ್ಥಳಕ್ಕೆ ಹೋದವರು ಅವರು. ಉಡುಪಿಗೆ ಹತ್ತು ಸಲ ಹೋದರೂ ಶ್ರೀಕೃಷ್ಣನ ದರ್ಶನ ಪಡೆಯದವರು ಅವರು. ದೇವರ ದರ್ಶನಕ್ಕೂ ಆಹ್ವಾನ ನೀಡಬೇಕಾ’ ಎಂದು ಯಡಿಯೂರಪ್ಪ ಪ್ರಶ್ನಿಸಿದರು.

ADVERTISEMENT

ರಾಜ್ಯದಲ್ಲಿ ಕಳೆದ ಹದಿನಾಲ್ಕು ವರ್ಷದಲ್ಲಿ ಅಧಿಕಾರ ನಡೆಸಿದ್ದ ಸರ್ಕಾರಗಳು ₹ 1.03 ಲಕ್ಷ ಕೋಟಿ ಸಾಲ ಮಾಡಿದ್ದರೆ, ಸಿದ್ದರಾಮಯ್ಯ ಒಬ್ಬರೇ ₹ 2.42 ಲಕ್ಷ‌ಕೋಟಿ ಸಾಲ ಮಾಡಿದ್ದಾರೆ. ದುಡ್ಡು ಮಾಡುವುದೇ ಮಂತ್ರಿಗಳ‌ ಕೆಲಸ ಆಗಿದೆ. ಅಧಿಕಾರಿಗಳ ವರ್ಗಾವಣೆ ದಂಧೆ ಆಗಿದೆ ಎಂದು ದೂರಿದರು.

ಕೇಂದ್ರ ಸಚಿವ ಅನಂತಕುಮಾರ್ ಮಾತನಾಡಿ, ಸಿದ್ದರಾಮಯ್ಯ ಕುಂಭಕರ್ಣನ ವಂಶದವರು. ಅವರಿಗೆ ಈಗ ರಾಜ್ಯದ ಅಭಿವೃದ್ಧಿಯ ಕನಸು ಬಿದ್ದಿದೆ ಎಂದು ಟೀಕಿಸಿದರು.

ಶಾಸಕರಾದ ಆರ್. ಅಶೋಕ್, ಸಿ.ಟಿ. ರವಿ, ಸಿ.ಪಿ. ಯೋಗೇಶ್ವರ್ ಹಾಗೂ ಇತರ ಬಿಜೆಪಿ‌ ಮುಖಂಡರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.