ADVERTISEMENT

ನೀವು ಹೇಳಿದವರಿಗೆ ಟಿಕೆಟ್‌: ಸಿ.ಎಂ ಭರವಸೆ

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2018, 9:06 IST
Last Updated 8 ಫೆಬ್ರುವರಿ 2018, 9:06 IST
ಸಿದ್ದರಾಮಯ್ಯ (ಸಂಗ್ರಹ ಚಿತ್ರ)
ಸಿದ್ದರಾಮಯ್ಯ (ಸಂಗ್ರಹ ಚಿತ್ರ)   

ಬೆಂಗಳೂರು: ‘ನೀವು ಯಾರ ಹೆಸರು ಹೇಳುತ್ತೀರೋ ಅವರಿಗೆ ಟಿಕೆಟ್‌ ನೀಡುತ್ತೇವೆ’– ಹೀಗೆಂದು ತಮ್ಮ ಆಪ್ತ ಹಾಗೂ ಲೋಕೋಪಯೋಗಿ ಸಚಿವ ಎಚ್‌.ಸಿ. ಮಹದೇವಪ್ಪ ಅವರನ್ನು ಪಕ್ಕದಲ್ಲಿ ಕೂರಿಸಿಕೊಂಡು ಮುಖ್ಯಮಂತ್ರಿ ಸಿದ್ದರಾಮಯ್ಯ ಕೇಳಿದರು.

ಅದಕ್ಕೆ ಸ್ಥಳೀಯ ಕಾರ್ಯಕರ್ತರು, ‘ನಾವು ಮಹದೇವಪ್ಪಗೆ ಆರ್ಶೀವಾದ ಮಾಡುತ್ತೇವೆ’ ಎಂದು ಘೋಷಣೆ ಕೂಗಿ, ಜೈಕಾರ ಹಾಕಿದರು.

ಸಿ.ವಿ. ರಾಮನ್ ನಗರ ಕ್ಷೇತ್ರದಲ್ಲಿ ಭಾನುವಾರ ನಡೆದ ಸಾಧನಾ ಸಮಾವೇಶದಲ್ಲಿ ತಿ.ನರಸೀಪುರ ಕ್ಷೇತ್ರದ ಶಾಸಕರೂ ಆಗಿರುವ ಮಹದೇವಪ್ಪ ಭಾಗವಹಿಸಿದ್ದರು. ಸಿ.ವಿ. ರಾಮನ್ ನಗರ ಕ್ಷೇತ್ರದಿಂದ ಕಣಕ್ಕಿಳಿಯಲು ಮಹದೇವಪ್ಪ ಈಗಾಗಲೇ ಸಿದ್ಧತೆ ನಡೆಸಿದ್ದಾರೆ.

ADVERTISEMENT

ಸರ್ಕಾರದ ಜನಪರ ಕಾರ್ಯಕ್ರಮಗಳ ಕುರಿತು ವಿವರಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ‘ಇಷ್ಟೆಲ್ಲಾ ಯೋಜನೆಗಳನ್ನು ನೀಡಿದ್ದೇವೆ. ನೀವು ಯಾರಿಗೆ ಆಶೀರ್ವಾದ ಮಾಡುತ್ತೀರಾ’ ಎಂದು ಸಭಿಕರನ್ನು ಪ್ರಶ್ನಿಸಿದರು.

ಆಗ  ಸ್ಥಳೀಯ ಮುಖಂಡರು ಮಹದೇವಪ್ಪ ಹೆಸರು ಕೂಗಿದರು. ‘ನಾನು ಅಭ್ಯರ್ಥಿ ‌ಘೋಷಿಸಲು ಬಂದಿಲ್ಲ. ನೀವು ಯಾರ ಹೆಸರು ಹೇಳುತ್ತೀರಾ ಅವರಿಗೆ ಟಿಕೆಟ್ ಕೊಡುತ್ತೇವೆ’ ಎಂದು ಮುಖ್ಯಮಂತ್ರಿ ಭರವಸೆ ನೀಡಿದರು.

