ADVERTISEMENT

‘ಫಸ್ಟ್‌ಲವ್’ಗೆ ವೆಂಕಟ್ ರಂಗು!

​ಪ್ರಜಾವಾಣಿ ವಾರ್ತೆ
Published 19 ಜನವರಿ 2017, 19:30 IST
Last Updated 19 ಜನವರಿ 2017, 19:30 IST
‘ಫಸ್ಟ್‌ಲವ್’ಗೆ ವೆಂಕಟ್ ರಂಗು!
‘ಫಸ್ಟ್‌ಲವ್’ಗೆ ವೆಂಕಟ್ ರಂಗು!   
ನಿರೂಪಕಿ ಮೈಕ್ ಹಿಡಿದು ಚಿತ್ರತಂಡದ ಬಗ್ಗೆ ಮಾಹಿತಿ ನೀಡುತ್ತಿದ್ದಾಗ ನಟ–ನಿರ್ದೇಶಕ ಹುಚ್ಚ ವೆಂಕಟ್ ಮಧ್ಯಪ್ರವೇಶಿಸಿದರು. ‘ನೀವ್ ನನ್ ಹೆಸರು ಹೇಳಲಿಲ್ಲ. ಸರಿ, ನಾನ್ ಹೋಗ್ತಿನಿ ಬಿಡಿ’ ಎಂದು ಎದ್ದೇಳಲು ಅನುವಾದರು. ಇಡೀ ಸಭಾಂಗಣ ಆಗ ನಗೆಗಡಲಲ್ಲಿ ತೇಲಿತು. ಮಲ್ಲಿ (ಆಯುಷ್ಮಾನ್) ನಿರ್ದೇಶನದ ‘ಫಸ್ಟ್‌ ಲವ್’ ಚಿತ್ರದ ಆಡಿಯೊ ಸಿ.ಡಿ ಬಿಡುಗಡೆ ಸಮಾರಂಭ ಇಂತಹದ್ದೊಂದು ಕ್ಷಣಕ್ಕೆ ಸಾಕ್ಷಿಯಾಯಿತು.
 
ಅಂದಿನ ಕಾರ್ಯಕ್ರಮದ ಕೇಂದ್ರಬಿಂದು ಸಂಗೀತ ನಿರ್ದೇಶಕ ಶ್ರೀಧರ್ ವಿ. ಸಂಭ್ರಮ್. ಚಿತ್ರದ ಮೊದಲ ಹಾಡನ್ನು ಬಿಡುಗಡೆಗೊಳಿಸಿ ಮಾತನಾಡಿದ ಅವರು, ‘ನಾನು ಹೇಗೆ ಕೆಲಸ ಮಾಡುತ್ತೇನೆ ಎಂಬುದನ್ನು ಹೇಳಲು ಬರುವುದಿಲ್ಲ. ನನ್ನ ಕೆಲಸದ ಮೂಲಕವೇ ನೀವು ಅದನ್ನು ಗುರುತಿಸಿ ಹೇಳಬೇಕು. ಚಿತ್ರದ ಹಾಡುಗಳು ಚೆನ್ನಾಗಿ ಮೂಡಿಬರುವಲ್ಲಿ, ಕೇವಲ ನನ್ನದಷ್ಟೇ ಅಲ್ಲದೆ ಇಡೀ ತಂಡದ ಶ್ರಮವಿದೆ’ ಎಂದರು.
 
ತಾವು ದನಿಯಾಗಿರುವ ಹಾಡನ್ನು ಪರದೆ ಮೇಲೆ ಕಣ್ತುಂಬಿಕೊಂಡು ನಂತರ ಮಾತಿಗೆ ನಿಂತ ವೆಂಕಟ್ ಹೇಳಿದ್ದಿಷ್ಟು; ‘ಲವ್‌ಗುರು ರಾಜೇಶ ಮತ್ತು ಡೈರೆಕ್ಟರ್ ಆಯುಷ್ಮಾನ್ ನನಗೆ ತಮ್ಮಂದಿರಿದ್ದಂತೆ. ಅವರ ಮೇಲಿನ ಪ್ರೀತಿಗಾಗಿ ಹಾಡಲು ಒಪ್ಪಿಕೊಂಡೆ. ಚಿತ್ರತಂಡ ವಿತ್ ಲವ್ ಅಂಡ್ ಕೇರ್ ನನ್ನನ್ನು ಚೆನ್ನಾಗಿ ನೋಡಿಕೊಂಡಿತು. ಪೇಮೆಂಟ್ ಕೂಡ ಕೊಟ್ಟಿದೆ. ಹಾಡಿನಲ್ಲಿ ನಾನು ವಿಷ್ಣುವರ್ಧನ್ ಅವರ ಗೆಟಪ್‌ನಲ್ಲಿ ಕಾಣಿಸಿಕೊಂಡಿದ್ದೇನೆ’ ಎಂದು ನಿರೂಪಕಿಗೆ ಮೈಕ್ ಹಸ್ತಾಂತರಿಸಿದರು.
 
ತಮ್ಮ ಕಥೆ ಪಡೆದ ತಿರುವನ್ನು ವಿವರಿಸಿದ ನಿರ್ದೇಶಕ ಮಲ್ಲಿ, ‘ನಿರ್ಮಾಪಕ ಅಶೋಕ್ ಓ. ಲಮಾಣಿ ಅವರನ್ನು ಭೇಟಿ ಮಾಡಿ ಕಥೆ ಹೇಳಿದಾಗ, ಅವರ ಸ್ನೇಹಿತನ ಬದುಕಿನಲ್ಲಿ ನಡೆದ ನೈಜ ಘಟನೆಯೊಂದನ್ನು ನನಗೆ ವಿವರಿಸಿದರು. ಅದರಿಂದ ಪ್ರೇರಿತನಾಗಿ ನನ್ನ ಕಥೆಗೆ, ಆ ಕಥೆಯನ್ನೂ ಸೇರಿಸಿಕೊಂಡು ಅಂತಿಮಗೊಳಿಸಿದೆ. ಹಾಗಾಗಿ ಇದು ನೈಜ ಘಟನೆಗಳ ಎಳೆಯನ್ನಿಟ್ಟುಕೊಂಡು ನಿರ್ಮಿಸಿರುವ ಎನ್ನಬಹುದು’ ಎಂದರು. ನಾನು ಹುಚ್ಚ ವೆಂಕಟ್ ಅಭಿಮಾನಿ ಎಂದವರು ಹೇಳಿಕೊಂಡರು. 
 
‘ಎಫ್‌.ಎಂ.ನಲ್ಲಿ ಮಾತನಾಡಿಕೊಂಡಿದ್ದ ನಾನು ಮೊದಲ ಸಲ ಸಿನಿಮಾಗೆ ಬಣ್ಣ ಹಚ್ಚಿದ್ದೇನೆ’ ಎಂದು ಮಾತು ಆರಂಭಿಸಿದ ರಾಜೇಶ್,  ‘ಸಣ್ಣ ಬಜೆಟ್ ಪ್ಲಾನ್‌ನಲ್ಲಿ ಆರಂಭವಾದ ಸಿನಿಮಾ, ದೊಡ್ಡ ಬಜೆಟ್‌ನೊಂದಿಗೆ ಮುಗಿಯಿತು. ಚಿತ್ರದಲ್ಲಿ ನನ್ನದು ಎರಡು ಶೇಡ್ ಇರುವ ಪಾತ್ರ. ಒಂದು ಪಾತ್ರದಲ್ಲಿ ದಪ್ಪ, ಇನ್ನೊಂದು ಪಾತ್ರದಲ್ಲಿ ತೆಳ್ಳಗೆ ಕಾಣಿಸಿಕೊಂಡಿದ್ದೇನೆ. ನಟನೆಯ ಗಂಧಗಾಳಿ ಗೊತ್ತಿಲ್ಲದ ನನ್ನನ್ನು ಇಡೀ ಚಿತ್ರತಂಡ ತಿದ್ದಿ ತೀಡಿದೆ. ಅವರೆಲ್ಲರಿಗೂ ನಾನು ಆಭಾರಿ’ ಎಂದು ಕೃತಜ್ಞತೆ ಸಲ್ಲಿಸಿದರು.
 
ಬೆಳ್ಳಿಪರದೆಯಲ್ಲಿ ಮೊದಲ ಸಲ ನಾಯಕಿಯಾಗಿ ಕಾಣಿಸಿಕೊಂಡಿರುವ ‘ಲಕ್ಷ್ಮೀ ಬಾರಮ್ಮ’ ಧಾರಾವಾಹಿ ಖ್ಯಾತಿಯ ಕವಿತಾ, ‘ಸಿನಿಮಾದಲ್ಲಿ ಜನ ನನ್ನನ್ನು ಹೇಗೆ ಸ್ವೀಕರಿಸುತ್ತಾರೆ ಎಂದು ತಿಳಿದುಕೊಳ್ಳುವ ಕುತೂಹಲದಲ್ಲಿದ್ದೇನೆ’ ಎಂದರು. ಮತ್ತೊಬ್ಬ ನಟಿ ಸ್ನೇಹಾ, ಅವಕಾಶ ನೀಡಿದ ನಿರ್ದೇಶಕರು ಹಾಗೂ ನಿರ್ಮಾಪಕರಿಗೆ ಧನ್ಯವಾದ ಹೇಳಿದರು.
 
ಸುರೇಶ್ ಬಾಬು ಛಾಯಾಗ್ರಹಣ ಚಿತ್ರಕ್ಕಿದೆ. ಸದ್ಯ ಚಿತ್ರದ ಫೆಬ್ರುವರಿ ಅಂತ್ಯದಲ್ಲಿ ಚಿತ್ರ ಬಿಡುಗಡೆ ಮಾಡುವ ಯೋಜನೆ ಚಿತ್ರತಂಡದ್ದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.