ADVERTISEMENT

‘ಅಸತೋಮ’ದ ಹಾಡು

​ಪ್ರಜಾವಾಣಿ ವಾರ್ತೆ
Published 5 ಏಪ್ರಿಲ್ 2018, 19:30 IST
Last Updated 5 ಏಪ್ರಿಲ್ 2018, 19:30 IST
ಲಾಸ್ಯಾ ನಾಗರಾಜ್
ಲಾಸ್ಯಾ ನಾಗರಾಜ್   

‘ಅಸತೋಮ ಸದ್ಗಮಯ’ ಚಿತ್ರದ ಟ್ರೇಲರ್‌ಅನ್ನು ದುಬೈನಲ್ಲಿ ಬಿಡುಗಡೆ ಮಾಡುವ ಮೂಲಕ ಸುದ್ದಿ ಮಾಡಿದ ನಿರ್ಮಾಪಕ ಅಶ್ವಿನ್ ಪಿರೇರಾ ಮತ್ತು ನಿರ್ದೇಶಕ ರಾಜೇಶ್ ವೇಣೂರ್ ತಮ್ಮ ಚಿತ್ರತಂಡದ ಜೊತೆ ಬೆಂಗಳೂರಿನಲ್ಲಿ ಒಂದು ಪುಟ್ಟ ಕಾರ್ಯಕ್ರಮ ಆಯೋಜಿಸಿದ್ದರು. ಇದು ಆಯೋಜನೆ ಆಗಿದ್ದು ಚಿತ್ರದ ಹಾಡುಗಳ ಬಿಡುಗಡೆಗೆ. ‘ಬಿಗ್‌ ಬಾಸ್‌’ ಮೂಲಕ ಮನೆಮಾತಾದ ಚಂದನ್‌ ಶೆಟ್ಟಿ ಅವರನ್ನೂ ಇದಕ್ಕೆ ಆಹ್ವಾನಿಸಿದ್ದರು.

(ಚಂದನ್ ಶೆಟ್ಟಿ)

‘ಚಿತ್ರದ ಟ್ರೇಲರ್ ನೋಡಿ ವೀಕ್ಷಕರಿಗೆ ತುಸು ಗೊಂದಲ ಉಂಟಾಗಿರಬಹುದು. ಶಿಕ್ಷಣ ವ್ಯವಸ್ಥೆಯ ಬಗ್ಗೆ ಮಾತುಗಳು, ಹಾರರ್ ಅಂಶ, ಥ್ರಿಲ್... ಇವೆಲ್ಲವೂ ಟ್ರೇಲರ್‌ನಲ್ಲಿ ಅಡಕವಾಗಿವೆ. ಮಕ್ಕಳು ಮತ್ತು ಅವರ ಪಾಲಕರನ್ನು ಗುರಿಯಾಗಿಟ್ಟುಕೊಂಡು ಮಾಡಿರುವ ಸಿನಿಮಾ ಇದು’ ಎಂದರು ರಾಜೇಶ್.

ADVERTISEMENT

ರಾಜೇಶ್‌ ಹೇಳಿರುವಂತೆ ಈ ಸಿನಿಮಾದ ಹಾಡುಗಳಲ್ಲಿ ಕೂಡ ವೈವಿಧ್ಯ ಇದೆಯಂತೆ. ಒಂದು ಹಾಡಿನಲ್ಲಿ ಫಿಲಾಸಫಿ, ಇನ್ನೊಂದರಲ್ಲಿ ಯುವಕರ ರೋಮಾನ್ಸ್‌ ಇದೆ. ಮಕ್ಕಳಿಗಾಗಿ ಒಂದು ಹಾಡು ಇದೆ. ‘ಚಿತ್ರದ ಪ್ರತಿ ದೃಶ್ಯದಲ್ಲೂ ಟೀಮ್‌ ವರ್ಕ್‌ ಎದ್ದು ಕಾಣುತ್ತದೆ. ಇನ್ನೊಂದು ತಿಂಗಳೊಳಗೆ ನಾವು ನಿಮ್ಮ ಮುಂದೆ ಬರುತ್ತೇವೆ’ ಎಂದು ರಾಜೇಶ್ ಹೇಳಿದರು.

