ADVERTISEMENT

ಅಭಿಮನ್ಯುವಿಗೆ ಪ್ರಸಾದ-ಆಶೀರ್ವಾದ

ಎಂ.ಚಂದ್ರಪ್ಪ
Published 30 ಅಕ್ಟೋಬರ್ 2014, 19:30 IST
Last Updated 30 ಅಕ್ಟೋಬರ್ 2014, 19:30 IST
ಅಭಿಮನ್ಯುವಿಗೆ ಪ್ರಸಾದ-ಆಶೀರ್ವಾದ
ಅಭಿಮನ್ಯುವಿಗೆ ಪ್ರಸಾದ-ಆಶೀರ್ವಾದ   

ಪ್ರೀತಿ, ಪ್ರೇಮ, ಹೊಡೆದಾಟ ಕೇಂದ್ರೀಕರಿಸಿದ ಚಿತ್ರಗಳು ಹಲವು ತೆರೆ ಕಂಡಿವೆ. ಆದರೆ ಶಿಕ್ಷಣ ವ್ಯವಸ್ಥೆ ಕುರಿತ ಚಿತ್ರಗಳು ಬೆರಳೆಣಿಕೆಯಷ್ಟೇ. ಇಂತಹ ವಿಭಿನ್ನ, ಕಮರ್ಷಿಯಲ್‌ ಸಿನಿಮಾ ‘ಅಭಿಮನ್ಯು’. ಈ ಚಿತ್ರ ಇದೇ ನವೆಂಬರ್‌ 7ರಂದು ರಾಜ್ಯಾದ್ಯಂತ ತೆರೆ ಕಾಣುತ್ತಿದೆ.

ಹಲವು ವರ್ಷಗಳ ನಂತರ ಕನ್ನಡದಲ್ಲಿ ಆಕ್ಷನ್‌ ಕಟ್‌ ಹೇಳಿರುವ ಅರ್ಜುನ್‌ ಸರ್ಜಾ ಚಿತ್ರದ ನಾಯಕ ನಟ, ನಿರ್ದೇಶಕ.
ದೇಶದಲ್ಲಿ ಶಿಕ್ಷಣ ವ್ಯವಸ್ಥೆ ಹೇಗಿದೆ, ಹೇಗಿರಬೇಕು ಎಂಬುದು ‘ಅಭಿಮನ್ಯು’ ಚಿತ್ರದ ಕಥಾಹಂದರ. ಶ್ರೀರಾಮ್ ಫಿಲಂ ಇಂಟರ್‌ನ್ಯಾಷನಲ್‌ ಲಾಂಛನದಲ್ಲಿ ತೆರೆ ಕಾಣುತ್ತಿರುವ ಚಿತ್ರದ ಹಾಡುಗಳ ಸೀಡಿ ಬಿಡುಗಡೆಗೆ ಅರ್ಜುನ್‌ ಸರ್ಜಾ ಅವರು ಆರಿಸಿಕೊಂಡಿದ್ದು ಸಿದ್ದಗಂಗಾ ಮಠವನ್ನು. ಅರ್ಜುನ್‌ ಸರ್ಜಾ ಕುಟುಂಬ ಹಾಗೂ ಚಿತ್ರತಂಡ ಮಠಕ್ಕೆ ಆಗಮಿಸಿ, ಶಿವಕುಮಾರ ಸ್ವಾಮೀಜಿ ಪಾದಪೂಜೆ ನೆರವೇರಿಸಿ ಸೀಡಿ ಬಿಡುಗಡೆ ಮಾಡಿಸಿತು.

ನಂತರ ಮಾತಿಗೆ ನಿಂತ ಅರ್ಜುನ್‌ ಸರ್ಜಾ, ಮಠಕ್ಕೂ ಶಿಕ್ಷಣಕ್ಕೂ ಇರುವ ಸಂಬಂಧ ಹಾಗೂ ತವರು ಜಿಲ್ಲೆಯ ತಮ್ಮ ವ್ಯಾಮೋಹದ ಕಾರಣಗಳನ್ನು ಪತ್ರಕರ್ತರ ಮುಂದಿಟ್ಟರು. ‘ದೇಶದಲ್ಲಿ ಶಿಕ್ಷಣದ ವ್ಯವಸ್ಥೆಯ ವಿವಿಧ ಮಜಲುಗಳನ್ನು ಒಳಗೊಂಡ ಅಭಿಮನ್ಯು ಚಿತ್ರ ತೆಲುಗು, ತಮಿಳು ಹಾಗೂ ಕನ್ನಡದಲ್ಲಿ ತೆರೆ ಕಾಣುತ್ತಿದೆ. ಮೊದಲಿಗೆ ಕನ್ನಡದಲ್ಲೇ ಬಿಡುಗಡೆ ಮಾಡುತ್ತೇನೆ’ ಎಂದು ಹೇಳುವ ಮೂಲಕ ಮಾತೃಭಾಷೆ ಬಗೆಗಿನ ಅಭಿಮಾನ ವ್ಯಕ್ತಪಡಿಸಿದರು.

ಸುಮಾರು 20 ಕೋಟಿ ರೂಪಾಯಿ ವೆಚ್ಚದ ಈ ಚಿತ್ರದ ಹಿಂದೆ ಒಂದೂವರೆ ವರ್ಷಗಳ ಶ್ರಮವಿದೆ. ಇಂಗ್ಲೆಂಡ್‌, ಸಿಂಗಪುರ, ಹೈದರಾಬಾದ್‌, ಚೆನ್ನೈ, ಮೈಸೂರು ಸೇರಿದಂತೆ ಹಲವೆಡೆ ಚಿತ್ರೀಕರಣ ನಡೆಸಲಾಗಿದೆ ಎಂದು ಅರ್ಜುನ್‌ ಹೇಳಿದರು.

ಫೈವ್‌ಸ್ಟಾರ್‌ ಹೋಟೆಲ್‌ನಲ್ಲಿ ಸೀಡಿ ಬಿಡುಗಡೆ ಮಾಡಿದ್ದರೆ ಇಲ್ಲಿ ಸಿಗುವ ಸಂತೋಷ ಸಿಕ್ಕುತ್ತಿರಲಿಲ್ಲ. ಸಿದ್ದಗಂಗಾ ಮಠದಲ್ಲಿ ಅಭಿಮನ್ಯು ಚಿತ್ರದ ಸೀಡಿ ಬಿಡುಗಡೆ ಆದುದು ನನ್ನ ಭಾಗ್ಯ. ತೆಲುಗು ಹಾಗೂ ತಮಿಳಿನಲ್ಲಿ ಈ ಚಿತ್ರ ‘ಜೈಹಿಂದ್‌’ ಎಂಬ ಶೀರ್ಷಿಕೆ ಹೊಂದಿದೆ ಎಂದರು.
ಪ್ರಧಾನ ಪಾತ್ರದಲ್ಲಿರುವ ಹಾಸ್ಯನಟ ಬಿರಾದಾರ್‌ ತಮ್ಮ ಎಂದಿನ ಶೈಲಿಯಲ್ಲೇ ಮಾತನಾಡಿ ನಗೆಗಡಲಲ್ಲಿ ತೇಲಿಸಿದರು. ಚಿತ್ರದ ಹಾಡಿನ ಸಾಲು ಹಾಡುವುದರೊಂದಿಗೆ ಸಂಗೀತ ನಿರ್ದೇಶಕ ಅರ್ಜುನ್‌ ಜನ್ಯಾ ಅವರು ನಟ, ನಿರ್ದೇಶಕ ಅರ್ಜುನ್‌ ಸರ್ಜಾ ಅವರಿಗೆ ಅವಕಾಶ ನೀಡಿದ್ದಕ್ಕೆ ಧನ್ಯವಾದ ಅರ್ಪಿಸಿದರು.

ಹೊಸ ಪರಿಚಯದ ನಾಯಕಿ ಸಿಮ್ರಾನ್‌ ಕಪೂರ್‌ ಕೂಡ ಚಿತ್ರದ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದರು. ಕಾರ್ಯಕ್ರಮದಲ್ಲಿ ಅರ್ಜುನ್‌ ಸರ್ಜಾ ತಾಯಿ ಲಕ್ಷ್ಮಿದೇವಮ್ಮ, ನಟ ಚಿರಂಜೀವಿ ಸರ್ಜಾ, ಅವರ ತಾಯಿ ದೇವರಾಜಮ್ಮಣ್ಣಿ, ನಟ ಧ್ರುವ ಸರ್ಜಾ, ನಿರ್ದೇಶಕರಾದ ಸಂತೂ, ಚೇತನ್‌ ಇತರರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.