ADVERTISEMENT

ಪ್ರೇಮವೇ ‘ಸರ್ವಸ್ವ’

​ಪ್ರಜಾವಾಣಿ ವಾರ್ತೆ
Published 2 ಮಾರ್ಚ್ 2017, 19:30 IST
Last Updated 2 ಮಾರ್ಚ್ 2017, 19:30 IST
ಪ್ರೇಮವೇ ‘ಸರ್ವಸ್ವ’
ಪ್ರೇಮವೇ ‘ಸರ್ವಸ್ವ’   
ಸಕಲವೂ ನೀನೇ ಎಂಬುದರ ಸೂಚಕ ‘ಸರ್ವಸ್ವ’. ಪ್ರೀತಿ ಹೆಚ್ಚಾದಾಗಲೂ ಪರಸ್ಪರರ ಮಧ್ಯೆ ಈ ಪದ ಅನುರಣಿಸುವುದುಂಟು. ಇದರ ಜಾಡು ಹಿಡಿದು ತೆರೆಗೆ ಬರಲು ಸಿದ್ಧವಾಗಿರುವ ಚಿತ್ರ ‘ಸರ್ವಸ್ವ’. ಶ್ರೇಯಸ್ ಕಬಡಿ, ತಮ್ಮ ಬದುಕಿನ ಕೆಲ ಅನುಭವಗಳಿಗೆ ಕಾಲ್ಪನಿಕ ಸ್ಪರ್ಶ ಕೊಟ್ಟು ಕಥೆ ಹೆಣೆದು ನಿರ್ದೇಶಿಸಿದ್ದಾರೆ. ಶ್ರೇಯಸ್‌ ನಿರ್ದೇಶನದ ಮೊದಲ ಚಿತ್ರವಿದು.
 
‘ರೊಮ್ಯಾಂಟಿಕ್, ಥ್ರಿಲ್ಲರ್, ಆ್ಯಕ್ಷನ್, ಮೆಲೋಡಿ ಇವೆಲ್ಲವೂ ‘ಸರ್ವಸ್ವ’ದಲ್ಲಿ ಬೆರೆತಿವೆ. ಎರಡು ಪ್ರೇಮಕಥೆಗಳ ಸುತ್ತ ಕಥೆ ಸಾಗುತ್ತ ಹೋಗುತ್ತದೆ’ ಎಂದ ಶ್ರೇಯಸ್, ತಮ್ಮ ಬದುಕಿನ ಕೆಲ ಅನುಭವಗಳೂ ಚಿತ್ರದಲ್ಲಿ ಅಡಕವಾಗಿವೆ ಎಂಬ ಗುಟ್ಟನ್ನು ಬಿಟ್ಟುಕೊಟ್ಟರು. ನಿರ್ದೇಶನಕ್ಕೂ ಮುಂಚೆ ಶ್ರೇಯಸ್‌, ‘ತಪಸ್ವಿ’ ಎಂಬ ಮಕ್ಕಳ ಚಿತ್ರದಲ್ಲಿ ನಟಿಸಿದ್ದಾರೆ.
 
ಶ್ರೇಯಸ್)
 
‘ಕೇರಳ, ಸಕಲೇಶಪುರ ಹಾಗೂ ಕೊಡಗಿನಲ್ಲಿ ಚಿತ್ರೀಕರಣ ಮಾಡಲಾಗಿದೆ. ಚಿತ್ರದಲ್ಲಿ ಮನರಂಜನೆಯಷ್ಟೆ ಅಲ್ಲದೆ ಸಂದೇಶವೂ ಇದೆ’ ಎಂದ ಅವರು, ಚಿತ್ರದ ಪ್ರಮೋಷನ್‌ಗಾಗಿ ರಿಮಿಕ್ಸ್ ಹಾಡೊಂದನ್ನು ಸದ್ಯದಲ್ಲೇ ಮಾಡಲಾಗುವುದು ಎಂದರು. ಚಿತ್ರದಲ್ಲಿ ತಿಲಕ್ ಮತ್ತು ಚೇತನ್ ರಾಜ್ ನಾಯಕರಾಗಿ, ರನುಷಾ ಕಾಶ್ವಿ ಮತ್ತು ಮೇಘನಾ ಅಪ್ಪಯ್ಯ ನಾಯಕಿಯರಾಗಿ ಕಾಣಿಸಿಕೊಂಡಿದ್ದಾರೆ.
 
ಬಿಗಿ ಮೈಗೆ ಅಂಟಿಕೊಂಡಿದ್ದ ಟೀ ಶರ್ಟ್‌ನಲ್ಲಿ ಮಿಂಚುತ್ತಿದ್ದ ತಿಲಕ್‌, ‘ಶ್ರೇಯಸ್ ಮೊದಲ ಸಲ ಕಥೆ ಹೇಳಿದಾಗ, ನಿಜವಾಗಿಯೂ ಹೇಳಿದ್ದನ್ನು ತೆರೆಗೆ ತರಬಲ್ಲರೇ ಎಂಬ ಅನುಮಾನ ಮೂಡಿತ್ತು. ಆದರೆ, ಸಿನಿಮಾ ಆರಂಭವಾದಾಗ, ಇವರಿಗೆ ಹೇಳುವುದಕ್ಕೆ ಬರುವುದಿಲ್ಲ. ಆದರೆ, ಮಾಡಿ ತೋರಿಸುತ್ತಾರೆ ಎಂಬುದು ಗೊತ್ತಾಯ್ತು. ತಮಗೇನು ಬೇಕು ಎಂಬುದನ್ನು ಸ್ಪಷ್ಟವಾಗಿ ಬಲ್ಲ ನಿರ್ದೇಶಕ ಶ್ರೇಯಸ್’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
(ಮೇಘನಾ)
 
‘ಸಿನಿಮಾ ನಿರ್ದೇಶಕನ ಪಾತ್ರದಲ್ಲಿ ನಾನು ಕಾಣಿಸಿಕೊಂಡಿದ್ದೇನೆ. ಇದುವರೆಗೆ ಆ್ಯಕ್ಷನ್ – ಥ್ರಿಲ್ಲರ್‌ ಸಿನಿಮಾಗಳಲ್ಲೇ ಹೆಚ್ಚಾಗಿ ಕಾಣಿಸಿಕೊಂಡಿದ್ದೆ. ಇಲ್ಲಿ ನನ್ನ ಪಾತ್ರಕ್ಕೆ ಹಲವು ಆಯಾಮಗಳಿದೆ’ ಎಂದು ಮಾತು ಮುಗಿಸಿದರು. ‘ಆಡಿಷನ್ ಮೂಲಕ ಚಿತ್ರಕ್ಕೆ ಆಯ್ಕೆಯಾದೆ. ತುಂಟತನದ ಜತೆಗೆ ಸೀರಿಯಸ್ ಆಗಿದೆ ನನ್ನ ಪಾತ್ರ’ ಎಂದು ಕಾಲೇಜು ವಿದ್ಯಾರ್ಥಿ ಪಾತ್ರದಲ್ಲಿ ಕಾಣಿಸಿಕೊಂಡಿರುವ ಚೇತನ್ ರಾಜ್ ಹೇಳಿದರು. ಅಂದಹಾಗೆ ಚೇತನ್‌ಗೆ ಬೆಳ್ಳಿತೆರೆ ಹೊಸದು.
 
ಮಾಡೆಲಿಂಗ್‌ ಲೋಕದಿಂದ ಸಿನಿಮಾಗೆ ಕಾಲಿಟ್ಟಿರುವ ಮೇಘನಾ ಅಪ್ಪಯ್ಯ, ‘ನನ್ನ ಪಾತ್ರಕ್ಕೆ ಎರಡು ಶೇಡ್‌ಗಳಿದ್ದು, ಅತ್ಯಂತ ಸವಾಲಿನದಾಗಿತ್ತು’ ಎಂದರು. ಇದಕ್ಕೂ ಮುಂಚೆ ‘ಲೈಫು ಸೂಪರ್’ ಚಿತ್ರದಲ್ಲಿ ನಗು ಬೀರಿದ್ದ ಮೇಘನಾ, ತಮಿಳು ಚಿತ್ರವೊಂದಕ್ಕೆ ಬಣ್ಣ ಹಚ್ಚಿರುವುದಾಗಿ ಹೇಳಿದರು.
 
‘ಸ್ಟೈಲ್ ರಾಜ’ದಲ್ಲಿ ಕಾಣಿಸಿಕೊಂಡಿದ್ದ ನಟಿ ರನುಷಾ ಕಾಶ್ವಿ, ‘ಭಿನ್ನ ಪಾತ್ರದಲ್ಲಿ ನಟಿಸಿದ ತೃಪ್ತಿ ಇದೆ’ ಎಂದು ಸಂತಸ ವ್ಯಕ್ತಪಡಿಸಿದರು. ಮಾರ್ಚ್ ಎರಡನೇ ವಾರ ಸಿನಿಮಾವನ್ನು ತೆರೆಗೆ ತರುವ ಆಲೋಚನೆಯಲ್ಲಿದೆ ಚಿತ್ರತಂಡ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.