ADVERTISEMENT

ಆದಿಚುಂಚನಗಿರಿ ಮಠದಲ್ಲಿ ಅಮೂಲ್ಯ ಮದುವೆ ಸಿದ್ಧತೆ

​ಪ್ರಜಾವಾಣಿ ವಾರ್ತೆ
Published 11 ಮೇ 2017, 19:30 IST
Last Updated 11 ಮೇ 2017, 19:30 IST
ಆದಿಚುಂಚನಗಿರಿ ಮಠದಲ್ಲಿ ಅಮೂಲ್ಯ ಮದುವೆ ಸಿದ್ಧತೆ
ಆದಿಚುಂಚನಗಿರಿ ಮಠದಲ್ಲಿ ಅಮೂಲ್ಯ ಮದುವೆ ಸಿದ್ಧತೆ   

ಆದಿಚುಂಚನಗಿರಿ:  ನಟಿ ಅಮೂಲ್ಯ ಮತ್ತು ಜಗದೀಶ್‌ ವಿವಾಹಕ್ಕೆ ಆದಿಚುಂಚನಗಿರಿಯ ನಾಗಲಿಂಗೇಶ್ವರ ದೇವಸ್ಥಾನದ ಆವರಣದಲ್ಲಿ ಮಂಟಪ ಸಜ್ಜಾಗಿದೆ. ಗುರುವಾರವೇ ವಧು–ವರರ ಕುಟುಂಬದ ಸದಸ್ಯರು ಸ್ಥಳ ತಲುಪಿದ್ದು, ಸಂಭ್ರಮದ ವಾತಾವರಣ ಮನೆಮಾಡಿತ್ತು. ಬಿಜಿಎಸ್‌ ಸಭಾಭವನದಲ್ಲಿ ವಿವಾಹಪೂರ್ವ ಶಾಸ್ತ್ರಗಳನ್ನು ನಡೆಸಲಾಯಿತು.

ಚಿನ್ನದ ಬಣ್ಣದ ಜರಿಯಂಚಿನ ಆಕಾಶ ನೀಲಿ ಸೀರೆಯಲ್ಲಿ ಅಮೂಲ್ಯ ಕಂಗೊಳಿಸುತ್ತಿದ್ದರು. ಸಂಜೆ ವಧುವಿಗೆ ಅರಿಸಿನ ಶಾಸ್ತ್ರ ಪೂರೈಸಲಾಯಿತು.  ನಂತರ ಸಂಜೆ  7 ಗಂಟೆಗೆ ಆದಿಚುಂಚನಗಿರಿ ಮಠಕ್ಕೆ ತೆರಳಿ ಅಲ್ಲಿಯೇ ಗಂಡಿನ ಕಡೆಯವರನ್ನು ಬರಮಾಡಿಕೊಂಡರು. ನಂತರ ಒಕ್ಕಲಿಗ ಸಂಪ್ರದಾಯದ ಪ್ರಕಾರ ಲಗ್ನಪತ್ರಿಕೆ ಪೂಜಾ ಶಾಸ್ತ್ರ, ಹೆಣ್ಣಿಗೆ ಹೂ ಮುಡಿಸುವ ಶಾಸ್ತ್ರ, ವೀಳ್ಯದೆಲೆ ವಿನಿಮಯ ಶಾಸ್ತ್ರ, ಬಳೆ ಶಾಸ್ತ್ರ ನಡೆಯಿತು.
ಈ ಕಾರ್ಯಕ್ರಮಗಳಿಗೆ ಎರಡೂ ಕುಟುಂಬದ ಸಂಬಂಧಿಕರು ಮತ್ತು ಆಪ್ತರಿಗಷ್ಟೇ ಆಹ್ವಾನ ನೀಡಲಾಗಿತ್ತು.
ಶುಕ್ರವಾರ ಬೆಳಿಗ್ಗೆ ಮೀಸಲು ನೀರು ತರುವ ಶಾಸ್ತ್ರದೊಂದಿಗೆ ಮದುವೆ ಕಾರ್ಯಕ್ರಮ ಆರಂಭವಾಗಲಿದೆ. ಹಾಗೆಯೇ ಭತ್ತ ಕುಟ್ಟುವ ಶಾಸ್ತ್ರವೂ ನಡೆಯಲಿದೆ. ನಂತರ ಕಂಕಣಧಾರಣೆ ಆಗಲಿದೆ.

ಮಧ್ಯಾಹ್ನ 12ರಿಂದ 12.30ರ ನಡುವಿನ ಅವಧಿಯಲ್ಲಿ ಮಾಂಗಲ್ಯ ಧಾರಣೆ ನಡೆಯುವುದು.
ಅದ್ದೂರಿ ಮಂಟಪ: ಆದಿಚುಂಚನಗಿರಿಯ ಕಾಲಭೈರವೇಶ್ವರ ದೇವಸ್ಥಾನದ ಮುಂಭಾಗದಲ್ಲಿರುವ ನಾಗಲಿಂಗೇಶ್ವರ ದೇವಸ್ಥಾನದ ಆವರಣದಲ್ಲಿ ಮದುವೆ  ನಡೆಯಲಿದೆ. ದೇವಸ್ಥಾನದ ಮುಂಭಾಗ ಅದ್ದೂರಿ ಮಂಟಪವನ್ನು ನಿರ್ಮಿಸಲಾಗಿದೆ. ಅಮೂಲ್ಯ ಅವರ ನಿಶ್ಚಿತಾರ್ಥಕ್ಕೆ ಮಂಟಪ ಅಲಂಕಾರ ಮಾಡಿದ್ದ ಶರವಣ ನೇತೃತ್ವದ ತಂಡವೇ ಮದುವೆ ಮಂಟಪದ ನಿರ್ಮಾಣದ ಜವಾಬ್ದಾರಿಯನ್ನೂ ಹೊತ್ತುಕೊಂಡಿದೆ.
ಬೆಳಿಗ್ಗೆ ಐದು ನೂರು ಜನರಿಗೆ ಉಪಾಹಾರ ಮತ್ತು ಮಧ್ಯಾಹ್ನ ಎರಡು ಸಾವಿರ ಜನರಿಗೆ ಊಟದ ವ್ಯವಸ್ಥೆ ಮಾಡಲಾಗಿದೆ. ಚಿತ್ರರಂಗದ ಪ್ರಮುಖರು ಮತ್ತು ರಾಜಕೀಯ ಮುಖಂಡರು ಅಮೂಲ್ಯ ಮತ್ತು ಜಗದೀಶ್‌ ದಾಂಪತ್ಯ ಜೀವನಕ್ಕೆ ಅಡಿಯಿಡುವ ಸಂಭ್ರಮಕ್ಕೆ ಸಾಕ್ಷಿಯಾಗುವ ನಿರೀಕ್ಷೆ ಇದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.