ADVERTISEMENT

ಮಾತಿನ ಬೆರಗಿನ ‘ಆಲಂ ಅರಾ’

ಎನ್.ಜಗನ್ನಾಥ ಪ್ರಕಾಶ್
Published 10 ಮಾರ್ಚ್ 2016, 19:45 IST
Last Updated 10 ಮಾರ್ಚ್ 2016, 19:45 IST
ಮಾತಿನ ಬೆರಗಿನ ‘ಆಲಂ ಅರಾ’
ಮಾತಿನ ಬೆರಗಿನ ‘ಆಲಂ ಅರಾ’   

ಭಾರತದ ಮೊದಲ ವಾಕ್ಚಿತ್ರ ‘ಆಲಂ ಅರಾ’ ತೆರೆಕಂಡು ಮಾರ್ಚ್‌ 14ಕ್ಕೆ 85 ವರ್ಷ. ‘ಆಲಂ ಅರಾ’ ಎಂದರೆ ‘ಬೆಳಕು ಕೊಡುವವಳು’ ಎಂದರ್ಥ. ಈ ಚಿತ್ರ ಎಲ್ಲ ಅರ್ಥದಲ್ಲೂ ಭಾರತೀಯ ವಾಕ್ಚಿತ್ರ ಪರಂಪರೆಯಲ್ಲಿ ದೀಪಧಾರಿಯಂತಿದೆ.

1931ನೇ ಇಸವಿಯ ಮಾರ್ಚ್‌ ತಿಂಗಳ 14ನೇ ತಾರೀಖು. ಅಂದಿನ ಮುಂಬೈನ ಮೆಜೆಸ್ಟಿಕ್‌ ಚಿತ್ರಮಂದಿರದಲ್ಲಿ ಹಬ್ಬದ ವಾತಾವರಣ. ಚಿತ್ರ ನೋಡಿ ಹೊರಬಂದ ಎಲ್ಲರ ಬಾಯಲ್ಲೂ ‘ದೇ ದೇ ಕುದಾ ಕೇ ನಾಮ್‌ಫರ್‌...’ ಎನ್ನುವ ಗೀತೆಯ ಗುನುಗು. ಚಿತ್ರಮಂದಿರದಲ್ಲಿ ಧ್ವನಿವರ್ಧಕಗಳ ಮೂಲಕ ಗೀತೆ ಅಲೆ ಅಲೆಯಾಗಿ ಮೂಡಿಬಂದಾಗಲೇ ಪ್ರೇಕ್ಷಕರು ಪುಲಕಿತರಾಗಿದ್ದರು.

ಚಿತ್ರಮಂದಿರದಿಂದ ಹೊರಬಂದ ಮೇಲೂ ಆ ಹಾಡಿನ ಗುಂಗು ಅವರನ್ನು ಹಿಂಬಾಲಿಸಿತು. ದಿನ ಬೆಳಗಾಗುವುದರೊಳಗೆ ಜನಪ್ರಿಯವಾದ ಈ ಹಾಡು ಭಾರತೀಯ ಚಿತ್ರಲೋಕದ ಮೊದಲ ಮಾತಿನ ಚಿತ್ರ ‘ಆಲಂ ಅರಾ’ದ್ದು. ಇದನ್ನು ಹಾಡಿದ್ದು ಫಕೀರನ ಪಾತ್ರಧಾರಿ. ಆ ಪಾತ್ರ ಮಾಡಿದ್ದವರು ಪ್ರಸಿದ್ಧ ಗಾಯಕ ನಟ ವಜೀರ್‌ ಮಹಮದ್‌ ಖಾನ್‌.

