ADVERTISEMENT

ಪತ್ರಿಕಾ ಪ್ರೀತಿ; ನಗರ ಯುವತಿ ಫಜೀತಿ!

ವಿಶಾಖ ಎನ್.
Published 21 ಏಪ್ರಿಲ್ 2017, 8:31 IST
Last Updated 21 ಏಪ್ರಿಲ್ 2017, 8:31 IST
ಪತ್ರಿಕಾ ಪ್ರೀತಿ; ನಗರ ಯುವತಿ ಫಜೀತಿ!
ಪತ್ರಿಕಾ ಪ್ರೀತಿ; ನಗರ ಯುವತಿ ಫಜೀತಿ!   

ಚಿತ್ರ: ನೂರ್ (ಹಿಂದಿ)
ನಿರ್ಮಾಣ: ಭೂಷಣ್ ಕುಮಾರ್, ಕೃಷನ್ ಕುಮಾರ್, ವಿಕ್ರಮ್ ಮಲ್ಹೋತ್ರ
ನಿರ್ದೇಶನ: ಸುನಿಲ್ ಸಿಪ್ಪಿ
ತಾರಾಗಣ: ಸೋನಾಕ್ಷಿ ಸಿನ್ಹ, ಕಣನ್ ಗಿಲ್, ಪೂರಬ್ ಕೊಹ್ಲಿ

ನಗರದ ಯುವತಿಯರ ಮನೋನಂದನ ಬಾಲಿವುಡ್‌ಗೆ ಈಗೀಗ ಆಪ್ಯಾಯಮಾನವಾದ ವಸ್ತುವಾಗುತ್ತಿದೆ. ‘ಡಿಯರ್ ಜಿಂದಗಿ’ ಚಿತ್ರದ ಕೈರಾ ಪಾತ್ರದಲ್ಲಿ ಅನಾವರಣಗೊಂಡಿದ್ದ ನಿತ್ಯ ವ್ಯಾಪಾರದ ತಾಕಲಾಟಗಳನ್ನು ಬೇರೆ ಚೌಕಟ್ಟಿನಲ್ಲಿ ಒಳಗೊಂಡ ಚಿತ್ರ ‘ನೂರ್’.

ಸಬಾ ಇಮ್ತಿಯಾಜ್ ಬರೆದಿರುವ ‘ಕರಾಚಿ, ಯೂ ಆರ್ ಕಿಲ್ಲಿಂಗ್ ಮಿ!’ ಕಾದಂಬರಿ ಆಧರಿಸಿದ ಸಿನಿಮಾ ಇದು. ಆದರೆ, ಚಿತ್ರಕಥೆಗೆ ಒಗ್ಗಿಸುವಾಗ (ಸುನಿಲ್ ಸಿಪ್ಪಿ, ಆಲ್ತಿಯಾ ಡೆಲ್ಮಾಸ್, ಕೌಶಲ್ ಹಾಗೂ ಶಿಬಾ ಶರ್ಮ) ಕರಾಚಿ ಜಾಗದಲ್ಲಿ ಮುಂಬೈ ಸೃಷ್ಟಿಸಲಾಗಿದೆ. ಬುದ್ಧಿವಂತ ಪತ್ರಕರ್ತೆಯೊಬ್ಬಳ ಪಡಿಪಾಟಲುಗಳನ್ನು ನಗರವೊಂದಕ್ಕೆ ಸಮೀಕರಿಸಿ, ರೂಪಕ ಸೃಷ್ಟಿಸುವ ಉಮೇದು ಚಿತ್ರಕ್ಕಿದೆ.

ADVERTISEMENT

ನೂರ್ ರಾಯ್ ಚೌಧರಿ ಕಥಾನಾಯಕಿ. ಸುದ್ದಿಸಂಸ್ಥೆಯೊಂದರ ಕಿರಿಯ ಪತ್ರಕರ್ತೆ. ಸಾಮಾಜಿಕ ಸಮಸ್ಯೆಗಳ ವರದಿ ಮಾಡಬೇಕೆನ್ನುವುದು ಅವಳ ಮಹತ್ವಾಕಾಂಕ್ಷೆ. ಆದರೆ, ಅವಳು ಕೆಲಸ ಮಾಡುವ ಸಂಸ್ಥೆಯ ಸಂಪಾದಕ ಕಾಲಕ್ಕೆ ತಕ್ಕಂಥ ಜೀವನಶೈಲಿಯ ವರದಿಗಳನ್ನೇ ಮಾಡುವಂತೆ ಪುಸಲಾಯಿಸುವವರ ಪೈಕಿ. ತನ್ನ ಏಕತಾನ ಬದುಕಿನಿಂದ ರೋಸಿಹೋಗಿರುವ ಅವಳು ಸಂಗಾತಿ ಕಂಡುಕೊಳ್ಳುವಲ್ಲಿಯೂ ಎಡವುತ್ತಾಳೆ.

ಮೆಚ್ಚಿದ ಹುಡುಗನೇ ಅವಳ ಸುದ್ದಿಯನ್ನು ಹೈಜಾಕ್ ಮಾಡುತ್ತಾನೆ. ಮೂತ್ರಪಿಂಡ ಕದಿಯುವ ವೈದ್ಯರ ಜಾಲ ಬಯಲಿಗೆಳೆಯುವ ಧಾವಂತ ನಾಯಕಿಯ ಮನೆಗೆಲಸದವಳ ತಮ್ಮನ ಸಾವಿಗೆ ಕಾರಣವಾಗುತ್ತದೆ. ಉಡಾಫೆಯಿಂದ ಸಾಗುತ್ತಿರುವಂತೆ ಕಾಣುವ ಸಿನಿಮಾ ಹಠಾತ್ತನೆ ಗಂಭೀರ ಸ್ವರೂಪ ಪಡೆದುಕೊಳ್ಳುವುದೇ ಈ ತಿರುವಿನಿಂದ.

ಬ್ರಿಟಿಷ್–ಇಂಡಿಯನ್ ನಿರ್ದೇಶಕ ಸುನಿಲ್ ಸಿಪ್ಪಿ ಆಯ್ಕೆ ಮಾಡಿಕೊಂಡಿರುವ ವಿಷಯ ಆಸಕ್ತಿಕರವಾಗಿದೆ. ಚಿತ್ರಶಿಲ್ಪ ಇನ್ನೂ ಗಟ್ಟಿಯಾಗಿರಬೇಕಿತ್ತು. ಹೀಗೆನ್ನಿಸಲು ಕಾರಣ ಅಲ್ಲಲ್ಲಿ ವ್ಯಕ್ತಗೊಳ್ಳುವ ಭಾಷಣ, ಸಂವಾದ (ಸಂಭಾಷಣೆ: ಇಶಿತಾ ಮೊಯಿತ್ರಾ ಉಧ್ವಾನಿ). ದೊಡ್ಡ ಸಾಮಾಜಿಕ ಬದಲಾವಣೆಯ ಸಂಕಲ್ಪವನ್ನು ನಿರ್ದೇಶಕರು ಆರಾಮಕುರ್ಚಿ ಪತ್ರಿಕೋದ್ಯಮಕ್ಕೆ ತಂದು ನಿಲ್ಲಿಸಿಬಿಡುವುದು ಚೋದ್ಯ. ಸಾಮಾಜಿಕ ಜಾಲತಾಣಗಳ ಆಕರ್ಷಣೆಯಿಂದ ಹೊರಬರುವುದು ನಿರ್ದೇಶಕರಿಗೂ ಸಾಧ್ಯವಾಗಿಲ್ಲದಿರುವುದರಿಂದ ಹೀಗೆ ಆಗಿದೆ. ನಾಯಕಿಯ ಹೋರಾಟಕ್ಕೆ ಸಾಮಾಜಿಕ ಜಾಲತಾಣವೇ ವೇದಿಕೆಯಾಗುವುದನ್ನು ಇನ್ನೂ ಸಮರ್ಥವಾಗಿ ಬಿಂಬಿಸುವ ಸಾಧ್ಯತೆಗೆ ಅವರು ಬೆನ್ನುಮಾಡಿದ್ದಾರೆ.

ಈ ಕಾಲಮಾನದ ದೃಶ್ಯಮಾಧ್ಯಮಗಳ ಲಂಪಟತೆ, ‘ಮೀಡಿಯೋಕರ್ ಧೋರಣೆ’ಯನ್ನು ದುರ್ಬಲವಾಗಿ ಲೇವಡಿ ಮಾಡುವ ಸಿನಿಮಾ, ಹಲವು ಕವಲುಗಳಾಗಿ ಒಡೆದಿದೆ. ನಾಯಕಿಗೆ ತನ್ನ ಬದುಕನ್ನು ಹಳಿಗೆ ತರುವ ಜರೂರು ಒಂದು ಕಡೆ. ಪ್ರಾಮಾಣಿಕ ಪತ್ರಿಕೋದ್ಯಮದ ಮಹತ್ವಾಕಾಂಕ್ಷೆ ಇನ್ನೊಂದು ಕಡೆ. ಇವೆರಡನ್ನೂ ಬೆರೆಸುವುದರಲ್ಲಿ ಹದ ಸಿಕ್ಕಿಲ್ಲ. ಆದರೂ ಮಹಿಳಾ ಪಾತ್ರಗಳ ರೂಹು ಮಿತಿಯಲ್ಲೂ ಗಮನ ಸೆಳೆಯುತ್ತದೆ.

ತಮ್ಮ ಮಿತಿಯನ್ನು ತಾವೇ ಮೀರುವ ಹೆಬ್ಬಯಕೆಯನ್ನು ಅಭಿನಯದಲ್ಲಿ ಸೋನಾಕ್ಷಿ ಸಿನ್ಹ ದಾಟಿಸಿದ್ದಾರೆ. ಪೂರಬ್ ಕೊಹ್ಲಿ ಚಿಕ್ಕ ಪಾತ್ರಕ್ಕೆ ಅರ್ಥ ಕೊಟ್ಟಿದ್ದಾರೆ. ನಾಯಕಿಯ ನಿಸ್ಹೃಹ ಸ್ನೇಹಿತನಾಗಿ ಕಣನ್ ಗಿಲ್ ಇಷ್ಟವಾಗುತ್ತಾರೆ. ಸ್ಮಿತಾ ತಾಂಬೆ ಪಾತ್ರಧಾರಿಯ ಕಣ್ಣಲ್ಲಿನ ತೀವ್ರತೆ ಕಾಡುತ್ತದೆ.
ನಾಯಕಿ ಪ್ರಧಾನ ಚಿತ್ರಗಳನ್ನೇ ಆಯ್ಕೆ ಮಾಡಿಕೊಳ್ಳತೊಡಗಿರುವ ಸೋನಾಕ್ಷಿ ವೃತ್ತಿಬದುಕಿನ ದೃಷ್ಟಿಯಿಂದ ಮುಖ್ಯವಾದ ಈ ಚಿತ್ರ ಚರ್ಚೆಗೆ ಕಾವು ಕೊಡುವಷ್ಟು ಶಕ್ತವಾಗಿದೆ.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.