ADVERTISEMENT

‘ಉಪೇಂದ್ರ...’ನ ಹೆಸರಲ್ಲಿ ಹಳೆಯ ದಿನಗಳ ನೆನಪು...

ವಿಜಯ್ ಜೋಷಿ
Published 17 ನವೆಂಬರ್ 2017, 19:18 IST
Last Updated 17 ನವೆಂಬರ್ 2017, 19:18 IST
‘ಉಪೇಂದ್ರ...’ನ ಹೆಸರಲ್ಲಿ ಹಳೆಯ ದಿನಗಳ ನೆನಪು...
‘ಉಪೇಂದ್ರ...’ನ ಹೆಸರಲ್ಲಿ ಹಳೆಯ ದಿನಗಳ ನೆನಪು...   

ಸಿನಿಮಾ: ಉಪೇಂದ್ರ ಮತ್ತೆ ಬಾ

ನಿರ್ದೇಶನ: ಎನ್. ಅರುಣ್ ಲೋಕನಾಥ್

ನಿರ್ಮಾಣ: ಎಂ.ಎಸ್. ಶ್ರೀಕಾಂತ್, ಎಂ.ಎಸ್. ಶಶಿಕಾಂತ್, ಕೆ.ಎಲ್. ರವೀಂದ್ರನಾಥ್

ADVERTISEMENT

ಸಂಗೀತ: ಶ್ರೀಧರ್ ವಿ. ಸಂಭ್ರಮ್

ತಾರಾಗಣ: ಉಪೇಂದ್ರ, ಪ್ರೇಮಾ, ಶ್ರುತಿ ಹರಿಹರನ್, ಸಾಯಿಕುಮಾರ್

**

ಎನ್. ಅರುಣ್ ಲೋಕನಾಥ್ ನಿರ್ದೇಶನದ ‘ಉಪೇಂದ್ರ ಮತ್ತೆ ಬಾ’ ಸಿನಿಮಾ ತೆಲುಗಿನ ‘ಸೊಗ್ಗಾಡೆ ಚಿನ್ನಿ ನಾಯನ’ ಚಿತ್ರದ ರಿಮೇಕ್. ಒಂದಿಷ್ಟು ಹಾಸ್ಯ, ಒಂದಿಷ್ಟು ಕೀಟಲೆ, ಕೊಂಚ ಉಪ್ಪು–ಹುಳಿ–ಖಾರದ ದೃಶ್ಯಗಳು ಹಾಗೂ ಆಗೀಗ ಎಂಬಂತಿರುವ ಫೈಟ್‌ ದೃಶ್ಯಗಳ ಮೂಲಕ ಕಥೆ ಸಾಗುತ್ತದೆ.

ಮೈಸೂರು ಜಿಲ್ಲೆಯ ಒಂದೂರು ಶಿವಪುರ. ಅಲ್ಲಿನ ಜಮೀನ್ದಾರ ಉಪೇಂದ್ರರಾಜು. ಈ ಪಾತ್ರಕ್ಕೆ ಜೀವ ತುಂಬಿರುವವರು ಉಪೇಂದ್ರ. ಇವರ ಪತ್ನಿ ಪ್ರೇಮಾ. ಇವರಿಬ್ಬರ ಮಗ ರಾಮು. ಉಪೇಂದ್ರ ಅವರು ದ್ವಿಪಾತ್ರದ ಮೂಲಕ ರಾಮು ಪಾತ್ರವನ್ನೂ ನಿಭಾಯಿಸಿದ್ದಾರೆ. ರಾಮು ಪತ್ನಿ ಸೀತಾ (ಶ್ರುತಿ ಹರಿಹರನ್).

ದೇವಸ್ಥಾನದ ಚಿನ್ನದ ಮೇಲಿನ ಆಸೆಗಾಗಿ ಉಪೇಂದ್ರರಾಜುವಿನ ಕೊಲೆ ಆಗಿರುತ್ತದೆ. ಆದರೆ ಅವರು ಅಪಘಾತದಲ್ಲಿ ಸತ್ತಿದ್ದು ಎಂದು ಬಿಂಬಿಸಲಾಗಿರುತ್ತದೆ. ಅಮ್ಮನ ಕಣ್ಗಾವಲಿನಲ್ಲಿ ಬೆಳೆಯುವ ರಾಮು, ಓದಿ ವೈದ್ಯನಾಗಿ ಅಮೆರಿಕ ಸೇರಿಕೊಂಡಿರುತ್ತಾನೆ. ಹೆಂಡತಿಗೆ ಸಮಯ ಕೊಡಲಿಕ್ಕೂ ಪುರುಸೊತ್ತಿಲ್ಲದಷ್ಟು ಕೆಲಸದಲ್ಲಿ ತಲ್ಲೀನನಾಗಿರುತ್ತಾನೆ ರಾಮು. ಇದು ಅವರ ದಾಂಪತ್ಯದಲ್ಲಿ ಬಿರುಕು ಮೂಡಲಿಕ್ಕೂ ಕಾರಣವಾಗಿರುತ್ತದೆ.

