ADVERTISEMENT

ಮಳೆ ಹುಡುಗಿಯ ಹೊಸ ಅಧ್ಯಾಯ

​ಪ್ರಜಾವಾಣಿ ವಾರ್ತೆ
Published 27 ಏಪ್ರಿಲ್ 2017, 19:30 IST
Last Updated 27 ಏಪ್ರಿಲ್ 2017, 19:30 IST
ಮಳೆ ಹುಡುಗಿಯ ಹೊಸ ಅಧ್ಯಾಯ
ಮಳೆ ಹುಡುಗಿಯ ಹೊಸ ಅಧ್ಯಾಯ   
ಮಳೆ ಹುಡುಗಿಯ ಕಾಲ ಮುಗಿಯಿತು ಎಂದು ಗಾಂಧಿನಗರದ ಗಲ್ಲಿಯಲ್ಲಿ ಪಿಸುಮಾತುಗಳು ಕೇಳಿಬರುತ್ತಿರುವಾಗಲೇ ಪೂಜಾ ಗಾಂಧಿ ಇನ್ನಷ್ಟು ಹುಮ್ಮಸ್ಸಿನೊಂದಿಗೆ ಮರಳಿದ್ದಾರೆ. ‘ಅಭಿನೇತ್ರಿ’ ಸಿನಿಮಾದ ಮೂಲಕ ನಿರ್ಮಾಪಕಿಯ ಪಟ್ಟಕ್ಕೂ ಏರಿದ್ದ ಅವರೀಗ ಅದಕ್ಕಿಂತ ದೊಡ್ಡ ಹೆಜ್ಜೆಯಿಟ್ಟಿದ್ದಾರೆ.
 
ಅವರ ನಿರ್ಮಾಣದಲ್ಲಿ ಒಂದೆರಡಲ್ಲ, ಮೂರು ಸಿನಿಮಾಗಳು ಒಟ್ಟಿಗೇ ಸೆಟ್ಟೇರುತ್ತಿವೆ! ‘ಎಂಟರ್‌ಟೈನ್‌ಮೆಂಟ್ ಫ್ಯಾಕ್ಟರಿ’ ಎಂಬ ನಿರ್ಮಾಣ ಸಂಸ್ಥೆಯ ಮೂಲಕ ಅವರು ಈ ಸಿನಿಮಾಗಳನ್ನು ನಿರ್ಮಿಸುತ್ತಿದ್ದಾರೆ.
 
ಈ ವಿಷಯ ತಿಳಿಸಲಿಕ್ಕಾಗಿಯೇ ಅವರು ಇತ್ತೀಚೆಗೆ ಪತ್ರಿಕಾಗೋಷ್ಠಿಯನ್ನು ಏರ್ಪಡಿಸಿದ್ದರು. ಪತ್ರಿಕಾಗೋಷ್ಠಿಯಲ್ಲಿದ್ದದ್ದು ಅವರೊಬ್ಬರೇ. 
 
‘ಇದು ನನ್ನ ಜೀವನದ ಹೊಸ ಅಧ್ಯಾಯ. ದೊಡ್ಡ ಗುರಿಯೊಂದನ್ನು ಇಟ್ಟುಕೊಂಡು ಹೊರಟಿದ್ದೀನಿ’ ಎಂದೇ ಮಾತಿಗೆ ಆರಂಭಿಸಿದರು ಅವರು. ‘ಮೇ 2ರಂದು ನನ್ನ ನಿರ್ಮಾಣದ ಮೂರು ಸಿನಿಮಾಗಳು ಸೆಟ್ಟೇರುತ್ತಿವೆ. ಎರಡು ಚಿತ್ರಗಳಲ್ಲಿ ನಾನೂ ನಟಿಸಿದ್ದೇನೆ’ ಎಂದು ಆಹ್ವಾನಪತ್ರಿಕೆಯನ್ನು ಕೈಗಿಟ್ಟರು ಪೂಜಾ.
 
‘ಉತಾಹಿ’, ಬ್ಲಾಕ್‌ v/s ವೈಟ್‌’, ‘ಭೂ’ ಇವೇ ಮೂರು ಚಿತ್ರಗಳು. ಪುಟ್ಟ ಹೊತ್ತಿಗೆಯಂತಿದ್ದ ಆಹ್ವಾನಪತ್ರಿಕೆಯಲ್ಲಿ ಒಂದೂ ಕನ್ನಡ ಅಕ್ಷರ ಕಾಣದೇ, ಪೂಜಾ ಇಂಗ್ಲಿಷ್‌ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರಾ ಎಂಬ ಸಂದೇಹ ಮೂಡಿದ್ದು ನಿಜ. ಇದೇ ಪ್ರಶ್ನೆಯನ್ನು ಮುಂದಿಟ್ಟಾಗ ಅವರು ‘ಈ ಮೂರೂ ಕನ್ನಡ ಚಿತ್ರಗಳೇ ಮತ್ತು ಮೂರು ಚಿತ್ರಗಳಲ್ಲಿಯೂ ಬಹುತೇಕ ಕನ್ನಡದ ಕಲಾವಿದರೇ ನಟಿಸುತ್ತಿದ್ದಾರೆ’ ಎಂದೂ ಸ್ಪಷ್ಟಪಡಿಸಿದರು.
 
ಚಿತ್ರಗಳಿಗೆ ಇರಿಸಲಾದ ವಿಚಿತ್ರ ಹೆಸರುಗಳ ಅರ್ಥವಾಗಲೀ ಉದ್ದೇಶವಾಗಲೀ ಅವರಿಗೆ ಗೊತ್ತಿರಲಿಲ್ಲ. ಈ ಮೂರು ಚಿತ್ರಗಳನ್ನು ಜೆ.ಡಿ. ಚಕ್ರವರ್ತಿ ನಿರ್ದೇಶಿಸುತ್ತಿದ್ದಾರೆ. ತಾಂತ್ರಿಕ ತಂಡವೂ ಮೂರೂ ಚಿತ್ರಗಳಿಗೆ ಒಂದೇ ಆಗಿರುತ್ತದೆ.
 
‘ಉತಾಹಿ’, ಬ್ಲಾಕ್‌ v/s ವೈಟ್‌’ ಸಿನಿಮಾಗಳಲ್ಲಿ ಪೂಜಾ ಗಾಂಧಿ ಅವರೇ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದರೆ, ‘ಭೂ’ ಚಿತ್ರದಲ್ಲಿ ಸಿತಾರಾ ರಾವಲ್‌ ಎಂಬ ಹೊಸ ಹುಡುಗಿಯನ್ನು ಪರಿಚಯಿಸಲಾಗುತ್ತಿದೆ. 
 
ಅಲ್ಲದೇ ‘ಉತಾಹಿ’ (ಉತ್ಸಾಹಿ ಅಲ್ಲ) ಸಿನಿಮಾದಲ್ಲಿ ಕನ್ನಡದ್ದೇ 50 ಜನ ರಂಗಭೂಮಿ ಕಲಾವಿದರಿಗೆ ಅವಕಾಶ ನೀಡಲಾಗಿದೆ. ಇದೊಂದು ಪ್ರೇಮಕಥೆ. ಇನ್ನೊಂದು ಸಿನಿಮಾ ‘ಬ್ಲಾಕ್‌ v/s ವೈಟ್‌’ ಸಾಮಾಜಿಕ ಸಮಸ್ಯೆಯೊಂದನ್ನು ಆಧರಿಸಿದೆಯಂತೆ.

‘ಭೂ’ ಪಕ್ಕಾ ಹಾರರ್‌ ಸಿನಿಮಾ. ಮೇ 10ರಿಂದ ಚಿತ್ರೀಕರಣ ಆರಂಭಿಸುವ ಯೋಚನೆ ತಂಡಕ್ಕಿದೆ. ಮೂರು ಚಿತ್ರಗಳನ್ನೂ ಏಕಕಾಲದಲ್ಲಿ ಚಿತ್ರೀಕರಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ.
 
‘ನಾನು ಸಿನಿಮಾ ರಂಗದಲ್ಲಿ ನೆಲೆಯೂರುವಾಗ ನನ್ನನ್ನು ಲಾಂಚ್‌ ಮಾಡಲು ಯಾರೂ ಇರಲಿಲ್ಲ. ಸ್ವಂತ ಪರಿಶ್ರಮದಿಂದ ಸಾಕಷ್ಟು ಕಷ್ಟಪಟ್ಟಿದ್ದೆ. ಬೇರೆ ಬೇರೆ ಭಾಷೆಗಳಲ್ಲಿ ಪ್ರಯತ್ನಿಸಿದ್ದೆ. ಕೊನೆಗೆ ಮುಂಗಾರುಮಳೆಯಲ್ಲಿ ನಟಿಸಲು ಅವಕಾಶ ಸಿಕ್ಕಿತು. ಹಾಗೆ ಇಂದಿನ ಹೊಸ ನಟರಿಗೆ ಆಗಬಾರದು ಎಂಬ ಕಾರಣಕ್ಕೆ ಈ ಮೂರು ಸಿನಿಮಾಗಳಲ್ಲಿಯೂ ಹೊಸಬರಿಗೆ ಅವಕಾಶ ಕೊಡುತ್ತಿದ್ದೇನೆ’ ಎಂದರು ಪೂಜಾ. 
 
ಮೂರು ಚಿತ್ರಗಳಿಗೂ ಹರ್ಷ್‌ರಾಜ್‌ ಶ್ರಾಫ್‌ ಛಾಯಾಗ್ರಹಣ, ಅಮರ್‌ ಮೋಹಿಲೆ ಸಂಗೀತ, ಜಯದೇವ್‌ ಸಂಭಾಷಣೆ ಇರಲಿದೆ. ಈ ಮೂರು ಚಿತ್ರ ಪೂರ್ಣಗೊಂಡ ನಂತರ ತಮ್ಮ ‘ಎಂಟರ್‌ಟೈನ್‌ಮೆಂಟ್‌ ಫ್ಯಾಕ್ಟರಿ’ಯ ಅಡಿಯಲ್ಲಿಯೇ ಇನ್ನೂ ಎಂಟು ಸಿನಿಮಾ ನಿರ್ಮಿಸುವ ಯೋಚನೆಯೂ ಅವರಿಗೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.