ADVERTISEMENT

‘ಛಲಗಾರ’ನ ಹಾಡು–ಪಾಡು

​ಪ್ರಜಾವಾಣಿ ವಾರ್ತೆ
Published 13 ಏಪ್ರಿಲ್ 2017, 19:30 IST
Last Updated 13 ಏಪ್ರಿಲ್ 2017, 19:30 IST

ಕಾರ್ಯಕ್ರಮ ಆರಂಭವಾಗುವ ಕೆಲವೇ ಕ್ಷಣಗಳ ಮುನ್ನ ಅತಿಥಿಗಳು ಮತ್ತು ಚಿತ್ರತಂಡದ ಪ್ರಮುಖರು ವೇದಿಕೆಯನ್ನು ಆರಂಭಿಸಿದರು. ವೇದಿಕೆಯ ಮುಂದಿನ ಸಾಲಿನ ಕುರ್ಚಿಯಲ್ಲಿ ಕೂತಿದ್ದ ಆ ಹುಡುಗ ಮಾತ್ರ ಅತ್ತಿತ್ತ ನೋಡುತ್ತಿದ್ದ. ನೋಡ ನೋಡುತ್ತಿದ್ದಂತೆಯೇ ಒಬ್ಬರು ಅವನನ್ನು ಅನಾಮತ್ತು ಎತ್ತಿ ವೇದಿಕೆ ಮೇಲೆ ಏರಿ ಕೂರ್ಚಿಯಲ್ಲಿ ಕುಳ್ಳಿರಿಸಿದರು. ಹುಡುಗ ಅವರತ್ತ ಒಂದು ಕೃತಜ್ಞತೆಯ ನಗು ಚೆಲ್ಲಿದ. ಅವನ ಎರಡೂ ಕಾಲುಗಳು ಬಲಹೀನವಾಗಿರುವುದು ಬಾಹ್ಯನೋಟಕ್ಕೇ ತಿಳಿಯುಂತಿತ್ತು. ಮುಖದಲ್ಲಿನ ನಗು ಮಾತ್ರ ಜಗತ್ತಿಗೇ ಬದುಕಿನ ಪಾಠ ಹೇಳುವಂತಿತ್ತು. ಅದು ಎ.ಆರ್‌. ರವೀಂದ್ರ ನಿರ್ದೇಶನದ ‘ಛಲಗಾರ’ ಸಿನಿಮಾದ ಧ್ವನಿಮುದ್ರಿಕೆ ಬಿಡುಗಡೆ ಸಮಾರಂಭ. ಆ ಹುಡುಗ ಸಿನಿಮಾದಲ್ಲಿ ಮುಖ್ಯಪಾತ್ರವಹಿಸಿರುವ ಮನು.

ಮೊದಲಿಗೆ ಮಾತಿಗೆ ಆರಂಭಿಸಿದ ನಿರ್ಮಾಪಕ ಎಸ್‌.ಆರ್‌. ಸನತ್‌ಕುಮಾರ್‌ ಸಿನಿಮಾದ ಎಲ್ಲ ಶ್ರೇಯವನ್ನೂ ಕಥೆ ಬರೆದ ಕೇಶವಚಂದ್ರ ಮತ್ತು ನಿರ್ದೇಶನ ಮಾಡಿದ ರವೀಂದ್ರ ಅವರಿಗೆ ಸಲ್ಲಿಸಿದರು. ‘ಕಥೆಯ ತಿರುಳನ್ನು ಕೇಳಿಯೇ ನಿರ್ಮಾಣಕ್ಕೆ ಮುಂದಾದೆ. ಅಂಗವಿಕಲ ಮಕ್ಕಳ ತಾಯಿ–ತಂದೆ ಅನುಭವಿಸುವ ಕಷ್ಟದ ಜತೆಗೆ, ಅಂಥ ಮಕ್ಕಳು ಸ್ವಾಭಿಮಾನದ ಬದುಕನ್ನು ಕಟ್ಟಿಕೊಳ್ಳುವುದು ಹೇಗೆ ಎಂಬ ದಾರಿಯನ್ನೂ ಈ ಸಿನಿಮಾದಲ್ಲಿ ತೋರಿಸಿದ್ದೇವೆ’ ಎಂದರು.

‘ಎಲ್ಲ ಅಂಗವಿಕಲರ ಬದುಕಿನಲ್ಲಿಯೂ ನಡೆಯುವ ಕಥೆ ಇದು. ಈ ಚಿತ್ರದಲ್ಲಿ ನಟಿಸಲು ನಿಜವಾದ ಅಂಗವಿಕಲ ಮಗುವನ್ನೇ ಆಯ್ದುಕೊಂಡಿದ್ದೇವೆ. ‘ಸಮರ್ಥನಂ’ ಸಂಸ್ಥೆಯ ಮನುವಿಗೆ ನಟನೆಗೆ ಸಾಕಷ್ಟು ತರಬೇತಿಯನ್ನೂ ನೀಡಿದ್ದೇವೆ. ಅಂಗವಿಕಲರು ಯಾರೊಬ್ಬರ ಮೇಲೂ ಅವಲಂಬಿತರಾಗದೆ ಸ್ವಾವಲಂಬಿಗಳಾಗಿ ಬದುಕಬೇಕು ಎಂಬುದನ್ನು ತಿಳಿಸುವ ಸಿನಿಮಾ ಇದು’ ಎಂದ ನಿರ್ದೇಶಕ ರವೀಂದ್ರ ಈ ಸಿನಿಮಾಕ್ಕೆ ಯಾವ ವಿಭಾಗದಲ್ಲಿಯೂ ರಾಷ್ಟ್ರಪ್ರಶಸ್ತಿ ಬರದಿರುವುದಕ್ಕೆ ಬೇಸರ ವ್ಯಕ್ತಪಡಿಸಿದರು.

