ADVERTISEMENT

ತೆರೆಗೆ ಬಂದಳು ‘...ಗೆಳತಿ’

​ಪ್ರಜಾವಾಣಿ ವಾರ್ತೆ
Published 29 ಜನವರಿ 2015, 19:30 IST
Last Updated 29 ಜನವರಿ 2015, 19:30 IST

ಸಿನಿಮಾ ತೆರೆ ಕಾಣಿಸುವ ಖುಷಿಯಲ್ಲಿದ್ದಾಗ ಯಾವುದೇ ಚಿತ್ರತಂಡ ಹೆಚ್ಚು ಮಾತನಾಡಿ ಪ್ರಚಾರ ಗಿಟ್ಟಿಸುತ್ತದೆ. ಇಲ್ಲವೆ ವಿವಾದಗಳನ್ನು ಸೃಷ್ಟಿಸಲು ಪ್ರಯತ್ನಿಸುತ್ತದೆ. ನಾಯಕ–ನಟ–ನಿರ್ದೇಶಕರು ಬಾಯಿತುಂಬಾ ‘ಅದ್ಭುತ’ದ ಮಾತುಗಳನ್ನು ಸಾಕಷ್ಟು ಆಡುತ್ತಾರೆ. ಆದರೆ ಅದೇಕೋ ‘ಪ್ರಾಣ ಕೊಡುವೆ ಗೆಳತಿ’ ಚಿತ್ರತಂಡ ಮಾತ್ರ ಈ ಗಿಮಿಕ್‌ಗಳಿಂದ ದೂರ ಉಳಿದಿದೆ.

‘ಪ್ರಾಣ ಕೊಡುವೆ...’ ಇಂದು (ಜ.30) ತೆರೆಗೆ ಬರುತ್ತಿದೆ. ಇದಕ್ಕೂ ಮುನ್ನ ಚಿತ್ರ ಬಿಡುಗಡೆಗೆ ಸಂಬಂಧಿಸಿದ ಸುದ್ದಿಗೋಷ್ಠಿಯಲ್ಲಿ ಮನೆ ಮಾಡಿದ್ದು ‘ಸಹಕಾರ’ದ ಪರ್ವ. ‘ತಮಗೆ ಎಲ್ಲರೂ ಸಹಕಾರ ನೀಡಿ’ ಎಂದು ಕೋರಿದ ನಾಯಕ, ನಿರ್ದೇಶಕ, ನಟ ಚಿತ್ರೀಕರಣ ವಿವರಗಳನ್ನು ಮಾತ್ರ ಸಂಕ್ತಿಪ್ತವಾಗಿ ಬಿಚ್ಚಿಟ್ಟರು. ಜನರು ಸ್ವೀಕರಿಸುತ್ತಾರೆ ಎನ್ನುವ ವಿಶ್ವಾಸ ಅವರ ಮೊಗದಲ್ಲಿತ್ತು. ವಿಶೇಷ ಎಂದರೆ ನಾಯಕ, ನಾಯಕಿ ಮತ್ತು ನಿರ್ದೇಶಕರಿಗೆ ಇದು ಮೊದಲ ಚಿತ್ರ. ಚೊಚ್ಚಿಲ ಪ್ರಸವದ ಸಂತಸ. ತುಸು ಹೆಚ್ಚು ಎನ್ನುವಂತೆ ಮಾತನಾಡಿದ್ದು ಸಂಗೀತ ನಿರ್ದೇಶಕ ಎ.ಟಿ. ರವೀಶ್. 

ಮೊದಲ ಚಿತ್ರ ತೆರೆಗೆ ಬರುತ್ತಿರುವ ಸಂಭ್ರಮದಲ್ಲಿ ನಾಯಕ ಕಿರಣ್ ಎಲ್ಲರ ಸಹಕಾರ ಕೋರಿದರು. ‘ಸಿನಿಮಾ ಚೆನ್ನಾಗಿ ಮೂಡಿದೆ’ ಎನ್ನುವ ಕಿರಣ್‌ ಮಾತಿಗೆ ನಾಯಕಿ ರಕ್ಷಾ ಕೂಡ ದನಿಗೂಡಿಸಿದರು. ಈ ಇಬ್ಬರೂ ಮಂಗಳೂರು ಮೂಲದವರು. ಕುಂದಾಪುರ, ಮಡಿಕೇರಿ ಮತ್ತು ಬೆಂಗಳೂರಿನಲ್ಲಿ ಚಿತ್ರೀಕರಣ ನಡೆಸಲಾಗಿದ್ದು 20 ಚಿತ್ರಮಂದಿರಗಳಲ್ಲಿ ‘ಪ್ರಾಣ ಕೊಡುವೆ ಗೆಳತಿ’ ತೆರೆಗೆ ಬರಲಿದೆ.

ಹದಿನೈದು ವರ್ಷಗಳ ಸಿನಿಮಾ ಅನುಭವವನ್ನು ಬೆನ್ನಿಗಿಟ್ಟುಕೊಂಡು ಯತೀಶ್ ಮೊದಲ ಬಾರಿ ಸ್ವತಂತ್ರವಾಗಿ ಆಕ್ಷನ್–ಕಟ್ ಹೇಳಿದ್ದಾರೆ. ಕಥೆ, ಚಿತ್ರಕಥೆ, ಸಂಭಾಷಣೆ, ಸಾಹಿತ್ಯವೂ ಅವರದ್ದೇ. ‘ಚಿತ್ರದಲ್ಲಿ ಐದು ಹಾಡುಗಳಿವೆ. ಮೆಲೋಡಿ, ಐಟಂ, ಟೈಟಲ್ ಸಾಂಗ್‌ ಇದ್ದು ಕನ್ನಡಿಗರ ಬಗ್ಗೆಯೇ ಒಂದು ಹಾಡು ಇರುವುದು ವಿಶೇಷ’ ಎಂದರು ಎ.ಟಿ. ರವೀಶ್. ಅಚ್ಚು ಸುರೇಶ್ ಛಾಯಾಗ್ರಹಣ ಚಿತ್ರಕ್ಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.