ADVERTISEMENT

ವೈವಿಧ್ಯಮುಖಿ ಸುಶಾಂತ್‌

ಪಂಚರಂಗಿ

​ಪ್ರಜಾವಾಣಿ ವಾರ್ತೆ
Published 30 ಮಾರ್ಚ್ 2015, 19:30 IST
Last Updated 30 ಮಾರ್ಚ್ 2015, 19:30 IST
ವೈವಿಧ್ಯಮುಖಿ ಸುಶಾಂತ್‌
ವೈವಿಧ್ಯಮುಖಿ ಸುಶಾಂತ್‌   

‘ಸಿನಿಮಾ ಜಗತ್ತಿನಲ್ಲಿನ ಬದಲಾವಣೆಗಳು ನನ್ನಂಥ ನಟರಿಗೆ ಅವಕಾಶಗಳನ್ನು ಒದಗಿಸಿವೆ. ಇಂದಿನ ಸಿನಿಮಾಗಳು ನನ್ನಂಥ ನಟರಿಗೇ ಹೆಚ್ಚು ಹೊಂದುತ್ತವೆ.’ ವಿಶಿಷ್ಟ ಪಾತ್ರಗಳ ಮೂಲಕ ಬಾಲಿವುಡ್‌ ತೋಟದಲ್ಲಿ  ಗಟ್ಟಿ ಬೇರೂರುತ್ತಿರುವ ಸುಶಾಂತ್‌ ಸಿಂಗ್‌ ರಜಪೂತ್‌, ಇಂದಿನ ಸಿನಿಮಾ ಪ್ರಪಂಚದ ಬಗ್ಗೆ ತಮ್ಮ ದೃಷ್ಟಿಕೋನವನ್ನು ಹಂಚಿಕೊಂಡದ್ದು ಹೀಗೆ.

‘ತಾರಾಪಟ್ಟದ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳದೆ ಪ್ರತಿಯೊಂದು ಸಿನಿಮಾಕ್ಕೂ ಸಂಪೂರ್ಣ ಬದಲಾಗಬಲ್ಲ ನನ್ನಂಥ ನಟರಿಗಾಗಿಯೇ ಇಂದಿನ ಸಿನಿಮಾಗಳು ರೂಪುಗೊಳ್ಳುತ್ತಿವೆ’ ಎಂದು ಅವರು ಪಿಟಿಐ ಸುದ್ದಿಸಂಸ್ಥೆಗೆ ನೀಡಿರುವ ಸಂದರ್ಶನದಲ್ಲಿ ಹೇಳಿದ್ದಾರೆ. ‘ಈಗ ನಾನು ಯಾವ ರೀತಿಯ ಸಿನಿಮಾವನ್ನು ಮಾಡುತ್ತಿದ್ದೇನೋ ಅವುಗಳನ್ನು ಮಾಡಿರದಿದ್ದರೆ ನನ್ನ ಕೆಲಸದ ಬಗ್ಗೆ ಈಗಿರುವಷ್ಟು ಖುಷಿ ಇರುತ್ತಿರಲಿಲ್ಲ’ ಎನ್ನುವುದು ಅವರ ಅನುಭವದ ಮಾತು.

ತೆರೆಗೆ ಬರಲು ಸಜ್ಜಾಗಿರುವ ‘ಡಿಟೆಕ್ಟೀವ್‌ ಬ್ಯೋಮಕೇಶ್‌ ಭಕ್ಷಿ’ ಚಿತ್ರದ ಮೂಲಕ ಸುಶಾಂತ್‌ ಸುದೀರ್ಘ ಮಧ್ಯಂತರದ ನಂತರ ಮತ್ತೆ ತೆರೆಯ ಮೇಲೆ ಕಾಣಿಸಿಕೊಳ್ಳಿದ್ದಾರೆ. ಕಳೆದ ವರ್ಷ ಬಿಡುಗಡೆಯಾದ ‘ಪೀಕೆ’ ಇವರ ಅಭಿನಯದ ಕೊನೆಯ ಸಿನಿಮಾ. ಆದರೆ ಸಾಲು ಸಾಲು ಚಿತ್ರಗಳಲ್ಲಿ ತಾವು ನಟಿಸದಿರುವುದಕ್ಕೆ ಸುಶಾಂತ್‌ಗೆ ಬೇಸರವೇನೂ ಇಲ್ಲ. ‘ನಿರಂತರವಾಗಿ ನನ್ನ ಚಿತ್ರಗಳು ತೆರೆಕಾಣುತ್ತಿಲ್ಲ ಎಂಬ ಬಗ್ಗೆ ನನಗೇನೂ ಬೇಸರವಿಲ್ಲ.

ಸಾಲು ಸಾಲು ಚಿತ್ರಗಳ ಬಿಡುಗಡೆಗೆ ಪ್ರತಿ  ಶುಕ್ರವಾರ ಕಾಯುವುದಕ್ಕಿಂತ ಸಿನಿಮಾ ನಿರೂಪಣೆಯ ಪ್ರಕ್ರಿಯೆಯೇ ನನಗೆ ಹೆಚ್ಚು ಖುಷಿ ಕೊಡುತ್ತದೆ. ನಾನು ಚಿತ್ರೋದ್ಯಮದಲ್ಲಿ ಇರುವುದಕ್ಕೆ ಮುಖ್ಯ ಕಾರಣ ನನಗೆ ಸಿನಿಮಾ ಮೇಲಿನ ಪ್ರೀತಿ. ನಾನು ಕೇವಲ ಶುಕ್ರವಾರದ ಬಿಡುಗಡೆಯನ್ನಷ್ಟೇ ಅಲ್ಲ, ಸಿನಿಮಾದ ಪ್ರತಿ ದೃಶ್ಯದ ಚಿತ್ರೀಕರಣವನ್ನೂ ಆನಂದಿಸುತ್ತೇನೆ. ಚಿತ್ರ ರಚನೆಯ ಇಡೀ ಪಯಣ ನನಗೆ ಮುಖ್ಯ’ ಎಂದು ಸುಶಾಂತ್‌ ತಮ್ಮ ದೃಷ್ಟಿಕೋನವನ್ನು ವಿವರಿಸುತ್ತಾರೆ. 

‘ಚಿತ್ರರಂಗದಲ್ಲಿ ನೆಲೆ ನಿಲ್ಲುವ ಬಯಕೆ ನನಗೂ ಇದೆ. ವಿಮರ್ಶೆಗಳೂ ನನಗೆ ಮುಖ್ಯ ಮತ್ತು ಜನರು ನನ್ನನ್ನು ಇಷ್ಟಪಡಲಿ ಎಂದೂ ಬಯಸುತ್ತೇನೆ. ಆದರೆ ಅದಷ್ಟೇ ನನಗೆ ಮಹತ್ವವಲ್ಲ. ಎಷ್ಟು ಸಿನಿಮಾಗಳು ಬಿಡುಗಡೆಯಾದವು ಎಂದು ಲೆಕ್ಕ ಹಾಕುವುದಿಲ್ಲ. ಎಷ್ಟು ವೈವಿಧ್ಯಮಯ ಸಿನಿಮಾಗಳನ್ನು ನಾನು ಮಾಡಿದೆ ಎಂಬುದು ಅದಕ್ಕಿಂತ ಮುಖ್ಯ’ ಎಂದು ವೃತ್ತಿಜೀವನದ ಬಗೆಗಿನ ತಮ್ಮ ಬದ್ಧತೆಯನ್ನು ವಿಷದಪಡಿಸುತ್ತಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.