ADVERTISEMENT

ಕರಿಯನ ಕಾಲುಹಾದಿ!

ಡಿ.ಎಂ.ಕುರ್ಕೆ ಪ್ರಶಾಂತ
Published 30 ಅಕ್ಟೋಬರ್ 2014, 19:30 IST
Last Updated 30 ಅಕ್ಟೋಬರ್ 2014, 19:30 IST

ದುಬಾರಿ ಬಾಡಿಗೆ ಕಾರಣದಿಂದಲೇ ಅನೇಕ ಒಳ್ಳೆಯ ಸಿನಿಮಾಗಳು ಬಿಡುಗಡೆ ಭಾಗ್ಯದಿಂದ ವಂಚಿತವಾಗುತ್ತವೆ. ಈ ನಿಟ್ಟಿನಲ್ಲಿ ‘ಕರಿಯ ಕಣ್‌ ಬಿಟ್ಟ’ ಚಿತ್ರತಂಡ ತನ್ನದೇ ಆದ ಪರಿಹಾರ ಕಂಡುಕೊಂಡಿದೆ. ವಿವಿಧ ಊರುಗಳಲ್ಲಿ ಆಸಕ್ತರ ಎದುರು ಸಿನಿಮಾ ಪ್ರದರ್ಶಿಸುವ ಮೂಲಕ ಸಹೃದಯರನ್ನು ತಲುಪುವ ಪ್ರಯತ್ನವದು.

ನಾವು 10–15 ಹಳ್ಳಿಗೆ ಕುಳವಾಡಿಗಳಿದ್ದೆವು. ಅಂದರೆ ಊರ ಗೌಡರ ಮನೆಯಲ್ಲಿ ಹಬ್ಬ–ಮದುವೆ ಇತ್ಯಾದಿ ಕಾರ್ಯಗಳಲ್ಲಿ ಉಚಿತವಾಗಿ ಕೆಲಸ ಮಾಡುವರು. ಒಮ್ಮೆ ನಮ್ಮೂರಿನಿಂದ ನಾಲ್ಕೈದು ಕಿಲೋಮೀಟರ್ ದೂರದ ಹಳ್ಳಿಯಲ್ಲಿ ಒಂದು ಎತ್ತು ಸತ್ತಿದೆ ಎನ್ನುವ ವರ್ತಮಾನ ಬಂತು. ವಿಪರೀತ ಮಳೆಯ ದಿನವದು. ದನ ಸತ್ತರೆ ನಮಗೆಲ್ಲ ಸಂಭ್ರಮ. ನನ್ನ ಅಪ್ಪ ಕಾಯಿಲೆ ಮನುಷ್ಯ. ಪ್ರತಿ ಸಾರಿಯೂ ದನ ಸತ್ತಾಗ ನನ್ನನ್ನು ದನ ಎತ್ತಿ ಹಾಕಲು ಕರೆದುಕೊಂಡು ಹೋಗುತ್ತಿದ್ದರು. ಆ ಹಳ್ಳಿಗೆ ಹೋಗಿ ನೋಡಿದರೆ ದನ ಇನ್ನೂ ಸತ್ತಿಲ್ಲ. ಈಗ ಸಾಯುತ್ತೆ ಆಗ ಸಾಯುತ್ತೆ ಎಂದು ಕಾಯ್ದೆವು. ಅದು ಸಾಯಲಿಲ್ಲ. ಅಪ್ಪನಿಗೆ ನಿರಾಸೆ. ಆ ಸನ್ನಿವೇಶ ಕರುಣಾಜನಕ. ಹೊಟ್ಟೆ ಹಸಿವೆಂದು ಊರಿಗೆ ವಾಪಸ್ಸಾದೆವು. ಸಂಜೆ ವೇಳೆಗೆ ಎತ್ತು ಸತ್ತ ಸುದ್ದಿ ತಲುಪಿತು. ಮರುದಿನ ಹೋಗಿ ನೋಡಿದರೆ ಅಲ್ಲಿನ ಸ್ಥಳೀಯ ದಲಿತರು ಮಾಂಸ ತೆಗೆದುಕೊಂಡು ಹೋಗಿದ್ದರು. ನಮಗೆ ಚರ್ಮವನ್ನಷ್ಟೇ ಬಿಟ್ಟಿದ್ದರು.

* * *
ಎಲ್ಲರೂ ನನ್ನನ್ನು ಹೊಲೆಯರ ಹುಡುಗ ಎನ್ನುತ್ತಿದ್ದರು. ಒಮ್ಮೆ ಅಯ್ಯಪ್ಪ ಸ್ವಾಮಿ ಮಾಲೆ ಹಾಕಿಕೊಂಡವರೊಬ್ಬರು ನನ್ನ ‘ಸ್ವಾಮಿ’ ಅಂದ್ರು. ‘ಏನು ಹೇಳಿದ್ರಿ, ನನ್ನ ಸ್ವಾಮಿ ಅಂದ್ರಾ’ ಎಂದು ಕೇಳಿದೆ. ಹೌದು ಅಂದರು. ಅಯ್ಯಪ್ಪ ಸ್ವಾಮಿಗೆ ದುಡ್ಡು ಕೊಡಬೇಕು ಎಂದರು. ಸ್ವಾಮಿ ಅಂದಿದ್ದೇ ನನಗೆ ಅಪಾರ ಖುಷಿ. ಕೂಲಿ ಮಾಡಿ, ದುಡ್ಡು ಕೊಡಲು ಮುಂದಾದೆ. ನಮ್ಮಪ್ಪ, ‘ನಾನೇ ಕೊಡುತ್ತೀನಿ’ ಎಂದು ದುಡ್ಡು ತೆಗೆದುಕೊಂಡವರು ಆ ಹಣದಲ್ಲಿ ಕುಡಿದುಬಿಟ್ಟರು. ಅವ್ವನಿಂದ ದುಡ್ಡು ತೆಗೆದುಕೊಂಡು ಅಯ್ಯಪ್ಪ ಸ್ವಾಮಿ ಮಾಲಾಧಾರಿಗೆ ಕೊಟ್ಟೆ. ಅವರು ನನ್ನ ಕೈ ಕುಲುಕಿದರು. ಅದು ನನಗೆ ದೊಡ್ಡ ಶಾಕ್. ಯಾರೂ ಮುಟ್ಟಿಸಿಕೊಳ್ಳದ ನನ್ನ ಇವನು ಮುಟ್ಟಿಸಿಕೊಂಡನಲ್ಲ ಎಂದು.
 * * *      
ಊರಿನಲ್ಲಿ ಒಂದೇ ದಿನ ಎರಡು ಮದುವೆ. ತಿಂಡಿಗೆ ಒಂದು ಕಡೆ ಹೋದರೆ ಊಟಕ್ಕೆ ಮತ್ತೊಂದು ಕಡೆ ಹೋಗಬಹುದು ಎನ್ನುವ ಆಸೆ. ಒಂದು ಮದುವೆ ಮನೆಗೆ ಹೋದೆ, ಅಲ್ಲಿನ್ನೂ ತಿಂಡಿ ಮಾಡಿರಲಿಲ್ಲ. ತಡವಾಗುತ್ತದೆ ಅಂದರು. ಮತ್ತೊಂದು ಮದುವೆ ಮನೆಗೆ ಹೋದರೆ ಅಲ್ಲಿ ತಿಂಡಿ ಖಾಲಿ. ಮೊದಲ ಮನೆಯಲ್ಲಿ ತಡವಾದರೂ ಸಿಕ್ಕುತ್ತಲ್ಲ ಎಂದು ಓಡಿ ಬಂದ್ರೆ ಅಲ್ಲೂ ಖಾಲಿ.  ‘ಯಾವಾಗಲೂ ನಮ್ಮದೇ ನಮಗೆ ಇರಲ್ಲ. ಮತ್ತೊಬ್ಬರದ್ದು ಸಿಗುತ್ತ... ಮಗ’ ಎಂದಳು ಅವ್ವ. ಆಕೆ ಕೊಟ್ಟಿಗೆ ಗುಡಿಸಿ ತಂದ ರೊಟ್ಟಿಯನ್ನು ತಿಂದೆ.

