ADVERTISEMENT

ಎಂ.ಟಿ.ಬಿ ನಾಗರಾಜ್‌ ವಿರುದ್ಧ ಲಾಭದಾಯಕ ಹುದ್ದೆ ಆರೋಪ

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2018, 9:10 IST
Last Updated 8 ಫೆಬ್ರುವರಿ 2018, 9:10 IST

ಬೆಂಗಳೂರು: ಕಾಂಗ್ರೆಸ್‌ ಪಕ್ಷಕ್ಕೆ ಸೇರಿದ ಹೊಸಕೋಟೆಯ ಶಾಸಕ ಎಂ.ಟಿ.ಬಿ ನಾಗರಾಜ್‌ ಹಾಗೂ ಪಿರಿಯಾಪಟ್ಟಣ ಶಾಸಕ ಕೆ.ವೆಂಕಟೇಶ್‌ ಅವರೂ ಲಾಭದಾಯಕ ಹುದ್ದೆ ಆರೋಪ ಎದುರಿಸುತ್ತಿದ್ದಾರೆ.

ಈ ಕುರಿತಂತೆ ಇವರಿಬ್ಬರ ವಿರುದ್ಧ ಪೊಲೀಸ್ ಮಹಾಸಂಘದ ಅಧ್ಯಕ್ಷ ವಿ.ಶಶಿಧರ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿರುವ ಏಕಸದಸ್ಯ ನ್ಯಾಯಪೀಠ ಈ ಅರ್ಜಿಯನ್ನು ‘ಸಾರ್ವಜನಿಕ ಹಿತಾಸಕ್ತಿ ಅರ್ಜಿಯಾಗಿ ಪರಿವರ್ತಿಸಿ ಪರಿಹಾರ ಪಡೆಯಿರಿ’ ಎಂದು ನಿರ್ದೇಶಿಸಿದೆ.

ಎಂ.ಟಿ.ಬಿ.ನಾಗರಾಜ್‌ ಅವರು, ‘ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಪ್ರದೇಶ ಯೋಜನಾ ಪ್ರಾಧಿಕಾರದ (ಬಯಾಪ) ಅಧ್ಯಕ್ಷರೂ ಆಗಿದ್ದರೆ, ಕೆ.ವೆಂಕಟೇಶ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ಲಾಭದಾಯಕ ಹುದ್ದೆಯಲ್ಲಿದ್ದಾರೆ ಎಂದು ಆಕ್ಷೇಪಿಸಿ ಈ ಅರ್ಜಿ ಸಲ್ಲಿಸಲಾಗಿದೆ’ ಎನ್ನುತ್ತಾರೆ ಶಶಿಧರ ಪರ ವಕೀಲ ಜಿ.ಆರ್.ಮೋಹನ್‌.

ADVERTISEMENT

ಲಾಭದಾಯಕ ಹುದ್ದೆ ಹೊಂದಿದ್ದ ಆರೋಪದಲ್ಲಿ ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ ಅವರ ಹೆಸರೂ ಕೇಳಿ ಬಂದಿತ್ತು. ಅವರು ಗೃಹ ಸಚಿವರಾಗಿದ್ದ ವೇಳೆ ‘ತುಮಕೂರಿನ ಸಿದ್ಧಾರ್ಥ ಶಿಕ್ಷಣ ಸಂಸ್ಥೆಯ ಮುಖ್ಯಸ್ಥರೂ ಆಗಿ ಲಾಭದಾಯಕ ಹುದ್ದೆಯಲ್ಲಿದ್ದಾರೆ’  ವಿ.ಶಶಿಧರ ರಾಜ್ಯಪಾಲರಿಗೆ ದೂರು ನೀಡಿದ್ದರು.

‘ರಾಜ್ಯಪಾಲರು ಯಾವುದೇ ಕ್ರಮ ಕೈಗೊಂಡಿಲ್ಲ’ ಎಂದು ಆಕ್ಷೇಪಿಸಿ ಶಶಿಧರ ಹೈಕೋರ್ಟ್‌ ಮೆಟ್ಟಿಲನ್ನೂ ತುಳಿದಿದ್ದರು. ಸದ್ಯ ಈ ಕುರಿತ ದೂರು ಮುಖ್ಯಮಂತ್ರಿಗಳ ಪ್ರಧಾನ ಕಾರ್ಯದರ್ಶಿ ಅವರ ಮುಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.