ADVERTISEMENT

ಧ್ವನಿಮುದ್ರಿಕೆ ಬಿಡುಗಡೆ ಮಾಡಿದ ಕರ್ನಾಟಕ ಚಲನಚಿತ್ರ ವಾಣಿಜ್ಯಮಂಡಳಿ ಉಪಾಧ್ಯಕ್ಷ ಉಮೇಶ್‌ ಬಣಕಾರ್‌, ‘ಎಲ್ಲ ಅಂಗಗಳು ಸರಿಯಾಗಿದ್ದು ಏನೂ ಸಾಧಿಸದವರೇ ನಿಜವಾದ ಅಂಗವಿಕಲರು. ಅಂಗವೈಕಲ್ಯವಿದ್ದೂ ಬದುಕುವ ಛಲ ಇರುವವರು ಬಲಹೀನರಲ್ಲವೇ ಅಲ್ಲ’ ಎಂದರು.

‘ಅಂಗವಿಕಲರ ಕಲ್ಯಾಣಕ್ಕಾಗಿ ಸರ್ಕಾರ ಕೋಟ್ಯಂತರ ರೂಪಾಯಿ ಖರ್ಚು ಮಾಡುತ್ತದೆ. ಅದರ ಜತೆಗೆ ಇಂಥ ಸಿನಿಮಾಗಳಿಗೆ ವಿಶೇಷ ಕಳಕಳಿ ತೋರಿ ಸರ್ಕಾರವೇ ಖರೀದಿಸಿ ಕರ್ನಾಟಕದಾದ್ಯಂತ ಎಲ್ಲ ಜಿಲ್ಲೆಗಳಲ್ಲಿಯೂ ಪ್ರದರ್ಶಿಸುವ ಕೆಲಸ ಮಾಡಬೇಕು. ಸರ್ಕಾರದ ಗಮನ ಸೆಳೆಯುವಲ್ಲಿ ವಾಣಿಜ್ಯ ಮಂಡಳಿ ಚಿತ್ರತಂಡದ ಜತೆಗೆ ನಿಲ್ಲುತ್ತದೆ’ ಎಂಬ ಭರವಸೆಯನ್ನೂ ನೀಡಿದರು.

‘ಸಮರ್ಥನಂ’ ಸಂಸ್ಥೆಯ ರಾಮ್‌ಪ್ರಸಾದ್‌ ಮಾತನಾಡಿ, ‘ಇಂಥ ಪ್ರಯತ್ನಗಳು ಇನ್ನೂ ಹಲವು ನಿರ್ಮಾಪಕ, ನಿರ್ದೇಶಕರಿಗೆ ಸ್ಫೂರ್ತಿಯಾಗಲಿ’ ಎಂದು ಹಾರೈಸಿದರು.

ಸಿನಿಮಾದಲ್ಲಿ ಮುಖ್ಯಪಾತ್ರ ವಹಿಸಿರುವ ಮಂಜುನಾಥ ಹೆಗಡೆ, ‘ಲಾಭ ನಷ್ಟದ ಲೆಕ್ಕಾಚಾರ ಇಲ್ಲದೇ ಸಮಾಜಕ್ಕೆ ಸಂದೇಶ ನೀಡಬೇಕು ಎಂಬ ಉದ್ದೇಶದಿಂದ ಮಾಡಿದ ಸಿನಿಮಾ ಇದು. ಪೋಷಕರು ಮತ್ತು ಮಕ್ಕಳು ಇಬ್ಬರಿಗೂ ಈ ಸಿನಿಮಾದಲ್ಲಿ ಪಾಠವಿದೆ’ ಎಂದರು.

ಚಿತ್ರಕ್ಕೆ ಕಥೆ ಬರೆದಿರುವ ಕೇಶವಚಂದ್ರ, ‘ಪ್ರೀತಿ ಅಗತ್ಯಕ್ಕಿಂತ ಹೆಚ್ಚಾದರೆ ಏನಾಗುತ್ತದೆ ಎಂಬುದನ್ನು ಈ ಸಿನಿಮಾದಲ್ಲಿ ತೋರಿಸಲಾಗಿದೆ. ಕೆಲವು ಸಲ ದ್ವೇಷವೂ ನಮ್ಮನ್ನು ಎಚ್ಚರಿಸುತ್ತದೆ’ ಎಂದರು.  ಈ ಚಿತ್ರಕ್ಕೆ ರವಿಂದ್ರ ಜೈನ್‌ ಸಂಗೀತ ಸಂಯೋಜನೆ ಮಾಡಿದ್ದಾರೆ. ಬೇಬಿ ಪುಣ್ಯಾ ಕೂಡ ಒಂದು ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.