ಆರ್ದೇಶಿರ್‌ ಇರಾನಿ ‘ಆಲಂ ಅರಾ’ ಚಿತ್ರದ ರೂವಾರಿ. ‘ಇಂಪೀರಿಯಲ್‌ ಮೂವಿಟೋನ್‌ ಕಂಪೆನಿ’ ಬ್ಯಾನರ್‌ನಲ್ಲಿ ತಯಾರಿಸಿದ ‘ಆಲಂ ಅರಾ’ ಬಿಡುಗಡೆಯಾದ 1931ರ ಮಾರ್ಚ್‌ 14 ಭಾರತೀಯ ವಾಕ್ಚಿತ್ರ ಇತಿಹಾಸದ ಮಹತ್ವದ ದಿನ. ಇದು ಪೂರ್ಣ ಪ್ರಮಾಣದ ರೂಪಕ ಚಿತ್ರ. ‘ಆಲಂ ಅರಾ’ದ ಬಳಿಕ ಮಾತಿನ ಚಿತ್ರಜಗತ್ತು ಹೊಸ ಯುಗಕ್ಕೆ ಕಾಲಿಟ್ಟಿತು. ಆವರೆಗೆ ಚಾಲ್ತಿಯಲ್ಲಿದ್ದ ಮೂಕಿ ಚಿತ್ರಗಳು ನಿಧಾನಕ್ಕೆ ಹಿಂದೆ ಸರಿದವು.

ಭಾರತದಲ್ಲಿ ‘ಆಲಂ ಅರಾ’ ತೆರೆಕಾಣುವ ವೇಳೆಗಾಗಲೇ ಅಮೆರಿಕ, ಬ್ರಿಟನ್‌, ಫ್ರಾನ್ಸ್ ದೇಶಗಳಲ್ಲಿ ಚಿತ್ರರಂಗಕ್ಕೆ ಸದ್ದು ಸೇರಿ ಸುದ್ದಿ ಮಾಡಲಾರಂಭಿಸಿತ್ತು. ‘ವಾರ್ನರ್ಸ್ ಬ್ರದರ್ಸ್ ತಯಾರಿಕಾ ಸಂಸ್ಥೆ’ 1926ರಲ್ಲಿ ‘ಡಾನ್ಜೂನ್‌’ ಚಿತ್ರದ ಮೂಲಕ ಮಾತಿನ ಚಿತ್ರಕ್ಕೆ ನಾಂದಿ ಹಾಡಿದ್ದರು. ನಂತರದ ದಿನಗಳಲ್ಲಿ ಮಾತಿನೊಟ್ಟಿಗೆ ಹಾಡುಗಳೂ ಸೇರತೊಡಗಿದ್ದವು. ‘ಯುನಿವರ್ಸಲ್‌ ಪಿಕ್ಚರ್ಸ್’ ನಿರ್ಮಿಸಿದ ಶೇಕಡ ನಲವತ್ತು ಭಾಗ ಮಾತುಳ್ಳ ‘ಷೋಬೋಟ್‌’ ಚಿತ್ರ ಮುಂಬೈನ ‘ಎಕ್ಸಾಲೈಸರ್‌’ ಚಿತ್ರಮಂದಿರದಲ್ಲಿ ಪ್ರದರ್ಶನಗೊಂಡಾಗ, ಪ್ರೇಕ್ಷಕರಲ್ಲೊಬ್ಬರಾಗಿದ್ದ ಆರ್ದೇಶಿರ್‌ ಇರಾನಿ ಮನಸ್ಸಿನಲ್ಲಿ ತಾವೊಂದು ಮಾತಿನ ಚಿತ್ರ ತಯಾರಿಸಬಾರದೇಕೆ ಎಂಬ ಆಲೋಚನೆ ಹುಟ್ಟಿತು.

