ADVERTISEMENT

ಇದು ಕಡೆಗಣನೆಗೆ ಒಳಗಾದವರ ‘ಅಮರಾವತಿ’

​ಪ್ರಜಾವಾಣಿ ವಾರ್ತೆ
Published 9 ಫೆಬ್ರುವರಿ 2017, 19:30 IST
Last Updated 9 ಫೆಬ್ರುವರಿ 2017, 19:30 IST
ಇದು ಕಡೆಗಣನೆಗೆ ಒಳಗಾದವರ ‘ಅಮರಾವತಿ’
ಇದು ಕಡೆಗಣನೆಗೆ ಒಳಗಾದವರ ‘ಅಮರಾವತಿ’   

‘ವಲಸೆ ಕಾರ್ಮಿಕರ ಬಗ್ಗೆ ಒಂದು ಸಿನಿಮಾ ಮಾಡಬೇಕೆಂಬ ಆಲೋಚನೆಯಿತ್ತು. ಆಗಷ್ಟೇ ‘ಜಟ್ಟ’ ಚಿತ್ರದ ಶೂಟಿಂಗ್ ಮುಗಿಸಿಕೊಂಡು ಬೆಂಗಳೂರಿಗೆ ಬಂದಿದ್ದೆ. ಅಂದು ಪೌರಕಾರ್ಮಿಕರು ತಮ್ಮ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ, ಮೂರು ದಿನ ನಗರದ ಕಸ ತೆಗೆಯದೆ ಪ್ರತಿಭಟಿಸಿದ್ದರು. ರಾಜಧಾನಿ ಗಬ್ಬು ನಾರುತ್ತಿದ್ದುದು ವಿಶ್ವದ ಸುದ್ದಿಯಾಗಿತ್ತು. ಕಾರ್ಮಿಕರ ಕುರಿತ ನನ್ನ ಸಿನಿಮಾ ಕನಸಿಗೆ ಆ ಪ್ರತಿಭಟನೆಯೂ ಇಂಬು ಕೊಟ್ಟಿತು’ ಎಂದು ನಿರ್ದೇಶಕ ಬಿ.ಎಂ. ಗಿರಿರಾಜ್ ‘ಅಮರಾವತಿ’ ಹುಟ್ಟಿನ ಹಿನ್ನೆಲೆಯನ್ನು ತೆರೆದಿಟ್ಟರು.

ಶೂಟಿಂಗ್‌ ವೇಳೆ ಹಲವು ಅಡೆ–ತಡೆಗಳನ್ನು ಎದುರಿಸಿ, ಚಿತ್ರದ ಕಂಟೆಂಟ್‌ ಸಲುವಾಗಿಯೇ ಕ್ಯಾತೆ ತೆಗೆದ ಸೆನ್ಸಾರ್‌ ಮಂಡಳಿ ಜತೆಗೆ ಹಗ್ಗಜಗ್ಗಾಟ ನಡೆಸಿ ‘ಎ’ ಪ್ರಮಾಣಪತ್ರ ಪಡೆದಿರುವ ಚಿತ್ರತಂಡ, ಇದೀಗ ಆಡಿಯೊ ಮತ್ತು ಚಿತ್ರ ಬಿಡುಗಡೆಯ ಸಂಭ್ರಮವನ್ನು ಹಂಚಿಕೊಳ್ಳುವ ಭರದಲ್ಲಿತ್ತು. ಕಾರ್ಯಕ್ರಮದ ನೇತೃತ್ವ ವಹಿಸಿದ್ದ ನಿರ್ದೇಶಕರ ಮುಖದಲ್ಲಿ ಸಂಭ್ರಮದ ಜತೆಗೆ, ಕಡೆಗಣಿಸಲ್ಪಟ್ಟವರ ಕಥೆಗೆ ಮೂಗು ಮುರಿಯುವವರ ವಿರುದ್ಧ ಸಾತ್ವಿಕ ಸಿಟ್ಟು ಎದ್ದು ಕಾಣುತ್ತಿತ್ತು.

‘ಜಗತ್ತು ಎಷ್ಟೇ ಮುಂದುವರಿದರೂ, ನಗರದ ಕೊಳೆ ತೊಳೆಯುವವರ ಬದುಕು ಮಾತ್ರ ಇಂದಿಗೂ ಬದಲಾಗಿಲ್ಲ. ಈ ಚಿತ್ರ ಕಡೆಗಣಿಸಲ್ಪಟ್ಟವರ ಬದುಕು ಮತ್ತು ಒಂದು ವಿಷಯದ ಮೇಲೆ ಬೆಳಕು ಚೆಲ್ಲುತ್ತದೆ’ ಎಂದ ಗಿರಿರಾಜ್, ತಮ್ಮ ಕಥೆಗೆ ಪೂರಕವಾಗಿ ದಿನಪತ್ರಿಕೆಗಳಲ್ಲಿ ಪ್ರಕಟವಾಗಿದ್ದ ಸುದ್ದಿಗಳನ್ನು ಪ್ರಸ್ತಾಪಿಸಿದರು. ಅಲ್ಲದೆ, ಕಥೆ ಕೇಳಿ ಎದ್ದು ಹೋಗುತ್ತಿದ್ದರ ಸಾಲಿಗೆ ಸೇರದೆ, ‘ಒಳ್ಳೆಯ ಕಥೆ ಇದು. ಚಿತ್ರ ಮಾಡೋಣ’ ಎಂದು ಬಂಡವಾಳ ಹಾಕಿದ ಮಾಧವರೆಡ್ಡಿ ಅವರಿಗೆ ಮರೆಯದೆ ಕೃತಜ್ಞತೆ ಹೇಳಿದರು.

ಅಭಿಲಾಷ್ ಲಾಖ್ರ ಮತ್ತು ಜೋಯಲ್ ಡುಬ್ಬ ಸಂಗೀತ ನಿರ್ದೇಶನ ಚಿತ್ರದ ನಾಲ್ಕು ಹಾಡುಗಳು ಮೂಡಿಬಂದಿವೆ. ‘ಸನ್ನಿವೇಶ ಮತ್ತು ಸಾಂದರ್ಭಿಕವಾಗಿರುವ ಹಾಡುಗಳಲ್ಲಿಯೂ ಕಥೆ ಸಾಗುತ್ತದೆ’ ಎಂದು ಜೋಯಲ್ ಡುಬ್ಬ ಹೇಳಿದರು.

‘ಒಂದೊಳ್ಳೆ ಸಿನಿಮಾ ಮಾಡಿದ ತೃಪ್ತಿ ನನಗಿದೆ’ ಎಂದ ನಿರ್ಮಾಪಕ ಮಾಧವರೆಡ್ಡಿ ಮಾತು ಮುಗಿಸಿದರು.

‘ಚಿತ್ರದ ಟ್ರೇಲರ್ ನೋಡಿಯೇ ಆಡಿಯೊ ಹೊರತರಲು ಮುಂದಾದೆ’ ಎಂದ ಸಂಗೀತ ನಿರ್ದೇಶಕ ಪೂರ್ಣಚಂದ್ರ ತೇಜಸ್ವಿ, ತಾವು ಹುಟ್ಟುಹಾಕಿರುವ ‘ಹಾಡಿಯೊ’ ಸಂಸ್ಥೆ ಮೂಲಕ ‘ಅಮರಾವತಿ’ಯ ಹಾಡುಗಳನ್ನು ಹೊರತಂದಿದ್ದಾರೆ.  ಅತಿಥಿಯಾಗಿ ವೇದಿಕೆ ಅಲಂಕರಿಸಿದ್ದ ಹಿರಿಯ ನಿರ್ದೇಶಕ ಶಿವಮಣಿ ಆಡಿಯೊ ಸಿ.ಡಿ.ಗಳನ್ನು ಬಿಡುಗಡೆಗೊಳಿಸಿದರು.

‘ಬಾಕ್ಸ್‌ ಆಫೀಸ್ ಆಚೆಗಿನ ಆಲೋಚನೆ ಹಾಗೂ ಮನರಂಜನೆಯನ್ನು ಹುದುಗಿಸಿಟ್ಟುಕೊಂಡಿರುವ ಸಮಕಾಲೀನ ಚಿತ್ರಗಳ ಸಾಲಿಗೆ ಅಮರಾವತಿ ಸೇರುತ್ತದೆ. ಚಿತ್ರಗಳು ಅರಿವಿನ ಕೆಲಸ ಮಾಡಿದಾಗ, ನಿರ್ದೇಶಕ ಮತ್ತು ನಿರ್ಮಾಪಕನ ಶ್ರಮಕ್ಕೆ ಸಾರ್ಥಕತೆ ಸಿಗುತ್ತದೆ’ ಎಂದು ಪ್ರಸ್ತುತ ಚಿತ್ರಗಳ ಮೇಲೆ ಬೆಳಕು ಚೆಲ್ಲುವಂತೆ ಮಾತನಾಡಿದ ಶಿವಮಣಿ, ‘ತೂಕದ ಕಥಾವಸ್ತುವನ್ನಿಟ್ಟುಕೊಂಡು ಸಿನಿಮಾ ಮಾಡುವ ಗಿರಿರಾಜ್, ನಮ್ಮ ನಡುವಿನ ಅತ್ಯುತ್ತಮ ಬ್ರಿಡ್ಜ್ ಸಿನಿಮಾ ಮೇಕರ್’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಕಿರಣ್ ಹಂಪಾಪುರ, ಅರ್ಜುನ್ (ಕಿಟ್ಟು) ಸಂಕಲನ ಚಿತ್ರಕ್ಕಿದೆ. ಇಂದು (ಫೆ. 10) ಚಿತ್ರ ತೆರೆ ಕಾಣಲಿದೆ. v

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.