ADVERTISEMENT

‘ತಾರಕಾಸುರ’ ಬರುತ್ತಿದ್ದಾನೆ...

​ಪ್ರಜಾವಾಣಿ ವಾರ್ತೆ
Published 18 ಮೇ 2017, 19:30 IST
Last Updated 18 ಮೇ 2017, 19:30 IST
‘ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ’ ಕಾರ್ಯದರ್ಶಿ ನರಸಿಂಹಲು ಅವರು ಬಹುದಿನಗಳ ನಂತರ ಮತ್ತೆ ಸಿನಿಮಾ ನಿರ್ಮಾಣದ ಸಾಹಸಕ್ಕೆ ಇಳಿಯುತ್ತಿದ್ದಾರೆ.  ಹೀಗೆ ಈಗ ಮತ್ತೆ ಸಿನಿ ಅಖಾಡಕ್ಕೆ ಇಳಿಯಲು ಕಾರಣ ಪುತ್ರವ್ಯಾಮೋಹ.
 
ತಮ್ಮ ನಿರ್ಮಾಣದ ‘ತಾರಕಾಸುರ’ ಸಿನಿಮಾ ಮೂಲಕ ಮಗನನ್ನು ಚಿತ್ರರಂಗಕ್ಕೆ ಪರಿಚಯಿಸಲು ಅವರು ಮುಂದಾಗಿದ್ದಾರೆ. ವೈಭವ್‌ ‘ತಾರಕಾಸುರ’ನಾಗಿ ಗಾಂಧಿನಗರಕ್ಕೆ ಅಡಿಯಿಡುತ್ತಿದ್ದಾರೆ. 
 
‘ಇದು ನನ್ನ ಮೊದಲ ಚಿತ್ರ. ತಂದೆಯೇ ನಿರ್ಮಿಸುತ್ತಿರುವುದು ಖುಷಿಯ ಸಂಗತಿ. ಹಾಗೆಂದು ಮಗನನ್ನು ಹೀರೊ ಮಾಡಬೇಕು ಎಂಬ ಒಂದೇ ಕಾರಣಕ್ಕೆ ಈ ಚಿತ್ರಕ್ಕೆ ಅವರು ಹಣ ಹೂಡಿದ್ದಲ್ಲ. ಈ ಸಿನಿಮಾದ ಕಥೆ ಅಷ್ಟು ಚೆನ್ನಾಗಿದೆ. ನಿರ್ದೇಶಕರ ಪ್ರತಿಭೆಯ ಮೇಲೂ ನಂಬಿಕೆ ಇದೆ.
 
ಹಾಗೆಯೇ ಆ ಕಥೆಗೆ ನಾನು ಸರಿಯಾಗಿ ಹೊಂದುತ್ತೇನೆ ಎಂದು ನಿರ್ದೇಶಕರಿಗೆ ಅನಿಸಿದ್ದರಿಂದಲೇ ನನ್ನನ್ನು ನಾಯಕನನ್ನಾಗಿ ಮಾಡಿಕೊಳ್ಳಲಾಗಿದೆ’ ಎಂದರು ವೈಭವ್‌.
 
ಇತ್ತೀಚೆಗೆ ಬೆಂಗಳೂರಿನ ಉತ್ತರಹಳ್ಳಿಯಲ್ಲಿನ ವೈಭವಿ ಚಿತ್ರಮಂದಿರದಲ್ಲಿ ತಾರಕಾಸುರ ಚಿತ್ರದ ಟೀಸರ್‌ ಬಿಡುಗಡೆ ಮಾಡಲಾಯಿತು. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಸಾ.ರಾ. ಗೋವಿಂದು, ನಟ ರಕ್ಷಿತ್‌ ಶೆಟ್ಟಿ ಹಾಜರಿದ್ದರು. 
 
ಈ ಹಿಂದೆ ‘ರಥಾವರ’ ಸಿನಿಮಾ ನಿರ್ದೇಶಿಸಿದ್ದ ಚಂದ್ರಶೇಖರ್‌ ಬಂಡಿಯಪ್ಪ ಅವರೇ ‘ತಾರಕಾಸುರ’ಕ್ಕೂ ಆ್ಯಕ್ಷನ್‌–ಕಟ್‌ ಹೇಳುತ್ತಿದ್ದಾರೆ. ಕಥೆಯೂ ಅವರದೇ. ಕೊನೆಯ ಅಕ್ಷರ ‘ರ’ ಬಂದರೆ ಸಿನಿಮಾ ಗೆಲ್ಲುತ್ತದೆ ಎಂಬುದು ಅವರ ನಂಬಿಕೆ.
 
‘ರಥಾವರ’ಕ್ಕೆ ಜನರು ತೋರಿಸಿದ ಪ್ರೀತಿಯನ್ನು ಈ ಸಿನಿಮಾಗೂ ತೋರುತ್ತಾರೆ ಎಂಬ ವಿಶ್ವಾಸ ಅವರಿಗಿದೆ. ಹಾಗೆಯೇ ವೈಭವ್‌ ಅವರ ನಟನಾಬದುಕಿಗೂ ಈ ಚಿತ್ರ ಭದ್ರ ಬುನಾದಿ ಹಾಕುತ್ತದೆ ಎಂದು ಅವರು ಖಚಿತವಾಗಿಯೇ ಹೇಳಿದರು. 
 
ಧರ್ಮ ವಿಶ್‌ ಅವರು ‘ತಾರಕಾಸುರ’ನ ಕುಣಿತಕ್ಕೆ ಸಂಗೀತವನ್ನು ಸಂಯೋಜಿಸುವ ಹೊಣೆ ಹೊತ್ತಿದ್ದಾರೆ.  ಕುಮಾರ್ ಗೌಡ ಛಾಯಾಗ್ರಹಣವೂ ಇರಲಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.