ADVERTISEMENT

‘ಜವ’ನ ಚಿತ್ರವಿಚಿತ್ರ ಕಲರವ

​ಪ್ರಜಾವಾಣಿ ವಾರ್ತೆ
Published 20 ಅಕ್ಟೋಬರ್ 2017, 19:30 IST
Last Updated 20 ಅಕ್ಟೋಬರ್ 2017, 19:30 IST
‘ಜವ’ನ ಚಿತ್ರವಿಚಿತ್ರ ಕಲರವ
‘ಜವ’ನ ಚಿತ್ರವಿಚಿತ್ರ ಕಲರವ   

‘ಜಾವ ಅಲ್ಲ ಜವ. ತರುತ್ತಿದ್ದಾನೆ ಕಲರವ...’ ಹೀಗೆ ಮೈ ಕೈ ಕುಣಿಸುತ್ತ ನಿರ್ದೇಶಕ ಅಭಯಚಂದ್ರ ವೇದಿಕೆ ಮೇಲೆ ಹಾಡುತ್ತಿದ್ದರೆ ಇದು ಕನ್ನಡವೋ ಇಂಗ್ಲಿಷೋ ಅಥವಾ ಇನ್ಯಾವುದೋ ವಿದೇಶಿ ಭಾಷೆಯೊ ಗೊತ್ತಾಗದ ಗೊಂದಲದಲ್ಲಿ ಎಲ್ಲರೂ ಕಣ್ಣು ಬಾಯಿ ಬಿಟ್ಟುಕೊಂಡು ನೋಡುತ್ತಿದ್ದರು. ಆ ಹಾಡನ್ನು ಬರೆದಿದ್ದು ಹಾಡಿದ್ದೆಲ್ಲ ಅಭಯಚಂದ್ರ ಅವರೇ. ‘ಜವ’ ಸಿನಿಮಾ ಸಂಗೀತದಲ್ಲಿ ಹೀಗೂ ಭಾಗಿಯಾದ ಖುಷಿ ಅವರಲ್ಲಿತ್ತು.

ಆ ಸಂಜೆಯ ಕಾರ್ಯಕ್ರಮದಲ್ಲಿ ‘ಜವ’ ಸಿನಿಮಾದ ಸಿ.ಡಿ. ಬಿಡುಗಡೆಯ ಜತೆ ವಿನಯಚಂದ್ರ, ವಚನ ಶೆಟ್ಟಿ, ವೀರೇಂದ್ರ ಅವರಂಥ ಕೆಲವು ಸಮಾನ ಮನಸ್ಕರು ಸೇರಿ ಮಾಡಿಕೊಂಡಿರುವ ಯುಎಂಜಿ (ಅರ್ಬನ್‌ ಮೀಡಿಯಾ ಗ್ಯಾರೇಜ್‌) ಕಂಪೆನಿಯ ಉದ್ಘಾಟನೆಯೂ ಇತ್ತು. ಇದಕ್ಕಾಗಿಯೇ ಶಿವರಾಜಕುಮಾರ್‌ ಸಹ ಬಂದಿದ್ದರು.

ಯುಎಂಜಿ ಸಂಸ್ಥೆಯ ಮೊದಲ ಸಿನಿಮಾ ‘ಜವ’. ತಮ್ಮ ಸಹೋದರ ಅಭಯಚಂದ್ರ ಅವರ ನಿರ್ದೇಶನದ ಈ ಚಿತ್ರಕ್ಕೆ ವಿನಯಚಂದ್ರ ಸಂಗೀತ ಸಂಯೋಜನೆ ಮಾಡಿದ್ದಾರೆ.

ADVERTISEMENT

‘ಜವ ಶೀರ್ಷಿಕೆಯೇ ವಿಭಿನ್ನವಾಗಿದೆ. ಈ ಕಂಪೆನಿಯಿಂದ ತುಂಬ ಒಳ್ಳೆಯ ಸಿನಿಮಾಗಳು ಬರಲಿ’ ಎಂದು ಹಾರೈಸಿದರು ಶಿವರಾಜಕುಮಾರ್‌.

ಸಾಯಿಕುಮಾರ್ ಈ ಚಿತ್ರದಲ್ಲಿ ಮುಖ್ಯಪಾತ್ರದಲ್ಲಿ ನಟಿಸುತ್ತಿದ್ದಾರೆ.  ‘ಹೊಸ ಪೀಳಿಗೆಯವರು ಹೊಸದಾಗಿಯೇ ಯೋಚಿಸುತ್ತಿದ್ದಾರೆ. ವಿನಯ ಮತ್ತು ಅಭಯ ಇಬ್ಬರೂ ನನಗೆ ಲವ ಕುಶರಂತೆ ಕಾಣುತ್ತಾರೆ. ಇದು ನನಗೂ ಹೊಸ ರೀತಿಯ ಸಿನಿಮಾ. ಆದ್ದರಿಂದ ಅದನ್ನು ನೋಡಲು ಕಾಯುತ್ತಿದ್ದೇನೆ’ ಎಂದರು ಹಿರಿಯ ನಟ ಸಾಯಿಕುಮಾರ್‌.  ವಿ. ಮನೋಹರ್‌ ಈ ಚಿತ್ರಕ್ಕೆ ಎರಡು ಹಾಡುಗಳನ್ನು ಬರೆದಿದ್ದಾರೆ. ‘ಇದೊಂದು ಮಿಸ್ಟರಿ ಥ್ರಿಲ್ಲರ್‌. ಸದ್ಯವೇ ಟ್ರೈಲರ್‌, ಟೀಸರ್‌ ಬಿಡುಗಡೆ ಮಾಡುತ್ತೇವೆ’ ಎಂದು ಹೇಳಿದರು ನಿರ್ದೇಶಕರು.

ಬೆಂಗಳೂರು, ಚಿಕ್ಕಮಗಳೂರು ಸುತ್ತಮುತ್ತಲಿನ ಪ್ರದೇಶಗಳಲ್ಲಿ ‘ಜವ’ನನ್ನು ಚಿತ್ರೀಕರಿಸಲಾಗಿದೆ.

ಇದೇ ಸಂದರ್ಭದಲ್ಲಿ ಯುಎಂಜಿ ಕಂಪೆನಿಯಿಂದ ಹೊರಬರುತ್ತಿರುವ ಹೊಸ ಸಿನಿಮಾ ‘ಬ್ಲಾಕ್‌ ಸಿ ನಂ.135' ಎಂಬ ವಿಭಿನ್ನ ಹೆಸರಿನ ಚಿತ್ರದಲ್ಲಿ ಶಿವರಾಜಕುಮಾರ್‌ ನಾಯಕನಾಗಿ ನಟಿಸುತ್ತಿರುವ ಸುದ್ದಿಯನ್ನೂ ಬಹಿರಂಗಪಡಿಸಲಾಯಿತು.

‘ಬ್ಲಾಕ್‌ ಸಿ...’ ಚಿತ್ರದ ಸ್ಕ್ರಿಪ್ಟ್‌ ತುಂಬ  ಚೆನ್ನಾಗಿದೆ. ಸಿನಿಮಾದ ಹೆಸರು ಕೂಡ ಅಷ್ಟೇ ವಿಭಿನ್ನವಾಗಿದೆ. ಶೀರ್ಷಿಕೆ ನೋಡಿಯೇ ಜನರು ಸಿನಿಮಾ ನೋಡಲಿಕ್ಕೆ ಬರುತ್ತಾರೆ’ ಎಂಬ ವಿಶ್ವಾಸ ವ್ಯಕ್ತಪಡಿಸಿದರು ಎಂದರು ಶಿವಣ್ಣ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.