ADVERTISEMENT

‘ಕವಲು ದಾರಿ’ಯಲ್ಲಿ ರೋಶಿನಿ!

​ಪ್ರಜಾವಾಣಿ ವಾರ್ತೆ
Published 18 ಸೆಪ್ಟೆಂಬರ್ 2017, 11:15 IST
Last Updated 18 ಸೆಪ್ಟೆಂಬರ್ 2017, 11:15 IST
‘ಕವಲು ದಾರಿ’ಯಲ್ಲಿ ರೋಶಿನಿ!
‘ಕವಲು ದಾರಿ’ಯಲ್ಲಿ ರೋಶಿನಿ!   

‘ಕವಲು ದಾರಿ’ಗೆ ಹೊಸ ರೋಶಿನಿ ಸೇರಿಕೊಂಡಿದೆ.

ಪ್ರತಿದಿನ ಬೆಳಿಗ್ಗೆ ಜಗತ್ತಿಗೇ ಬೆಳಕು (ರೋಶಿನಿ) ಬರುತ್ತದೆ ಇದರಲ್ಲೇನು ಹೊಸ ವಿಷಯ ಎಂದು ಮೂಗು ಮುರಿಯಬೇಡಿ. ಹೇಮಂತ್‌ ರಾವ್‌ ನಿರ್ದೇಶನದ ಎರಡನೇ ಸಿನಿಮಾ, ಪುನೀತ್‌ ರಾಜಕುಮಾರ್‌ ನಿರ್ಮಾಣದ ಮೊದಲ ಸಿನಿಮಾ ‘ಕವಲು ದಾರಿ’ ಸಿನಿಮಾಗೆ ನಾಯಕಿಯಾಗಿ ಮೈಸೂರಿನ ಹುಡುಗಿ ರೋಶಿನಿ ಪ್ರಕಾಶ್‌ ಆಯ್ಕೆಯಾಗಿದ್ದಾರೆ.

ರೋಶಿನಿ ಕನ್ನಡದವರೇ ಆದರೂ ಬೆಳ್ಳಿತೆರೆಗೆ ಅಡಿಯಿಟ್ಟಿದ್ದು 2016ರಲ್ಲಿ ತೆರೆಕಂಡ ‘ಸಪ್ತಗಿರಿ ಎಕ್ಸ್‌ಪ್ರೆಸ್‌’ ಸಿನಿಮಾದ ಮೂಲಕ. ಎರಡನೇ ಸಿನಿಮಾ ನೀನಾಸಂ ಸತೀಶ್‌ ನಾಯಕರಾಗಿರುವ ‘ಟೈಗರ್‌ ಗಲ್ಲಿ’ ಇನ್ನೂ ತೆರೆಕಾಣಬೇಕಾಗಿದೆ.

ADVERTISEMENT

‘ನನಗೆ ಈ ಸಿನಿಮಾದ ನಾಯಕಿಯ ಪಾತ್ರಕ್ಕೆ ಮುಗ್ಧ ಮುಖದ ಹುಡುಗಿಯೊಬ್ಬಳು ಬೇಕಾಗಿತ್ತು. ಅದಕ್ಕಾಗಿ ಆಡಿಷನ್‌ ಮಾಡಿದೆ. ಎಷ್ಟೋ ಜನರು ಮೇಲ್ನೋಟಕ್ಕೆ ಹೊಂದುತ್ತಾರೆ ಅನಿಸಿದರೂ ಏನೋ ಕೊರತೆ ಇದೆ ಅನಿಸುತ್ತಿತ್ತು. ರೋಶಿನಿ ಆಡಿಷನ್‌ನಲ್ಲಿ ತುಂಬ ಚೆನ್ನಾಗಿ ನಟಿಸಿದರು. ಈ ಪಾತ್ರಕ್ಕೆ ಹೊಂದಬಲ್ಲರು ಎಂದೂ ಅನಿಸಿತು. ಅದಕ್ಕಾಗಿ ಆಯ್ಕೆ ಮಾಡಿದ್ದೆವು’ ಎಂದು ಹೇಳುತ್ತಾರೆ ನಿರ್ದೇಶಕ ಹೇಮಂತ್ ರಾವ್‌.

ಈ ಚಿತ್ರದಲ್ಲಿ ಕಡುಬಡತನದ ಕುಟುಂಬದಲ್ಲಿ ಜವಾಬ್ದಾರಿಯುತ ಮಗಳ ಪಾತ್ರದಲ್ಲಿ ರೋಶಿನಿ ಕಾಣಿಸಿಕೊಳ್ಳಲಿದ್ದಾರೆ. ಬೇಜವ್ದಾರಿ ತಂದೆಯ ಸಾಲಗಳನ್ನು ತೀರಿಸಿಕೊಂಡು, ಮನೆಯನ್ನು ತೂಗಿಸಿಕೊಂಡು ಹೋಗುವ ಹುಡುಗಿಯ ಪಾತ್ರ ಅವರದು.

ಇದೇ ಶುಕ್ರವಾರ ‘ಕವಲು ದಾರಿ’ ಮುಹೂರ್ತ ನಡೆಯಲಿದೆ. ‘ಆಪರೇಷನ್‌ ಅಲಮೇಲಮ್ಮ’ ಚಿತ್ರದಲ್ಲಿ ನಾಯಕನಾಗಿದ್ದ ರಿಷಿ ಈ ಚಿತ್ರದಲ್ಲಿ ಪೊಲೀಸ್‌ ಅಧಿಕಾರಿಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸಸ್ಪೆನ್ಸ್‌, ಥ್ರಿಲ್ಲರ್‌ ಕಥಾ ಹಂದರವಿರುವ ‘ಕವಲು ದಾರಿ’ಯಲ್ಲಿ ಅನಂತ್‌ನಾಗ್‌ ಕೂಡ ವಿಶಿಷ್ಟ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಅದೈತ ಗುರುಮೂರ್ತಿ ಛಾಯಾಗ್ರಹಣ, ಚರಣ್‌ ರಾಜ್ ಸಂಗೀತ ನಿರ್ದೇಶನ ಈ ಚಿತ್ರಕ್ಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.