ADVERTISEMENT

ಟೀಸರ್‌ನಲ್ಲಿ ವಿರಾಟ ರೂಪ...

​ಪ್ರಜಾವಾಣಿ ವಾರ್ತೆ
Published 29 ಡಿಸೆಂಬರ್ 2015, 19:30 IST
Last Updated 29 ಡಿಸೆಂಬರ್ 2015, 19:30 IST

‘ನಾನು ವಿರಾಟ್ ಬಗ್ಗೆ ಹೋ... ಹಾ ಎಂದು ಹೇಳುವುದಿಲ್ಲ.  ಮೂರು ವರುಷದ ಹಿಂದಿನ ಕಥೆ. ಆದರೆ ಆ ಸಮಸ್ಯೆ ಇಂದಿಗೂ ಇದೆ. ಅದನ್ನು ಚಿತ್ರದಲ್ಲಿ ತೋರಿಸುತ್ತೇವೆ. ಇಶಾ ಚಾವ್ಲಾ, ವಿಧಿಶಾ ಶ್ರೀವಾತ್ಸವ್, ಚೈತ್ರಾ ಚಂದ್ರನಾಥ್ ಚಿತ್ರದ ನಾಯಕಿಯರು. ಮೂವರು ಕುರುಡರು ಆನೆಯನ್ನು ಯಾವ ಯಾವ ರೀತಿ ಕಲ್ಪಿಸಿಕೊಳ್ಳುವರೋ ಆ ರೀತಿ ನಾಯಕಿಯರು ನಾಯಕನನ್ನು ಕಲ್ಪಿಸಿಕೊಳ್ಳುವರು. ಇಲ್ಲಿ ಒಂದು ಒಳ್ಳೆಯ ಪ್ರೀತಿಯ ಕಥೆ ಇದೆ’ ಎಂದರು ದರ್ಶನ್.

ನಾಲ್ಕು ವರುಷಗಳ ಹಿಂದೆ ಚಾಲನೆ ಸಿಕ್ಕಿದ್ದ ‘ವಿರಾಟ್‌’ ಚಿತ್ರದ ಟೀಸರ್ ಬಿಡುಗಡೆ ಸಮಾರಂಭ ಅದು. ಯಥಾ ಪ್ರಕಾರ ದರ್ಶನ್‌ಗೆ ಅಭಿಮಾನಿಗಳ ಶಿಳ್ಳೆ ಸಿಕ್ಕುವಂತೆ ಟೀಸರ್ ಮಾಡಿದ್ದಾರೆ ನಿರ್ದೇಶಕ ವಾಸು. ಕೆಲವು ದಿನ ಚಿತ್ರೀಕರಣ ನಡೆಸಿದ ‘ವಿರಾಟ್‌’ ನಂತರ ಸ್ಥಗಿತವಾಗಿತ್ತು. ಸ್ಥಗಿತವಾಗಿದ್ದ ಚಿತ್ರಕ್ಕೆ ಚಾಲನೆ ಸಿಕ್ಕಿದ್ದು ನಿರ್ಮಾಪಕ ಸಿ. ಕಲ್ಯಾಣ್ ಪ್ರಯತ್ನದಿಂದ. ಅವರು ತೆಲುಗು ಚಿತ್ರ ನಿರ್ಮಾಪಕರು.

ಒಂದು ಹಾಡಿನ ಚಿತ್ರೀಕರಣ ಮುಗಿದರೆ ಶೂಟಿಂಗ್ ಮುಕ್ತಾಯ. ಈಗ ಟೀಸರ್ ಬಿಡುಗಡೆ ಮಾಡಿದೆ ಚಿತ್ರತಂಡ. ಜನವರಿ ಅಂತ್ಯದೊಳಗೆ ಚಿತ್ರವನ್ನು ತೆರೆಕಾಣಿಸಬೇಕು ಎಂದುಕೊಂಡಿದ್ದಾರಂತೆ ನಿರ್ದೇಶಕ ಎಚ್. ವಾಸು. ತೆಲುಗಿನಲ್ಲಿ 60ಕ್ಕೂ ಹೆಚ್ಚು ಚಿತ್ರ ನಿರ್ಮಿಸಿರುವ ಸಿ. ಕಲ್ಯಾಣ್, ‘ವಿರಾಟ್’ ಚಿತ್ರಕ್ಕಾಗಿ ದರ್ಶನ್ ಬಳಿ ಮಾತುಕಥೆ ನಡೆಸಿದ ಐದೇ ನಿಮಿಷಕ್ಕೆ ಅವರಿಂದ ಗ್ರೀನ್ ಸಿಗ್ನಲ್ ಸಿಕ್ಕಿತಂತೆ. ಕರ್ನಾಟಕದ ವಿದ್ಯುತ್ ಸಮಸ್ಯೆ ಕುರಿತು ಈ ಚಿತ್ರದಲ್ಲಿ ಹೇಳಲಾಗಿದೆಯಂತೆ. ಅದಕ್ಕೆ ಸೂಕ್ತ ಪರಿಹಾರ ‘ವಿರಾಟ್’ನಲ್ಲಿ ಕಾಣಲಿದೆ ಎಂಬುದು ಚಿತ್ರತಂಡದ ಅಭಿಪ್ರಾಯ.

‘ಚಿತ್ರದಲ್ಲಿ  ಒಳ್ಳೆಯ ಪ್ರೇಮ ಕಥೆ ಜತೆಗೆ ಸಮಸ್ಯೆಗೆ ಪರಿಹಾರ ಸೂಚಿಸಲಾಗಿದೆ. ಇದು ಎಲ್ಲ ವರ್ಗದವರು ನೋಡಬೇಕಾದ ಚಿತ್ರ. ಅಭಿಮಾನಿಗಳಿಗೆ ಏನು ಬೇಕೋ ಅದು ಇದೆ’ ಎನ್ನುತ್ತಾರೆ ದರ್ಶನ್. 4 ಫೈಟ್‌ಗಳಿವೆಯಂತೆ. ಮೂರು ಹಾಡುಗಳನ್ನು ವಿದೇಶದಲ್ಲಿ ಚಿತ್ರೀಕರಿಸಲಾಗಿದೆ.  ಸಾಧು ಕೋಕಿಲ ಮತ್ತು ಬುಲೆಟ್ ಪ್ರಕಾಶ್ ಹಾಸ್ಯಕ್ಕೆ ಜೋಡಿ. ಎಂ.ಎಸ್. ರಮೇಶ್  ಸಂಭಾಷಣೆ, ಕವಿರಾಜ್ ಸಾಹಿತ್ಯ, ವಿ. ಹರಿಕೃಷ್ಣ ಸಂಗೀತ ಚಿತ್ರಕ್ಕಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT