ADVERTISEMENT

ಮೊದಲ ನೋಟಕ್ಕೆ ಹೊಳೆದ ಸಾಲುಗಳು

​ಪ್ರಜಾವಾಣಿ ವಾರ್ತೆ
Published 27 ಜುಲೈ 2017, 19:30 IST
Last Updated 27 ಜುಲೈ 2017, 19:30 IST
ಕವಿರಾಜ್
ಕವಿರಾಜ್   

ಹಾಡು: ಅನುಮಾನವೇ ಇಲ್ಲ ಅನುರಾಗಿ ನಾನೀಗ

ಸಿನಿಮಾ: ಕರಿಯಾ 2

ಸಾಹಿತ್ಯ: ಕವಿರಾಜ್‌

ADVERTISEMENT

ಸಂಗೀತ: ಕರಣ್‌ ಬಿ. ಕೃಪಾ

ನಿರ್ದೇಶನ: ಪ್ರಭು ಶ್ರೀನಿವಾಸ್‌

ಅನುಮಾನವೇ ಇಲ್ಲ ಅನುರಾಗಿ ನಾನೀಗ

ನಿನ್ನ ಹಾಗೆ ಯಾರಿಲ್ಲ ನೀ ಸುಂದರ ಸೋಜಿಗ

ಅನುಮಾನವೇ ಇಲ್ಲ ಅಭಿಮಾನಿ ನಾನೀಗ

ಬದಲಾಗಿದೇ ಈಗ ನಿನ್ನಿಂದಲೇ ಈ ಜಗ

ಅನುಕ್ಷಣವು ಇನ್ನು ಮುಂದೆ ನನಗೆ ನೀನೇ ಬೇಕು

ಕೊನೆಯುಸಿರು ಹೋಗುವಾಗ ನಿನ್ನ ಮಡಿಲೇ ಬೇಕು

ಅನುಮಾನವೇ ಇಲ್ಲ ಅಭಿಮಾನಿ ನಾನೀಗ

ನಿನ್ನ ಹಾಗೆ ಯಾರಿಲ್ಲ ನೀ ಸುಂದರ ಸೋಜಿಗ

ಚೂರು ನೀ ನಗಲು

ಹೊಸ ಬಣ್ಣವೇ ಬಾನಿಗೆ

‍ಪಾದ ಊರಿದರೆ ಅದು ಭೂಮಿಗೆ ಚಿತ್ತಾರ

ಎದುರಿರೆ ನೀನು ಎದೆಯೊಳಗೆ

ತುಸು ನಸು ನಾಚಿಕೆ

ಅರಳಿದೆ ಜೀವ ಒಳಗೊಳಗೆ

ಪಿಸುಪಿಸು ಮಾತಿಗೆ

ನಿನ್ನ ಪ್ರೀತಿಗಾಗೇ ನಾನು

ನೂರು ನೂರು ಸಾರಿ ಸಾಯುವೆ

ಕೊಂಚ ಕೊಂದುಬಿಡು

ನಿನ್ನ ಕಣ್ಣಲ್ಲೇ ನನ್ನನು

ಬಾಚಿ ತಬ್ಬಿಬಿಡು

ನಾ ಇನ್ನೇನು ಕೇಳೆನು

ಹಗಲಲು ನಿಂದೆ ಕನವರಿಕೆ

ಮರುಳನ ಜೀವಕೆ

ನೆರಳಿಗು ಕೂಡ ಚಡಪಡಿಕೆ

ಇನಿಯಳ ಸಂಗಕೆ

ಬೇರೆ ಯಾವ ದೇವರಿಲ್ಲ ಇನ್ನು

ನೀನೇ ನೀನೇ ನನ್ನ ದೇವತೆ

**

ಹಾಡು ಹುಟ್ಟಿದ ಹೊತ್ತು

ರೌಡಿಯಾಗಿದ್ದ ನಾಯಕನಿಗೆ ಪ್ರೀತಿಯಾಗಿ ಅವನು ಬದಲಾಗುವ ಸಂದರ್ಭದ ಹಾಡು ಇದು. ಮೊದಲನೇ ಸಾಲು ಸರಿಯಾಗಿ ಕೂತ್ಕೋತಾನೇ ಇರಲಿಲ್ಲ. ಸುಮಾರು ಸಲ ಬರೆದು ಬರೆದು ಕೊನೆಗೆ ಮೊದಲು ಬರೆದ ಸಾಲುಗಳೇ ಅಂತಿಮ ಆಯ್ತು. ಎಷ್ಟೋ ಸಲ ಹಾಗೇ ಆಗುತ್ತದೆ.

ಯಾವಾಗಲೂ ನಾವು ‘ಮೇಡ್‌ ಫಾರ್‌ ಈಚ್‌ ಅದರ್‌’ ಸಾಲುಗಳನ್ನು ಹುಡುಕುತ್ತಿರುತ್ತೇವೆ. ಮೊದಲು ಬರೆದಿದ್ದು ಚೆನ್ನಾಗಿದ್ದರೂ ಇನ್ನೂ ಚೆನ್ನಾಗಿರೋ ಸಾಲುಗಳು ಬರಬಹುದೇನೋ ಎಂದು ಬರಹಗಾರ, ನಿರ್ದೇಶಕ, ಸಂಯೋಜಕ ಎಲ್ಲರೂ ಹುಡುಕುತ್ತಾ ಇರುತ್ತೇವೆ. ಆದರೆ ಎಷ್ಟೋ ಸಲ ಹಾಗೆ ಹುಡುಕಿ ಹುಡುಕಿ ಮೊದಲು ಬರೆದ ಸಾಲುಗಳಿಗೇ ಮರಳುತ್ತೇವೆ.

ಮೊದಲನೇ ಸಲ ಸನ್ನಿವೇಶ ಕೇಳಿದ ತಕ್ಷಣ ನಮ್ಮಲ್ಲಿ ಹುಟ್ಟಿಕೊಳ್ಳುವ ಸಾಲುಗಳೇ ತುಂಬ ಸಲ ಬೆಸ್ಟ್‌ ಆಗಿರುತ್ತವೆ. ಆಮೇಲೆ ಸಣ್ಣಪುಟ್ಟ ತಿದ್ದುಪಡಿ ಮಾಡಿಕೊಳ್ಳುವುದು ಇದ್ದೇ ಇರುತ್ತದೆ. ಆದರೆ ನಂತರ ನಾವು ಚೆನ್ನಾಗಿ ಬರೆಯಲೇಬೇಕು ಅಂತ ಹಟ ಹಿಡಿದು ಬರೆಯುವುದು ಸರ್ಕಸ್‌ ಆಗಿರುತ್ತದೆ. ಕೆಲವು ಸಲ ಅಂಥ ಹಾಡುಗಳೂ ಹಿಟ್‌ ಆಗುತ್ತವೆ. ಆದರೆ ಮೊದಲ ಇಂಪ್ರೆಷನ್‌ನಲ್ಲಿ ಹುಟ್ಟಿದ ಹಾಡುಗಳೇ ಬರಹಗಾರನಿಗೂ ಖುಷಿ ಕೊಡುತ್ತವೆ. ‘ಅನುಮಾನವೇ ಇಲ್ಲ ಅನುರಾಗಿ ನಾನೀಗ’ ಹಾಡು ಹೀಗೆ ಹುಟ್ಟಿದ್ದು ಎಂದರು ಕವಿರಾಜ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.