ADVERTISEMENT

ನನ್ನ ಪ್ರೀತಿಯ ಅಮ್ಮ...

​ಪ್ರಜಾವಾಣಿ ವಾರ್ತೆ
Published 10 ಸೆಪ್ಟೆಂಬರ್ 2017, 9:47 IST
Last Updated 10 ಸೆಪ್ಟೆಂಬರ್ 2017, 9:47 IST
ನನ್ನ ಪ್ರೀತಿಯ ಅಮ್ಮ...
ನನ್ನ ಪ್ರೀತಿಯ ಅಮ್ಮ...   

ಅಮೀರ್‌ಖಾನ್ ಮತ್ತು ಕಿರಣ್‌ ರಾವ್ ನಿರ್ಮಾಣದ ‘ಸೀಕ್ರೆಟ್ ಸೂಪರ್‌ ಸ್ಟಾರ್’ ಸಿನಿಮಾದ ‘ಮೇರಿ ಪ್ಯಾರಿ ಅಮ್ಮಿ’ ಹಾಡು ಯುಟೂಬ್‌ನಲ್ಲಿ ಬಿಡುಗಡೆಯಾಗಿದ್ದು 22 ಲಕ್ಷ ಲೈಕ್ ಪಡೆದುಕೊಂಡಿದೆ. ‘ದಂಗಲ್’ ಸಿನಿಮಾದ ಮೂಲಕ ಜನಪ್ರಿಯಗೊಂಡ ಝೈರಾ ವಾಸಿಂ, ‘ಸೀಕ್ರೆಟ್ ಸೂಪರ್‌ ಸ್ಟಾರ್’ ಸಿನಿಮಾದಲ್ಲಿ ರಾಕ್ ಸ್ಟಾರ್ ಆಗುವ ಕನಸು ಹೊತ್ತ ಹುಡುಗಿಯಾಗಿ ಕಾಣಿಸಿಕೊಂಡಿದ್ದಾರೆ.

‘ಮೇರಿ ಪ್ಯಾರಿ ಅಮ್ಮಿ..’ ಎಂದು ಮಾಧುರ್ಯಪೂರ್ಣವಾಗಿ ಹಾಡಿರುವುದು ಮೇಘನಾ ಮಿಶ್ರಾ. ಅವರ ಕಂಠಸಿರಿಗೆ ಜೀವ ಕೊಡುವಂತೆ ಮುದ್ದಾಗಿ ಅಭಿನಯಿಸಿದ್ದಾರೆ ಝೈರಾ. ಇದೇ ಸಿನಿಮಾದ ಮೊದಲ ಹಾಡು ‘ಮೇ ಕೌನ್ ಹೂ’ಕ್ಕಿಂತಲೂ ಈ ಹಾಡು ಉತ್ತಮ ಪ್ರತಿಕ್ರಿಯೆಯನ್ನು ಪಡೆಯುತ್ತಿದೆ. ಈ ಹಾಡನ್ನು ಕೌಸರ್ ಮುನಿರ್ ಬರೆದಿದ್ದಾರೆ. ಅಮಿತ್ ತ್ರಿವೇದಿ ಸಂಗೀತ ನಿರ್ದೇಶನ ಮಾಡಿದ್ದಾರೆ.

ಅಮೀರ್‌ಖಾನ್ ತಮ್ಮ ಬಹುತೇಕ ಸಿನಿಮಾಗಳಲ್ಲಿ ತಾಯ್ತನದ ಬಗ್ಗೆ ವಿಶೇಷವಾದ ಹಾಡು ಅಥವಾ ದೃಶ್ಯವನ್ನು ಸಂಯೋಜನೆ ಮಾಡಿರುತ್ತಾರೆ. ‘ತಾರೆ ಜಮೀನ್ ಪರ್’ ಸಿನಿಮಾದ ‘ಮಾ’ ಹಾಡು ಕೂಡ ಸಿನಿಪ್ರಿಯರ ಕಣ್ಣೂ ಒದ್ದೆ ಮಾಡಿತ್ತು. ಇದು ತೀರಾ ಭಾವನಾತ್ಮಕ ಎನಿಸದು. ಆದರೆ ಮಕ್ಕಳಿಗಾಗಿ ತಾಯಿ ಏನೆಲ್ಲಾ ಮಾಡುತ್ತಾಳೆ, ಅಮ್ಮನೊಂದಿಗೆ ಮಕ್ಕಳ ತರಲೆ–ತುಂಟತನ ಹೇಗಿರುತ್ತದೆ ಎನ್ನುವುದನ್ನು ದೃಶ್ಯದಲ್ಲಿ ಕಟ್ಟಿಕೊಡಲಾಗಿದೆ. ಹಾಡು ನೋಡುವುದಕ್ಕೂ; ಕೇಳುವುದಕ್ಕೂ ಖುಷಿ ಕೊಡುತ್ತದೆ.

