ADVERTISEMENT

ರನ್ನ ಕನ್ನಡಿಯಲಿ...

ಡಿ.ಎಂ.ಕುರ್ಕೆ ಪ್ರಶಾಂತ
Published 28 ಮೇ 2015, 19:30 IST
Last Updated 28 ಮೇ 2015, 19:30 IST

‘ರನ್ನ’ ಚಿತ್ರದ ಶೂಟಿಂಗ್‌ ಆರಂಭವಾದ ಎರಡನೇ ದಿನವೇ ಸಹ ಕಲಾವಿದ ಚಿಕ್ಕಣ್ಣ, ‘ಸುದೀಪ್ ಕಣ್ಣುಗಳನ್ನು ನೋಡಿದರೆ ಭಯವಾಗುತ್ತೆ. ಈ ಯಪ್ಪನ ಜತೆ ನಟಿಸುವುದಕ್ಕೆ ಆಗೊಲ್ಲ. ನಾನು ಈ ಸಿನಿಮಾದಲ್ಲಿ ಮಾಡಲ್ಲ’ ಎಂದು ಹೊರ ಹೋಗಲು ಪ್ರಯತ್ನಿಸಿದ್ದರಂತೆ. ಅವರಿಗೆ ಚಿತ್ರತಂಡ ಸಮಾಧಾನ ಮಾಡಿತ್ತು. ಒಂದು ಸೀಕ್ರೆಟ್‌ ಹೇಳ್ತೇನೆ ಕೇಳಿ. ‘ರನ್ನ’ದಲ್ಲಿ ಕಾಣಿಸಿಕೊಂಡಿರುವ ತಬಲಾ ನಾಣಿ ಅವರ ಹಲವು ಸಿನಿಮಾಗಳನ್ನು ನಾನು ನೋಡಿದ್ದೇನೆ. ಅವರು ನನ್ನ ಕಣ್ಣ ಮುಂದೆ ಬಂದು ನಿಂತಾಗ ಎಲ್ಲಿ ಇವನು ನನ್ನನ್ನು ತಿಂದು ಬಿಡುತ್ತಾನೋ ಎನ್ನುವ ಭಯದಲ್ಲಿ ಅವರ ಕಣ್ಣುಗಳನ್ನೇ ನೋಡುತ್ತಿರುತ್ತೇನೆ ಅಷ್ಟೇ!

ಎಷ್ಟೇ ದೊಡ್ಡ ನಟರಾದರೂ ಪ್ರತಿ ಸಿನಿಮಾ ಆ ಕಲಾವಿದನಿಗೆ ಹೊಸತು ಎನ್ನುವುದು ನನ್ನ ನಂಬಿಕೆ.

ಚಳಿ ಚಳಿ...
ಈ ಮೊದಲು ನಾನು ಸ್ವಿಟ್ಜರ್‌ಲೆಂಡ್‌ಗೆ ಹೋಗಿರಲಿಲ್ಲ. ಅಲ್ಲಿ ವಿಪರೀತ ಚಳಿ. ನನಗೆ ಬಹಳಷ್ಟು ಹೊತ್ತು ವಿಮಾನದಲ್ಲಿ ಕೂರಲು ಸಾಧ್ಯವಾಗುವುದಿಲ್ಲ. ಮೈಗ್ರೇನ್ ಇದೆ. ‘ನನ್ನನ್ನು ಭಾರತಕ್ಕೆ ಬೇಗ ವಾಪಸ್‌ ಕಳಿಸು’ ಎಂದು ನಂದಕಿಶೋರ್‌ಗೆ ಎರಡು ಮೂರು ಸಲ ಹೇಳಿದೆ. ಒಂದು ದೃಶ್ಯಕ್ಕೆ ರಚಿತಾ ರಾಮ್ ಬಂದರು. ಆರಾಮಾಗಿದ್ದ ಅವರು ‘ಚಳಿಯಾಗುತ್ತಿದೆಯಾ’ ಎಂದು ಕೇಳಿದರು. ‘ಇವರೇ ಇಷ್ಟು ಗಟ್ಟಿಯಾಗಿದ್ದಾರಲ್ಲ. ಇವರ ಮುಂದೆ ನಾನು ಚಳಿ ಅಂದ್ರೆ ಹೇಗೆ’ ಎಂದುಕೊಂಡು ‘ಇಲ್ಲ ಇಲ್ಲ’ ಎಂದೆ.