ಅವರು ತಮ್ಮ ನಿರ್ಧಾರವನ್ನು ಕಾರ್ಯ ರೂಪಕ್ಕೆ ತರುವಲ್ಲಿ ತಡ ಮಾಡಲಿಲ್ಲ. ರಂಗಭೂಮಿಯಲ್ಲಿ ಜನಪ್ರಿಯವಾಗಿದ್ದ ಕಥಾವಸ್ತುಗಳನ್ನು ಚಿತ್ರಮಾಧ್ಯಮಕ್ಕೆ ತರುವುದು ಆಗ ಸಾಮಾನ್ಯವಾಗಿತ್ತು. ಪಾರ್ಸಿ ರಂಗಭೂಮಿಯಲ್ಲಿ ಜನಮನ್ನಣೆಗೆ ಪಾತ್ರವಾಗಿದ್ದ ‘ಆಲಂ ಅರಾ’ ನಾಟಕವನ್ನೇ ರಜತ ಪರದೆ ತರಲು ಇರಾನಿ ನಿಶ್ಚಯಿಸಿದರು. ನಾಟಕವನ್ನು ಚಿತ್ರರೂಪಕ್ಕೆ ಅಳವಡಿಸಲು ಅವರು  ಆಯ್ಕೆ ಮಾಡಿಕೊಂಡಿದ್ದು ಹೆಸರಾಂತ ಚಿತ್ರಕಥಾ ಲೇಖಕ ಜೋಸೆಫ್‌ ಡೇವಿಡ್‌ ಅವರನ್ನು.

‘ಪಾರ್ಸಿ ಇಂಪೀರಿಯಲ್‌ ಥಿಯರಿಟಿಕಲ್‌ ಕಂಪೆನಿ’ಯ ಪ್ರಸಿದ್ಧ ನಾಟಕ ‘ಆಲಂ ಅರಾ’ ಕುಮಾರಪುರ ಸಂಸ್ಥಾನದ ಕಥೆ. ಇಲ್ಲಿಯ ರಾಜನಿಗೆ ಇಬ್ಬರು ಪತ್ನಿಯರು. ಸ್ವಲ್ಪ ಕಾಲ ಇಬ್ಬರಿಗೂ ಮಕ್ಕಳಾಗಿರುವುದಿಲ್ಲ. ಈ ನಡುವೆ ಫಕೀರನೊಬ್ಬ ರಾಣಿಯೊಬ್ಬಳಿಗೆ ಗಂಡು ಮಗು ಜನಿಸುತ್ತಾನೆಂದು ಭವಿಷ್ಯ ನುಡಿಯುತ್ತಾನೆ. ನವ್‌ಬಹಾರ್‌ಗೆ ಗಂಡು ಮಗು ಹುಟ್ಟಿದಾಗ ಇನ್ನೊಬ್ಬ ರಾಣಿ ದಿಲ್‌ಬಹಾರ್‌ಗೆ ಅಸೂಯೆ ಉಂಟಾಗುತ್ತದೆ. ಇದಕ್ಕಾಗಿ ಏನಾದರೂ ಕೆಡುಕು ಮಾಡಬೇಕೆಂಬ ದಿಲ್‌ಬಹಾರ್‌ ಮಸಲತ್ತಿಗೆ ಸೇನಾಧಿಕಾರಿ ಅದಿಲ್‌ ಬಗ್ಗುವುದಿಲ್ಲ. ಇದಕ್ಕೆ ಪ್ರತೀಕಾರವಾಗಿ ರಾಣಿ, ಸೇನಾನಿಯನ್ನು ಸೆರೆವಾಸಕ್ಕೆ ದೂಡುವಂತೆ ಮಾಡುತ್ತಾಳೆ.

