ADVERTISEMENT

‘ಪಿರಂಗಿಪುರ’ದಲ್ಲಿ ವಿಜಯಧ್ವಜ!

​ಪ್ರಜಾವಾಣಿ ವಾರ್ತೆ
Published 8 ಸೆಪ್ಟೆಂಬರ್ 2016, 19:30 IST
Last Updated 8 ಸೆಪ್ಟೆಂಬರ್ 2016, 19:30 IST
ಪಿರಂಗಿಪುರ ಚಿತ್ರದಲ್ಲಿ ಸಂಚಾರಿ ವಿಜಯ್
ಪಿರಂಗಿಪುರ ಚಿತ್ರದಲ್ಲಿ ಸಂಚಾರಿ ವಿಜಯ್   

ವಿಭಿನ್ನ ಪಾತ್ರಗಳಲ್ಲಿ ತೆರೆಯ ಮೇಲೆ ಕಾಣಿಸಿಕೊಳ್ಳುತ್ತಿರುವ ‘ಸಂಚಾರಿ’ ವಿಜಯ್, ಅಂಥದೇ ಇನ್ನೊಂದು ಪ್ರಯೋಗಶೀಲ ಪಾತ್ರಕ್ಕೆ ವೇಷ ಧರಿಸಲಿದ್ದಾರೆ. ಈ ಚಿತ್ರದೊಂದಿಗೆ ತಮಿಳು ಚಿತ್ರರಂಗಕ್ಕೂ ಪದಾರ್ಪಣೆ ಮಾಡಲಿದ್ದಾರೆ.

ಸದ್ದಿಲ್ಲದೇ ಚಿತ್ರೀಕರಣ ಆರಂಭಗೊಂಡಿರುವ ‘ಪಿರಂಗಿಪುರ’ ಸಿನಿಮಾದಲ್ಲಿ ವಿಜಯ್ ಅವರಿಗೆ ಮೂರು ಶೇಡ್‌ನ ಪಾತ್ರಗಳಿವೆ. ಅವರಿಗೆ ಜನಾರ್ದನ್ ಆ್ಯಕ್ಷನ್–ಕಟ್  ಹೇಳುತ್ತಿದ್ದಾರೆ. ಅಂದಹಾಗೆ, ಜನಾರ್ದನ್ ತಮ್ಮ ‘ಪ್ರಿಸ್‌ವೆಸ್ ಸ್ಟುಡಿಯೊ’ ಮೂಲಕ ಈ ಚಿತ್ರ ನಿರ್ಮಾಣಕ್ಕೆ ಮುಂದಾಗಿದ್ದಾರೆ.

‘ಪಿರಂಗಿಪುರ’ ಕನ್ನಡ ಚಿತ್ರರಂಗದಲ್ಲಿ ಹೊಸ ಪ್ರಯತ್ನ ಎಂದು ಬಣ್ಣಿಸುವ ಜನಾರ್ದನ್, ಇದು ಸಂಪೂರ್ಣ ಸ್ವಮೇಕ್ ಚಿತ್ರ ಎಂದು ಸ್ಪಷ್ಟಪಡಿಸುತ್ತಾರೆ. ‘ಹೊಸ ಬಗೆಯ ಕಥೆ ಇದರಲ್ಲಿದೆ. ಹಾಲಿವುಡ್ ಮಾದರಿಯ ನಿರೂಪಣಾ ಶೈಲಿ ಹೊಂದಿದೆ’ ಎನ್ನುತ್ತಾರೆ. ಕಥೆ, ಚಿತ್ರಕಥೆ ಮತ್ತು ಸಂಭಾಷಣೆಯೂ ಜನಾರ್ದನ್ ಅವರದೇ. ಇದು ಅವರ ನಿರ್ದೇಶನದ ಮೊದಲ ಚಿತ್ರ.

ಪಿರಂಗಿಪುರ ಒಂದು ಊರಿನ ಹೆಸರು. ಅದು ಖಳನಾಯಕನ ಸ್ಥಳ. ಇದು ಕುತೂಹಲ ಮೂಡಿಸುವ ಸೈಕಾಲಜಿಕಲ್ ಥ್ರಿಲ್ಲರ್. ಖಳನಾಯಕನಿಗೆ ಇಲ್ಲಿ ಹೆಚ್ಚು ಪ್ರಾಮುಖ್ಯ. ಮನುಷ್ಯನ ಒಳಮನಸ್ಸಿನಲ್ಲಿ ಅಡಗಿರುವ ರಾಕ್ಷಸೀ ಮತ್ತು ಮಾನವೀಯ ಗುಣಗಳೆರಡನ್ನೂ ಏಕಕಾಲಕ್ಕೆ ಬಿಚ್ಚಿಡುವ ಮನೋಜ್ಞ ದೃಶ್ಯಗಳು ಚಿತ್ರದ ಜೀವಾಳವಾಗಿದೆ ಎಂದು ಜನಾರ್ಧನ್ ಮಾಹಿತಿ ಕೊಟ್ಟರು. ಚಿತ್ರದಲ್ಲಿ ‘ಹಚ್ಚೆ’ (ಟ್ಯಾಟೂ) ಮುಖ್ಯವಾಗಿ ಕಾಣಿಸಿಕೊಳ್ಳುತ್ತವೆ. ಟ್ಯಾಟೂ ಸಂಕೇತಗಳ ರಹಸ್ಯವನ್ನು ಹೇಳುವ ಕನ್ನಡದ ಮೊದಲ ಸಿನಿಮಾವೂ ಇದಂತೆ.

ಜನಾರ್ದನ್ ಹೇಳಿದ ಚಿತ್ರಕಥೆ ಕೇಳಿ ವಿಜಯ್ ಥ್ರಿಲ್ ಆಗಿದ್ದಾರೆ. ಇದು ಏಕಕಾಲಕ್ಕೆ ಕನ್ನಡ, ತಮಿಳು ಭಾಷೆಯಲ್ಲಿ ನಿರ್ಮಾಣವಾಗುತ್ತಿದೆ. ‘ಮೂರು ಬಗೆಯ ವಿಭಿನ್ನ ಪಾತ್ರಗಳನ್ನು ಇದರಲ್ಲಿ ನಾನು ನಿರ್ವಹಿಸಲಿದ್ದೇನೆ. ಅದರಲ್ಲೂ 70 ವರ್ಷದ ಮುದುಕನ ಪಾತ್ರದಲ್ಲಿ ನಟಿಸುತ್ತಿರುವುದು ರೋಮಾಂಚನ ಮೂಡಿಸಿದೆ’ ಎಂದು ವಿಜಯ್ ಹೇಳಿಕೊಂಡರು. ಚಿತ್ರದಲ್ಲಿ ಶೇ 80 ರಷ್ಟು ಭಾಗದಲ್ಲಿ ವಿಜಯ್ ಮುದುಕನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ನಾಯಕಿ ಗಾನವಿರಿಗೆ ಇದು ಮೊದಲ ಅವಕಾಶ.

ವಯೋವೃದ್ಧನ ಪಾತ್ರಕ್ಕಾಗಿ ವಿಜಯ್‌ ಅವರಿಗೆ ವಿಶೇಷ ಮೇಕಪ್ ಮಾಡಲಾಗಿದೆ. ಶೇಕಡ 90 ರಷ್ಟು ಚಿತ್ರೀಕರಣ ರಾಜಸ್ತಾನದ ಮರುಭೂಮಿಯಲ್ಲಿ, ಪಾಕಿಸ್ತಾನದ ಗಡಿಗೆ ಹೊಂದಿಕೊಂಡ ಪ್ರದೇಶದಲ್ಲಿ ನಡೆಯಲಿದೆ. ವಿಜಯ್ ಹೊರತುಪಡಿಸಿ ಉಳಿದವರೆಲ್ಲ ಹೊಸಬರೇ. ಮೂಲತಃ ರಂಗಭೂಮಿ ಹಿನ್ನೆಲೆ ಹೊಂದಿರುವ ಜನಾರ್ದನ್, ‘ಪಿರಂಗಿಪುರ’ದಲ್ಲಿ ರಂಗಭೂಮಿ ಕಲಾವಿದರಿಗೆ ಅವಕಾಶ ನೀಡಿದ್ದಾರೆ.

ಅದ್ವೈತ್ ಗುರುಮೂರ್ತಿ ಛಾಯಾಗ್ರಹಣ, ಶ್ಯಾಮ್ ಎಲ್. ರಾಜ್ ಸಂಗೀತ ಚಿತ್ರಕ್ಕಿದೆ. ಉಮಾ ಮಹೇಶ್ವರ್ ಮೇಕಪ್ ಕೈಚಳಕ ತೋರಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ‘ಪಿರಂಗಿಪುರ’ದ ಫಸ್ಟ್ ಲುಕ್ ಪೋಸ್ಟರ್‌ ಬಿಡುಗಡೆ ಮಾಡಲಾಯಿತು. ಶ್ರೀಮುರಳಿ, ವಶಿಷ್ಠ ಸಿಂಹ ಸೇರಿದಂತೆ ಚಿತ್ರರಂಗದ ಗಣ್ಯರು ತಂಡಕ್ಕೆ ಹಾಜರಿದ್ದು ಶುಭ ಹಾರೈಸಿದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.