ADVERTISEMENT

‘ಮಾಸ್ತಿಗುಡಿ’ ಹುಲಿಗಳ ಸುಳಿದಾಟ

​ಪ್ರಜಾವಾಣಿ ವಾರ್ತೆ
Published 27 ಏಪ್ರಿಲ್ 2017, 19:30 IST
Last Updated 27 ಏಪ್ರಿಲ್ 2017, 19:30 IST
‘ಮಾಸ್ತಿಗುಡಿ’ ಹುಲಿಗಳ ಸುಳಿದಾಟ
‘ಮಾಸ್ತಿಗುಡಿ’ ಹುಲಿಗಳ ಸುಳಿದಾಟ   
ಇಬ್ಬರು ನಟರ ದುರ್ಮರಣದ ಕರಿಛಾಯೆಯನ್ನು ಬೆನ್ನಿಗಂಟಿಸಿಕೊಂಡೇ ನಿರ್ಮಾಣ ಹಂತ ಪೂರೈಸಿದ ‘ಮಾಸ್ತಿಗುಡಿ’ ಚಿತ್ರ ತೆರೆಗೆ ಬರಲು ಸಿದ್ಧವಾಗಿದೆ.

ಸೆನ್ಸಾರ್ ಪ್ರಕ್ರಿಯೆ ಮಾತ್ರ ಬಾಕಿ ಇರುವ ಚಿತ್ರವನ್ನು ಮೇ ಎರಡನೇ ವಾರದಲ್ಲಿ ತೆರೆಗೆ ತರುವ ಯೋಜನೆ ನಿರ್ಮಾಪಕ ಸುಂದರ್ ಪಿ. ಗೌಡ ಅವರದ್ದು. ಸದ್ಯ ಅವರು ‘ಪ್ರಾಣಿ ದಯಾ ಸಂಘ’ದಿಂದ ನಿರಕ್ಷೇಪಣಾ ಪತ್ರ ಪಡೆದ ಸಂಭ್ರಮದಲ್ಲಿದ್ದಾರೆ.
 
‘ದುನಿಯಾ’ ವಿಜಯ್ ಅವರ ಕಥೆಗೆ ನಾಗಶೇಖರ್ ಆ್ಯಕ್ಷನ್–ಕಟ್ ಹೇಳಿರುವ ಚಿತ್ರವಿದು. ಹುಲಿಗಳ ಸಂರಕ್ಷಣೆ ಕಥೆಯ ಮುಖ್ಯ ಭಾಗ. ವಿಜಯ್ ಅವರೇ ಚಿತ್ರದ ನಾಯಕ.
 
ಆ್ಯಕ್ಷನ್ ಹೀರೊಗೆ ಹೊಂದುವಂತೆ ವ್ಯಾಪಾರಿ ದೃಷ್ಟಿಕೋನದಿಂದ ಕಥೆಯನ್ನು ನಿರೂಪಿಸುವ ಪ್ರಯತ್ನ ಮಾಡಿದ್ದಾರೆ ನಾಗಶೇಖರ್. ಇಪ್ಪತ್ತು ವರ್ಷಗಳ ಹಿಂದೆ ಬಿಳಿಗಿರಿರಂಗನ ಬೆಟ್ಟದಲ್ಲಿ ನಡೆದ ಘಟನೆ ಈ ಕಥೆಗೆ ಸ್ಫೂರ್ತಿ.
 
ವಿಜಯ್ ಹುಟ್ಟಿದ ಹಬ್ಬದ ದಿನದಂದು ಬಿಡುಗಡೆ ಆದ ‘ಮಾಸ್ತಿಗುಡಿ’ ಟ್ರೈಲರ್‌ನಲ್ಲಿ ಕೊರಿಯನ್ ಚಿತ್ರವೊಂದರ ಹುಲಿಯ ಗ್ರಾಫಿಕ್‌ ಅನ್ನು ಯಥಾವತ್ತಾಗಿ ಬಳಸಿಕೊಳ್ಳಲಾಗಿತ್ತು.
 
ಅದಕ್ಕೆ ಸುದ್ದಿಗೋಷ್ಠಿಯಲ್ಲಿ ಸ್ಪಷ್ಟನೆ ನೀಡಿದ ನಾಗಶೇಖರ್, ‘ಆ ಸಂದರ್ಭದಲ್ಲಿ ಟ್ರೈಲರ್ ಬಿಡುಗಡೆ ಮಾಡುವ ಒತ್ತಡವಿತ್ತು. ಆಗ ನಮ್ಮ ಚಿತ್ರದ ‘ಗ್ರಾಫಿಕ್ ಹುಲಿ’ ಸಿದ್ಧವಾಗಿರಲಿಲ್ಲ. ಈಗ ನಾವೇ ಗ್ರಾಫಿಕ್ ಮೂಲಕ ಸೃಷ್ಟಿಸಿದ ಹುಲಿಯನ್ನು ಚಿತ್ರದಲ್ಲಿ ಬಳಸಿಕೊಂಡಿದ್ದೇವೆ’ ಎಂದರು.
 
ವಿಜಯ್, ತನ್ನನ್ನು ನಾಯಕನನ್ನಾಗಿ ಮಾಡಿದ ಅಭಿಮಾನಿಗಳಿಗೆ ಕೃತಜ್ಞತೆ ಹೇಳಿದರು. ಚಿತ್ರ ಒಳ್ಳೆಯ ಮೊತ್ತಕ್ಕೆ ಮಾರಾಟವಾಗಿದ್ದು ಅವರಲ್ಲಿ ಸಂಭ್ರಮ ಉಂಟುಮಾಡಿದೆ.

ಅವರು ಈ ಸಿನಿಮಾದಲ್ಲಿ ಐದು ಗೆಟಪ್‌ಗಳಲ್ಲಿ ಕಾಣಿಸಿಕೊಂಡಿದ್ದಾರೆ. ಅಮೂಲ್ಯ, ಕೃತಿ ಕರಬಂಧ, ರವಿಶಂಕರ್ ಗೌಡ ತಾರಾಗಣದಲ್ಲಿದ್ದಾರೆ. ಸಾಧುಕೋಕಿಲ ಸಂಗೀತಕ್ಕೆ ಕವಿರಾಜ್ ಗೀತರಚನೆ ಮಾಡಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.