ಅದಿಲ್‌ ಜೈಲು ಸೇರಿದಾಗ ಆತನ ಹೆಂಡತಿ ಗರ್ಭಿಣಿ. ಅಲೆಮಾರಿಗಳ ಜೊತೆ ಹೋಗುವ ಆಕೆ ಹೆಣ್ಣು ಮಗುವಿಗೆ ಜನ್ಮ ಕೊಡುತ್ತಾಳೆ. ಆಕೆಯೇ ‘ಆಲಂ ಅರಾ’ (ಜಗತ್ತಿಗೆ ಬೆಳಕು ಕೊಡುವವಳು ಎಂಬುದು ಇದರ ಅರ್ಥ). ಆಲಂ ಅರಾ ಯೌವನಕ್ಕೆ ಕಾಲಿಡುವ ಕಾಲಕ್ಕೆ, ತಾನು ಸೆರೆವಾಸ ಅನುಭವಿಸುತ್ತಿರುವ ಸೇನಾಧಿಕಾರಿ ಅದಿಲ್‌ ಪುತ್ರಿ ಎನ್ನುವ ಸತ್ಯವನ್ನು ತಿಳಿದುಕೊಳ್ಳುತ್ತಾಳೆ. ತಂದೆಯನ್ನು ಹುಡುಕುತ್ತ ಸಾಗುವ ಆಕೆ ಕುಮಾರಪುರದ ಅರಮನೆಗೆ ಬರುತ್ತಾಳೆ. ಅನುಪಮ ಸುಂದರಿ ಆಲಂ ಅರಾ ಹಾಗೂ ಸ್ಫುರದ್ರೂಪಿ ಯುವರಾಜನ ನಡುವೆ ಪ್ರೇಮಾಂಕುರವಾಗುತ್ತದೆ. ನಿಜ ಸಂಗತಿ ಹೊರಬಿದ್ದ ನಂತರ ಸೇನಾಧಿಕಾರಿ ಅದಿಲ್‌ ಬಿಡುಗಡೆಯಾಗುತ್ತದೆ. ಆಲಂ ಅರಾ ಹಾಗೂ ಯುವರಾಜನ ಮದುವೆಯೊಂದಿಗೆ ಎಲ್ಲವೂ ಸುಖಾಂತ್ಯ.

ಮಾತಿನ ಚಿತ್ರ ನಿರ್ಮಿಸಲು ಮುಂದಾಗಿದ್ದ ಇರಾನಿ ಹಲವಾರು ಬಗೆಯ ಸವಾಲುಗಳನ್ನು ಅಡೆತಡೆಗಳನ್ನು ನೋಡಬೇಕಾಯಿತು. ಇಂತಹ ಚಿತ್ರಕ್ಕೆ ಬೇಕಾದ ತಾಂತ್ರಿಕ ಪರಿಣತಿ ಇರುವವರು ಆಗ ಯಾರೂ ಇರಲಿಲ್ಲ. ಸಲಕರಣೆಗಳ ಕೊರತೆ ಕೂಡ ಇತ್ತು. ಸೌಂಡ್‌ ಪ್ರೂಫ್‌ ಸ್ಟುಡಿಯೊ ಪರಿಕಲ್ಪನೆ ಆಗಿರಲಿಲ್ಲ. ಸವಾಲು ಸ್ವೀಕರಿಸಿದ್ದ ಇರಾನಿ ಯಾವುದಕ್ಕೂ ಎದೆಗುಂದಲಿಲ್ಲ. ಅಮೆರಿಕದ ತಾನರ್‌ ಧ್ವನಿಮುದ್ರಣ ಯಂತ್ರವನ್ನು ದಿನವೊಂದಕ್ಕೆ ನೂರು ರೂಪಾಯಿಗಳ ಬಾಡಿಗೆ ಮೇಲೆ ಪಡೆಯಲಾಯಿತು. ಈ ಯಂತ್ರವನ್ನು ಸಜ್ಜುಗೊಳಿಸಲು ಬಂದ ತಂತ್ರಜ್ಞ ಮೈಕಲ್‌ ಡೆನ್ನಿಂಗ್‌ ಅವರೇ ಹಾಡುಗಳ ಧ್ವನಿ ಮುದ್ರಣಕ್ಕೆ ನಿಯುಕ್ತರಾದರು.

