ADVERTISEMENT

ಭೂತದ ಬೆನ್ನೇರಿ ಭವಿಷ್ಯದ ಬೆಳಕಿನೆಡೆಗೆ...

ಡಿ.ಎಂ.ಕುರ್ಕೆ ಪ್ರಶಾಂತ
Published 27 ನವೆಂಬರ್ 2014, 19:30 IST
Last Updated 27 ನವೆಂಬರ್ 2014, 19:30 IST

*‘ನಮೋ ಭೂತಾತ್ಮ’ ನಿಮ್ಮ ವೃತ್ತಿ ಬದುಕಿನಲ್ಲಿ ಹೇಗೆ ಗುರ್ತಿಸಬಹುದು? 
‘ನಮೋ ಭೂತಾತ್ಮ’ ತಮಿಳಿನ ‘ಯಾಮಿರುಕ್ಕ ಭಯಮೇ’ ಚಿತ್ರದ ರೀಮೇಕ್. ಇದು ತಮಿಳುನಾಡಿನಲ್ಲಿ ಶತದಿನ ಪ್ರದರ್ಶನ ಕಂಡ ಸಿನಿಮಾ. ಅಲ್ಲಿನ ನೇಟಿವಿಟಿ ತೆಗೆದುಕೊಂಡು ಕನ್ನಡಕ್ಕೆ ಏನು ಬೇಕು ಅದನ್ನು ಮಾಡಿದ್ದೇವೆ. ಚಿತ್ರದಲ್ಲಿ ಡುಯೆಟ್ ಇದ್ದರೂ ಅದಕ್ಕೆ ಪ್ರಾಮುಖ್ಯವಿಲ್ಲ, ಭಯಕ್ಕೆ ಪ್ರಾಮುಖ್ಯವಿದೆ. ಕೇವಲ ಭಯವೇ ಇದಿದ್ದರೆ ಡಾರ್ಕ್ ಹಾರರ್ ಸಿನಿಮಾ ಆಗುತ್ತದೆ. ಸಿನಿಮಾದಲ್ಲಿ ನನ್ನ ಅಭಿವ್ಯಕ್ತಿಯೇ ನಗು ತರಿಸುತ್ತದೆ. ನಿರ್ದೇಶಕ ಮುರುಳಿ ಮತ್ತು ನನ್ನ ಕೆಮಿಸ್ಟ್ರಿ ಚೆನ್ನಾಗಿದೆ. ಅವರು ನನ್ನ ಎಕ್ಸ್‌ಪ್ರೆಶನ್ ಸರಿಯಾಗಿ ಗ್ರಹಿಸಿದ್ದಾರೆ. ನಾಲ್ವರು ನಾಯಕಿಯರು ಮತ್ತು ಹರೀಶ್ ರಾಜ್ ಅವರೂ ಉತ್ತಮವಾಗಿ ನಟಿಸಿದ್ದಾರೆ. ಈ ಎಲ್ಲ ಕಾರಣದಿಂದ ನನ್ನ ವೃತ್ತಿ ಜೀವನದ ಅತ್ಯುತ್ತಮ ಚಿತ್ರಗಳಲ್ಲಿ ಭೂತಾತ್ಮವೂ ಒಂದು.

*ಇತ್ತೀಚಿನ ದಿನಗಳ ನಿಮ್ಮ ಚಿತ್ರಗಳನ್ನು ನೋಡಿದರೆ ಕಥೆ ಆಯ್ಕೆಯಲ್ಲಿ ಎಡವುತ್ತಿದ್ದೀರಾ?
ಬರೀ ಕಥೆ ಚೆನ್ನಾಗಿದ್ದರೆ ಸಿನಿಮಾ ಓಡುವುದಿಲ್ಲ. ಎಲ್ಲ ಅಂಶಗಳೂ ಇರಬೇಕು. ಅಂದರೆ ಒಳ್ಳೆಯ ಚಿತ್ರಮಂದಿರಗಳೂ ಸಿಗಬೇಕು. ಈ ಹಿಂದೆ ಸಿನಿಮಾಗಳ ಪ್ರಮೋಷನ್ ಕಡೆಗೆ ಗಮನಹರಿಸಬೇಕಿತ್ತು.

*ಹಾಗಿದ್ದರೆ ಎಲ್ಲಿ ತಪ್ಪುಗಳಾಗಿವೆ?
ನಾನು ಒಂದು ಸುದ್ದಿಗೋಷ್ಠಿ ಕರೆದಿರುವೆ ಎಂದುಕೊಳ್ಳಿ. ಇಡ್ಲಿವಡೆ ಕೊಡುವ ಶಕ್ತಿ ಮಾತ್ರವಿದ್ದು ಅಷ್ಟರಲ್ಲಿ ಮಾತ್ರ ಮುಗಿಸಿಕೊಂಡು ಬರುವೆ. ಆದರೆ ಹೋಳಿಗೆ ಊಟ ಹಾಕಿಸುವೆ ಎಂದು ಕರೆದುಕೊಂಡು ಹೋಗಿ ಅಲ್ಲಿ ಬರೀ ಬೋಂಡಾ, ಕಾಫಿಕೊಟ್ಟರೆ ಬಂದವರಿಗೆ ನಿರಾಶೆಯಾಗುತ್ತದೆ. ನಾವು ಕೊಡುವುದು ಕಾಫಿ ಎಂದು ಮೊದಲೇ ಹೇಳಬೇಕಿತ್ತು. ಪ್ರೇಕ್ಷಕನಿಗೂ ಇದೇ ಅನ್ನಿಸುತ್ತಿರುವುದು. ನಾನು ಒಪ್ಪಿಕೊಳ್ಳುವುದೆಲ್ಲವೂ ಹೋಳಿಗೆ ಊಟವೇ! ಆದರೆ ನಂತರ ಬದಲಾಗಿರುತ್ತದೆ. ಇದನ್ನು ಮುಕ್ತವಾಗಿ ಹೇಳಿದಾಗ ತುಂಬಾ ಜನರಿಗೆ ಬೇಸರವಾಯಿತು. ಇದನ್ನೇಕೆ ಇಷ್ಟು ಪ್ರಬುದ್ಧತೆಯಿಂದ ಹೇಳುವೆ ಎಂದರೆ ನಾನು ವಿತರಕನಾಗಿ, ತಂತ್ರಜ್ಞನಾಗಿ, ನಿರ್ಮಾಪಕನಾಗಿ, ನಟನಾಗಿ ಕೆಲಸ ಮಾಡಿದ್ದೇನೆ. ಸಿನಿಮಾ ಮಾಡಲು ಇದಕ್ಕಿಂತ ಇನ್ನೇನು ಅರ್ಹತೆ ಬೇಕು.

*ಹಾಗಿದ್ದರೆ ನಿಮ್ಮ ಸಿನಿಮಾಗಳನ್ನು ಕಟ್ಟುವ ಕೆಲಸದಲ್ಲಿ ವ್ಯತ್ಯಾಸಗಳಾಗಿವೆ?
ನಾನು ಎಂದಿಗೂ ಗೆಲುವಿನ ಸಂದರ್ಭದಲ್ಲಿ ಹಿಂದೆ ಇರುತ್ತೇನೆ. ಸೋತಾಗ ನನ್ನನ್ನು ಮುಂದೆ ತಳ್ಳುತ್ತಾರೆ. ಯಾವುದೇ ಚಿತ್ರವನ್ನು ಉದಾಹರಿಸುವುದಾದರೂ, ಕೋಮಲ್ ಚೆನ್ನಾಗಿ ನಟಿಸಿಲ್ಲ ಎಂದು ಯಾರೂ ಹೇಳಿಲ್ಲ. ಆರಂಭದಿಂದಲೂ ಸರಿಯಾದ ದಿಕ್ಕಿನಲ್ಲಿ ನಡೆಯುತ್ತಿದ್ದೇನೆ ಎಂದು ವಿಶ್ವಾಸದಿಂದ ಹೇಳುವೆ. ಸಾಧಿಸಬೇಕು ಎನ್ನುವ ಹಟವಿದೆ, ಆ ಕಾರಣಕ್ಕೆ ಇಷ್ಟೆಲ್ಲ ಸಂಕಷ್ಟಗಳನ್ನು ಸಹಿಸಿಕೊಳ್ಳುತ್ತಿರುವುದು. ಇತ್ತೀಚೆಗೆ ಯಾರೋ ಹೇಳುತ್ತಿದ್ದರಂತೆ– ‘ಕೋಮಲ್ ಸೆಂಟಿಮೆಂಟ್ ಆಗಿ ಮಾತನಾಡುತ್ತಾನೆ’ ಎಂದು. ಆ ರೀತಿ ಮಾತನಾಡಬೇಕಾದ ಅವಶ್ಯಕತೆ ನನಗಿಲ್ಲ. ಭಾವುಕವಾಗಿ ಮಾತನಾಡಿ ನಾನು ರಾಜಕಾರಣಕ್ಕೂ ಹೋಗಬೇಕಾಗಿಲ್ಲ. ಒಳ್ಳೆಯವನು ಎನಿಸಿಕೊಳ್ಳಲು ಸಿನಿಮಾಕ್ಕೆ ಬಂದಿಲ್ಲ. ಒಳ್ಳೆಯ ನಟ ಎನಿಸಿಕೊಳ್ಳಲು ಬಂದಿದ್ದೇನೆ.

