ADVERTISEMENT

ಪಾಲಕರಿಗಾಗಿ ಮಕ್ಕಳ ತ್ಯಾಗ!

ಪಂಚರಂಗಿ

​ಪ್ರಜಾವಾಣಿ ವಾರ್ತೆ
Published 26 ಏಪ್ರಿಲ್ 2015, 19:30 IST
Last Updated 26 ಏಪ್ರಿಲ್ 2015, 19:30 IST

‘ಮಕ್ಕಳಿಗಾಗಿ ಅಪ್ಪ– ಅಮ್ಮ ತ್ಯಾಗ ಮಾಡುವುದನ್ನು ಕೇಳುತ್ತೇವೆ. ಆದರೆ ಪಾಲಕರಿಗಾಗಿ ಮಕ್ಕಳು ತ್ಯಾಗ ಮಾಡುವ ಅಪರೂಪದ ಕಥೆಯಿದು’ ಎಂದು ತಮ್ಮ ಚಿತ್ರಕ್ಕೆ ತಾವೇ ಸರ್ಟಿಫಿಕೇಟ್ ಕೊಟ್ಟುಕೊಂಡರು ನಿರ್ದೇಶಕ ರವಿರತ್ನಂ.

‘ಮಧುರ ಸ್ವಪ್ನ’ ಚಿತ್ರದ ಹಾಡುಗಳ ಆಡಿಯೊ ಸಿ.ಡಿ ಬಿಡುಗಡೆಯಲ್ಲಿ ಮಾತನಾಡಿದ ಚಿತ್ರತಂಡ, ವಿಭಿನ್ನ ಕಥೆಯನ್ನು ಪದೇ ಪದೇ ಮೆಲುಕು ಹಾಕಿತು. ಅಂದಹಾಗೆ, ಇದು ಕಾಲ್ಪನಿಕ ಕಥೆಯಲ್ಲ. ನಿಜ ಘಟನೆ ಆಧರಿಸಿ ತೆಗೆದ ಚಿತ್ರ. ಕೆಲವು ವರ್ಷಗಳ ಹಿಂದೆ ನಡೆದಿದ್ದ ಒಂದು ಘಟನೆಯು ರವಿರತ್ನಂ ಅವರನ್ನು ತೀವ್ರವಾಗಿ ಕಾಡಿದೆ. ಸಾಕಷ್ಟು ಶ್ರಮ ಪಟ್ಟು, ಅದನ್ನು ಚಿತ್ರರೂಪಕ್ಕೆ ಒಗ್ಗಿಸಿದ್ದಾರೆ.

‘ಮಕ್ಕಳನ್ನು ಒಂದು ಹಂತದವರೆಗೆ ಬೆಳೆಸಲು ಹಾಗೂ ಅವರಿಗೆ ಭವಿಷ್ಯ ಕೊಡಲು ಪಾಲಕರು ಎಷ್ಟೆಲ್ಲ ಕಷ್ಟಪಡುತ್ತಾರೆ! ಆದರೆ ಮಕ್ಕಳು ಪಾಲಕರಿಗಾಗಿ ತ್ಯಾಗ ಮಾಡುವ ಸಂದರ್ಭಗಳು ಅಷ್ಟೊಂದಿಲ್ಲ. ಇಂಥದೊಂದು ವಿಭಿನ್ನ ಕಥಾವಸ್ತುವನ್ನು ‘ಮಧುರ ಸ್ವಪ್ನ’ ಚಿತ್ರದಲ್ಲಿ ಅಳವಡಿಸಿದ್ದೇನೆ’ ಎಂಬ ಮಾಹಿತಿ ನೀಡಿದರು ರವಿರತ್ನಂ.

ಬೆಂಗಳೂರು, ಮಂಗಳೂರು, ಕೋಲಾರ, ಸಕಲೇಶಪುರ ಇತರೆಡೆ ಚಿತ್ರೀಕರಣ ನಡೆಸಲಾಗಿದೆ. ಕೊನೇ ಹಂತದ ತಾಂತ್ರಿಕ ಕೆಲಸಗಳಷ್ಟೇ ಬಾಕಿ ಉಳಿದುಕೊಂಡಿವೆ ಎಂದೂ ಹೇಳಿದರು. ಅಪ್ಪ–ಅಮ್ಮನಿಗಾಗಿ ತ್ಯಾಗ ಮಾಡುವ ಮಗನ ಪಾತ್ರವನ್ನು ಅರ್ಜುನ್ ಕಾಪಿಕಾಡ್ ನಿರ್ವಹಿಸಲಿದ್ದಾರೆ. ‘ಸಂದರ್ಭಕ್ಕೆ ಪೂರಕವಾಗಿ ಹಾಡುಗಳನ್ನು ಅಳವಡಿಸಲಾಗಿದೆ.

ಯಾವ ಹಾಡು ಕೂಡ ಅನಗತ್ಯ ಅನಿಸುವುದಿಲ್ಲ’ ಎಂದ ಅರ್ಜುನ್, ಸಿನಿಮಾದ ಎಲ್ಲ ಹಾಡುಗಳೂ ಹಿಟ್‌ ಆಗುವ ವಿಶ್ವಾಸ ವ್ಯಕ್ತಪಡಿಸಿದರು. ಕಾಲೇಜು ವಿದ್ಯಾರ್ಥಿನಿಯಾಗಿ ಕಾಣಿಸಿಕೊಳ್ಳಲಿರುವ ಕೀರ್ತನಾ ಪೊಡ್ವಾಲ್, ‘ಸಾಂಪ್ರದಾಯಿಕ ಕುಟುಂಬದ ಹುಡುಗಿಯ ಪಾತ್ರ ನನ್ನದು. ಪಾಲಕರು ಹೇಳುವ ಮಾತನ್ನು ವಿಧೇಯವಾಗಿ ಪಾಲಿಸುವ ಮಗಳು ನಾನು’ ಎಂದರು.

ಚಿತ್ರದ ಇನ್ನೊಬ್ಬ ನಾಯಕಿ ಮಹಾಲಕ್ಷ್ಮೀ, ‘ಹಾಡುಗಳು ಪ್ರೇಕ್ಷಕರನ್ನು ಚಿತ್ರಮಂದಿರಕ್ಕೆ ಕರೆತರಲಿವೆ’ ಎಂಬ ಆಶಾವಾದ ವ್ಯಕ್ತಪಡಿಸಿದರು. ನಾಯಕನ ಜತೆಗೇ ಇರುವ ಪ್ರಮುಖ ಹಾಸ್ಯ ಪಾತ್ರ ತಮ್ಮದು ಎಂದು ಕೆಂಪೇಗೌಡ ತಿಳಿಸಿದರು. ಸಂಗೀತ ನಿರ್ದೇಶಕ ರವಿಕಲ್ಯಾಣ್ ಮಾತನಾಡಿದರು.

ಪ್ರೀತಿ, ಪ್ರೇಮ, ಕುಟುಂಬದ ಮೌಲ್ಯ, ತ್ಯಾಗ– ಹೀಗೆ ಎಲ್ಲ ಬಗೆಯ ಅಂಶ ಒಳಗೊಂಡಿರುವ ಚಿತ್ರಕ್ಕೆ ಸಂಜೀವ್ ಕುಮಾರ್ ಬಂಡವಾಳ ಹೂಡಿದ್ದಾರೆ. ‘ಸದಭಿರುಚಿಯ ಈ ಚಿತ್ರವನ್ನು ಪ್ರೇಕ್ಷಕರು ಸ್ವೀಕರಿಸಲಿದ್ದಾರೆ’ ಎಂದು ಆಡಿಯೋ ಸಿ.ಡಿ ಬಿಡುಗಡೆ ಮಾಡಿದ ‘ಆನಂದ್ ಆಡಿಯೋ’ದ ಮೋಹನ್ ವಿಶ್ವಾಸ ವ್ಯಕ್ತಪಡಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.