ಕ್ಯಾಮೆರಾ ಪರಿಣತಿ ಗಳಿಸಿದ್ದ ಆಡಿ ಎಂ. ಇರಾನಿ ಹಾಗೂ ವಿಲ್‌ ಪೋರ್ಡ್‌ ಡೇಮಿಂಗ್‌ ಛಾಯಗ್ರಾಹಕರಾಗಿ ಕಾರ್ಯ ನಿರ್ವಹಿಸಿದರು. ಚಿತ್ರೀಕರಣವನ್ನು ಒಳಾಂಗಣದಲ್ಲಿಯೇ ನಡೆಸಬೇಕೆಂದು ತೀರ್ಮಾನವಾಯಿತು. ಅದೂ ರಾತ್ರಿ 1ರಿಂದ ಮುಂಜಾನೆ 4ರ ತನಕ ಮಾತ್ರ ಚಿತ್ರೀಕರಣ ನಡೆಯುತ್ತಿತ್ತು. ಯಾಕೆಂದರೆ, ಸೌಂಡ್‌ ಪ್ರೂಫ್‌ ವ್ಯವಸ್ಥೆ ಇರಲಿಲ್ಲವಾದ್ದರಿಂದ ರಾತ್ರಿಯ ಚಿತ್ರೀಕರಣ ಅನಿವಾರ್ಯವಾಗಿತ್ತು. ರೈಲು ಹಳಿಗಳು ಸ್ಟುಡಿಯೊ ಪಕ್ಕದಲ್ಲಿಯೇ ಹಾದು ಹೋಗಿದ್ದವು. ಆದ್ದರಿಂದ ರೈಲು ಓಡಾಡುವ ಸಮಯ ಬಿಟ್ಟು ಬೇರೆ ಸಂದರ್ಭದಲ್ಲಿ ಮಾತ್ರ ಚಿತ್ರೀಕರಣ ಮಾಡಿಕೊಳ್ಳಬೇಕಾದ ಅನಿವಾರ್ಯತೆ ಎದುರಾಗಿತ್ತು.

ಹಿಂದಿ ಮತ್ತು ಉರ್ದು ಭಾಷೆಗಳನ್ನು ಉಪಯೋಗಿಸಲು ತೀರ್ಮಾನವಾಗಿದ್ದ ‘ಆಲಂ ಅರಾ’ ತಂಡಕ್ಕೆ ಕಲಾವಿದರ ಆಯ್ಕೆ ಸುಲಭವಾಗಿರಲಿಲ್ಲ. ಭಾಷೆಯ ಸ್ಫುಟ ಉಚ್ಚಾರಣೆ  ಕಲಾವಿದರಿಗೆ ಗೊತ್ತಿರಬೇಕಿತ್ತು. ಇಂಪೀರಿಯಲ್‌ ಮೂವೀಟೋನ್‌ನ ಸ್ಟಾರ್‌ ಕಲಾವಿದೆ ಜುಬೇದ ‘ಆಲಂ ಅರಾ’ ಪಾತ್ರಕ್ಕೆ ಗೊತ್ತಾದರು. ನಾಯಕನ ಪಾತ್ರಕ್ಕೆ ಮಹಬೂಬ್‌ ಖಾನ್‌ ಆಯ್ಕೆಯಾದರು. ಮುಂದೆ ಮಹಬೂಬ್‌ ಖ್ಯಾತ ನಿರ್ದೇಶಕ–ನಿರ್ಮಾಪಕರಾಗಿ ‘ಅನ್ಮೋಲ್‌ ಗಡಿ’, ‘ಔರತ್‌’, ‘ಮದರ್‌ ಇಂಡಿಯಾ’ದಂತಹ ಜನಪ್ರಿಯ ಚಿತ್ರಗಳನ್ನು ತೆರೆಗಿತ್ತರು.

ಆದರೆ ಇರಾನಿ ಅವರಿಗೆ ಇನ್ನೂ ಉತ್ತಮ ನಾಯಕ ನಟನ ಅಗತ್ಯವಿತ್ತು. ‘ಆಲಂ ಅರಾ’ದಲ್ಲಿ ನಾಯಕ ಕತ್ತಿವರಸೆ, ಸಾಹಸ ದೃಶ್ಯಗಳಲ್ಲಿ ಪಾಲ್ಗೊಳ್ಳಬೇಕಿತ್ತು. ಹೀಗಾಗಿ ಅವರು ಬೇರೆ ನಟನ ತಲಾಶ್‌ಗೆ ಇಳಿದರು. ಮೂಕಿಚಿತ್ರಗಳಲ್ಲಿ  ಭಾರತದ ‘ಡಗ್ಲಾಸ್‌ ಫೈರ್‌ ಬ್ಯಾಂಕ್‌’ ಎಂದೇ ಖ್ಯಾತರಾಗಿದ್ದ ಮಾಸ್ಟರ್‌ ವಿಠಲ್‌ ಇವರ ಕಣ್ಣಿಗೆಬಿದ್ದರು. ಚಿತ್ರದ ವ್ಯಾಪಾರಿ ದೃಷ್ಟಿಯಿಂದ ವಿಠಲ್‌ರನ್ನು ಇರಾನಿ ಅಪೇಕ್ಷಿಸಿದರು. ಆದರೆ ವಿಠಲ್‌ ‘ಶಾರದಾ ಚಿತ್ರ ತಯಾರಿಕಾ ಕಂಪೆನಿ’ಯೊಡನೆ ಒಪ್ಪಂದದಲ್ಲಿದ್ದರು.

ಚಿತ್ರದ ವಿವರಗಳನ್ನು, ಪಾತ್ರದ ಮಹತ್ವವನ್ನು ವಿವರಿಸಿದ ಬಳಿಕ ಈ ಪಾತ್ರ ನಿರ್ವಹಿಸಲು ವಿಠಲ್ ಒಪ್ಪಿದರು. ಆದರೆ, ‘ಶಾರದಾ ಕಂಪೆನಿ’ಯೊಡನೆ ಒಪ್ಪಂದ ಮುರಿದಿದ್ದಕ್ಕಾಗಿ ವಿಠಲ್‌ರನ್ನು ಕೋರ್ಟಿಗೆಳೆಯಲಾಯಿತು. ಆಗ ವಿಠಲ್‌ ನೆರವಿಗೆ ಬಂದವರು ಮಹಮದ್‌ ಆಲಿ ಜಿನ್ನಾ (ಇದೇ ಜಿನ್ನಾ ನಂತರ ಪಾಕಿಸ್ತಾನದ ಮೊದಲ ಅಧ್ಯಕ್ಷರಾದರು). ವಿಠಲ್‌ ಪರ ವಾದ ಮಂಡಿಸಿದ ಜಿನ್ನಾ ಅವರು ‘ಆಲಂ ಅರಾ’ ಚಿತ್ರದಲ್ಲಿ ಪಾತ್ರವಹಿಸಲು ವಿಠಲ್‌ ಹಾದಿ ಸುಗಮಗೊಳಿಸಿದರು.

