ADVERTISEMENT

ಬಾಂಡ್‌ ಶೈಲಿಯ ‘ಈ ಕ್ಷಣ’

ಪಂಚರಂಗಿ

​ಪ್ರಜಾವಾಣಿ ವಾರ್ತೆ
Published 25 ನವೆಂಬರ್ 2015, 19:46 IST
Last Updated 25 ನವೆಂಬರ್ 2015, 19:46 IST

ಸಿನಿಮಾಕ್ಕೆ ಕೆಲಸ ಮಾಡುತ್ತಿರುವ ತಂತ್ರಜ್ಞ, ಕಲಾವಿದ ಚಿತ್ರದ ಕಥೆ ಹೇಳಲು ಮುಂದಾದಾಗ ನಿರ್ದೇಶಕರು ಅವರನ್ನು ಸನ್ನೆ ಮಾಡಿ ತಡೆಯುತ್ತಿದ್ದರು. ಆ ಕ್ಷಣ ಅವರು ಅಲ್ಲೇ ನಿಂತು, ಮಾತನ್ನು ಬೇರೆಡೆ ಹೊರಳಿಸುತ್ತಿದ್ದರು. ಕಥೆಯ ತಿರುಳು ಹೊರಬಿದ್ದರೆ ಸಸ್ಪೆನ್ಸ್ ಆ ಕ್ಷಣವೇ ಹೊರಟುಹೋದೀತು ಎಂಬ ಆತಂಕ ‘ಈ ಕ್ಷಣ’ದ ನಿರ್ದೇಶಕರದು!

ಬಾಂಡ್ ಶೈಲಿಯ ಸಿನಿಮಾ ಇದಾಗಿದೆ ಎಂದಷ್ಟೇ ಸುಳಿವು ಬಿಟ್ಟುಕೊಟ್ಟ ನಿರ್ದೇಶಕ ಬಾಲಕೃಷ್ಣ, ಹೆಚ್ಚು ಮಾತನಾಡಲಿಲ್ಲ. ಸುದ್ದಿಮಿತ್ರರ ಪ್ರಶ್ನೆಗಳಿಗೂ ಉತ್ತರಿಸದೇ ಬರೀ ಮುಗುಳ್ನಗೆ ಬೀರಿ ಸುಮ್ಮನಾದರು. ಹಿರಿಯ ಕಲಾವಿದ ಜೈಜಗದೀಶ್ ಅವರೇ ಮುಂದೆ ಬಂದು, ಇತರ ನಟರನ್ನು ಪರಿಚಯಿಸಿದರು.

ರಿಯಲ್ ಎಸ್ಟೇಟ್ ಹಾಗೂ ರಫ್ತು ವಹಿವಾಟು ನಡೆಸುತ್ತಿರುವ ಉದ್ಯಮಿ ರಾಕಿ ಭುಟ್ಟೊ ‘ಈ ಕ್ಷಣ’ಕ್ಕೆ ಎರಡೂವರೆ ಕೋಟಿ ರೂಪಾಯಿ ಬಂಡವಾಳ ಸುರಿಯುತ್ತಿದ್ದಾರೆ. ‘ನಿರ್ದೇಶಕರು ನನ್ನನ್ನು ಭೇಟಿ ಮಾಡಿ, ಚಿತ್ರದ ಕಥೆಯನ್ನು ಹೇಳಿದರು. ಅವರ ನಿರೂಪಣಾ ಶೈಲಿ ನನಗೆ ಇಷ್ಟವಾಯಿತು. ಇಂಥ ವಿಭಿನ್ನ ಚಿತ್ರ ನಿರ್ಮಿಸುವ ಅವಕಾಶ ಸಿಕ್ಕಿದೆ. ಅದೇ ನನಗೆ ಖುಷಿ’ ಎಂದರು. ಅಂದಹಾಗೆ, ಚಿತ್ರದಲ್ಲಿ ಅವರಿಗೂ ಪ್ರಮುಖ ಪಾತ್ರವೊಂದಿದೆ.

‘ರಂಗೋಲಿ’ಯಲ್ಲಿ ನಟಿಸಿದ ನಾಲ್ಕೈದು ವರ್ಷಗಳ ಬಳಿಕ ಕನ್ನಡ ಚಿತ್ರರಂಗಕ್ಕೆ ಮರಳಿ ಬಂದಿದ್ದಾರೆ ಸುಮಂತ್‌. ಲವರ್ ಬಾಯ್‌ ಇಮೇಜಿನಿಂದ ಹೊರಬರುವ ಆಸೆ ಅವರದಾಗಿತ್ತು. ಅದಕ್ಕೆ ಪೂರಕವಾಗಿ ಈ ಚಿತ್ರದಲ್ಲಿ ಅವಕಾಶ ಸಿಕ್ಕಿದ್ದು, ಆ್ಯಕ್ಷನ್ ಹಾಗೂ ಸೆಂಟಿಮೆಂಟ್ ಬೆರೆತ ಪಾತ್ರ ಅವರದಂತೆ. ‘ನಿರ್ದೇಶಕರನ್ನು ಬ್ಯಾಂಕೊಂದರಲ್ಲಿ ಭೇಟಿಯಾಗಿದ್ದೆ. ಅಲ್ಲಿಂದ ನಮ್ಮ ಸ್ನೇಹ ಬೆಳೆಯಿತು. ಈ ಕ್ಷಣದಲ್ಲಿನ ಪಾತ್ರಕ್ಕೆ ಅವರು ನನ್ನನ್ನು ಆಯ್ಕೆ ಮಾಡಿದ್ದಕ್ಕೆ ಧನ್ಯವಾದ’ ಎಂದರು.

ಕುಟುಂಬದ ಸದಸ್ಯರು ಕಷ್ಟಕ್ಕೆ ಸಿಲುಕಿದಾಗ ಅದನ್ನು ಸಮರ್ಥವಾಗಿ ಎದುರಿಸುವ ಗೃಹಿಣಿ ಪಾತ್ರದಲ್ಲಿ  ವರ್ಷಾ ಕಾಣಿಸಿಕೊಂಡಿದ್ದಾರೆ. ಇದು ಅವರಿಗೆ ನಾಲ್ಕನೇ ಸಿನಿಮಾ. ಪೊಲೀಸ್ ಅಧಿಕಾರಿಯಾಗಿ ಜೈಜಗದೀಶ್ ನಟಿಸಲಿದ್ದಾರೆ.

ನಾಲ್ಕು ಹಾಡುಗಳಿಗೆ ಜಿಮ್ಮಿ ರಾಜ್‌ ಸಂಗೀತ ಸಂಯೋಜಿಸುತ್ತಿದ್ದಾರೆ. ರಾಜಶೇಖರ್‌ ಕ್ಯಾಮೆರಾ ಹಿಡಿಯಲಿದ್ದಾರೆ. ಮಾತಿನ ಭಾಗದ ಚಿತ್ರೀಕರಣವನ್ನು ಬೆಂಗಳೂರು ಹಾಗೂ ಹಾಡುಗಳನ್ನು ಗೋವಾ, ಊಟಿ, ಮಡಿಕೇರಿ, ಶೃಂಗೇರಿಯಲ್ಲಿ ಚಿತ್ರಿಸುವ ಯೋಜನೆ ಚಿತ್ರತಂಡಕ್ಕಿದೆ.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.