ADVERTISEMENT

ಕೋಡ್ಲು ‘ಆಟ–ಪಾಠ’ದ ಸಮಯ

​ಪ್ರಜಾವಾಣಿ ವಾರ್ತೆ
Published 21 ಮೇ 2015, 19:30 IST
Last Updated 21 ಮೇ 2015, 19:30 IST
ಜೈ ಜಗದೀಶ್
ಜೈ ಜಗದೀಶ್   

ವ್ಯಾಪಾರಿ ಚಿತ್ರಗಳ ನಿರ್ದೇಶನದಿಂದ ಸದ್ಯಕ್ಕೆ ಹಿಂದೆ ಸರಿದಿರುವ ಕೋಡ್ಲು ರಾಮಕೃಷ್ಣ ಅವರು ಈಗ ಮಕ್ಕಳ ಚಿತ್ರವೊಂದನ್ನು ನಿರ್ದೇಶಿಸಿದ್ದಾರೆ. ಅವರ ಹೊಸ ಚಿತ್ರ ‘ಆಟ ಪಾಠ’ ಜೂನ್ 5ರಂದು ರಾಜ್ಯದಾದ್ಯಂತ ತೆರೆಗೆ ಬರಲಿದೆ. ಇದು ಅವರ ನಾಲ್ಕನೇ ಮಕ್ಕಳ ಚಿತ್ರ ಹಾಗೂ ಅವರ ನಿರ್ದೇಶನದ 24ನೇ ಚಿತ್ರ.

ಚಿತ್ರದ ಕಥೆ ಜೆ.ಎಂ. ಪ್ರಹ್ಲಾದ್ ಅವರದು. ‘ಅಪ್ಪನಿಗಾಗಿ ಆಟ... ಅಮ್ಮನಿಗಾಗಿ ಪಾಠ’ ಎನ್ನುವ ಶೀರ್ಷಿಕೆಯ ಅಡಿಟಿಪ್ಪಣಿಯೇ ಹೇಳುವಂತೆ, ಮಗಳು ಅಥ್ಲೆಟಿಕ್ಸ್‌ನಲ್ಲಿ ಸಾಧನೆ ಮಾಡಲಿ ಎನ್ನುವ ತಂದೆ. ಯಾರದೋ ಮಾತು ಕೇಳಿಕೊಂಡು, ತನ್ನ ಮಗಳು ಒಳ್ಳೆಯ ಅಂಕ ಗಳಿಸಲಿಲ್ಲ ಎಂದು ವೇದನೆ ಪಟ್ಟು ಅಥ್ಲೆಟಿಕ್ಸ್‌ನಿಂದ ಬಿಡಿಸಿ ಪುಸ್ತಕದ ಹುಳುವನ್ನಾಗಿಸುವ ತಾಯಿ. ಇವರ ಮಧ್ಯೆ ಸಿಕ್ಕ ಮಗಳು ಕೊನೆಗೆ ಹೇಗೆ ತಂದೆ ತಾಯಿ ಇಬ್ಬರನ್ನೂ ಸಂತೋಷಪಡಿಸುತ್ತಾಳೆ ಎನ್ನುವುದು ಚಿತ್ರದ ಕಥೆ.

‘ಸಾಮಾನ್ಯವಾಗಿ ಮಕ್ಕಳ ಚಿತ್ರವೆಂದರೆ ಸರ್ಕಾರ ನೀಡುವ ಸಬ್ಸಿಡಿಯನ್ನೇ ನಂಬಿಕೊಂಡು ಅಷ್ಟೇ ಬಜೆಟ್‌ನಲ್ಲಿ ನಿರ್ಮಾಣವಾಗುತ್ತವೆ. ಆದರೆ ನಮ್ಮ ಚಿತ್ರ ಹಾಗಿಲ್ಲ. ಅವಶ್ಯವಿರುವ ಅಷ್ಟೂ ಖರ್ಚಿಗೆ ನಿರ್ಮಾಪಕ ವಿಜಯ್‌ಕುಮಾರ್ ಸೈ ಎನ್ನುತ್ತಿದ್ದರು’ ಎಂದರು ನಿರ್ದೇಶಕರು. ಚಿತ್ರವನ್ನು ಪ್ರೇಕ್ಷಕರು ಮೆಚ್ಚುತ್ತಾರೆ ಎಂಬುದು ಅವರ ಅನಿಸಿಕೆ. ತಮ್ಮ 25ನೇ ಚಿತ್ರವನ್ನು ತುಳು ಭಾಷೆಯಲ್ಲಿ ನಿರ್ದೇಶನ ಮಾಡಲಿದ್ದಾರಂತೆ ರಾಮಕೃಷ್ಣ ಅವರು.

ವ್ಯಾಪಾರಿ ಚಿತ್ರಗಳಿಗಿಂತ ಕಲಾತ್ಮಕ, ಮಕ್ಕಳ ಚಿತ್ರಗಳನ್ನೇ ನಿರ್ಮಾಣ ಮಾಡುವಲ್ಲಿ ಹೆಚ್ಚಿನ ಆಸಕ್ತಿ ವಿಜಯ್‌ಕುಮಾರ್ ಅವರಿಗೆ. ಸರ್ಕಾರಿ ಶಾಲೆಗಳಲ್ಲಿ ಪ್ರದರ್ಶನ ಏರ್ಪಡಿಸುವ ಯೋಜನೆಯೂ ಅವರಿಗಿದೆ.

ಒಂಬತ್ತನೇ ತರಗತಿ ಓದುತ್ತಿರುವ ಬೇಬಿ ಲಹರಿ ಯಾವುದೇ ತರಬೇತಿ ಇಲ್ಲದೇ ನೇರವಾಗಿ ಮುಖ್ಯ ಪಾತ್ರದಲ್ಲಿ ಅಭಿನಯಿಸಿದ್ದಾಳೆ. ಆಕೆಯ ತಂದೆ ತಾಯಿಯಾಗಿ ಜೈಜಗದೀಶ್ ಮತ್ತು ಸುಚಿತ್ರಾ ಬಣ್ಣಹಚ್ಚಿದ್ದಾರೆ. ಕ್ರೀಡಾಪಟು ಅರ್ಜುನ್ ದೇವಯ್ಯ ಗೌರವ ಪಾತ್ರದಲ್ಲಿ ಬಂದುಹೋಗಿದ್ದಾರೆ. ರಮೇಶ್ ಭಟ್, ಪದ್ಮಜಾರಾವ್ ಇತರರು ತಾರಾಗಣದಲ್ಲಿದ್ದಾರೆ.

ಚಿತ್ರದಲ್ಲಿ ಒಂದು ಹಾಡಿದ್ದು, ಅದನ್ನು ಗಿರಿಧರ್ ದಿವಾನ್ ಸಂಯೋಜಿಸಿದ್ದಾರೆ. ಚಿತ್ರದಲ್ಲಿರುವ ಸಂದೇಶವನ್ನು ಬಹುವಾಗಿ ಮೆಚ್ಚಿದ್ದಾರೆ ಗಿರಿಧರ್. ರವಿ ಸುವರ್ಣ ಅವರು ಕ್ಯಾಮೆರಾ ನಿರ್ವಹಿಸಿದ್ದಾರೆ. ಶುಕ್ರ ಫಿಲಂಸ್ ಚಿತ್ರವನ್ನು ಹಂಚಿಕೆ ಮಾಡುವ ಹೊಣೆ ಹೊತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.