ADVERTISEMENT

ಮಕ್ಕಳೂ ತಿನ್ನಬಹುದಾದ ‘ಜಿಲೇಬಿ’

​ಪ್ರಜಾವಾಣಿ ವಾರ್ತೆ
Published 16 ಫೆಬ್ರುವರಿ 2017, 19:30 IST
Last Updated 16 ಫೆಬ್ರುವರಿ 2017, 19:30 IST
ಲಕ್ಕಿ ಶಂಕರ್‌
ಲಕ್ಕಿ ಶಂಕರ್‌   

ಚಂದನವನದಲ್ಲಿ ಈಗ ‘ಅಡಲ್ಟ್‌ ಕಾಮಿಡಿ’ ಸಿನಿಮಾಗಳ ಟ್ರೆಂಡ್‌ ಶುರುವಾಗಿದೆ. ಈ ಟ್ರೆಂಡ್‌ಗೆ ಹೊಸ ಸೇರ್ಪಡೆ ಪೂಜಾ ಗಾಂಧಿ ನಟಿಸಿರುವ ‘ಜಿಲೇಬಿ’. ಇದು ದ್ವಂದ್ವಾರ್ಥ ಪ್ರಧಾನ ಚಿತ್ರ ಎನ್ನುವುದು ಟ್ರೈಲರ್‌ನಲ್ಲಿಯೇ ತಿಳಿಯುತ್ತದೆ. ಇದಕ್ಕೆ ಪೂರಕವಾಗಿ ಸೆನ್ಸಾರ್‌ ಮಂಡಳಿಯಿಂದ ‘ಎ’ ಪ್ರಮಾಣಪತ್ರವೂ ಸಿಕ್ಕಿದೆ.

ಆದರೆ ಚಿತ್ರತಂಡ ಮಾತ್ರ ಇದನ್ನು ‘ವಯಸ್ಕರ ಸಿನಿಮಾ’ ಎಂದು ಒಪ್ಪಿಕೊಳ್ಳಲು ಸಿದ್ಧವಿಲ್ಲ. ‘ಮಕ್ಕಳೂ ಎಂಜಾಯ್‌ ಮಾಡುವಂಥ ಸನ್ನಿವೇಶಗಳು ಚಿತ್ರದಲ್ಲಿವೆ’ ಎನ್ನುವುದು ಅವರ ವಾದ.

ನಿರ್ದೇಶಕ ಲಕ್ಕಿ ಶಂಕರ್‌ ಅವರೂ ಇದನ್ನೇ ಹೇಳುತ್ತಾರೆ. ‘ಇದು ಹಾಸ್ಯಪ್ರಜ್ಞೆಯಲ್ಲಿ ರೂಪುಗೊಂಡಿರುವ ಸಿನಿಮಾ. ಹಾಸ್ಯದ ಮೂಲಕವೇ ಎಲ್ಲವನ್ನೂ ಹೇಳಲು ಪ್ರಯತ್ನಿಸಿದ್ದೇವೆಯೇ ವಿನಾ ಯಾವುದನ್ನೂ ಆಶ್ಲೀಲವಾಗಿ ತೋರಿಸಿಲ್ಲ’ ಎನ್ನುತ್ತಾರೆ ಅವರು. ಅವಿವಾಹಿತ ಹುಡುಗರು ಕಾಲ್‌ಗರ್ಲ್‌ ಮೋಹಕ್ಕೆ ಬಿದ್ದಾಗ ಉಂಟಾಗುವ ಸಂಗತಿಗಳನ್ನೇ ಈ ಸಿನಿಮಾದ ಕಥಾವಸ್ತು.

ಕಾಲ್‌ಗರ್ಲ್‌ ಪಾತ್ರದಲ್ಲಿ ನಟಿಸಿರುವ ಪೂಜಾ ಗಾಂಧಿಯವರ ಮೋಹಪಾಶಕ್ಕೆ ಒಳಗಾಗುವ ಹುಡುಗರಾಗಿ ಸೂರ್ಯ ನಾಗೇಂದ್ರ ಮತ್ತು ವಿಜಯ್‌ ಚಂಡೂರ್‌ ಕಾಣಿಸಿದ್ದಾರೆ. ‘ಈಗ ಪ್ರೇಕ್ಷಕರು ಪ್ರಬುದ್ಧರಾಗಿದ್ದಾರೆ. ಕಿರುತೆರೆಯಲ್ಲಿಯೂ ಅಡಲ್ಟ್ ಕಂಟೆಂಟ್ ಇರುವ ಜಾಹೀರಾತುಗಳು ಬರುತ್ತವೆ. 

