ADVERTISEMENT

ಬಿಟ್ಟ ಸ್ಥಳ ತುಂಬಿರಿ...

​ಪ್ರಜಾವಾಣಿ ವಾರ್ತೆ
Published 6 ಏಪ್ರಿಲ್ 2017, 19:30 IST
Last Updated 6 ಏಪ್ರಿಲ್ 2017, 19:30 IST
ಬಿಟ್ಟ ಸ್ಥಳ ತುಂಬಿರಿ...
ಬಿಟ್ಟ ಸ್ಥಳ ತುಂಬಿರಿ...   
‘ಕಣ್ ಸನ್ನೆಯಿಂದ ಕಣ್ಣೀರವರೆಗಿನ ಕಥೆ’
‘ಪಕ್ಕದಲ್ಲಿ ಮಲ್ಕೊಂಡ್ರೆ ಮಾತ್ರ ಹಾದರ ಅಲ್ಲ, ಮನಸಲ್ಲಿ ಇಟ್ಕೊಂಡ್ರು ಹಾದರನೇ’
‘ಸಿಕ್ ಸಿಕ್ದೋರ್‍ನೆಲ್ಲಾ ಮನಸಲ್ಲಿ ಇಟ್ಕೊಂಡು ಹೃದಯ ಹಾಳ್ ಮಾಡ್ಕೊಬೇಡಿ’
‘ಸ್ವಚ್ಛ ಜೀವನ’–‘ಒಂದು ಹೆಜ್ಜೆ ಸ್ವಚ್ಛತೆಯ ಕಡೆಗೆ’
ಇಷ್ಟೆಲ್ಲ ಘೋಷಣೆಗಳಿರುವುದು ‘ಐ ___ ಯು’ ಚಿತ್ರದ ಪೋಸ್ಟರ್‌ನಲ್ಲಿ.

ತಮ್ಮ ತಲೆಯಲ್ಲಿರುವ, ತಮಗೆ ಹೇಳಬೇಕು ಎನ್ನಿಸಿದ ಅನೇಕ ವಿಚಾರಗಳನ್ನು ಸಿನಿಮಾ ರೂಪದಲ್ಲಿ ಹೇಳುವ ಕೆಲಸಕ್ಕೆ ಕೈ ಹಾಕಿದ್ದಾರೆ ನಿರ್ದೇಶಕ ಕೇಶವ ಚಂದು. ‘ಐ ___ ಯು’ ಎಂದು ಶೀರ್ಷಿಕೆ ಇಟ್ಟು ಬಿಟ್ಟಸ್ಥಳ ತುಂಬಲು ಲೈಕ್, ಲವ್, ಹೇಟ್, ಮಿಸ್ ಎಂಬ ನಾಲ್ಕು ಪದಗಳನ್ನೂ ಕೊಟ್ಟಿದ್ದಾರೆ.

ಖಾಲಿ ಜಾಗದಲ್ಲಿ ಪ್ರೇಕ್ಷಕ ಏನನ್ನಾದರೂ ತುಂಬಿಕೊಳ್ಳಬಹುದು. ನಿರ್ದೇಶಕರು ಹೇಳುವುದು ಏನು ಎಂದು ತಿಳಿಯಲು ಸಿನಿಮಾ ಬಿಡುಗಡೆವರೆಗೂ ಕಾಯಬೇಕು.ನಾಲ್ಕು ಮುಖ್ಯಪಾತ್ರಗಳು ಮತ್ತು ಮೂರು ಪ್ರೇಮಕಥೆಗಳ ಮೂಲಕ ಪ್ರೇಮ–ಕಾಮದ ನಡುವಿನ ವ್ಯತ್ಯಾಸ ಹೇಳುವುದಾಗಿ ನಿರ್ದೇಶಕರು ಹೇಳುತ್ತಾರೆ.

‘ಬುದ್ಧಿವಾದ ಹೇಳಿದರೆ ಯಾರೂ ಕೇಳುವುದಿಲ್ಲ. ಹಾಗಾಗಿ ಪ್ರೇಕ್ಷಕನನ್ನು ಚಿಂತನೆಗೆ ಹಚ್ಚುವಂತಹ ವಸ್ತುವನ್ನು ಆಯ್ದುಕೊಂಡಿದ್ದೇನೆ. ಯಾರೂ ನಿರೀಕ್ಷಿಸಲು ಸಾಧ್ಯವಿಲ್ಲದ ಕ್ಲೈಮ್ಯಾಕ್ಸ್ ಇದೆ’ ಎಂದರು ಅವರು.
 
ವೃತ್ತಿಯಲ್ಲಿ ಸಿವಿಲ್ ಎಂಜಿನಿಯರ್ ಆಗಿರುವ ಪ್ರಮೋದ್ ಕುಮಾರ್, ಲಕ್ಕಿ ಮತ್ತು ಸುವರ್ಣ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಆದಿಲ್ ನದಾಫ್ ಸಂಗೀತ ಸಂಯೋಜಿಸಿದ್ದಾರೆ. ಆರು ಹಾಡುಗಳಿದ್ದು ಎಲ್ಲಕ್ಕೂ ನಿರ್ದೇಶಕರದೇ ಸಾಹಿತ್ಯವಿದೆ. ಒಂದು ಹಾಡನ್ನು ನವೀನ್ ಸಜ್ಜು ಹಾಡಿದ್ದಾರೆ. ಮಹಾದೇವ್ ಛಾಯಾಗ್ರಹಣ ಇದೆ.
 
ಕಥೆಯನ್ನೇ ಕೇಳದೆ, ನಿರ್ದೇಶಕರ ಮೇಲೆ ನಂಬಿಕೆ ಇಟ್ಟು ಹಣ ಹೂಡಿದ್ದಾರೆ ರಘು ಮತ್ತು ಕವಿತಾ ದಂಪತಿ. ಸುದ್ದಿಗೋಷ್ಠಿಯಲ್ಲಿ ಒಂದು ಟ್ರೈಲರ್, ಹಾಡಿನ ಮೇಕಿಂಗ್ ವಿಡಿಯೊ ಪ್ರದರ್ಶನ ಮಾಡಲಾಯಿತು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.