ADVERTISEMENT

*ಇತ್ತೀಚೆಗೆ ಪರಭಾಷಾ ಸಿನಿಮಾಗಳ ಬಗ್ಗೆ ನಿಮ್ಮ ಒಲವು ಹೆಚ್ಚಾದಂತಿದೆ?
ಒಬ್ಬರು ನನ್ನನ್ನು ಕೇಳಿದರು– ‘ನಾವು ಕನ್ನಡ ಸಿನಿಮಾ ನೋಡುವುದಿಲ್ಲ ಎಂದು ಸಾಕಷ್ಟು ಜನ ಹೇಳುತ್ತಿದ್ದಾರೆ. ಹಾಗಿದ್ದರೆ ಮುಂದೆ ನೀವು ಏನು ಮಾಡುತ್ತಿರಿ?’. ಈ ಪ್ರಶ್ನೆಗೆ ನಾನು– ‘ರಂಗನತಿಟ್ಟಿಗೆ ಪೋಲೆಂಡ್‌ನಿಂದ ಪಕ್ಷಿಗಳು ಬರುತ್ತವೆ. ಅದೇ ರೀತಿ ಎಲ್ಲಿ ಅವಕಾಶ, ಊಟ ದೊರೆಯುತ್ತದೋ  ಅಲ್ಲಿಗೆ ಹೋಗುತ್ತೇನೆ’ ಎಂದೆ. ಆ ವೇಳೆಗೆ ನಾನು ತಮಿಳಿನಲ್ಲಿ ಒಂದು ಚಿತ್ರದಲ್ಲಿ ನಟಿಸಿದ್ದೆ. ಆ ಕಾರಣಕ್ಕೆ ಅಲ್ಲಿನ ಅವಕಾಶಗಳ ಬಗ್ಗೆ ಮಾತನಾಡಿದರೆ, ನನ್ನ ಮಾತುಗಳನ್ನು ತಪ್ಪಾಗಿ ವ್ಯಾಖ್ಯಾನಿಸಲಾಯಿತು.

*ತಮಿಳು ಚಿತ್ರಗಳಲ್ಲಿ ಕಾಮಿಡಿ ಪಾತ್ರಗಳಲ್ಲಿ ನಟಿಸುವುದಿಲ್ಲ ಎಂದು ತೀರ್ಮಾನ ಮಾಡಿದ್ದೀರಂತೆ?
ನಮ್ಮಲ್ಲಿ ಉತ್ತಮ ನಟ ಬಿರಾದಾರ್ ಅವರನ್ನು ಭಿಕ್ಷುಕ–ಕುಡುಕನ ಪಾತ್ರಕ್ಕೆ ಸೀಮಿತ ಮಾಡಿದ್ದೇವೆ. ಬ್ರಹ್ಮಾವರ್ ಅವರಿಗೆ ಪೂಜಾರಿ ಮತ್ತು ಪೋಸ್ಟ್‌ಮ್ಯಾನ್ ಪಾತ್ರಗಳಿಗೆ ಆದ್ಯತೆ. ಹೀಗೆ ಕಲಾವಿದರನ್ನು ಬ್ರಾಂಡ್ ಮಾಡಿದ್ದೇವೆ. ನನಗೆ ಬೇರೆ ರೀತಿಯಲ್ಲಿ ಕಾಣಿಸಿಕೊಳ್ಳಬೇಕು ಎನ್ನುವ ತಹತಹಿಕೆ ಇದೆ. ನನ್ನೊಳಗೆ ಒಬ್ಬ ಕಲಾವಿದ ಇದ್ದಾನೆ. ಸೀರಿಯಸ್, ವಿಲನ್ ಪಾತ್ರ ಕೊಡಿ ಎಂದಿದ್ದೇನೆ. ಆರಂಭದಲ್ಲಿಯೇ ಕಾಮಿಡಿ ಮಾಡಿದರೆ ಆ ನಂತರ ಬೇರೆ ರೀತಿಯ ಅವಕಾಶಗಳು ಕಷ್ಟಸಾಧ್ಯ. ಕಾಮಿಡಿ ಎನ್ನುವುದು ಭಿನ್ನವಾಗಿ ಕಾಣುವ ಹವಳ–ಮುತ್ತುಗಳಂತೆ. ಅದು ಕೇಜಿಗಟ್ಟಲೇ ಸಿಕ್ಕುವ ಸರಕಲ್ಲ. ಅಂಥ ಚಿತ್ರಗಳನ್ನು ಹುಡುಕಿ ಮಾಡಬೇಕು.

*ತಮಿಳಿನಲ್ಲಿ ನಿಮ್ಮ ಲಾಂಚ್ ಯಾವ ರೀತಿ ಇರುತ್ತದೆ?
ತಮಿಳಿನ ಹೊಸ ಚಿತ್ರ ಫೆಬ್ರುವರಿಯಲ್ಲಿ ಆರಂಭವಾಗಲಿದೆ. ‘ನಮೋ ಭೂತಾತ್ಮ’ನ ಯಶಸ್ಸಿನ ಮೇಲೆ ಅಲ್ಲಿ ನನ್ನ ಲಾಂಚ್ ನಿರ್ಧಾರವಾಗಲಿದೆ. ಇಲ್ಲದಿದ್ದರೆ ಅದೇ ಕೂಲಿ, ಗಾರೆ ಕೆಲಸ ಇತ್ಯಾದಿ ಹಾದಿಯಲ್ಲಿ ಸಾಗಿ ಅಂತಿಮಗಾಗಿ ರಿಯಲ್‌ ಎಸ್ಟೇಟ್‌ಗೆ ಬಡ್ತಿ ಪಡೆಯಬೇಕು. ‘ನಮೋ ಭೂತಾತ್ಮ’ ಯಶಸ್ಸು ಕಂಡರೆ ಒಂದೇ ಹಂತದಲ್ಲಿಯೇ ರಿಯಲ್‌ ಎಸ್ಟೇಟ್ ಸಿಕ್ಕಂತೆ.

*ನಿರ್ದೇಶನದ ವಿಚಾರದಲ್ಲಿ ಮಧ್ಯಪ್ರವೇಶಿಸುವಿರಿ ಎನ್ನುವ ಮಾತಿದೆ?
ನನ್ನದು ಮಧ್ಯಪ್ರವೇಶವಲ್ಲ, ನಿಶ್ಚಲವಾಗಿ ತೊಡಗುವಿಕೆ. ಕಾಮಿಡಿ ತನ್ನಿಂದ ತಾನೇ ಹೊರಬರಬೇಕು. ನಿರ್ದೇಶಕರು ಈ ರೀತಿ ಮಾಡಿ ಎಂದಾಗ, ಇಲ್ಲ ಈ ರೀತಿ ಆದರೆ ಚೆನ್ನಾಗಿ ಬರುತ್ತದೆ ಎಂದು ಹೇಳಿದರೆ ಅದು ಇನ್‌ವಾಲ್ವ್‌ಮೆಂಟ್ ಅಷ್ಟೇ. 

*ಮುಂದಿನ ಹಾದಿ?
‘ಲೊಡ್ಡೆ’, ‘ಗೋವಾ’ ಸಿನಿಮಾಗಳು ಇವೆ. ‘ಡೀಲ್‌ರಾಜ’ ನಡೆಯುತ್ತಿದೆ. ಸುಮಾರು ಸಣ್ಣಕಥೆಗಳನ್ನು ಬರೆದಿದ್ದೇನೆ. ಓದು ಸಹ ನನ್ನ ಬದುಕಿನ ಮುಖ್ಯ ಭಾಗಗಳಲ್ಲಿ ಒಂದು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.