ಯಾವುದು ಕೆಟ್ಟದ್ದು, ಯಾವುದು ಪ್ರೇಕ್ಷಕರಿಗಿದೆ. ಕೇವಲ ‘ಎ’ ಪ್ರಮಾಣಪತ್ರದಿಂದ ಇಡೀ ಸಿನಿಮಾವನ್ನು ನಿರ್ಧರಿಸುವುದು ಸರಿಯಲ್ಲ’ ಎಂದು ತಮ್ಮ ಚಿತ್ರವನ್ನು ಸಮರ್ಥಿಸಿಕೊಂಡರು ನಾಗೇಂದ್ರ.

‘ನಮ್ಮ ಚಿತ್ರದಲ್ಲಿ ಕಥೆಯೇ ಇಲ್ಲ. ಇರುವುದು ಒಂದು ಘಟನೆ ಮಾತ್ರ. ಚಿತ್ರ ನೋಡಿದ ಪ್ರತಿಯೊಬ್ಬ ಪ್ರೇಕ್ಷಕನ ತಲೆಯಲ್ಲಿಯೂ ಬೇರೆ ಬೇರೆ ಕಥೆಗಳು ಹುಟ್ಟಿಕೊಳ್ಳುತ್ತವೆ’ ಎನ್ನುವುದು ನಿರ್ದೇಶಕರ ಅಂಬೋಣ. ಈ ಚಿತ್ರದ ನಿರ್ದೇಶನದ ಜತೆ ನಿರ್ಮಾಣದ ಹೊಣೆಯನ್ನೂ ಶಂಕರ್‌ ಹೊತ್ತುಕೊಂಡಿದ್ದಾರೆ.

ಜೇಮ್ಸ್ ಆರ್ಕಿಟೆಕ್ಟ್ ಸಂಗೀತ ನೀಡಿದ್ದಾರೆ. ಚಿತ್ರದ ಗೀತೆಗಳಿಗೆ ತಿಪ್ಪೇಸ್ವಾಮಿ, ನಾಗೇಂದ್ರ ಪ್ರಸಾದ್ ಜತೆಗೇ ಶಂಕರ್‌ ಅವರೇ ಸಾಹಿತ್ಯ ಬರೆದಿದ್ದಾರೆ.
‘ಎ’ ಎಂದರೆ ಅಡಲ್ಟ್ ಸಬ್ಜೆಕ್ಟ್ ಇರಬಹುದು. ಆದರೆ ಸಿನಿಮಾ ಬಿಡುಗಡೆಯಾದ ನಂತರ ಎ ಎಂದರೆ ಅಮೇಜಿಂಗ್ ಎನ್ನುವ ಉದ್ಘಾರ ಪ್ರೇಕ್ಷಕರಿಂದ ಕೇಳಿಬರಲಿದೆ’ ಎಂದು ಸೆನ್ಸಾರ್‌ ಮಂಡಳಿಯ ಪ್ರಮಾಣಪತ್ರದ ಅರ್ಥವನ್ನೇ ಬದಲಿಸಿ ಹೇಳಿದರು ತಿಪ್ಪೇಸ್ವಾಮಿ.

ರಾಕ್‌ಲೈನ್ ಸುಧಾಕರ್, ತಬಲಾ ನಾಣಿ, ದತ್ತಣ್ಣ, ಮಿತ್ರಾ, ಶೋಭರಾಜ್ ಮುಂತಾದವರು ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಳ್ಳಲಿರುವ ‘ಜಿಲೇಬಿ’ ಫೆ. 24ರಂದು ಪ್ರೇಕ್ಷಕರ ಎದುರಿಗೆ ಬರುವ ಸಿದ್ಧತೆ ನಡೆಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT