ADVERTISEMENT

ಮತ್ತೊಬ್ಬ ಮಣ್ಣಿನ ಮಗ!

​ಪ್ರಜಾವಾಣಿ ವಾರ್ತೆ
Published 29 ಅಕ್ಟೋಬರ್ 2014, 19:30 IST
Last Updated 29 ಅಕ್ಟೋಬರ್ 2014, 19:30 IST

ಕಥೆ ಕೇಳಿದಾಕ್ಷಣ ನೆನಪಿಗೆ ಬರುವುದು ‘ಬಂಗಾರದ ಮನುಷ್ಯ’, ‘ಕಾಮನಬಿಲ್ಲು’ ಇತ್ಯಾದಿ ಚಿತ್ರಗಳು. ಮಣ್ಣಿನ ಮೇಲಿರುವ ಪ್ರೀತಿಗೆ ಸೋತು ಪಟ್ಟಣ ತ್ಯಜಿಸಿ ಹಳ್ಳಿಗೆ ಬಂದು, ಊರನ್ನು ಉದ್ಧಾರ ಮಾಡುವ ಯುವಕನ ಕಥೆಯದು. ಮನೆತನದ ಗೌರವವನ್ನು ಕಾಪಾಡುವ ‘ವಂಶೋದ್ಧಾರಕ’, ಸಂಬಂಧಗಳನ್ನು ಗಟ್ಟಿಗೊಳಿಸುತ್ತಾನೆ. ಹಳೆಯ ಪರಿಮಳದ ಕಥೆಗೆ ಕಮರ್ಷಿಯಲ್ ರೂಪ ಕೊಟ್ಟು ಈ ಸಿನಿಮ ನಿರ್ಮಾಣಕ್ಕೆ ಮುಂದಾಗಿದ್ದಾರೆ ಅರವಿಂದ್.

ಮೂರು ದಶಕಕ್ಕೂ ಹೆಚ್ಚು ಕಾಲ ಅಭಿನಯದಲ್ಲಿ ತೊಡಗಿಕೊಂಡು, ಸುಮಾರು ಇನ್ನೂರೈವತ್ತು ಸಿನಿಮಾಗಳಲ್ಲಿ ಕಾಣಿಸಿಕೊಂಡಿರುವ ಅರವಿಂದ್ ಅವರಿಗೆ ಇದು ಚೊಚ್ಚಿಲ ನಿರ್ಮಾಣದ ಚಿತ್ರ. ಸಿನಿಮಾವೊಂದನ್ನು ನಿರ್ಮಿಸುವ ಆಸೆ ‘ವಂಶೋದ್ಧಾರಕ’ನೊಂದಿಗೆ ಈಡೇರಿದ ಖುಷಿ ಅವರದು. ‘ಕೆಲವು ಸಿನಿಮಾಗಳು ನಿರ್ದಿಷ್ಟ ವರ್ಗಕ್ಕೆ ಸೀಮಿತವಾಗಿರುತ್ತವೆ. ಆದರೆ ಇದು ಹಾಗಲ್ಲ. ನಾವೆಲ್ಲ ಎ, ಬಿ. ಸಿ ಅಂತ ಕರೆಯುವ ಎಲ್ಲ ವರ್ಗಗಳಿಗೆ ಸಮಾನವಾಗಿ ಖುಷಿ ಕೊಡವಂಥದು’ ಎಂದು ಅರವಿಂದ್‌ ಬಣ್ಣಿಸಿದರು. ಮಾತೆತ್ತಿದರೆ ಕತ್ತಿ, ಮಚ್ಚು, ಲಾಂಗು ಬೀಸುವ ಸಿನಿಮಾಗಳೇ ಬರುತ್ತಿವೆ ಎಂಬ ಕಳವಳದ ಮಧ್ಯೆ ತಮ್ಮ ಚಿತ್ರ ಹೊಸ ಭರವಸೆ ಕೊಡಬಲ್ಲದು ಎಂಬ ವಿಶ್ವಾಸ ಅವರದು.

ಹಳೆಯ ಹಲವು ಸಿನಿಮಾಗಳಿಗೆ ನಿರ್ದೇಶನ ಮಾಡಿರುವ ಅನುಭವಿ ಆದಿತ್ಯ ಚಿಕ್ಕಣ್ಣ, ‘ವಂಶೋದ್ಧಾರಕ’ನಿಗಾಗಿ ಆಕ್ಷನ್-ಕಟ್ ಹೇಳಲು ಸಿದ್ಧವಾಗಿದ್ದಾರೆ. ಅರವಿಂದ್ ಅವರು ಚಿಕ್ಕಣ್ಣ ಅವರನ್ನು ಈ ಸಿನಿಮಾ ನಿರ್ದೇಶನ ಮಾಡಿಕೊಡಿ ಎಂಬ ಮನವಿಯೊಂದಿಗೆ ಭೇಟಿಯಾದಾಗ, ‘ಈಗಾಗಲೇ ನಾನು ನಿವೃತ್ತಿಯಾಗಿದ್ದೇನಲ್ಲ’ ಎಂದು ಬೇಡಿಕೆಯನ್ನು ತಳ್ಳಿಹಾಕಿದರಂತೆ. ‘ಆದರೆ ಈ ಕಥೆಗೆ ನಾನೇ ಇರಬೇಕು ಎಂಬುದು ಅರವಿಂದ್ ಆಸೆ. ಹೀಗಾಗಿ ಮತ್ತೆ ಇಲ್ಲಿ ಬಂದು ನಿಂತಿದ್ದೇನೆ’ ಎಂದರು ಆದಿತ್ಯ ಚಿಕ್ಕಣ್ಣ.

ಎಷ್ಟೋ ಯುವಕರು ಒಳ್ಳೆಯ ನೌಕರಿ ತ್ಯಜಿಸಿ, ಹಳ್ಳಿಗೆ ಕೃಷಿ ಮಡಲು ಬರುತ್ತಿದ್ದಾರೆ. ಇದೇ ಕಥೆ ಸಿನಿಮಾದ್ದು ಕೂಡ. ಅದರಲ್ಲೂ ರಾಸಾಯನಿಕ ಬಳಸದೇ ಸಾವಯವ ಕೃಷಿ ಮಾಡುತ್ತಿರುವವರ ಸಂಖ್ಯೆ ಹೆಚ್ಚುತ್ತಿದೆ. ಆ ಒಳ್ಳೆಯ ಅಂಶವನ್ನು ಸಹ ಸಿನಿಮಾದಲ್ಲಿ ಬಳಸಿಕೊಳ್ಳಲಾಗಿದೆ. ಇದು ಸಾಕ್ಷ್ಯಚಿತ್ರ ಅಲ್ಲ; ಬದಲಾಗಿ ಮನರಂಜನೆಯ ಎಲ್ಲ ಅಂಶಗಳನ್ನು ಒಳಗೊಂಡ ಕಮರ್ಷಿಯಲ್ ಸಿನಿಮಾ ಎಂದು ನಾಯಕ ವಿಜಯ ರಾಘವೇಂದ್ರ ವಿಶ್ಲೇಷಿಸಿದರು.

ಮೇಘನಾ ರಾಜ್ ಸಾಮಾಜಿಕ ಕಾರ್ಯಕರ್ತೆಯಾಗಿ ಕಾಣಿಸಿಕೊಳ್ಳಲಿದ್ದು, ಒಳ್ಳೆಯ ಸಂದೇಶದ ಸಿನಿಮಾದಲ್ಲಿ ವಿಭಿನ್ನ ಪಾತ್ರ ಸಿಕ್ಕಿದೆ ಎಂದರು. ಸಂಭಾಷಣೆ ಬರೆದ ಕುಮಾರ, ಛಾಯಾಗ್ರಾಹಕ ಪಿ.ಕೆ.ಎಚ್.ದಾಸ್ ಮಾತನಾಡಿದರು. ಈಚೆಗಷ್ಟೇ ಮುಹೂರ್ತ ನೆರವೇರಿಸಿಕೊಂಡ ಈ ಸಿನಿಮಾಕ್ಕೆ ಮೈಸೂರು, ಮಡಿಕೇರಿ, ಚಿಕ್ಕಮಗಳೂರು ಹಾಗೂ ಬಾಬಾಬುಡನ್‌ಗಿರಿಯಲ್ಲಿ ೫೦ ದಿನಗಳ ಕಾಲ ಚಿತ್ರೀಕರಣ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.