ತಬಲಾ ನಾಣಿ ಮತ್ತು ಮುನಿ ಸ್ವಿಟ್ಜರ್‌ಲೆಂಡ್‌ ಶೂಟಿಂಗ್‌ಗೆ ಬರುವುದು ಗೊತ್ತಾಯಿತು. ನನಗೆ ಕೆಟ್ಟ ಖುಷಿ. ಎರಡು ಪುಟಗಳ ಡೈಲಾಗು ಸುಲಭವಾಗಿ ಹೇಳುವ ನಾಣಿ, ಎರಡು ವಾಕ್ಯ ಹೇಳಲು ಒದ್ದಾಡಿದರು. ಮುನಿಗೆ ಒಂದು ಚಿಕ್ಕ ದೃಶ್ಯವಾದ್ದರಿಂದ ಅವರು ಸೇಫ್. ‘ಕಾರಿನಲ್ಲಿ ಒಂದು ಔಷಧಿ (ಗುಂಡು) ಇದೆ, ಕೊಡಲಾ?’ ಎಂದು ತಬಲಾ ನಾಣಿ ಅವರನ್ನು ಕೇಳಿದೆ. ಆದರೆ, ಔಷಧಿ ತೆಗೆದುಕೊಳ್ಳಲು ಇದ್ದಿದ್ದು ಒಂದೇ ಗ್ಲಾಸು. ‘ಸರ್ ಒಂದೇ ಗ್ಲಾಸಲ್ಲಿ’ ಎಂದರು ನಾಣಿ. ‘ನಿಮಗೆ ಬೇಕಾ ಬೇಡವಾ’ ಎಂದೆ. ಔಷಧಿ ತೆಗೆದುಕೊಂಡ ನಾಣಿ ಒಂದು ಕೆಟ್ಟ ಎಕ್ಸ್‌ಪ್ರೆಷನ್ ಕೊಟ್ಟರು. ಮುಂದೆ ಅಲ್ಲಿಯೇ ಒಂದು ಔಷಧಿ ಅಂಗಡಿ ತೆರೆದುಬಿಟ್ಟರು. ಮೂಲತಃ ನಾನು ಕುಡಿಯುವುದಿಲ್ಲ. ಆದರೆ ನಾವು ಅಲ್ಲಿಗೆ ಹೋಗಿದ್ದಾಗ ಅಂಥ ಪರಿಸ್ಥಿತಿ ಇತ್ತು.

ರಚಿತಾ ಸಿನಿಮಾ ಬಗ್ಗೆ ತಲೆಕೆಡಿಸಿಕೊಂಡವರಲ್ಲ. ಶೂಟಿಂಗ್ ಸಂದರ್ಭದಲ್ಲಿ ‘ಈ ಹಾಡು ಹೇಗಿದೆ’ ಅಂತ ಕೇಳಿದೆ. ‘ಯಾವ ಹಾಡು?’ ಎಂದರು. ಅವರು ತಮ್ಮನ್ನು ಮಾತ್ರ ಗಮನಿಸಿಕೊಳ್ಳುತ್ತಿದ್ದರು. ಹುಡುಗಿಯರು ಕ್ಯಾಮೆರಾ ಎದುರು ಬಂದರೆ ಹೀಗೇನೇ! ಅಂದ ಹಾಗೆ, ರಚಿತಾ ಅವರನ್ನು ಛಾಯಾಗ್ರಹಕ ಸುಧಾಕರ್ ತುಂಬಾ ಚೆನ್ನಾಗಿ ಸೆರೆ ಹಿಡಿದಿದ್ದಾರೆ. ನಿರ್ದೇಶಕ ನಂದಕಿಶೋರ್ ಸಿನಿಮಾಕ್ಕೆ ಸಾಕಷ್ಟು ಕಷ್ಟಪಟ್ಟಿದ್ದಾರೆ. ಅವರಿಗಿಂತಲೂ ಸಿನಿಮಾದ ಬಗ್ಗೆ ಹೆಚ್ಚು ತಲೆಕೆಡಿಸಿಕೊಂಡವರು ಅವರ ಸಹೋದರ ತರುಣ್!

