ADVERTISEMENT

‘ಅತಿರಥ’ನಾಗಿ ಚೇತನ್

ಕೆ.ಎಚ್.ಓಬಳೇಶ್
Published 23 ನವೆಂಬರ್ 2017, 19:30 IST
Last Updated 23 ನವೆಂಬರ್ 2017, 19:30 IST
ಚೆತನ್‌
ಚೆತನ್‌   

ಚೆತನ್‌ ಸಿನಿಮಾ ಮತ್ತು ಜನಪರ ಹೋರಾಟಗಳಲ್ಲಿ ತೊಡಗಿಸಿಕೊಂಡಿರುವ ಅಪರೂಪದ ನಟ. ‘ಅತಿರಥ’ ಚಿತ್ರದಲ್ಲಿ ಅವರದ್ದು ಟಿ.ವಿ. ಪತ್ರಕರ್ತನ ಪಾತ್ರ. ಮಹೇಶ್‌ ಬಾಬು ನಿರ್ದೇಶನದ ಈ ಚಿತ್ರ ಇಂದು(ನ. 24) ತೆರೆಕಾಣುತ್ತಿದೆ. ಈ ಕುರಿತು ಚೇತನ್‌ ಅವರೊಂದಿಗೆ ನಡೆಸಿದ ಮಾತುಕತೆ ಇಲ್ಲಿದೆ.

*‘ಅತಿರಥ’ ಚಿತ್ರದ ಬಗ್ಗೆ ಹೇಳಿ.
ನನ್ನ ಸಿನಿಮಾ ವೃತ್ತಿಜೀವನದಲ್ಲಿ ಇದೊಂದು ವಿಭಿನ್ನವಾದ ಚಿತ್ರ. ಚಿತ್ರದಲ್ಲಿ ನನ್ನದು ಟಿ.ವಿ. ಪತ್ರಕರ್ತನ ಪಾತ್ರ. ಒಳ್ಳೆಯ ಪಾತ್ರ ಸಿಕ್ಕಿದ ಖುಷಿಯಿದೆ. ಸಿನಿಮಾ ಪ್ರಬಲವಾದ ಮಾಧ್ಯಮ. ಸಮಾಜಕ್ಕೆ ಒಳ್ಳೆಯ ಸೇವೆ ಸಲ್ಲಿಸಲು ಸಿನಿಮಾವೊಂದು ವೇದಿಕೆ. ಪದವಿ ಶಿಕ್ಷಣದ ಹಂತದಲ್ಲಿ ನಕಲಿ ಪ್ರಮಾಣಪತ್ರಗಳ ಹಾವಳಿ ಪರಿಣಾಮ ಅರ್ಹರಿಗೆ ಅನ್ಯಾಯವಾಗುತ್ತಿದೆ. ಈ ಜಾಲದಿಂದ ಶಿಕ್ಷಣ ವ್ಯವಸ್ಥೆ ಅಧೋಗತಿಗೆ ಇಳಿದಿದೆ. ಅನರ್ಹರು ಉನ್ನತ ಹುದ್ದೆ ಗಿಟ್ಟಿಸಿಕೊಳ್ಳುತ್ತಾರೆ. ಸಮೂಹ ಮಾಧ್ಯಮಗಳಿಂದ ಸಮಾಜದಲ್ಲಿ ಬದಲಾವಣೆ ಸಾಧ್ಯ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮಾಧ್ಯಮಗಳ ಹೊಣೆಗಾರಿಕೆ ಹೆಚ್ಚಿದೆ. ಇದನ್ನೇ ಚಿತ್ರದಲ್ಲಿ ಹೇಳಿದ್ದೇವೆ.

*ಈ ಚಿತ್ರಕ್ಕೆ ಮಾನಸಿಕ ಸಿದ್ಧತೆ ಹೇಗಿತ್ತು?
ಮೊದಲಿಗೆ ಕಥೆಯನ್ನು ಅರ್ಥೈಸಿಕೊಂಡೆ. ಟಿ.ವಿ. ನಿರೂಪಕರು ಯಾವ ಮಾದರಿಯಲ್ಲಿ ಜನರಿಗೆ ಸುದ್ದಿ ಮುಟ್ಟಿಸುತ್ತಾರೆ ಎಂಬುದನ್ನು ಕಲಿತೆ. ಕ್ಯಾಮೆರಾ ಮುಂದೆ ಸುದ್ದಿ ನಿರೂಪಣೆ, ಅವರ ಬಾಡಿ ಲಾಂಗ್ವೇಜ್ ಬಗ್ಗೆ ಅರಿತುಕೊಂಡೆ. ಚಿತ್ರದಲ್ಲಿ ನನಗೆ ನಿರ್ದೇಶಕರು ಹೊಸ ಗೆಟಪ್‌ ನೀಡಿದ್ದಾರೆ.‌ ಇದು ಮೈಂಡ್‌ ಗೇಮ್‌ ಪಾತ್ರ. ಯುಕ್ತಿಯೊಂದಿಗೆ ಜುಗಲ್‌ಬಂದಿ ನಡೆಸುವ ನನ್ನ ಪಾತ್ರ ಜನರಿಗೆ ಇಷ್ಟವಾಗಲಿದೆ.