* * *
ಕವಿ ಸುಬ್ಬು ಹೊಲೆಯಾರ್ ಅವರ ಬಾಲ್ಯದ ಕೆಲವು ಘಟನೆಗಳು ಇವು. ಈ ಅಳಿಯದ ನೆನಪುಗಳನ್ನು ಒಗ್ಗೂಡಿಸಿರುವ ಚಿತ್ರ ‘ಕರಿಯ ಕಣ್‌ಬಿಟ್ಟ’. ಕವಿತಾ ಲಂಕೇಶ್ ನಿರ್ದೇಶನದ ‘ಕರಿಯ ಕಣ್‌ಬಿಟ್ಟ’ ದಲಿತ ಬಾಲಕನೊಬ್ಬನ ಜೀವನದಲ್ಲಿ ‘ಜಾತಿ’ಯ ಜಿಡ್ಡು, ಜಿಜ್ಞಾಸೆ ಹೇಗೆ ನುಸುಳುತ್ತದೆ ಎನ್ನುವುದನ್ನು ಚಿತ್ರಿಸುತ್ತದೆ. ಆ ಮೂಲಕ ಸಮುದಾಯವೊಂದರ ಒಳತೋಟಿಗಳನ್ನೂ ಕಾಣಿಸುತ್ತದೆ. ಈ ಹೊತ್ತಿಗೆ ‘ಕರಿಯ ಕಣ್‌ಬಿಟ್ಟ’ ಕೆಲವರು ಹಳೆಯ ಕಥೆ ಎನ್ನಿಸಬಹುದು. ಆದರೆ, ಅಸಮಾನತೆ– ಅಸ್ಪೃಶ್ಯತೆ ಅಳಿಯದ ಈ ಹೊತ್ತಿನಲ್ಲಿ ಕರಿಯ ತಾಜಾ ಆಗಿಯೇ ಕಾಣಿಸುತ್ತಾನೆ. ಮಾನವೀಯ ಹಿನ್ನೆಲೆಯಲ್ಲಿ ಈ ಕಥನ ಹೊಸತಾಗಿ ಕಾಣಿಸುತ್ತದೆ. ಮಂಡ್ಯ, ಮೈಸೂರು, ಹಾಸನ, ಮುಂತಾದ ಊರುಗಳಲ್ಲಿ ಖಾಸಗಿಯಾಗಿ ಪ್ರದರ್ಶನವಾಗಿರುವ ಈ ಚಿತ್ರ, ಸಂವಾದಕ್ಕೂ ಅವಕಾಶ ಮಾಡಿಕೊಟ್ಟಿದೆ.

‘ಸಿನಿಮಾ ನೋಡಿದ ಬಹು ಮಂದಿಯ ಕಣ್ಣುಗಳಲ್ಲಿ ನೀರು ತುಂಬಿದ್ದನ್ನು ನಾನು ನೋಡಿದ್ದೇನೆ. ಈಗಲೂ ಈ ರೀತಿಯ ಜಾತಿಯ ಸಮಸ್ಯೆಗಳು ಇವೆಯೇ, ಹೀಗೆಲ್ಲ ನಡೆಯುತ್ತದೆಯೇ ಎಂದು ಕೇಳಿದವರೂ ಇದ್ದಾರೆ. ಇದು ಜಾಣ ಪ್ರಶ್ನೆಯೇ– ಗೊತ್ತಿಲ್ಲ. ಕರ್ನಾಟಕದ 30 ಸಾವಿರ ಹಳ್ಳಿಗಳಲ್ಲಿ ಅಸ್ಪೃಶ್ಯತೆ ಈಗಲೂ ಇದೆ’ ಎನ್ನುತ್ತಾರೆ ಸುಬ್ಬು ಹೊಲೆಯಾರ್.

ಅಂದಹಾಗೆ, ಸುಮಾರು 35 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗಿರುವ ಈ ಚಿತ್ರದ ಚಿತ್ರೀಕರಣವನ್ನು ಕನಕಪುರ ತಾಲ್ಲೂಕಿನ ಕುರಿಮಂದೆ ದೊಡ್ಡಿ ಮತ್ತು ಸುತ್ತಲಿನ ಪ್ರದೇಶಗಳಲ್ಲಿ ನಡೆಸಲಾಗಿದೆ. ಮಾಸ್ಟರ್ ಪ್ರದ್ಯುಮ್ನ, ದುನಿಯಾ ವಿಜಯ್‌, ಶ್ರೀನಗರ ಕಿಟ್ಟಿ, ಯೋಗೀಶ್ ಮತ್ತಿತರರು ತಾರಾಗಣದಲ್ಲಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.