ಮಾಸ್ಟರ್‌ ವಿಠಲ್‌ ಯುವರಾಜನ ಪಾತ್ರದಲ್ಲಿ ಅಭಿನಯಿಸಿದರೆ, ಆಗಿನ ರಂಗಭೂಮಿಯ ನುರಿತ ನಟರೆನ್ನಿಸಿಕೊಂಡ ಪೃಥ್ವಿರಾಜ್‌ ಕಪೂರ್‌, ಜಿಲ್ಲೂಂ ಸುಶೀಲ, ಎಲ್ಜೀರ್‌, ಜಗದೀಶ್‌ ಸೆಲೆ ತಾರಾಗಣದಲ್ಲಿದ್ದರು. ದಕ್ಷಿಣ ಭಾರತದಲ್ಲಿ ಚಲನಚಿತ್ರ ಕ್ಷೇತ್ರದಲ್ಲಿ ಹೆಸರು ಮಾಡಿ ನಿರ್ಮಾಣ, ನಿರ್ದೇಶನದ ಜೊತೆಗೆ ಸ್ಟುಡಿಯೊ ಸ್ಥಾಪಿಸಿದ ಎಲ್‌.ವಿ. ಪ್ರಸಾದ್‌ ಅವರು ‘ಆಲಂ ಅರಾ’ ಚಿತ್ರದಲ್ಲಿ ಮುಖ್ಯ ಪಾತ್ರ ನಿರ್ವಹಿಸಿದ್ದೊಂದು ವಿಶೇಷ.

ಚಲನಚಿತ್ರ ನಿರ್ಮಾಣಕ್ಕೆ ಕೆಲವೇ ಕಂಪೆನಿಗಳು ಸ್ಥಾಪನೆಗೊಂಡ ಆ ಕಾಲಘಟ್ಟದಲ್ಲಿ ಪೈಪೋಟಿಗೇನು ಕೊರತೆ ಇರಲಿಲ್ಲ. ಅನೇಕ ಯೋಜನೆಗಳು ಗುಟ್ಟಾಗಿ ಕಾರ್ಯಗತಗೊಳ್ಳುತ್ತಿದ್ದವು. ಚಿತ್ರಗಳನ್ನು ಆಕರ್ಷಕವಾಗಿ ತಯಾರಿಸಲು ಲಭ್ಯವಿದ್ದ ಎಲ್ಲ ಸೌಲಭ್ಯಗಳನ್ನು ಉಪಯೋಗಿಸಿಕೊಳ್ಳುತ್ತಿದ್ದ ಸಮಯ ಅದು. ಹೊಸ ಅನ್ವೇಷಣೆಗಳನ್ನು ತ್ವರಿತವಾಗಿ ಬಳಸಿ ಲಾಭ ಪಡೆಯಲು ಕಂಪೆನಿಗಳು ಆರೋಗ್ಯಕರ ಪೈಪೋಟಿ ನಡೆಸುತ್ತಿದ್ದ ಆ ಸಂದರ್ಭದಲ್ಲಿ ಚಲನಚಿತ್ರಗಳಿಗೆ ಮಾತು ಬಂದಿದ್ದೊಂದು ಹೊಸ ಸಂಗತಿ.

ಮಾತಿನೊಂದಿಗೆ ಸಿನಿಮಾ ನಿರ್ಮಿಸುವ ಇರಾನಿ ಅವರ ‘ಆಲಂ ಅರಾ’ ಯೋಜನೆಯ ಅನುಷ್ಠಾನವೂ ಗುಟ್ಟಾಗಿಯೇ ಜರುಗುತ್ತಿತ್ತು. ‘ಆಲಂ ಅರಾ’ ಚಿತ್ರದಲ್ಲಿ ಫಿರೋಜ್‌ ಷಾ. ಎಂ. ಮಿಸ್ತ್ರಿ, ಬಿ. ಇರಾನಿ ಸಂಗೀತ ನಿರ್ದೇಶನ ನೀಡಿದ್ದರು. ಚಿತ್ರದಲ್ಲಿ ಹತ್ತು ಹಾಡುಗಳಿದ್ದವು. ಆರ್ದೇಶಿರ್‌ ಇರಾನಿ ಅನೇಕ ಸವಾಲುಗಳನ್ನು ಎದುರಿಸಿ ರೂಪಿಸಿದ ‘ಆಲಂ ಅರಾ’ ಚಿತ್ರವನ್ನು ಭಾರತದ ಬೆಳ್ಳಿಪರದೆ ಮೇಲೆ ತಂದಾಗ ಅವರಿಗೆ ಅಭೂತ ಪೂರ್ವ ಯಶಸ್ಸು ಸಿಕ್ಕಿತು.

ಚಿತ್ರ ತೆರೆಕಂಡ ಮೂರ್ನಾಲ್ಕು ವಾರಗಳ ಕಾಲ ಮುಂಬೈನ ಮೆಜೆಸ್ಟಿಕ್‌ ಚಿತ್ರಮಂದಿರದಲ್ಲಿ ಪ್ರೇಕ್ಷಕರ ನೂಕುನುಗ್ಗಲಿತ್ತು. ಅದನ್ನು ನಿಯಂತ್ರಿಸಲು ಪೊಲೀಸರು ಹೆಣಗಾಡಬೇಕಾಯಿತು. ನಾಲ್ಕು ಆಣೆಗಳ ಟಿಕೆಟ್‌ ನಾಲ್ಕೈದು ರೂಪಾಯಿಗೆ ಕಾಳಸಂತೆಯಲ್ಲಿ ಮಾರಾಟವಾಯಿತು, ‘ಆಲಂ ಅರಾ’ ಗಲ್ಲಾಪೆಟ್ಟಿಗೆಯನ್ನು ತುಂಬಿಸಿತು. ‘ಆಲಂ ಅರಾ’ ಬಿಡುಗಡೆಯಾದ ಮೂರು ವಾರಗಳ ನಂತರ ತೆರೆಕಂಡ ಮದನ್‌ ಥಿಯೇಟರ್ಸ್ ಅವರ ‘ಜಮಾಲ್‌ ಶಾಸ್ತಿ’ ಇನ್ನೊಂದು ಮಾತಿನ ಚಿತ್ರ ಬಿಡುಗಡೆಯಾಯಿತು.

ಭಾರತೀಯ ಚಿತ್ರರಂಗದ ಮಾತುಳ್ಳ ಪ್ರಥಮ ಚಿತ್ರವೆಂಬ ದಾಖಲೆ ಬರೆದ ‘ಆಲಂ ಅರಾ’ ಚಿತ್ರ 1956 ಹಾಗೂ 1973ರಲ್ಲಿ ಮರು ನಿರ್ಮಾಣಗೊಂಡಿತು. 85 ವರ್ಷಗಳ ಹಿಂದೆ ಬಿಡುಗಡೆಯಾಗಿ ಅಪೂರ್ವ ಯಶಸ್ಸು ಗಳಿಸಿದ ಈ ಚಿತ್ರದ ಒಂದೇ ಒಂದು ಪ್ರತಿಯನ್ನು ಪುಣೆಯ ಚಲನಚಿತ್ರ ಭಂಡಾರ ಸಂರಕ್ಷಿಸಿತ್ತು. ದುರದೃಷ್ಟವೆಂದರೆ 2003ರಲ್ಲಿ ಚಿತ್ರ ಭಂಡಾರಕ್ಕೆ ಬೆಂಕಿಬಿದ್ದಾಗ ‘ಆಲಂ ಅರಾ’ ಚಿತ್ರದ ಏಕೈಕ ಪ್ರತಿಯೂ ಭಸ್ಮವಾಗಿ ಹೋಯಿತು. ಮೊದಲ ಮಾತಿನ ಚಿತ್ರವೆಂದು ಭಾರತೀಯ ಸಿನಿಮಾ ಇತಿಹಾಸದಲ್ಲಿ ದಾಖಲಾದ ‘ಆಲಂ ಅಲಾ’ ಚಿತ್ರದ ಹಾಡುಗಳ ಧ್ವನಿಮುದ್ರಿಕೆ, ಕೆಲವು ಸ್ಥಿರಚಿತ್ರಗಳನ್ನು ಹೊರತು ಪಡೆಸಿದರೆ ‘ಆಲಂ ಅರಾ’ ಕುರುಹುಗಳೇನು ಈಗ ಉಳಿದಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT