ADVERTISEMENT

ಆಟ–ಹೊಡೆದಾಟದ ರೊಮ್ಯಾಂಟಿಕ್ ಗಣೇಶ

ಡಿ.ಎಂ.ಕುರ್ಕೆ ಪ್ರಶಾಂತ
Published 12 ಮೇ 2016, 19:54 IST
Last Updated 12 ಮೇ 2016, 19:54 IST
ಸ್ಟೈಲ್ ಕಿಂಗ್ ಗಣೇಶ್, ರಮ್ಯಾ
ಸ್ಟೈಲ್ ಕಿಂಗ್ ಗಣೇಶ್, ರಮ್ಯಾ   

ಗಣೇಶ್ ದ್ವಿಪಾತ್ರದಲ್ಲಿ ನಟಿಸಿರುವ ‘ಸ್ಟೈಲ್ ಕಿಂಗ್’ ಚಿತ್ರ ಇಂದು (ಮೇ 13) ತೆರೆ ಕಾಣುತ್ತಿದೆ. ಈ ಸಿನಿಮಾದ ಮೂಲಕ ಗಣೇಶ್ ಇಮೇಜ್‌ ಬದಲಾಗಲಿದೆ ಎನ್ನುವ ನಿರ್ದೇಶಕ ಪಿ.ಸಿ. ಶೇಖರ್, ತಮ್ಮ ಚಿತ್ರದ ವಿಶೇಷಗಳನ್ನು ಡಿ.ಎಂ.ಕುರ್ಕೆ ಪ್ರಶಾಂತ ಅವರೊಂದಿಗೆ ಹಂಚಿಕೊಂಡಿದ್ದಾರೆ.

‘ಸ್ಟೈಲ್ ಕಿಂಗ್’ ಸಿನಿಮಾ ನಿಮ್ಮ ದೃಷ್ಟಿಯಲ್ಲಿ ಗಣೇಶ್ ಅವರಿಗೆ ಯಾವ ರೀತಿ ಭಿನ್ನ?
ಗಣೇಶ್ ಅವರ ವೃತ್ತಿ ಬದುಕಿಗೆ ಇದು ಹೊಸ ಶೈಲಿಯ ಚಿತ್ರ ಎಂದು ಹೇಳಬಹುದು. ಗಣೇಶ್ ಚಿತ್ರಗಳು ಎಂದರೆ ಕೌಟುಂಬಿಕ ಡ್ರಾಮಾ, ರೊಮ್ಯಾಂಟಿಕ್ ಸ್ಪರ್ಶ ಇದ್ದೇ ಇರುತ್ತದೆ. ಈ ಹಿಂದೆ ನಾನು, ಗಣೇಶ್ ಮತ್ತು ಅರ್ಜುನ್ ಜನ್ಯ ‘ರೋಮಿಯೊ’ ಎನ್ನುವ ಚಿತ್ರ ಮಾಡಿದ್ದೆವು.

ಆ ಚಿತ್ರ ಸೂಪರ್ ಹಿಟ್ ಎನ್ನದಿದ್ದರೂ ಚಿತ್ರರಸಿಕರಿಗೆ, ವಿಶೇಷವಾಗಿ ಯುವ ಸಮುದಾಯಕ್ಕೆ ಇಷ್ಟವಾಗಿತ್ತು. ಅದನ್ನು ಮನಸ್ಸಿನಲ್ಲಿ ಇಟ್ಟುಕೊಂಡು, ಯಾವ ರೀತಿ ಹೊಸದನ್ನು ಹೇಳಬಹುದು ಎನ್ನುವುದನ್ನು ಆಲೋಚಿಸಿ ಈ ಸಿನಿಮಾ ಮಾಡಿದ್ದೇವೆ. ನಾನು ಅರ್ಜುನ್ ಜನ್ಯ ಮತ್ತು ಗಣೇಶ್ ಮತ್ತೆ ಒಟ್ಟಾಗಿ ಕೆಲಸ ಮಾಡಿರುವ ಅನುಕೂಲ ಈ ಚಿತ್ರಕ್ಕಿದೆ. ಮೊದಲ ಬಾರಿಗೆ ಗಣೇಶ್ ದ್ವಿಪಾತ್ರದಲ್ಲಿ ಕಾಣಿಸಿಕೊಂಡಿರುವುದು ‘ಸ್ಟೈಲ್ ಕಿಂಗ್’ನ ಇನ್ನೊಂದು ವಿಶೇಷ.

ಚಿತ್ರದ ವಿಶೇಷಗಳೇನು?
ಚಿತ್ರದ ಮೊದಲ ಭಾಗದಲ್ಲಿ ಎರಡು ಕಥೆಗಳಿವೆ. ಒಂದು ಕಥೆ ‘ರೋಮಿಯೊ’ ಚಿತ್ರದ ಮುಂದುವರಿಕೆ ಎನ್ನುವಂತೆ ಇದ್ದರೆ, ಮತ್ತೊಂದು ಪಕ್ಕಾ ಆಕ್ಷನ್ ಕಥೆ. ಇದು ಬೇರೆಯದ್ದೇ ಆದ ಮಾಫಿಯಾ ಕಥೆ. ಈ ಎರಡೂ ಕಥೆಗಳು ಬೇರೆ ಬೇರೆಯಾಗಿಯೇ ಸಾಗುತ್ತ, ಮಧ್ಯಂತರ ನಂತರ ಮೂರನೇ ಕಥೆಯಾಗಿ ಮುಂದುವರೆಯುತ್ತವೆ.

ಚೂಪು ಗಡ್ಡ, ಬಾಯಲ್ಲಿ ಸಿಗಾರ್ ಇಟ್ಟುಕೊಂಡಿರುವ ಗಣೇಶ್ ಲುಕ್ ಈ ಸಿನಿಮಾದಲ್ಲಿ ಬದಲಾದಂತಿದೆ...
ಅದು ಮಾಫಿಯಾ ಡಾನ್ ರೀತಿಯ ಪಾತ್ರ. ಆತ ಎದ್ದರೆ ಹೊಡೆಯುತ್ತಾನೆ. ಮಾತು ಖಡಕ್. ಇದೇ ಮೊದಲ ಬಾರಿಗೆ ಗಣೇಶ್ ಗಡ್ಡಬಿಟ್ಟು ಅಭಿನಯಿಸಿದ್ದಾರೆ. ಅವರ ನೋಟ–ನಡವಳಿಕೆ ಕೂಡ ಎಂದಿನಂತೆ ಇಲ್ಲಿ ಇಲ್ಲ. ತೆರೆಯಲ್ಲಿ ನೋಡುವಾಗ ‘ಇವರು ರೆಗ್ಯುಲರ್ ಗಣೇಶ್’ ಎನ್ನುವ ಅನುಭವ ಪ್ರೇಕ್ಷಕರಿಗೆ ಬಾರದೆ ಇರುವ ರೀತಿ ಅವರ ಪಾತ್ರವನ್ನು ರೂಪಿಸಿದ್ದೇವೆ.

ಗಣೇಶ್‌ ಅವರ ರೊಮ್ಯಾಂಟಿಕ್ ಇಮೇಜನ್ನು ಅಪೇಕ್ಷಿಸುವವರು ಈ ಹೊಸ ವೇಷವನ್ನು ಯಾವ ರೀತಿ ತೆಗೆದುಕೊಳ್ಳುತ್ತಾರೆ?
ಸಿನಿಮಾದಲ್ಲಿ ವಾಸ್ತವಕ್ಕೆ ಮೀರಿದ, ಕಲ್ಪನೆಗೆ ನಿಲುಕದ ಸಾಹಸಗಳು ಇಲ್ಲ. ನಾಯಕ ಹೊಡೆದರೆ ಎಂಟ್ಹತ್ತು ಜನರು ಹಾರಿಹೋಗುವುದಿಲ್ಲ.  ನೀಟ್ ಆದ ರಿಯಾಲಿಸ್ಟಿಕ್ ಫೈಟ್ ಅನ್ನು ರವಿವರ್ಮ ಅವರಿ ಪರಿಣಾಮಕಾರಿಯಾಗಿ ಸಂಯೋಜಿಸಿದ್ದಾರೆ. ತುಂಬಾ ಹೆಚ್ಚೂ ಅಲ್ಲ, ಕಡಿಮೆಯೂ ಅಲ್ಲ ಎನ್ನುವಂತೆ ಸಾಹಸ ಸನ್ನಿವೇಶಗಳನ್ನು ಸಂಯೋಜಿಸಲಾಗಿದೆ.

ಒಂದು ಕ್ಷಣದಲ್ಲಿ ಭಿಕ್ಷೆ ಬೇಡುತ್ತಿದ್ದ ನಾಯಕ, ಕೆಲ ಹೊತ್ತಿನಲ್ಲೇ ಶ್ರೀಮಂತನಾಗಬಹುದು ಎನ್ನುವ ಚಿತ್ರಣಗಳು ನನಗೆ ವಾಸ್ತವ ಎನಿಸುವುದಿಲ್ಲ. ಈ ಹಿನ್ನೆಲೆಯಲ್ಲಿ ನೋಡುವುದಾದರೆ ವಾಸ್ತವಕ್ಕೆ ಸಮೀಪವಾಗಿಯೇ ‘ಸ್ಟೈಲ್‌ ಕಿಂಗ್‌’ನಲ್ಲಿ ಸಾಹಸ ಸನ್ನಿವೇಶಗಳನ್ನು ಸಂಯೋಜಿಸಿದ್ದೇನೆ. ಇದು ಕಮರ್ಷಿಯಲ್ ಚಿತ್ರವಾದರೂ ಸಿದ್ಧಸೂತ್ರಗಳನ್ನು ಮೀರಿದ ಒಂದು ಪ್ರಯೋಗ.

ರೆಗ್ಯುಲರ್ ಲವ್ವರ್ ಬಾಯ್ ಗಣೇಶ್ ಜತೆಗೆ ಬೇರೆಯದ್ದೇ ಇಮೇಜಿನ ಗಣೇಶ್ ಸಹ ಚಿತ್ರದಲ್ಲಿ ಇದ್ದಾರೆ. ಇನ್ನೊಂದು ಚಿತ್ರಕ್ಕೆ ಪೂರ್ವಭಾವಿಯಾಗಿ ಈ ಚಿತ್ರ ಎನ್ನಬಹುದು. ‘ಅಲೆಲೆ ಸುಕುಮಾರಿ’ ಎನ್ನುವ ಒಂದು ಹಾಡು ಸಹ ಬೇರೆಯದ್ದೇ ಆದ ರೀತಿಯಲ್ಲಿ ಇದೆ.

ನಿಮ್ಮ ವೃತ್ತಿ ಬದುಕಿನಲ್ಲಿ ‘ಸ್ಟೈಲ್ ಕಿಂಗ್’ ಯಾವ ರೀತಿಯಲ್ಲಿ ಭಿನ್ನ?
2012ರಲ್ಲಿ ‘ರೋಮಿಯೊ’ ಸಿನಿಮಾ ಮಾಡಿದೆವು. ಅದಕ್ಕೂ ಮುಂಚೆಯೇ ಈ ಕಥೆ ತಲೆಯಲ್ಲಿ ಇತ್ತು. ರೆಗ್ಯುಲರ್ ಲವ್  ಸ್ಟೋರಿಯನ್ನು ಮಾಡುವುದು ಇಷ್ಟವಿರಲಿಲ್ಲ. ಮುಂದೆಯೂ ನಾನು ಸಿದ್ಧಸೂತ್ರದ ಪ್ರೇಮಕಥೆಗಳನ್ನು ಮಾಡುವುದಿಲ್ಲ. ‘ಅರ್ಜುನ’ ಚಿತ್ರ ಒಂದು ಸಮಸ್ಯೆಯನ್ನು ಹೇಳಿದರೆ, ‘ಚೆಡ್ಡಿ ದೋಸ್ತ್‌’ನಲ್ಲಿ ಕಾಮಿಡಿ ಮುಖ್ಯವಾಗಿತ್ತು. ಚಿತ್ರದಿಂದ ಚಿತ್ರಕ್ಕೆ ಬೇರೆಯದೇ ಆದ ಕಥೆಗಳನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದೇನೆ.

‘ಸ್ಟೈಲ್ ಕಿಂಗ್’ ಆರಂಭವಾದಾಗ, ಕೆಲವರು ‘ರೋಮಿಯೊ’ ರೀತಿ ಚಿತ್ರ ಮಾಡಿ ಎಂದು ಹೇಳುತ್ತಿದ್ದರು. ಆ ಕಾರಣಕ್ಕೆ ಇಲ್ಲಿ ಅಂಥದ್ದೇ ಒಂದು ಪಾತ್ರ ಮತ್ತು ಕಥೆ ಇದೆ. ಮುಂದಿನ ನನ್ನ ಚಿತ್ರಗಳು ಬೇರೆಯದ್ದೇ ಆಯಾಮದಲ್ಲಿ ಇರುತ್ತವೆ ಎನ್ನುವ ಪೂರ್ವಪ್ರಯೋಗವಾಗಿ ‘ಸ್ಟೈಲ್ ಕಿಂಗ್’ ಕಾಣುತ್ತದೆ. ಗಣೇಶ್ ಅವರನ್ನು ಆಯ್ಕೆ ಮಾಡಿಕೊಳ್ಳಲು ಕಾರಣ ಅವರು ನನಗೆ ಕಂಫರ್ಟ್  ಎನಿಸಿತು. ನಿರ್ದೇಶಕರಿಗೆ ಗೊತ್ತಿರುವ ನಟರು ಇದ್ದರೆ ಕೆಲಸ ಸುಲಭ. ಅಂದಹಾಗೆ, ನಮ್ಮಿಬ್ಬರದು ಸಿನಿಮಾ ನಂಟು ಮೀರಿದ ಸ್ನೇಹ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT