ADVERTISEMENT

ತೆರೆಯ ಮೇಲೆ ‘ಹಾಲು ತುಪ್ಪ’!

​ಪ್ರಜಾವಾಣಿ ವಾರ್ತೆ
Published 2 ನವೆಂಬರ್ 2017, 19:30 IST
Last Updated 2 ನವೆಂಬರ್ 2017, 19:30 IST
ವಿಂದ್ಯಾ
ವಿಂದ್ಯಾ   

‘ಹಾಲು ದೇವರ ಸೃಷ್ಟಿ. ತುಪ್ಪವನ್ನು ಸೃಷ್ಟಿ ಮಾಡಿದ್ದು ಮನುಷ್ಯ. ಬದುಕಲು ಹಾಲು ಮತ್ತು ಜೇನು ಎರಡೂ ಬೇಕು. ಇದನ್ನೇ ನಮ್ಮ ಸಿನಿಮಾದಲ್ಲಿ ಹೇಳಿದ್ದೇವೆ’ ಎಂದರು ‘ಹಾಲು ತುಪ್ಪ’ ಸಿನಿಮಾದ ಸಂಗೀತ ನಿರ್ದೇಶಕ ಇಂದ್ರಸೇನ. ಈ ಚಿತ್ರದ ಶೀರ್ಷಿಕೆಗೆ ಅಂಟಿದ ದ್ವಂದ್ವಾರ್ಥದ ಕೊಳೆಯನ್ನು ದೈವತ್ವ ಬಳಸಿ ತೊಳೆಯುವ ಪ್ರಯತ್ನವೂ ಅವರ ಮಾತಿನಲ್ಲಿತ್ತು.

ಹಳ್ಳಿ ಸೊಗಡಿನ ಈ ಚಿತ್ರಕ್ಕೆ ಸಂಗೀತವನ್ನು ದೇಸಿ ಶೈಲಿಯಲ್ಲಿಯೇ ಅವರು ಸಂಯೋಜಿಸಿದ್ದಾರಂತೆ. ‘ತಿಥಿ’ ಸಿನಿಮಾ ಖ್ಯಾತಿಯ ಗಡ್ಡಪ್ಪ, ಸೆಂಚುರಿ ಗೌಡ ಈ ಸಿನಿಮಾದಲ್ಲಿಯೂ ನಟಿಸಿದ್ದಾರೆ. ಆದರೆ, ಈ ಚಿತ್ರದ ಟ್ಯಾಗ್‌ಲೈನ್‌ನಲ್ಲಿಯೇ ‘ಇದು ತಿಥಿ ಅಲ್ಲ’ ಎಂದು ತಂಡ ಹೇಳಿಕೊಂಡಿದೆ.

ಈ ವಾರ ಚಿತ್ರ ಬಿಡುಗಡೆ ಮಾಡಲು ತಂಡ ಸಿದ್ಧತೆ ನಡೆಸಿಕೊಂಡಿದೆ. ವಿತರಣೆಯ ಜವಾಬ್ದಾರಿ ಹೊತ್ತ ರಾಘವೇಂದ್ರ ಅವರಿಗೆ ಈ ಕೆಲಸ ಹೊಸತು. ಆದರೆ ಅವರ ಮೇಲೆ ವಿಶ್ವಾಸವಿರಿಸಿ ನಿರ್ಮಾಪಕ ದೊಡ್ಮನೆ ವೆಂಕಟೇಶ್‌ ತಮ್ಮ ಸಿನಿಮಾವನ್ನು ರಾಘವೇಂದ್ರ ಅವರ ಹೆಗಲಿಗೆ ಏರಿಸಿದ್ದಾರೆ. ಇದು ರಿಸ್ಕ್‌ ಅಲ್ಲವೇ ಎಂಬ ಪ್ರಶ್ನೆಗೆ ಅವರು, ‘ಹೊಸಬರಿಗೆ ಅವಕಾಶ ನೀಡಿದರೆ ತಾನೆ ಅವರ ಪ್ರತಿಭೆ ತಿಳಿಯುವುದು? ಹಳಬರನ್ನು ಸಂಪರ್ಕಿಸಿದಾಗ ಅವರು ಸ್ಪಂದಿಸಲಿಲ್ಲ. ಅದಕ್ಕೆಂತೇ ರಾಘವೇಂದ್ರ ಅವರನ್ನು ಭೇಟಿ ಮಾಡಿ ವಿತರಣೆ ಜವಾಬ್ದಾರಿ ನೀಡಿದ್ದೇನೆ’ ಎಂದರು ವೆಂಕಟೇಶ್‌.

ADVERTISEMENT


ಪವನ್, ನಾಯಕ

ನಾಯಕ ಪವನ್‌ ಅವರ ಅಜ್ಜನಾಗಿ ಗಡ್ಡಪ್ಪ ನಟಿಸಲಿದ್ದಾರೆ. ವೃತ್ತಿಯಲ್ಲಿ ರೂಪದರ್ಶಿಯಾಗಿರುವ ವಿಂದ್ಯಾಗೆ ಈ ಚಿತ್ರದಲ್ಲಿ ಹಳ್ಳಿ ಹುಡುಗಿಯಾಗಿ ನಟಿಸಿರುವುದು ಖುಷಿ ನೀಡಿದೆಯಂತೆ.

‘ವಿಡಂಬನೆ ಮತ್ತು ಒಳ್ಳೆಯ ಸಂದೇಶ ಎರಡೂ ಇರುವಂತೆ ಸಂಭಾಷಣೆ ಬರೆದಿದ್ದೇನೆ’ ಎಂದರು ಸಾಯಿರಾಂ. ‘ಐಟಂ ಹಾಡು ಇದೆ. ಆದರೆ ಅದನ್ನು ತುರುಕಿಲ್ಲ. ಸರಕಿಗೆ ಬೇಕಾಗಿರುವುದರಿಂದ ಸೇರಿಸಲಾಗಿದೆ’ ಎಂಬ ಸಮಜಾಯಿಷಿ ಅವರದು.

ನಿರ್ದೇಶಕ ಶಶಾಂಕ್‌ ಹೆಚ್ಚು ಮಾತನಾಡಲಿಲ್ಲ. ಸಿನಿಮಾ ನೋಡಿ ಜನರು ಆಡುವ ಮಾತುಗಳನ್ನು ಕೇಳಿಸಿಕೊಳ್ಳಲು ಅವರು ಕಾತರರಾಗಿರುವಂತೆ ತೋರುತ್ತಿತ್ತು.


ಶಶಾಂಕ್, ನಿರ್ದೇಶಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.