ಉಪೇಂದ್ರರಾಜು ಒಳ್ಳೆಯ ವ್ಯಕ್ತಿ ಮಾತ್ರವೇ ಆಗಿರುವುದಿಲ್ಲ. ಆತನಲ್ಲಿ ಇನ್ನೊಂದು ಗುಣವೂ ಇರುತ್ತದೆ. ಅದನ್ನು ಕೆಟ್ಟ ಗುಣ, ಒಳ್ಳೆಯ ಗುಣ ಎಂದು ಹೇಳಲು ಆಗದಿದ್ದರೂ, ಸತ್ತ ನಂತರ ಅದರ ಕಾರಣದಿಂದಾಗಿ ಆತ ಯಮಲೋಕ ಸೇರಿರುತ್ತಾನೆ. ರಾಮು ಮತ್ತು ಸೀತೆಯ ವೈವಾಹಿಕ ಸಂಬಂಧ ಹಾಳಾಗುತ್ತಿರುವುದನ್ನು ನೋಡಲಾಗದ ಪ್ರೇಮಾ, ತನ್ನ ಪತಿಯನ್ನು ಮತ್ತೆ ಮತ್ತೆ ನೆನೆಸಿಕೊಳ್ಳುತ್ತಿರುತ್ತಾಳೆ. ಇದನ್ನು ಕಂಡ ಯಮರಾಜ, ಒಂದಿಷ್ಟು ದಿನಗಳ ಮಟ್ಟಿಗೆ ಭೂಲೋಕಕ್ಕೆ ಹೋಗಿ ಬರಲು ಉಪೇಂದ್ರರಾಜುವಿಗೆ ಅನುಮತಿ ನೀಡಿರುತ್ತಾನೆ!

ಆತ ಭೂಲೋಕಕ್ಕೆ ಬಂದಿರುವುದು ಪತ್ನಿ ಪ್ರೇಮಾಗೆ ಮಾತ್ರ ಕಾಣಿಸುತ್ತದೆ, ಆತನ ಮಾತುಗಳು ಪ್ರೇಮಾಗೆ ಮಾತ್ರ ಕೇಳಿಸುತ್ತವೆ. ಉಪೇಂದ್ರರಾಜು ಪ್ರೇಮಾಗೆ ಮಾತ್ರ ಕಾಣಿಸಬೇಕು, ಅವನ ಮಾತುಗಳು ಅವಳಿಗೆ ಮಾತ್ರ ಕೇಳಿಸಬೇಕು ಎಂಬುದು ಯಮನ ತೀರ್ಮಾನವಾಗಿರುತ್ತದೆ. ಹೀಗೆ ಭೂಮಿಗೆ ಮರಳುವ ಉಪೇಂದ್ರರಾಜು, ತನ್ನ ಮಗ–ಸೊಸೆಯ ನಡುವಣ ಸಂಬಂಧ ಸರಿಪಡಿಸುವ ಕೆಲಸಕ್ಕೂ, ತನ್ನ ಕುಟುಂಬಕ್ಕೆ ಒದಗಿರುವ ಆಪತ್ತೊಂದನ್ನು ದೂರ ಮಾಡುವ ಕೆಲಸಕ್ಕೂ, ತನ್ನ ಸಾವು ಯಾವ ಕಾರಣಕ್ಕೆ ಆಯಿತು ಎಂಬುದನ್ನು ತಿಳಿಯುವುದಕ್ಕೂ ಮುಂದಾಗುತ್ತಾನೆ. ಅದನ್ನೆಲ್ಲ ಹೇಗೆ ಮಾಡುತ್ತಾನೆ ಎಂಬುದೇ ಸಿನಿಮಾದ ಕಥೆ.

ತುಂಬು ಕುಟುಂಬದ ಒಳ್ಳೆಯ ಜಮೀನ್ದಾರ ಹಾಗೂ ಸಣ್ಣ ಕುಟುಂಬದ ಕೆಟ್ಟ ಶ್ರೀಮಂತನ ಕಥೆಗಳಿರುವ ಸಿನಿಮಾಗಳನ್ನು ಇಷ್ಟಪಡುವವರು ‘ಉಪೇಂದ್ರ ಮತ್ತೆ ಬಾ’ ಮೂಲಕ ಮತ್ತೆ ಹಳೆಯ ದಿನಗಳ ಸಿನಿಮಾ ವೀಕ್ಷಣೆಯ ಅನುಭವಗಳನ್ನು ಮೆಲುಕು ಹಾಕಬಹುದು. ಶ್ರೀಧರ್ ವಿ. ಸಂಭ್ರಮ್ ಸಂಗೀತವಿರುವ ಹಾಡುಗಳನ್ನು ಗುನುಗಿಕೊಳ್ಳಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.