ADVERTISEMENT

ಕನಸೆಂಬೊ ರಾಕೆಟ್ ಏರಿ...

​ಪ್ರಜಾವಾಣಿ ವಾರ್ತೆ
Published 20 ನವೆಂಬರ್ 2014, 19:30 IST
Last Updated 20 ನವೆಂಬರ್ 2014, 19:30 IST

ಪ್ರೇಕ್ಷಕರಿಗೆ ಭಿನ್ನ ಅನುಭವ ಕೊಡುವಂಥ ಬೇರೆ ತರಹದ ಸಿನಿಮಾ ಮಾಡಬೇಕು ಎಂಬ ಕನಸು ನೀನಾಸಂ ಸತೀಶ್ ಅವರಲ್ಲಿದೆ. ಅದರ ಮೊದಲ ಹೆಜ್ಜೆಯಾಗಿ ತಮ್ಮದೇ ನಿರ್ಮಾಣ ಸಂಸ್ಥೆಯಿಂದ ಅವರು ಹೊಸ ಸಿನಿಮಾ ಮಾಡುತ್ತಿದ್ದಾರೆ. ಅದರ ಮುಹೂರ್ತ ಬೆಂಗಳೂರಿನ ಬಸವೇಶ್ವರ ನಗರದ ಗಣಪತಿ ದೇವಸ್ಥಾನದಲ್ಲಿ ಇತ್ತೀಚೆಗೆ ನಡೆಯಿತು.

ಚಿತ್ರದ ಹೆಸರು– ‘ರಾಕೆಟ್’. ‘ವೇಗಕ್ಕೆ ಮತ್ತೊಂದು ಹೆಸರೇ ರಾಕೆಟ್‌ ಅಲ್ಲವೇ? ಈ ಸಿನಿಮಾದಲ್ಲಿನ ನಾಯಕನ ಸ್ವಭಾವವನ್ನು ಅದು ಸಂಕೇತಿಸುತ್ತದೆ’ ಎಂದರು ನಿರ್ದೇಶಕ ಶಿವಶಶಿ.

ಪ್ರತಿಯೊಂದು ಪಾತ್ರಕ್ಕೂ ಒಂದು ಚೌಕಟ್ಟು ಕೊಟ್ಟಿರುವುದಾಗಿ ಹೇಳಿಕೊಂಡ ನಿರ್ದೇಶಕರು, ಸತೀಶ್ ಫೋಟೊ ಶೂಟ್‌ಗಾಗಿ ಮಾಡಿದ ಪ್ರಯತ್ನಗಳ ವಿವರ ನೀಡಿದರು. ಟಿ.ಎನ್. ಸೀತಾರಾಮ್ ಅವರ ‘ಮಿಂಚು’ ಧಾರಾವಾಹಿಗೆ ಸಂಭಾಷಣೆಕಾರನಾಗಿ ಕೆಲಸ ಮಾಡಿರುವ ಅವರು, ಉಪೇಂದ್ರ ಬಳಿ ಒಂದೆರಡು ಸಿನಿಮಾಗಳಿಗೆ ಸಹಾಯಕ ನಿರ್ದೇಶಕರಾಗಿಯೂ ದುಡಿದಿದ್ದಾರೆ.

ಸ್ಟೈಲಿಶ್ ಆಗಿ ಕಾಣಿಸಿಕೊಳ್ಳಲಿರುವ ಸತೀಶ್, ತಮ್ಮ ಚಿತ್ರದಲ್ಲಿ ಪ್ರೇಕ್ಷಕನಿಗೆ ಹೊಸತನ ಕೊಡುವ ಸಾಕಷ್ಟು ಅಂಶಗಳಿವೆ ಎಂದರು. ಆರು ತಿಂಗಳ ಕಾಲ ಚರ್ಚೆ, ಬರವಣಿಗೆ ನಡೆಸಿ ‘ರಾಕೆಟ್‌’ನ ಚಿತ್ರಕಥೆ ಸಿದ್ಧಪಡಿಸಿದ್ದಾರಂತೆ. ‘ಭಾವನೆಗಳು, ಹಾಸ್ಯ, ಗಾಂಭೀರ್ಯ, ಆ್ಯಕ್ಷನ್ ಸೇರಿದಂತೆ ಎಲ್ಲ ಬಗೆಯ ಕಮರ್ಷಿಯಲ್ ಅಂಶಗಳು ಚಿತ್ರದಲ್ಲಿ ಇರಲಿವೆ’ ಎಂದರು.

ಸದಾ ಬೇರೆ ಬೇರೆ ಪಾತ್ರಗಳು ಸಿಗಬೇಕು ಎನ್ನುವ ಹಂಬಲದಲ್ಲಿರುವ ಐಶಾನಿ ಶೆಟ್ಟಿ, ರಾಕೆಟ್‌ನಲ್ಲಿ ಸತೀಶ್‌ಗೆ ಜೋಡಿಯಾಗಲಿದ್ದಾರೆ. ಇದರಲ್ಲಿ ಅವರದು ಸಾಂಪ್ರದಾಯಿಕ ಹುಡುಗಿ ಪಾತ್ರ. ‘ನಾನು ಈಗ ಹೇಗಿದ್ದೀನೋ, ಅದಕ್ಕೆ ಸರಿಯಾಗಿ ನನ್ನ ಪಾತ್ರ ಸಿಕ್ಕಿದೆ’ ಎಂದು ಸಂತಸ ಹಂಚಿಕೊಂಡರು. ಇನ್ನೊಬ್ಬ ನಾಯಕಿ ರಾಜಶ್ರೀ, ಈಗಿನ ಜಮಾನಾದ ಯುವತಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ‘ನೀನಾಸಂ ಸತೀಶ್ ಅದ್ಭುತ ನಟ. ಅವರ ಜತೆ ಅಭಿನಯಿಸುವ ಅವಕಾಶ ಸಿಕ್ಕಿರುವುದು ನನ್ನ ಅದೃಷ್ಟ’ ಎಂದು ರಾಜಶ್ರೀ ಹೇಳಿದರು.

ಕ್ಯಾಮೆರಾ ಹಿಡಿಯಲಿರುವ ಅದ್ವೈತ, ಹೊಸ ತಂಡದ ಹುರುಪು ಕಂಡು ಉತ್ಸಾಹಗೊಂಡಿದ್ದಾರೆ. ‘ಎಲ್ಲರನ್ನೂ ಜತೆಗೆ ಕರೆದೊಯ್ಯುವ ಸತೀಶ್ ಅವರ ಪ್ರಯತ್ನಕ್ಕೆ ನನ್ನ ಬೆಂಬಲವೂ ಇದೆ’ ಎಂದರು. ಪ್ರೇಮದಲ್ಲಿ ಮುಳುಗೆದ್ದ ಯುವಕ, ಕೊನೆಗೆ ಅದು ವಿಫಲವಾದಾಗ ನಡೆಯುವ ಘಟನಾವಳಿಗಳ ಚಿತ್ರಣ ‘ರಾಕೆಟ್‌’ನಲ್ಲಿದೆ. ಇದಕ್ಕಾಗಿ ಬೆಂಗಳೂರು ಹಾಗೂ ಮಡಿಕೇರಿಯಲ್ಲಿ ಚಿತ್ರೀಕರಣ ನಡೆಯಲಿದೆ. ಎರಡು ಹೊಡೆದಾಟದ ದೃಶ್ಯಗಳಿಗೆ ರವಿವರ್ಮ ಕುಮಾರ್ ಹಾಗೂ ಮೂರು ಹಾಡುಗಳಿಗೆ ಮುರಳಿ, ಹರ್ಷ ನೃತ್ಯ ನಿರ್ದೇಶನ ಇರಲಿದೆ. ಐದು ಹಾಡುಗಳಿಗೆ ಸಂಗೀತ ನೀಡಲಿರುವ ಪೂರ್ಣಚಂದ್ರ ತೇಜಸ್ವಿ, ನಿರ್ಮಾಪಕರಲ್ಲಿ ಒಬ್ಬರಾದ ಸತೀಶ್ ಎಂ.ಎನ್. ಇತರರು ಮಾತನಾಡಿದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.