ಅಸಾಮಾನ್ಯ ರನ್ನ!
‘ಶಾಂತಿ ನಿವಾಸ’, ‘ಮಾಣಿಕ್ಯ’ ಚಿತ್ರಗಳಲ್ಲಿ ಕುಟುಂಬ–ಭಾವುಕತೆ–ಫೈಟ್‌ ಇದೆ. ಆದರೆ ‘ರನ್ನ’ದಲ್ಲಿ ಸಾಮಾನ್ಯ ಮನುಷ್ಯನಾಗಿರಲು ನಾಯಕನಿಗೆ ಸಾಧ್ಯವೇ ಆಗುವುದಿಲ್ಲ. ಒಟ್ಟಾರೆ ಹೇಳುವುದಾದರೆ ‘ರನ್ನ’ ನನಗೆ ಹೊಸ ಅನುಭವ ಕೊಟ್ಟಿದೆ. ಚಿತ್ರದ ಶೂಟಿಂಗ್ ಸಂದರ್ಭದಲ್ಲಿ ಬಹಳ ಮಂದಿ ನಟ–ನಟಿಯರು ಭೇಟಿ ನೀಡಿದ್ದರು. ಅದರಲ್ಲೂ ‘ಸ್ಪರ್ಶ’ ಚಿತ್ರದ ರೇಖಾ ಅವರು ತಮ್ಮ ಎರಡು ಮಕ್ಕಳು ಮತ್ತು ಪತಿಯೊಂದಿಗೆ ಬಂದಿದ್ದು ನನಗೆ ಖುಷಿಕೊಟ್ಟಿತು.

ನಾನು ಎತ್ತರದ ಮಟ್ಟದಲ್ಲಿದ್ದೇನೆ ಎನ್ನುವ ಭಾವ ನನಗೆ ಎಂದೂ ಬಂದಿಲ್ಲ. ನಾನು ಸುಮ್ಮನೆ ನಡೆದುಕೊಂಡು ಹೋಗುತ್ತಿದ್ದೇನೆ. ಒಂದೇ ಮಟ್ಟದಲ್ಲಿರೋಣ ಎನ್ನುವುದು ನನ್ನ ಭಾವನೆ. ಯಶಸ್ಸು ಮತ್ತು ದುಡ್ಡು ಮಾತ್ರ ಖುಷಿ ಕೊಡುತ್ತದೆ ಎಂದುಕೊಂಡಿದ್ದರೆ, ವರ್ಷಕ್ಕೆ ಐದು ಸಿನಿಮಾ ಮಾಡುತ್ತಿದ್ದೆ. ಆ ಶಕ್ತಿ ನನಗಿದೆ. ವರ್ಷಕ್ಕೆ ಒಂದು ಸಿನಿಮಾ ಅಂದರೆ ಅಭದ್ರತೆ ಭಾವಗಳು ನಮಗೂ ಇರಬೇಕು. ಆದರೆ ಕೆಲವು ಸಂದರ್ಭಗಳಲ್ಲಿ ಸಿನಿಮಾಗಳಲ್ಲಿ ತೊಡಗಲು ಸಾಧ್ಯವಾಗದೆ ಇರುವುದಕ್ಕೆ ಕಾರಣಗಳಿರುತ್ತವೆ.

ಅಡುಗೆಭಟ್ಟ
ನಾನು ಒಳ್ಳೆಯ ಬಾಣಸಿಗ ಸಹ. ಬಿಡುವಿದ್ದಾಗ, ಮಗಳು ಕೇಳಿದ್ದೆಲ್ಲವನ್ನೂ ರುಚಿಯಾಗಿ ಮಾಡಿ ಕೊಡುತ್ತೇನೆ. ಆದರೆ, ಅಡುಗೆಮನೆ ಗಲೀಜಾದರೆ ಮನೆಯವರು ಸುಮ್ಮನಿರುತ್ತಾರೆಯೇ? ಹಾಗಾಗಿ, ಮನೆಯಲ್ಲಿ ನನಗೆಂದೇ ಪ್ರತ್ಯೇಕವಾದ ಅಡುಗೆ ಮನೆ ಇದೆ.

ನನಗೆ ಗೊತ್ತಿಲ್ಲದ ಅಡುಗೆಯನ್ನು ನೋಡಿ, ಬೇರೆಯವರಿಂದ ಕೇಳಿ ತಿಳಿದು ಮಾಡುತ್ತಿದ್ದೇನೆ. ನನ್ನ ಮಗಳಿಗೆ ಏನು ಬೇಕೋ ಅದನ್ನು ಮಾಡಿಕೊಡುತ್ತಿದ್ದೇನೆ. ನಾನು ಒಳ್ಳೆಯ ನಾನ್‌ವೆಜ್ ಅಡುಗೆ ಮಾಡುತ್ತೇನೆ. ವೆಜಿಟೇರಿಯನ್ ಮಾಡುವವರಿಗೆ ನಾನ್‌ವೆಜ್ ಮಾಡುವುದು ಕಷ್ಟ. ಅದೇ ನಾನ್ ವೆಜ್ ಮಾಡುವವರು ವೆಜ್ ಮಾಡುವುದು ಸುಲಭ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT