ADVERTISEMENT

ಕಿರುತೆರೆಗೆ ಬರ‍್ತಾಳೆ ಬಿಳೀ ಹೆಂಡ್ತಿ!

ಕೆ.ಎಂ.ಸಂತೋಷ್‌ ಕುಮಾರ್‌
Published 12 ಏಪ್ರಿಲ್ 2018, 19:30 IST
Last Updated 12 ಏಪ್ರಿಲ್ 2018, 19:30 IST
ಡಿವಿನಾ
ಡಿವಿನಾ   

ಮೂರು ದಶಕಗಳ ಹಿಂದೆ ಪ್ರೇಕ್ಷಕರ ಮನ ಗೆದ್ದಿದ್ದ ‘ಬಿಳೀ ಹೆಂಡ್ತಿ’ ಸಿನಿಮಾ ಈ ತಲೆಮಾರಿನವರಿಗೆ ಅಷ್ಟಾಗಿ ನೆನಪಿನಲ್ಲಿ ಇಲ್ಲದಿರಬಹುದು. ಹಳೆ ತಲೆಮಾರಿನ ಸಿನಿ ರಸಿಕರ ಮನದಲ್ಲಿ ಈ ಚಿತ್ರ ಅಳಿಸಲಾರದ ನೆನಪುಗಳನ್ನು ಅಚ್ಚೊತ್ತಿದೆ ಎಂಬುದು ಉತ್ಪೇಕ್ಷೆಯಲ್ಲ. ಮಾ.ನ.ಮೂರ್ತಿ ಅವರ ಕಾದಂಬರಿ ಆಧರಿತ ಈ ಚಿತ್ರವು ಪುಟ್ಟಣ್ಣ ಕಣಗಾಲ್‌ ನಿರ್ದೇಶನ ಮತ್ತು ಆರತಿ ಅವರ ಮನೋಜ್ಞ ಅಭಿನಯದಲ್ಲಿ ಚಿತ್ರರಸಿಕರ ಮನಗೆದ್ದಿತ್ತು.

ಇಷ್ಟೆಲ್ಲ ಪೀಠಿಕೆ ಈಗ ಏತಕ್ಕೆ ಎನ್ನುವ ಕುತೂಹಲವೇ? ಇದೇ ಹೆಸರಿನ ಧಾರಾವಾಹಿ ‘ಬಿಳೀ ಹೆಂಡ್ತಿ’ ಪ್ರೇಕ್ಷಕರ ಮನಗೆಲ್ಲಲು, ಕಿರುತೆರೆಗೆ ಬರಲು ಸಜ್ಜಾಗಿದೆ. ಧಾರಾವಾಹಿಯ ‘ಬಿಳೀ ಹೆಂಡ್ತಿ’ ಪಾತ್ರದಲ್ಲಿ ‘ಇಂಗ್ಲಿಷ್ ಬೆಡಗಿ’, ಪೋಲಂಡ್‌ ದೇಶದ ಟಿ.ವಿ ನಿರೂಪಕಿ ಡಿವಿನಾ ಮಿಂಚಲಿದ್ದಾರೆ. ಇದು ಕನ್ನಡದ ಕಿರುತೆರೆಯ ಮಟ್ಟಿಗೆ ಹೊಸ ಪ್ರಯೋಗ.

