ADVERTISEMENT

‘ಶಿವನ ಪಾದ’ಕ್ಕೆ 8 ಕಿ.ಮೀ. ದೂರ!

​ಪ್ರಜಾವಾಣಿ ವಾರ್ತೆ
Published 22 ಜೂನ್ 2017, 19:30 IST
Last Updated 22 ಜೂನ್ 2017, 19:30 IST
ಮಮತಾ ರಾವತ್‌
ಮಮತಾ ರಾವತ್‌   

‘ಇದು ಸತ್ಯ ಘಟನೆ ಆಧಾರಿತ ಚಿತ್ರ. ಹಾರರ್‌, ಸಸ್ಪೆನ್ಸ್‌, ಥ್ರಿಲ್ಲರ್‌ ಇದೆ. ಪ್ರಯಾಣದಲ್ಲಿ ಕಥೆ ಸಾಗುತ್ತದೆ. ಸಿನಿಮಾದ ಟೈಟಲ್‌ ನೋಡಿ ನಕಾರಾತ್ಮಕವಾಗಿ ಚಿಂತಿಸಬೇಕಿಲ್ಲ. ಈ ಚಿತ್ರದಲ್ಲಿ ಸಕಾರಾತ್ಮಕ ಸಂದೇಶವಿದೆ...’ –ನಿರ್ದೇಶಕ ಮಾಚಂದ್ರು ತಮ್ಮ ಹೊಸ ಚಿತ್ರ ‘ಶಿವನ ಪಾದ’ದ ಕಥೆಯ ಎಳೆಯನ್ನು ಬಿಚ್ಚಿಟ್ಟಿದ್ದು ಹೀಗೆ.

ಕಂಠೀರಣ ಸ್ಟುಡಿಯೊದಲ್ಲಿ ಚಿತ್ರದ ಮುಹೂರ್ತ ನಡೆಸಿ ಸುದ್ದಿಗೋಷ್ಠಿ ನಡೆಸಿದ ಅವರು, ‘ಮೈಸೂರು ರಸ್ತೆಯಲ್ಲಿ ಒಂಬತ್ತು ತಿಂಗಳ ಹಿಂದೆ ನಡೆದ ಘಟನೆ ಆಧರಿಸಿ ಈ ಕಥೆ ಹೊಸೆದಿದ್ದೇನೆ’ ಎಂದರು.

‘ಶಿವನ ಪಾದ’ಕ್ಕೆ ಇಟ್ಟಿರುವ 8 ಕಿ.ಮೀ. ಅಡಿಬರಹದ ಉದ್ದೇಶವೇನು? ಎಂಬ ಪ್ರಶ್ನೆ ಅವರಿಗೆ ಎದುರಾಯಿತು. ‘ಪ್ರತಿ 1 ಕಿ.ಮೀ. ಅಂತರದಲ್ಲಿ ಕಥೆಯು ಒಂದೊಂದು ತಿರುವು ಪಡೆಯುತ್ತದೆ. ಅದು ಚಿತ್ರದ ವಿಶೇಷಗಳಲ್ಲೊಂದು’ ಎಂದು ಗುಟ್ಟು ಬಿಚ್ಚಿಟ್ಟರು.

ADVERTISEMENT

ಮಾಜಿ ಸಂಸದ ಎಚ್‌.ಟಿ. ಸಾಂಗ್ಲಿಯಾನ ಈ ಚಿತ್ರದ ಪ್ರಧಾನ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಶಿವಮೊಗ್ಗ ಮತ್ತು ಸಾಗರದಲ್ಲಿ ತಾವು ಸೇವೆ ಸಲ್ಲಿಸುತ್ತಿದ್ದ ವೇಳೆ ನಡೆದ ಸ್ಮಗ್ಲಿಂಗ್‌ ದಂಧೆ ಬಗ್ಗೆ ಅನುಭವ ಹಂಚಿಕೊಂಡರು.

‘ಚಿತ್ರದ ಕಥೆ ಕೇಳಿ ಅಭಿನಯಿಸಲು ಒಪ್ಪಿಕೊಂಡೆ. ಸಿನಿಮಾದಲ್ಲಿ ಥ್ರಿಲ್ಲರ್‌ ಇದೆ’ ಎಂದರು ಸಾಂಗ್ಲಿಯಾನ. ಕಥಾ ನಾಯಕ ಕೃಷ್ಣ ಅವರಿಗೆ ಇದು ಎರಡನೇ ಸಿನಿಮಾ. ‘ಮಾತುಕತೆ’ ಸಿನಿಮಾದಲ್ಲಿ ನಟಿಸಿದ್ದ ಅವರು, ಈ ಚಿತ್ರದಲ್ಲಿ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. 

‘ಚಿತ್ರದಲ್ಲಿ ನನ್ನದು ಗ್ಲಾಮರ್ ಪಾತ್ರ’ ಎಂದ ನಾಯಕಿ ಮಮತಾ ರಾವತ್, ಪಾತ್ರದ ಬಗ್ಗೆ ಗುಟ್ಟು ರಟ್ಟು ಮಾಡಲು ಇಷ್ಟಪಡಲಿಲ್ಲ. ನಿರ್ಮಾಪಕ ಟಿ. ಮಂಜುನಾಥ್‌ ಬಂಡವಾಳ ಹೂಡಿದ್ದಾರೆ. ವೀರ್‌ ಸಮರ್ಥ್‌ ಸಂಗೀತ ನೀಡಲಿದ್ದಾರೆ.   

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.