ADVERTISEMENT

ಈ ಹಾಡಿಗೆ 1251 ಕಮೆಂಟ್‌ಗಳು ಬಂದಿವೆ. ಬಹುತೇಕ ಎಲ್ಲರಿಗೂ ಹಾಡು ಇಷ್ಟವಾಗಿ ‘ನಮಗೂ ಅಮ್ಮ ನೆನಪಾಗುತ್ತಿದ್ದಾಳೆ’ ಎಂದು ಬರೆದುಕೊಂಡಿದ್ದಾರೆ. ಈ ಹಾಡನ್ನು ನೋಡಿ ಖುಷಿಪಟ್ಟಿರುವ ಶಾರುಕ್‌ಖಾನ್‌ ಟ್ವೀಟರ್‌ನಲ್ಲಿ ಹಾಡು ಹಂಚಿಕೊಂಡಿದ್ದಾರೆ.

ಮುಸ್ಲಿಂ ಹುಡುಗಿಯೊಬ್ಬಳು ಬುರ್ಖಾ ಧರಿಸಿ ಗಿಟಾರ್‌ ಹಿಡಿದು ಹಾಡುತ್ತಾ ಸಾಮಾಜಿಕ ಜಾಲತಾಣಗಳಲ್ಲಿ ಜನಪ್ರಿಯಗೊಳ್ಳುವ ಒಂದೇ ಎಳೆಯನ್ನು ಇಟ್ಟುಕೊಂಡು ‘ಸೀಕ್ರೆಟ್ ಸೂಪರ್‌ ಸ್ಟಾರ್’ ಚಿತ್ರ ನಿರ್ಮಾಣವಾಗಿದೆ. ನಾನೊಬ್ಬ ದೊಡ್ಡ ಗಾಯಕಿಯಾಗಬೇಕು ಎಂಬ ಕನಸು ಹೊತ್ತ ಹುಡುಗಿ. ಸಾರ್ವಜನಿಕವಾಗಿ ಹಾಡುವುದನ್ನು ಅಪ್ಪ ವಿರೋಧಿಸುತ್ತಾನೆ. ಹೀಗಾಗಿ ತಾನೇ ಒಂದು ಯುಟ್ಯೂಬ್ ಚಾನೆಲ್‌ ಶುರು ಮಾಡಿ, ಬುರ್ಖಾ ಧರಿಸಿ ಹಾಡಿ ಅದನ್ನು ಅಪ್‌ಲೋಡ್‌ ಮಾಡುತ್ತಿರುತ್ತಾಳೆ. ಕ್ರಮೇಣ ಈ ಬುರ್ಕಾ ಹುಡುಗಿಯ ಹಾಡು ಎಲ್ಲೆಡೆ ಜನಪ್ರಿಯಗೊಳ್ಳುತ್ತದೆ.

ಆಕೆ ಹಾಡಿನ ಪಯಣ ಒಂದೆಡೆಯಾದರೆ. ಕೌಟುಂಬಿಕ ಸಮಸ್ಯೆಗಳ ನಡುವೆ ತಾಯಿ ಮಗಳ ಕನಸನ್ನು ಬೆಂಬಲಿಸುತ್ತಾ, ಅವಳಿಗಾಗಿ ಒದ್ದಾಡುವುದು ಮತ್ತೊಂದೆಡೆ.

ಅಮೀರ್‌ಖಾನ್ ಈ ಸಿನಿಮಾದಲ್ಲಿ ಶಕ್ತಿ ಕುಮಾರ್ ಎಂಬ ರಾಕ್‌ ಸ್ಟಾರ್‌ ಪ್ರಾತದಲ್ಲಿ ಅಭಿನಯಿಸಿದ್ದಾರೆ. ಕಥೇ ಮತ್ತು ನಿರ್ದೇಶನ ಅದ್ವೈತ ಚಂದನ್ ಅವರದು. ಸಿನಿಮಾ ಅಕ್ಟೋಬರ್ 19ರಂದು ಬಿಡುಗಡೆಯಾಗಲಿದೆ.

ಹಾಡನ್ನು ವೀಕ್ಷಿಸಲು ಕೊಂಡಿ: http://bit.ly/2vSZTz9

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.