ADVERTISEMENT

ಪಡುವಾರಳ್ಳೀಲಿ ಮತ್ತೆ ಮಹಾಭಾರತ!

​ಪ್ರಜಾವಾಣಿ ವಾರ್ತೆ
Published 13 ಏಪ್ರಿಲ್ 2017, 19:30 IST
Last Updated 13 ಏಪ್ರಿಲ್ 2017, 19:30 IST
ಪಡುವಾರಳ್ಳೀಲಿ ಮತ್ತೆ ಮಹಾಭಾರತ!
ಪಡುವಾರಳ್ಳೀಲಿ ಮತ್ತೆ ಮಹಾಭಾರತ!   

‘ತೂಕಡಿಸಿ ತೂಕಡಿಸಿ ಬೀಳದಿರು ತಮ್ಮ, ನನ್ನ ತಮ್ಮ ಮಂಕುತಿಮ್ಮ’. ಈ ಜನಪ್ರಿಯ ಹಾಡನ್ನು ಆಗಾಗ ಗುನುಗುತ್ತೀರಾದರೆ ‘ಪಡುವಾರಳ್ಳಿ ಪಾಂಡವರು’ ಚಿತ್ರವೂ ನೆನಪಿರಬೇಕು. 1978ರಲ್ಲಿ ಪುಟ್ಟಣ್ಣ ಕಣಗಾಲ್ ನಿರ್ದೇಶಿಸಿದ ಈ ಸಿನಿಮಾ ಬಹು ಜನಪ್ರಿಯವಾಗಿತ್ತು. ಈಗ ಅದೇ ಜನಪ್ರಿಯ ಶೀರ್ಷಿಕೆಯಲ್ಲಿ ಮತ್ತೊಂದು ಸಿನಿಮಾ ಬರುತ್ತಿದೆ. ಅದು ‘ಪಡುವಾರಳ್ಳಿ ಪಾಂಡವರು ಇನ್ 1989’.

‘ಪಡುವಾರಳ್ಳಿ ಪಾಂಡವರು’ ಚಿತ್ರದಲ್ಲಿ ಐದು ಜನ ಸೇರಿ ದುಷ್ಟರ ದಮನ ಮಾಡಿದ್ದರು. ಮತ್ತೆ ಅಂಥದ್ದೇ ದುಷ್ಟರು ದಂಡೆತ್ತಿ ಬಂದಾಗ ಪಾಂಡವರು ಹೇಗೆ ಎದುರಿಸಬಹುದು ಎಂಬುದು ಚಿತ್ರದ ಕಥೆ. ಈ ಕಥೆ ನಡೆಯುವುದು 1989ರ ಅವಧಿಯಲ್ಲಿ. ಆ ಕಾಲವನ್ನೇ ತೆರೆಯ ಮೇಲೆ ತರುವುದಕ್ಕಾಗಿ ಶ್ರಮಿಸಿದ್ದಾರೆ ನಿರ್ದೇಶಕ ಜಗ್ಗು ಸಿರ್ಸಿ. ಅವರು ‘ಪಡುವಾರಳ್ಳಿ ಪಾಂಡವರು’ ಚಿತ್ರದಿಂದ ಪ್ರೇರಿತರಾಗಿದ್ದಾರಂತೆ.

ದುಷ್ಟರನ್ನು ಸಂಹಾರ ಮಾಡುವ ಚಿತ್ರ ಎಂದರೆ ಸಾಕಷ್ಟು ಸಾಹಸ ದೃಶ್ಯಗಳೂ ಇರಲೇಬೇಕು. ಹಾಗಿದ್ದರೂ ಈ ಸಿನಿಮಾ, ‘ಕಲಾತ್ಮಕವಾಗಿ ಮತ್ತು ಸಂಗೀತದ ದೃಷ್ಟಿಯಿಂದ ಅತ್ಯುತ್ತಮವಾಗಿ ಮೂಡಿಬಂದಿದೆ’ ಎಂದು ನಿರ್ದೇಶಕರು ಹೇಳುತ್ತಾರೆ. ಸಂಚಾರಿ ವಿಜಯ್ ಸುದ್ದಿಗೋಷ್ಠಿಯಲ್ಲಿ ಚಿತ್ರದ ಟೀಸರ್ ಬಿಡುಗಡೆ ಮಾಡಿ ತಂಡಕ್ಕೆ ಶುಭ ಹಾರೈಸಿದರು.

ADVERTISEMENT

ಅನುಪಮ್ ಖೇರ್ ಅಭಿನಯ ಶಾಲೆಯಲ್ಲಿ ತರಬೇತಿ ಪಡೆದ ವಿನು ವೆಂಕಟೇಶ್ ಈ ಚಿತ್ರದ ನಾಯಕ. ನೃತ್ಯಗಾತಿ ಆಶಾ ಭಂಡಾರಿ ಮತ್ತು ಮಹಾಸತಿ ಚಿತ್ರದ ನಾಯಕಿಯರು. ಸ್ವಸ್ತಿಕ್ ಶಂಕರ್, ಜಿ.ವಿ. ಕೃಷ್ಣ, ಜಾನ್, ಜೀವನ್ ರೆಡ್ಡಿ, ಸತೀಶ್ ತಾರಾಗಣದಲ್ಲಿದ್ದಾರೆ.

ಪಂಚಂ ಒಂದು ಹಾಗೂ ರಾಕೇಶ್‌ ರೂಮಾಡಿ ನಾಲ್ಕು ಹಾಡುಗಳಿಗೆ ಸಂಗೀತ ಸಂಯೋಜಿಸಿದ್ದಾರೆ. ಜೋಗ್ ಜಲಪಾತದ ಸುತ್ತಮುತ್ತ 60 ದಿನಗಳಲ್ಲಿ ಚಿತ್ರೀಕರಣ ಮುಗಿದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.