ಸ್ಥಳೀಯ ಬಿಜೆಪಿ ಶಾಸಕ ಎ.ಸಿ. ರಘು ಕಾರ್ಯವೈಖರಿಯನ್ನು ಟೀಕಿಸಿದ ಮುಖ್ಯಮಂತ್ರಿ, ‘ವಿಧಾನಸಭೆಯಲ್ಲೂ ನಿಮ್ಮ ಶಾಸಕ ಸಕ್ರಿಯರಾಗಿಲ್ಲ. ಒಮ್ಮೆಯೂ ನನ್ನನ್ನು ಭೇಟಿ ಮಾಡಿಲ್ಲ. ಯಾವುದೇ ಕೆಲಸದ ಬಗ್ಗೆ ಚರ್ಚಿಸಿಲ್ಲ. ಹಾಜರಾತಿ ಹಾಕಿ ಟಿ.ಎ, ಡಿ.ಎ ತಗೊಂಡು ಹೋಗುತ್ತಾರೆ’ ಎಂದರು.

‘ಬೆಂಗಳೂರಿನ ಅಭಿವೃದ್ಧಿಗೆ ನಮ್ಮ ಸರ್ಕಾರ ₹ 7,300 ಕೋಟಿಗೂ ಹೆಚ್ಚು ಹಣ ನೀಡಿದೆ. ಈ ಬಗ್ಗೆ ಇಲ್ಲಿನ ಶಾಸಕನ ಮುಂದೆ ಹೇಳಬೇಕಿತ್ತು. ಆದರೆ, ಆ ಆಸಾಮಿ ಕಾರ್ಯಕ್ರಮದಲ್ಲಿ ಭಾಗವಹಿಸದೆ ತಪ್ಪಿಸಿಕೊಂಡಿದ್ದಾನೆ’ ಎಂದೂ ಟೀಕಿಸಿದರು.

ಬೆಂಗಳೂರು ಅಭಿವೃದ್ಧಿ ಸಚಿವ ಕೆ.ಜೆ. ಜಾರ್ಜ್‌, ‘ಬೆಂಗಳೂರಿನ ರಸ್ತೆಗಳ ಅಭಿವೃದ್ಧಿಗಾಗಿ ಸಚಿವ ಮಹದೇವಪ್ಪ ₹ 250 ಕೋಟಿಗೂ ಹೆಚ್ಚು ಹಣ ನೀಡಿದ್ದಾರೆ. ಅವರು ಈ ಕಾರ್ಯಕ್ರಮಕ್ಕೆ ವಿಶೇಷ ಅತಿಥಿಯಾಗಿ ಬಂದಿದ್ದಾರೆ’ ಎಂದು ಹೊಗಳಿದರು.

ಟಿಕೆಟ್‌ ಆಕಾಂಕ್ಷಿಗಳ ಅಸಮಾಧಾನ?
ಈ ಕ್ಷೇತ್ರದಲ್ಲಿ 2013ರಲ್ಲಿ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಮತ್ತು ಈ ಬಾರಿಯೂ ಟಿಕೆಟ್‌ ಆಕಾಂಕ್ಷಿಯಾಗಿರುವ ಪಿ. ರಮೇಶ್‌ ಮತ್ತು ಇನ್ನೊಬ್ಬ ಟಿಕೆಟ್‌ ಆಕಾಂಕ್ಷಿ ಶ್ರೀನಿವಾಸ್‌ ಕಾರ್ಯಕ್ರಮಕ್ಕೆ ಗೈರಾದರು.

ಈ ಬಗ್ಗೆ ಪ್ರತಿಕ್ರಿಯಿಸಿದ ರಮೇಶ್‌, ‘ಸರ್ಕಾರಿ ಕಾರ್ಯಕ್ರಮ ಆಗಿದ್ದರಿಂದ ನಾನು ಭಾಗವಹಿಸಿಲ್ಲ. ಟಿಕೆಟ್ ಕೈ ತಪ್ಪುವುದಿಲ್ಲ ಎಂಬ ನಂಬಿಕೆ ಇದೆ. ಒಂದು ವೇಳೆ ಟಿಕೆಟ್ ಕೈ ತಪ್ಪಿದರೆ ಕಾರ್ಯಕರ್ತರ ಜೊತೆ ಮಾತನಾಡಿ ಮುಂದಿನ ನಿರ್ಧಾರ ಕೈಗೊಳ್ಳುತ್ತೇನೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.