(ರಾಧಿಕಾ ಚೇತನ್)

ಈ ಸಿನಿಮಾದಲ್ಲಿ ಮೂವತ್ತೈದು ಮಕ್ಕಳು ಅಭಿನಯಿಸಿದ್ದಾರಂತೆ. ‘ದುಬೈನಲ್ಲಿ ಕನ್ನಡ ಚಿತ್ರವೊಂದರ ಟ್ರೇಲರ್ ಬಿಡುಗಡೆ ಆಗಿದ್ದು ಇದೇ ಮೊದಲು’ ಎಂದರು ಅಶ್ವಿನ್.

ಹಾಗೆಯೇ ಇನ್ನೊಂದು ಮಾತನ್ನೂ ಅವರು ಹೇಳಿದರು. ‘ನಾನು ಸಿನಿಮಾ ನಿರ್ಮಾಣ ಕ್ಷೇತ್ರಕ್ಕೆ ಹೊಸಬ. ಈ ಸಿನಿಮಾಕ್ಕೆ ನಾನು ಹೂಡಿರುವ ದುಡ್ಡು ಮರಳಿ ಬಂದರೆ, ಮತ್ತೆ ಸಿನಿಮಾ ಮಾಡುತ್ತೇನೆ’ ಎಂದರು. ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ಸ್ಥಳಗಳಲ್ಲಿ, ಬೆಂಗಳೂರು ಮತ್ತು ಮಂಡ್ಯದಲ್ಲಿ ಇದರ ಚಿತ್ರೀಕರಣ ನಡೆದಿದೆ.

(ರಾಜೇಶ್ ವೇಣೂರ್)

‘ನಾವು ಶಾಲೆಗೆ ಹೋಗುತ್ತಿದ್ದ ಸಮಯದಲ್ಲಿ ವಿದ್ಯಾರ್ಥಿ ನೂರಕ್ಕೆ ಮೂವತ್ತೈದು ಅಂಕ ಪಡೆದರೆ ಅದೇ ದೊಡ್ಡದಾಗಿತ್ತು. ಆದರೆ, ಇವತ್ತು ವಿದ್ಯಾರ್ಥಿಗಳು ರ್‍ಯಾಂಕ್ ಪಡೆಯುತ್ತಿದ್ದರೂ, ಮನುಷ್ಯ ಸಂಬಂಧಗಳನ್ನು ಮರೆಯುತ್ತಿದ್ದಾರೆ’ ಎಂದರು. ಈ ಸಿನಿಮಾದ ಕಥೆಯು ಐ.ಕ್ಯೂ (ಚಾತುರ್ಯ) ಮತ್ತು ಇ.ಕ್ಯೂ (ಭಾವನಾತ್ಮಕ ಸಾಮರ್ಥ್ಯ) ಆಧರಿಸಿದೆ ಎಂದು ತಂಡ ಹೇಳಿಕೊಂಡಿದೆ. ಕೊಲ್ಲಿ ರಾಷ್ಟ್ರಗಳು, ಆಸ್ಟ್ರೇಲಿಯಾ, ಅಮೆರಿಕ, ಸಿಂಗಪುರದಲ್ಲಿ ಸಿನಿಮಾ ಬಿಡುಗಡೆ ಉದ್ದೇಶ ನಿರ್ಮಾಪಕರದ್ದು.

ಲಾಸ್ಯಾ ನಾಗರಾಜ್ ಈ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ‘ಲಾಸ್ಯಾ ಅವರ ಸಿನಿಮಾದ ಹಾಡು ಬಿಡುಗಡೆ ಮಾಡಿ, ಅವರಿಗೆ ಸಪೋರ್ಟ್‌ ಮಾಡಲು ನಾನು ಇಲ್ಲಿಗೆ ಬಂದಿದ್ದೇನೆ’ ಎಂದರು ಚಂದನ್. ರಾಧಿಕಾ ಚೇತನ್ ಅವರದ್ದು, ಫಿನ್‌ಲೆಂಡ್‌ನಿಂದ ಭಾರತಕ್ಕೆ ಬಂದು ತನ್ನ ಹೆತ್ತಮ್ಮನನ್ನು ಹುಡುಕುವ ಪಾತ್ರ. ಲಾಸ್ಯಾ ಅವರದ್ದು ಸಿನಿಮಾದಲ್ಲಿ ಬಬ್ಲಿ ಹುಡುಗಿಯ ಪಾತ್ರ.

(ಅಶ್ವಿನ್ ಪಿರೇರಾ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.