ADVERTISEMENT

‘ಎಸ್ಕೇಪ್‌’ ಆಗಲು ಹೊರಟ ಹೊಸ ಹುಡುಗರು

​ಪ್ರಜಾವಾಣಿ ವಾರ್ತೆ
Published 2 ಫೆಬ್ರುವರಿ 2017, 19:30 IST
Last Updated 2 ಫೆಬ್ರುವರಿ 2017, 19:30 IST
‘ಎಸ್ಕೇಪ್‌’ ಆಗಲು ಹೊರಟ ಹೊಸ ಹುಡುಗರು
‘ಎಸ್ಕೇಪ್‌’ ಆಗಲು ಹೊರಟ ಹೊಸ ಹುಡುಗರು   

ವಿದೇಶಿ ಚಿತ್ರಗಳಿಂದ ಅದರಲ್ಲಿಯೂ ವಿಶೇಷವಾಗಿ ಕೊರಿಯನ್‌ ಸಿನಿಮಾಗಳಿಂದ ಸ್ಫೂರ್ತಿಗೊಂಡು ನಿರ್ಮಾಣವಾಗುತ್ತಿರುವ ಕನ್ನಡ ಸಿನಿಮಾಗಳು ಹೆಚ್ಚುತ್ತಿವೆ. ಇವುಗಳ ಸಾಲಿಗೆ ಹೊಸ ಸೇರ್ಪಡೆ ‘ಎಸ್ಕೇಪ್‌’.

ಛಾಯಾಗ್ರಾಹಕ ದರ್ಶನ್‌ ಕನಕ ಈ ಸಿನಿಮಾದ ಮೂಲಕ ಮೊದಲ ಬಾರಿಗೆ ನಿರ್ಮಾಣಕ್ಕೆ ಇಳಿಯುತ್ತಿದ್ದಾರೆ. ಅಂದಹಾಗೆ ಈ ಸಿನಿಮಾದ ನಿರ್ದೇಶಕರ ಹೆಸರೂ ದರ್ಶನ್‌ ಎಂದೇ. ಈ ಇಬ್ಬರೂ ಮೈಸೂರಿನವರು. ‘ಎಸ್ಕೇಪ್‌’ ಎಂಬ ಥ್ರಿಲ್ಲರ್‌ ಕಥೆಯನ್ನು ಹೇಳಹೊರಟಿರುವ ಇವರಿಗೆ ಕೊರಿಯಾದ ‘ರೆಡ್‌ ಟಾರ್ಗೆಟ್‌’ ಸ್ಫೂರ್ತಿನೀಡಿದೆ.

ಸಿನಿಮಾದಲ್ಲಿ ನಾಯಕ–ನಾಯಕಿ ಇಬ್ಬರಿಗೂ ಕನ್ನಡ ಬರುವುದಿಲ್ಲ. ಈ ಪಾತ್ರಕ್ಕೆ ಹೊಂದಿಕೆಯಾಗುವಂತೆ ಕನ್ನಡ ಬರದ ಜಾರ್ಖಂಡ್‌ನ ರೂಪದರ್ಶಿ ಪ್ರಜ್ಞಾ ಅವರನ್ನು ಕರೆತಂದಿದ್ದಾರೆ.

‘ಸಿನಿಮಾದಲ್ಲಿ ಯಾರೂ ಎಸ್ಕೇಪ್‌ ಆಗುವುದಿಲ್ಲ. ಥ್ರಿಲ್ಲಿಂಗ್‌ ಕಥೆಯನ್ನಿಟ್ಟುಕೊಂಡು ಸಿನಿಮಾ ಮಾಡಿದ್ದೇವೆ. ತಂಡದಲ್ಲಿನ ಎಲ್ಲರೂ ಸ್ಕ್ರಿಪ್ಟ್‌ ನೋಡಿಯೇ ನನ್ನ ಜೊತೆಯಾಗಿದ್ದು. ಕರ್ನಾಟಕ, ಶ್ರೀನಗರ, ಮನಾಲಿ, ಕುಶಾಲನಗರಗಳಲ್ಲಿ ಚಿತ್ರೀಕರಣ ನಡೆಸಲು ಸಿದ್ಧತೆ ನಡೆಸಿದ್ದೇವೆ’ ಎಂದು ಹೇಳಿದರು ನಿರ್ದೇಶಕ ದೀಪಕ್‌.

ನಾಯಕ ನಟ ದೀಪಂ ಕೋಹ್ಲಿ ಅವರಿಗೂ ಇದು ಮೊದಲ ಪ್ರಯತ್ನ. ‘ಅನಕ್ಷರಸ್ಥನ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ಮಧ್ಯಮವರ್ಗದ ಒಳ್ಳೆಯ ಹುಡುಗ ಪರಿಸ್ಥಿತಿಯ ಹಿಡಿತಕ್ಕೆ ಸಿಲುಕಿ ಹೇಗೆ ಕೆಟ್ಟವನಾಗಿ ಬದಲಾಗುತ್ತಾನೆ ಎಂಬುದೇ ಈ ಸಿನಿಮಾದ ಕಥೆ’ ಎಂದ ದೀಪಂ ಅದಕ್ಕಿಂತ ಹೆಚ್ಚಿಗೆ ಏನನ್ನೂ ಬಿಟ್ಟುಕೊಡಲು ಸಿದ್ಧರಿರಲಿಲ್ಲ.

ನಾಯಕಿ ಪ್ರಜ್ಞಾ ಕೂಡ ಎಲ್ಲರಿಗೂ ಧನ್ಯವಾದ ಸಲ್ಲಿಸುವುದರಲ್ಲಿಯೇ ಮಾತು ಮುಗಿಸಿದರು. ಸಾಯಿಕಿರಣ್‌ ಸಂಗೀತ ಚಿತ್ರಕ್ಕಿದೆ. ‘ಸಿನಿಮಾದಲ್ಲಿ ಮೂರು ಹಾಡುಗಳಿವೆ. ಅವುಗಳಲ್ಲಿ ಯಾವುದೂ ಉದ್ದೇಶಪೂರ್ವಕವಾಗಿ ತುರುಕಿಲ್ಲ. ಕಥೆಗೆ ಹೊಂದಿಕೊಂಡೇ ಬರುವಂತಿವೆ. ಹಿನ್ನೆಲೆ ಸಂಗೀತಕ್ಕೂ ಅಷ್ಟೇ ಮಹತ್ವ ನೀಡುತ್ತಿದ್ದೇವೆ’ ಎಂದು ಅವರು ತಮ್ಮ ವಿಭಾಗದ ಕುರಿತು ಹೇಳಿಕೊಂಡರು. 45 ದಿನಗಳಲ್ಲಿ ಚಿತ್ರೀಕರಣ ಮುಗಿಸಿ ಸಾಧ್ಯವಾಷ್ಟೂ ಬೇಗ ಪ್ರೇಕ್ಷಕರ ಮುಂದೆ ಬರುವ ಸಿದ್ಧತೆಯಲ್ಲಿ ‘ಎಸ್ಕೇಪ್‌’ ತಂಡ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.