ADVERTISEMENT

*ನಿರ್ದೇಶಕ ಮಹೇಶ್‌ ಬಾಬು ಅವರೊಂದಿಗೆ ಕೆಲಸ ಮಾಡಿದ ಅನುಭವ ಹೇಗಿತ್ತು?
‘ಅರಸು’ ಅಂತಹ ಉತ್ತಮ ಚಿತ್ರ ನಿರ್ದೇಶಿಸಿದ ಹೆಗ್ಗಳಿಕೆ ಅವರದು. ಆ ಚಿತ್ರದಲ್ಲಿ ಬಾಳೆಹಣ್ಣು ಮಾರಾಟ ಮಾಡುವ ಅಜ್ಜಿಯ ದೃಶ್ಯ ಇಂದಿಗೂ ನನ್ನ ಮನಸ್ಸಿಗೆ ಕಾಡುತ್ತದೆ. ಅವರೊಬ್ಬ ಕಲಾ ವ್ಯಾಮೋಹಿ. ಭಾವನಾತ್ಮಕ ಸನ್ನಿವೇಶಗಳನ್ನು ಮನಸ್ಸಿಗೆ ನಾಟುವಂತೆ ತೆರೆಯ ಮೇಲೆ ಕಟ್ಟಿಕೊಡುವಲ್ಲಿ ಅವರು ಸಿದ್ಧಹಸ್ತರು. ಜನಪದ ಸೊಗಡಿನ ನಿರ್ದೇಶಕರೂ ಹೌದು. ಅವರೊಂದಿಗೆ ಕೆಲಸ ಮಾಡಿದ್ದು ಖುಷಿ ಕೊಟ್ಟಿತು. 

*ಸಿನಿಮಾ ಮತ್ತು ಜನಪರ ಹೋರಾಟಕ್ಕೆ ಹೇಗೆ ಸಮಯ ಹೊಂದಾಣಿಕೆ ಮಾಡಿಕೊಳ್ಳುತ್ತೀರಿ.
ನಟನೆಗೆ ನನ್ನ ಮೊದಲ ಆದ್ಯತೆ. ಬಂಡವಾಳ ಹೂಡಿದ ನಿರ್ಮಾಪಕರ ಹಿತಕಾಯುವುದು ಮುಖ್ಯ. ನಟನೆ ಮತ್ತು ಜನಪರ ಹೋರಾಟವನ್ನು ಒಟ್ಟೊಟ್ಟಿಗೆ ಸರಿದೂಗಿಸಿಕೊಂಡು ಹೋಗಲು ‍ಪ್ರಯತ್ನಿಸುತ್ತೇನೆ. ಶೂಟಿಂಗ್‌ ಇಲ್ಲದೆ ಇದ್ದಾಗ ಹೋರಾಟದಲ್ಲಿ ತೊಡಗಿಸಿಕೊಳ್ಳುತ್ತೇನೆ. ಕನ್ನಡ ಭಾಷೆ, ರೈತರು, ಕಾರ್ಮಿಕರು, ಮಹಿಳೆಯರು, ಪ್ರತ್ಯೇಕ ಲಿಂಗಾಯತ ಧರ್ಮ ಸ್ಥಾಪನೆ ಹಾಗೂ ವಿದ್ಯಾರ್ಥಿಗಳ ಪರವಾಗಿ ನನ್ನ ಹೋರಾಟ ನಿರಂತರವಾದುದು.

*ನಿಮ್ಮ ಜನಪರ ಹೋರಾಟದ ಬಗ್ಗೆ ಹೇಳಿ.
ಸಮಾಜದಲ್ಲಿ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಹೆಚ್ಚುತ್ತಿದೆ. ಸಿನಿಮಾ ರಂಗವೂ ಇದರಿಂದ ಹೊರತಲ್ಲ. ‘ಫೈರ್‌’ ಸಂಸ್ಥೆ ಮೂಲಕ ಚಿತ್ರರಂಗದ ಕಲಾವಿದೆಯರಿಗೆ ರಕ್ಷಣೆ ನೀಡಲು ಒತ್ತು ನೀಡಲಾಗಿದೆ. ಒಳ್ಳೆಯ ಬರಹಗಾರರಿಂದ ಉತ್ತಮ ಕಥೆಗಳು ಬರುತ್ತವೆ. ಇದರಿಂದ ಕನ್ನಡ ಚಿತ್ರರಂಗಕ್ಕೂ ಒಳಿತಾಗಲಿದೆ. ಬರಹಗಾರರಿಗೆ ಪ್ರೋತ್ಸಾಹ ನೀಡುವ ಮೂಲಕ ಮಾದರಿ ಚಿತ್ರರಂಗ ನಿರ್ಮಾಣದ ಗುರಿ ಹೊಂದಲಾಗಿದೆ.

*ನಿಮ್ಮ ಮುಂದಿನ ಯೋಜನೆಗಳೇನು?
50ರ ದಶಕದಲ್ಲಿ ನಡೆದ ಪ್ರಜಾ‍ಪ್ರಭುತ್ವದ ಹಿನ್ನೆಲೆಯುಳ್ಳ ಕಥಾವಸ್ತು ಇರುವ ಚಿತ್ರದ ನಿರ್ದೇಶನಕ್ಕೆ ಪಿ.ಸಿ. ಶೇಖರ್ ಮುಂದಾಗಿದ್ದಾರೆ. ಈ ಚಿತ್ರದ ಸ್ಕ್ರಿಫ್ಟ್‌ ಕೆಲಸ ನಡೆಯುತ್ತಿದೆ. ಇದರಲ್ಲಿ ನವೀರಾದ ಪ್ರೀತಿಯೂ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.