ಏಪ್ರಿಲ್‌ 16ರಂದು ಸ್ಟಾರ್‌ ಸುವರ್ಣ ವಾಹಿನಿಯಲ್ಲಿ ಸಂಜೆ 7 ಗಂಟೆಗೆ ಮೊದಲ ಸಂಚಿಕೆ ಪ್ರಸಾರವಾಗಲಿದೆ. ‘ಟ್ರೈ ಕಲರ್ಸ್‌ ಎಂಟರ್‌ಟೈನ್‌ಮೆಂಟ್‌’ ಪ್ರೊಡಕ್ಷನ್‌ ಈ ಧಾರಾವಾಹಿ ನಿರ್ಮಾಣ ಮಾಡುತ್ತಿದೆ. 25ಕ್ಕೂ ಹೆಚ್ಚು ಧಾರಾವಾಹಿಗಳನ್ನು ನಿರ್ದೇಶಿಸಿರುವ ಅನಿಲ್‌ ಕೋರಮಂಗಲ ನಿರ್ದೇಶನ ಮಾಡುತ್ತಿದ್ದಾರೆ. ನಿರ್ಮಾಪಕ ರಮೇಶ್‌ ಅವರು ಧಾರಾವಾಹಿ ಅದ್ದೂರಿಯಾಗಿ ಮೂಡಿಬರಬೇಕೆಂದು ಕೆಂಗೇರಿ ಬಳಿ ಬೃಹತ್‌ ಸೆಟ್‌ ಹಾಕಿಸಿದ್ದಾರೆ. 10 ದಿನಗಳಿಂದ ನಿರಂತರ ಚಿತ್ರೀಕರಣ ನಡೆಯುತ್ತಿದೆ. ಇದರಲ್ಲಿ ಬರುವ ಕಥೆ, ಪಾತ್ರ, ಸನ್ನಿವೇಶಗಳೆಲ್ಲವೂ ಕಾಲ್ಪನಿಕವಾದರೂ ಬ್ಯಾಕ್‌ಸ್ಟೇಜ್‌ ನೈಜವಾಗಿರಬೇಕೆಂದು ಬೆಂಗಳೂರು, ಮಂಡ್ಯ, ಮೈಸೂರಿನ ಪ್ರಮುಖವಾದ ಆಕರ್ಷಣೀಯ ಸ್ಥಳಗಳನ್ನು ಈ ತಂಡ ಚಿತ್ರೀಕರಣಕ್ಕೆ ಆಯ್ಕೆ ಮಾಡಿಕೊಂಡಿದೆ.

ADVERTISEMENT

ಸಂಪ್ರದಾಯಸ್ಥ, ಮಧ್ಯಮ ವರ್ಗದ ಕುಟುಂಬದ ಸುತ್ತ ಸುತ್ತುವ ಧಾರಾವಾಹಿಯ ಕಥೆಯ ಪ್ರಧಾನ ಪಾತ್ರದಲ್ಲಿ ನಟ ದೀಪಕ್‌ ನಟಿಸುತ್ತಿದ್ದಾರೆ. ಸುಮಾರು 250 ಸಂಚಿಕೆ ಪೂರೈಸಿ ನಾಲ್ಕು ತಿಂಗಳ ಹಿಂದಷ್ಟೇ ಮುಕ್ತಾಯ ಕಂಡ ‘ತ್ರಿವೇಣಿ ಸಂಗಮ’ದಲ್ಲಿಯೂ ಪ್ರಧಾನ ಪಾತ್ರ ನಿರ್ವಹಿಸಿರುವ ದೀಪಕ್‌ ಕನ್ನಡದ ಕಿರುತೆರೆ ಪ್ರೇಕ್ಷಕರಿಗೆ ಹೊಸ ಪರಿಚಯವೇನಲ್ಲ.

ನಟಿ ಪೂಜಾ ಗಾಂಧಿ ಜತೆಗೆ ನಾಯಕ ನಟನಾಗಿ ದೀಪಕ್‌ ನಟಿಸುತ್ತಿರುವ ‘ಬ್ಲ್ಯಾಕ್‌ ವರ್ಸಸ್‌ ವೈಟ್‌’ ಚಿತ್ರ ಇನ್ನೂ ತೆರೆಗೆ ಬಂದಿಲ್ಲ. ಶೇಕಡ 30ರಷ್ಟು ಚಿತ್ರೀಕರಣ ಮುಗಿದಿದ್ದು, ಚಿತ್ರ ನಿರ್ಮಾಣ ತಂಡ ಕೊಂಚ ಸಮಯ ಬಿಡುವು ಪಡೆದಿದೆ. ಹಾಗಾಗಿ ದೀಪಕ್‌ ಈ ಬಿಡುವಿನಲ್ಲಿ ‘ಬಿಳೀ ಹೆಂಡ್ತಿ’ ಜತೆಗೆ ಪ್ರೇಕ್ಷಕರ ಮನಗೆಲ್ಲುವ ಸಿದ್ಧತೆಯಲ್ಲಿದ್ದಾರೆ.

ಧಾರಾವಾಹಿ ಕಥೆಯ ಬಗ್ಗೆ ಹೆಚ್ಚು ಗುಟ್ಟು ಬಿಟ್ಟುಕೊಡದ ಅವರು, ‘ನಗರ ಮತ್ತು ಗ್ರಾಮೀಣ ಜನರಿಗೆ, ಅದರಲ್ಲೂ ಎಲ್ಲ ವರ್ಗಗಳ ಕುಟುಂಬಗಳೂ ಒಟ್ಟಿಗೆ ಕುಳಿತು ನೋಡಬಹುದಾದ ಕಥೆ ಇದು. ಕಥಾ ಹಂದರವೂ ಅದ್ಭುತವಾಗಿದೆ. ಕುತೂಹಲದ ಖನಿ ಆಗಿದೆ. ಚಿತ್ರೀಕರಣದಲ್ಲಿ ಬರುತ್ತಿರುವ ಫಲಿತಾಂಶವೂ ನಮ್ಮ ನಿರೀಕ್ಷೆ ಮೀರಿದಂತಿದೆ. ವಿದೇಶಿ ಕಲಾವಿದೆ ನಮ್ಮ ನೇಟಿವಿಟಿಗೆ ಸರಿಹೋಗುವಂತೆ ನಟಿಸುತ್ತಿರುವುದನ್ನು ಕಂಡು ನಾನಂತೂ ಬೆರಗಾಗಿದ್ದೇನೆ’ ಎಂದು ಹೆಮ್ಮೆಪಟ್ಟರು.

‘ಬಿಳೀ ಹೆಂಡ್ತಿ ಖಂಡಿತಾ ನಮ್ಮ ಪ್ರೇಕ್ಷಕರನ್ನು ಟಿ.ವಿ ಮುಂದೆ ಹಿಡಿದಿಟ್ಟು ಕೂರಿಸಲಿದ್ದಾಳೆ. ನಾವಂತೂ ಸಾಕಷ್ಟು ಭರವಸೆ, ನಿರೀಕ್ಷೆ ಹೊಂದಿದ್ದೇವೆ. ಮೊದಲ ಎಪಿಸೋಡ್‌ ನೋಡಿಯೇ ಪ್ರೇಕ್ಷಕರು ಇದು ಖಂಡಿತಾ 500 ಸಂಚಿಕೆ ಮೀರಿ ಬೆಳೆಯುತ್ತದೆ ಎಂದು ಊಹಿಸಿಬಿಡಬಲ್ಲರು’ ಎನ್ನುವುದು ಧಾರಾವಾಹಿ ತಂಡದ ವಿಶ್ವಾಸದ ನುಡಿ.

ವೇದೋಪನಿಷತ್‌ ಹೇಳುವ, ಸಂಪ್ರದಾಯ, ಆಚಾರ–ವಿಚಾರ ಪಾಲಿಸುವ, ಪೌರೋಹಿತ್ಯ ಮಾಡುವ ಮಧ್ಯಮ ವರ್ಗದ ಕುಟುಂಬವೊಂದು ಮಗ ಓದಿ ಸಾಧನೆ ಮಾಡಿ ಬರಲೆಂದು ವಿದೇಶಕ್ಕೆ ಕಳುಹಿಸುತ್ತದೆ. ವ್ಯಾಸಂಗಕ್ಕೆ ಹೋದ ಮಗ, ಹಿಂದಿರುಗಿ ಬರುವಾಗ ವಿದೇಶಿ ಮಹಿಳೆಯನ್ನು ಸಂಗಾತಿ ಮಾಡಿಕೊಂಡು ‘ಬಿಳೀ ಹೆಂಡ್ತಿ’ ಜತೆಗೆ ಮನೆಗೆ ಬರುತ್ತಾನೆ. ಮುಂದೇನು? ಸೋಮವಾರದಿಂದ ಶುಕ್ರವಾರದವರೆಗೂ ಪ್ರತಿ ದಿನ ಸಂಜೆ 7 ಗಂಟೆಗೆ ಪ್ರೇಕ್ಷಕರೇ ನೋಡಬೇಕು, ಊಹಿಸಬೇಕು!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.